ಸಿನಿವಾಣಿ

ಇನ್ನೂ ಹೆಚ್ಚು ನಗುತ್ತೀರಿ ; ‘ತೋತಾಪುರಿ 2’ ಬಗ್ಗೆ ನಟ ಜಗ್ಗೇಶ್ ಮಾತು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಿಜಯ್ ಪ್ರಸಾದ್ ನಿರ್ದೇಶನದ, ಜಗ್ಗೇಶ್, ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ತೋತಾಪುರಿ 2’. ಕಳೆದ ವರ್ಷ ರಿಲೀಸ್ ಆದ ‘ತೋತಾಪುರಿ’ ಸೀಕ್ವಲ್ ಇದು. ಸರಿಯಾಗಿ ಒಂದು ವರ್ಷದ ಬಳಿಕ ಎರಡನೇ ಭಾಗ ಸೆ. 28ರಂದು ತೆರೆಗೆ ಬರಲಿದೆ. ನಟ ಜಗ್ಗೇಶ್, ‘ಈ ಸೀಕ್ವಲ್ ರಿಲೀಸ್‌ಗೆ ನಾನೂ ಕಾಯುತ್ತಿದ್ದೇನೆ. ಎರಡನೇ ಭಾಗದಲ್ಲಿ ಇನ್ನೂ ಹೆಚ್ಚು ಕಾಮಿಡಿಯಿದೆ. ಮೊದಲ ಚಿತ್ರದಲ್ಲಿ ಪಾತ್ರಗಳ ಪರಿಚಯಷ್ಟೇ ಆಗಿದೆ. ಈಗ ಎರಡನೇ ಭಾಗದಲ್ಲಿ ಕಥೆ ಮುಂದುವರಿಯುತ್ತದೆ. ಇಂತಹ ಕಥೆಗಳನ್ನು ಗಂಭೀರವಾಗಿ ಹೇಳಲಾಗುವುದಿಲ್ಲ. ಹೀಗಾಗಿಯೇ ನಿರ್ದೇಶಕರು ಈರೇಗೌಡ ಪಾತ್ರದ ಮೂಲಕ ನಗಿಸುತ್ತಾ ಹೇಳುವ ಪ್ರಯತ್ನ ಮಾಡಿದ್ದಾರೆ. ಒಟಿಟಿಯಲ್ಲಿ ಮೊದಲ ಭಾಗಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಸೀಕ್ವಲ್ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ’ ಎಂದು ಹೇಳಿಕೊಳ್ಳುತ್ತಾರೆ. ಜತೆಗೆ ‘ಸೀಕ್ವಲ್ ಬೋರ್ ಆಗುವುದಿಲ್ಲ. ಕೇವಲ ಎರಡು ತಾಸಿನ ಚಿತ್ರವಿದು. ಸಿನಿಮಾ ಹೆಚ್ಚು ಉದ್ದವಿದ್ದರೆ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ. ಹೀಗಾಗಿಯೇ ಶಾರ್ಟ್ ಆ್ಯಂಡ್ ಕ್ರಿಸ್ಪ್ ಆಗಿದೆ. ಪ್ರತಿಯೊಬ್ಬ ಪಾತ್ರಧಾರಿಗಳೂ ಅದ್ಭುತವಾಗಿ ನಟಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಜಗ್ಗೇಶ್.

ಸರ್ವಜನಾಂಗದ ಶಾಂತಿಯ ತೋಟ
2018ರಲ್ಲಿ ಮಾಯಸಂದ್ರದಲ್ಲಿ ಕಾಲಭೈರವೇಶ್ವರ ದೇವಸ್ಥಾನ ನಿರ್ಮಿಸಿದ್ದ ಜಗ್ಗೇಶ್, ಆ ಬಳಿಕ ಇನ್ನೂ ನಾಲ್ಕು ದೇವಾಲಯಗಳನ್ನು ಕಟ್ಟಿಸಿದ್ದಾರೆ. ‘ಈಗ ಐದನೇ ದೇವಸ್ಥಾನ ಕಟ್ಟುತ್ತಿದ್ದೇನೆ. ಎಲ್ಲ ದೇವಸ್ಥಾನಗಳಲ್ಲೂ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಬರೆದಿದ್ದೇವೆ. ಜಾತೀಯತೆ ಮಾಡಬಾರದು. ಈ ದೇಶ ಜಾತಿಯಿಂದ ಹೊರಬರಬೇಕು ಎಂಬುದು ನನ್ನಾಸೆ. ಸಿನಿಮಾನೂ ಅದೇ ಹೇಳುತ್ತದೆ. ಇಲ್ಲಿ ರಾಜಕೀಯವಿಲ್ಲ. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಥೆ. ಮನುಷ್ಯರು ಮನುಷ್ಯರಾಗಿ ಬದುಕಬೇಕು, ಎಲ್ಲ ಗಡಿಗಳನ್ನು ಮೀರಿ ಎಲ್ಲರೂ ಖುಷಿಯಾಗಿ ಬಾಳಬೇಕು ಎಂಬ ಸಂದೇಶವಿದೆ’ ಎನ್ನುತ್ತಾರೆ.

ಕಾಮಿಡಿ ಮಾಡುವುದಿಲ್ಲ, ಸೀರಿಯಸ್ ಆಗಿದ್ದೇನೆ
ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿ ನೀಡುವ ಅವರು, ‘‘ರಂಗನಾಯಕ’ ನನ್ನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಡಬ್ಬಿಂಗ್ ಆಗಬೇಕಿದೆ. ತುಂಬ ಸೀರಿಯಸ್ ಆಗಿ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಈಗಾಗಲೇ 15 ಕಥೆಗಳನ್ನು ಬಿಟ್ಟಿದ್ದೇನೆ. ಹಣಕ್ಕಾಗಿ ಕಾಮಿಡಿ ಕಥೆಗಳನ್ನೇ ಹೆಚ್ಚು ಮಾಡಬೇಕು ಅಂತಿಲ್ಲ. ದೇವರು ನನ್ನನ್ನು ಚೆನ್ನಾಗಿ ಇಟ್ಟಿದ್ದಾನೆ. ಹೀಗಾಗಿ ಹೊಸ ಬಗೆಯ ಕಥೆಗಳಲ್ಲಿ ನಟಿಸುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ.