ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಚಿತ್ರವು ಡಿ.31ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಒಂದಿಷ್ಟು ನಿರೀಕ್ಷೆಗಳನ್ನು ಕುದುರಿಸಿದೆ. ಈ ಚಿತ್ರದಲ್ಲಿ ಶಾಹಿದ್ ಮಧ್ಯವಯಸ್ಕ ಕ್ರಿಕೆಟಿಗನೊಬ್ಬನ ಪಾತ್ರವನ್ನು ನಿರ್ವಹಿಸಿದ್ದು, ಆ ಪಾತ್ರಕ್ಕೆ ಏನೆಲ್ಲ ತರಬೇತಿ ಪಡೆಯಬೇಕಾಯಿತು ಎಂದು ಅಭಿಮಾನಿಯೊಬ್ಬರು ಇತ್ತೀಚೆಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಶಾಹಿದ್, ಬರೀ ಅಭ್ಯಾಸ ಮಾಡಿರುವುದಷ್ಟೇ ಅಲ್ಲ, ಸಾಕಷ್ಟು ರಕ್ತ ಸುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯನ್ನು ಬಿಚ್ಚಿಟ್ಟ ಅವರು, ‘ಶೂಟಿಂಗ್ ಮಾಡುವ ಸಂದರ್ಭದಲ್ಲಿ ನನ್ನ ತುಟಿಗೆ ಬಾಲು ಬಡಿದು, ಗಾಯವಾಯಿತು. ಸಾಕಷ್ಟು ರಕ್ತ ಹೋಯಿತು. ಇದೆಲ್ಲದರಿಂದ ಸುಮಾರು ಎರಡು ತಿಂಗಳುಗಳ ಕಾಲ ಚಿತ್ರೀಕರಣ ನಿಂತಿದ್ದಷ್ಟೇ ಅಲ್ಲ, ನನ್ನ ತುಟಿಗೆ 25 ಹೊಲಿಗೆ ಹಾಕಿಸಿಕೊಂಡಿದ್ದೂ ಆಯಿತು. ನನ್ನ ಮುಖ ಸಹಜ ಸ್ಥಿತಿಗೆ ಬರುವುದಕ್ಕೆ ಮೂರು ತಿಂಗಳುಗಳೇ ಬೇಕಾಯಿತು. ಈಗಲೂ ಎಲ್ಲವೂ ಸರಿಯಾಗಿದೆ ಎಂದು ಹೇಳುವುದು ಕಷ್ಟ. ತುಟಿಯ ಒಂದು ಭಾಗದಲ್ಲಿ ಯಾವುದೇ ಸಂವೇದನೆಯೇ ಇಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ.
‘ಜೆರ್ಸಿ’ ಚಿತ್ರವು ತೆಲುಗಿನ ಅದೇ ಹೆಸರಿನ ಚಿತ್ರದ ರಿಮೇಕ್ ಆಗಿದ್ದು, ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಗೌತಮ್ ತಿನ್ನನೂರಿ ನಿರ್ದೇಶನ ಮಾಡಿದ್ದಾರೆ. -ಏಜೆನ್ಸೀಸ್