ನವದೆಹಲಿ: ನಟ ಆರ್. ಮಾಧವನ್ ಓರ್ವ ಉತ್ತಮ ನಟ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ನಟನೆಯ ಸಾಮರ್ಥ್ಯವನ್ನು ಸಾಬೀತು ಮಾಡಿರುವ ಮಾಧವನ್, 2022ರಲ್ಲಿ ತೆರೆಕಂಡ "ರಾಕೆಟ್ರಿ: ದಿ ನಂಬಿ ಎಫೆಕ್ಟ್" ಸಿನಿಮಾ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ಅಲ್ಲದೆ, ತಮ್ಮ ಮೊದಲ ನಿರ್ದೇಶನದ ಸಿನಿಮಾದಲ್ಲೇ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಹ ಪಡೆದರು. ಈ ಸಿನಿಮಾದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಪಾತ್ರಕ್ಕಾಗಿ ಮಾಧವನ್ ಭಾರಿ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅಷ್ಟೊಂದು ತೂಕವನ್ನು ಇಳಿಸಿಕೊಂಡಿದ್ದು ಹೇಗೆ ಎಂದು ವಿವರಿಸಿರುವ ಮಾಧವನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇಂದಿನ ಆಧುನಿಕ ಜೀವನಶೈಲಿಯಲ್ಲಿ ತೂಕ ಇಳಿಸಿಕೊಳ್ಳುವುದು ತುಂಬಾ ಸವಾಲಿನ ಕೆಲಸವಾಗಿದೆ. ಕೆಲವರೂ ವರ್ಷಾನುಗಟ್ಟಲೆ ಪ್ರಯತ್ನಿಸಿದರೂ ತೂಕ ಕಡಿಮೆ ಆಗುವುದೇ ಇಲ್ಲ. ಊಟ ಬಿಟ್ಟರು ಕೂಡ ಕೆಲವರ ತೂಕ ಇಳಿಯುವುದಿಲ್ಲ. ಹೀಗಿರುವಾಗ ಕೇವಲ 21 ದಿನಗಳ ಒಳಗೆ ತನ್ನ ತೂಕವನ್ನು ಇಳಿಸಿಕೊಂಡು ಮಾಧವನ್ ಮೊದಲಿನಂತೆ ಆಗುವುದೆಂದರೆ ಅದು ಅಚ್ಚರಿಯ ಸಂಗತಿಯೇ ಸರಿ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಧವನ್ ಈ ಬಗ್ಗೆ ವಿವರಣೆ ನೀಡಿದ್ದಾರೆ. ತೂಕ ಇಳಿಕೆಗೆ ಕಾರಣವಾದ ತಮ್ಮ ಆಹಾರ ಕ್ರಮವನ್ನು ತಿಳಿಸಿದ್ದಾರೆ. ತೂಕ ಇಳಿಸಲು ಮಧ್ಯಂತರ ಉಪವಾಸ (ಇಂಟರ್ಮಿಟೆಂಟ್ ಫಾಸ್ಟಿಂಗ್) ಕ್ರಮ ಅನುಸರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಅವಧಿಯಲ್ಲಿ ದ್ರವ ಪದಾರ್ಥ ಸೇವನೆಯು ಪ್ರಮುಖ ಅಂಶವಾಗಿತ್ತು ಎಂದಿದ್ದಾರೆ. ಸಂಸ್ಕರಿಸಿದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸಲು ಮತ್ತು ಸಂಜೆ 6.45ರ ಒಳಗೆ ಅಂತಿಮ ಊಟವನ್ನು ಮಾಡಿ ಮುಗಿಸುವಂತೆ ಮಾಧವನ್ ಸಲಹೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಎಕ್ಸ್ ಬಳಕೆದಾರರೊಬ್ಬರ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಮಾಧವನ್, ಮಧ್ಯಂತರ ಉಪವಾಸ ಮಾಡಿ, ಆಹಾರ ಸೇವಿಸುವಾಗ ಆಹಾರವನ್ನು ಸಂಪೂರ್ಣವಾಗಿ ಅಗಿಯಿರಿ (45 ರಿಂದ 60 ಬಾರಿ) ಮತ್ತು ನೀರನ್ನು ಸಾವಧಾನದಿಂದ ಕುಡಿಯಿರಿ ಎಂದಿರುವ ಮಾಧವನ್, ನಿಮ್ಮ ನೀರನ್ನು ಅಗಿಯಿರಿ ಮತ್ತು ಆಹಾರವನ್ನು ಕುಡಿಯಿರಿ ಎಂಬ ವಿಧಾನ ಅನುಸರಿಸಿ ಎಂದಿದ್ದಾರೆ. ಇನ್ನು 6.45ರ ಒಳಗೆ ಊಟ ಮುಗಿಸಬೇಕು. ಅದರಲ್ಲೂ ಕೇವಲ ಬೇಯಿಸಿದ ಆಹಾರ ಮಾತ್ರ ಸೇವಿಸಬೇಕು ಮತ್ತು ಮಧ್ಯಾಹ್ನ 3 ಗಂಟೆಯ ನಂತರ ಯಾವುದೇ ಕಚ್ಚಾ ಆಹಾರ ಸೇವಿಸಬಾರದು. ಬೆಳಗಿನ ಸಮಯದಲ್ಲಿ ಖಂಡಿತ ವಾಕಿಂಗ್ ಮಾಡಬೇಕು ಮತ್ತು ರಾತ್ರಿ ಬೇಗ ಮಲಗಬೇಕು. ಅದರಲ್ಲೂ ರಾತ್ರಿ ಮಲಗುವ ಮುನ್ನ 90 ನಿಮಿಷಗಳ ಕಾಲ ಟಿವಿ, ಮೊಬೈಲ್ ಪರದೆಗೆ ಒಡ್ಡಿಕೊಳ್ಳುವಂತಿಲ್ಲ. ಸಾಕಷ್ಟು ದ್ರವ ಆಹಾರ ಸೇವಿಸಬೇಕು ಮತ್ತು ಹೆಚ್ಚೆಚ್ಚು ಹಸಿರು ತರಕಾರಿಗಳನ್ನು ತಿನ್ನಬೇಕು. ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನು ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ. ಇಷ್ಟು ಮಾಡಿದರೆ ತೂಕ ಇಳಿಯುತ್ತದೆ. ಆಲ್ ದಿ ಬೆಸ್ಟ್ ಎಂದು ನೆಟ್ಟಿಗರೊಬ್ಬರಿಗೆ ಮಾಧವನ್ ಹೇಳಿದ್ದಾರೆ.
ಅಂದಹಾಗೆ ಎಕ್ಸ್ ಬಳಕೆದಾರ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾಧವನ್ ಅವರು ಕರ್ಲಿ ಟೇಲ್ಸ್ ಹೆಸರಿನ ಮಾಧ್ಯಮಕ್ಕೆ ತಮ್ಮದೇಯಾದ ಆಹಾರ ಕ್ರಮವನ್ನು ಅನುಸರಿಸಿಕೊಂಡು ವೇಗವಾಗಿ ತೂಕ ಕಳೆದುಕೊಂಡ ವಿಧಾನವನ್ನು ವಿವರಿಸಿದ್ದಾರೆ. ತ್ವರಿತವಾಗಿ ತೂಕ ಹೆಚ್ಚಾಗುವುದು ಮತ್ತು ಕಳೆದುಕೊಳ್ಳುವ ವಿಧಾನಗಳ ಹಿಂದಿರುವ ತಮ್ಮ ತೀವ್ರವಾದ ಸಂಶೋಧನೆಯನ್ನು ವಿವರಿಸಿದರು.
ನಾನು ತೂಕವನ್ನು ಹೇಗೆ ಹೆಚ್ಚಿಸಬಹುದು ಮತ್ತು ಅದನ್ನು ತ್ವರಿತವಾಗಿ ಕಳೆದುಕೊಳ್ಳಬಹುದು ಎಂಬುದನ್ನು ಕಂಡುಹಿಡಿಯಲು ಬಹಳಷ್ಟು ಸಂಶೋಧನೆ ಮಾಡಿದ್ದೇನೆ. ಸಂಶೋಧನೆಯು ನನ್ನನ್ನು ಅಪ್ಲೈಯ್ಡ್ ಕಿನಿಸಿಯಾಲಜಿ ಎಂಬ ಪರೀಕ್ಷೆಗೆ ಕರೆದೊಯ್ದಿತು. ಇದು ಪ್ರತಿಯೊಬ್ಬರಿಗೂ, ನಾವು ಯಾವುದೇ ಹಂತದಲ್ಲಿ ಹೇಗೆ ಇದ್ದೇವೆ ಎಂಬುದನ್ನು ವಿವರಿಸುತ್ತದೆ. ನಮ್ಮ ಭಾವನಾತ್ಮಕ ಸ್ಥಿತಿಯಿಂದಾಗಿ ಒಂದು ರೀತಿಯ ಆಹಾರಕ್ಕೆ ನಾವು ಒಗ್ಗಿಕೊಂಡಿರುತ್ತೇವೆ ಎಂದು ಮಾಧವನ್ ವಿವರಿಸಿದರು.
ಸಿನಿಮಾಗಾಗಿ ತೂಕ ಹೆಚ್ಚಿಸಿಕೊಳ್ಳಲು ಮೂರು ತಿಂಗಳ ಕಾಲ ಬರೀ ಕೇಕ್ ಸೇವಿಸಿದ ಒಂದು ಹಂತವನ್ನು ಇದೇ ಸಂದರ್ಭದಲ್ಲಿ ಮಾಧವನ್ ವಿವರಿಸಿದರು. ನನ್ನ ದೇಹಕ್ಕೆ ಒಗ್ಗಲಾರದ ಆಹಾರವನ್ನು ಮಾತ್ರ ಸೇವಿಸಿದೆ. ಹಾಗಾಗಿ ಇಡೀ ದೇಹವು ಉಬ್ಬಿತು. ಕೆಳಗೆ ಬಾಗಿ ನನ್ನ ಲೇಸ್ಗಳನ್ನು ಕಟ್ಟಲು ಸಹ ಕಷ್ಟವಾಯಿತು. ಆದರೆ ಆ ಅವಧಿಯ ನಂತರ, ನಾನು ನನ್ನ ದೇಹಕ್ಕೆ ಉತ್ತಮವಾದ ಆಹಾರವನ್ನು ಮಾತ್ರ ಸೇವಿಸಿದೆ, ಯಾವುದೇ ವ್ಯಾಯಾಮವಿಲ್ಲ, ಯಾವುದೇ ಓಟವಿಲ್ಲ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲ, ಯಾವುದೇ ಔಷಧಿಗಳಿಲ್ಲ. ಇದರಿಂದ ಕೇವಲ 21 ದಿನದಲ್ಲಿ ನಮ್ಮ ತೂಕ ಇಳಿಕೆಯಾಗಿ ಮೊದಲಿನಂತಾದೆ ಎಂದು ಮಾಧವನ್ ಹೇಳಿದರು.
ಅಂದಹಾಗೆ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಸಿನಿಮಾ ಮಾಜಿ ಇಸ್ರೋ ವಿಜ್ಞಾನಿ ಎಸ್. ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. (ಏಜೆನ್ಸೀಸ್)