ಧನುಷ್​ ಬೆನ್ನಿಗೆ ನಿಂತಿದೆ ಬಿಜೆಪಿ! ತಮಿಳು ರಾಜಕೀಯ ಎಂಟ್ರಿ ವದಂತಿ ಬೆನ್ನಲ್ಲೇ ನಟನ ಶಾಕಿಂಗ್ ಹೇಳಿಕೆ ವೈರಲ್​ | Actor Dhanush  
ಸಿನಿವಾಣಿ

ಧನುಷ್​ ಬೆನ್ನಿಗೆ ನಿಂತಿದೆ ಬಿಜೆಪಿ! ತಮಿಳು ರಾಜಕೀಯ ಎಂಟ್ರಿ ವದಂತಿ ಬೆನ್ನಲ್ಲೇ ನಟನ ಶಾಕಿಂಗ್ ಹೇಳಿಕೆ ವೈರಲ್​ | Actor Dhanush

ಚೆನ್ನೈ: ಸಿಎಂ ವಿಜಯ್​ ಅವರ ಟಿವಿಕೆ ಪಕ್ಷದಂತೆಯೇ ತಮ್ಮದೇ ಸ್ವಂತ ಪಕ್ಷವನ್ನು ಕಟ್ಟುತ್ತಾರಾ ಅಥವಾ ಈಗಿರುವ ಪಾರ್ಟಿಗಳನ್ನೇ ಸೇರಿಕೊಳ್ಳುತ್ತಾರಾ ನಟ ಧನುಷ್​ ಎಂಬ ಕುತೂಹಲಗಳು ಸದ್ಯ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ತಾನು ರಾಜಕಾರಣಕ್ಕೆ ಕಾಲಿಡುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಅಥವಾ ಮಾಹಿತಿಯನ್ನು ಧನುಷ್​ ಹಂಚಿಕೊಳ್ಳದೆ ಹೋದರೂ ಅವರ ಇತ್ತೀಚಿನ ಕೆಲವು ನಡೆಗಳು ವದಂತಿಗಳೇ ಸತ್ಯ ಎನ್ನುವಂತೆ ಮಾಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ.

ಧನುಷ್​ ಕರೆ

ಕಳೆದ ಕೆಲವು ತಿಂಗಳಿನಿಂದಲೂ ಧನುಷ್​ ಅವರ ಮುಂಬರುವ ಸಿನಿಮಾಗಳಿಗಿಂತ ಅವರಿಗೆ ಸಂಬಂಧಿಸಿದ ರಾಜಕೀಯ ಎಂಟ್ರಿ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಭುಗಿಲೆದ್ದಿವೆ. ಈಗಾಗಲೇ ಸಾಕಷ್ಟು ಮಂದಿಗೆ ಗೊತ್ತಿರುವಂತೆ ಅಭಿಮಾನಿಗಳ ಸಂಘವನ್ನು ಸೇವಾ ಸಂಸ್ಥೆಯಾಗಿ ಪರಿವರ್ತಿಸಿರುವುದು ಮತ್ತು ಜನಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಅಭಿಮಾನಿಗಳಿಗೆ ಧನುಷ್​ ಕರೆ ನೀಡಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಧನುಷ್​ ಎಲ್ಲಿಯೂ ತಾನು ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ ಎಂದು ಹೇಳದೆ ಹೋದರೂ ಸಹ ಟಿವಿಕೆ ಮತ್ತು ವಿರೋಧ ಪಕ್ಷಗಳು ಧನುಷ್​ ವಿರುದ್ಧ ಕಿಡಿಕಾರಿತು. ಈ ಮಧ್ಯೆ, ಟಿವಿಕೆ ನಾಯಕರೊಬ್ಬರು ನಟನ ರಾಜಕೀಯ ಎಂಟ್ರಿಗೆ ಬಿಜೆಪಿ ಬೆನ್ನಿಗೆ ನಿಂತಿದೆ. ಕಮಲ ಪಕ್ಷವೇ ಧನುಷ್​ ಜತೆ ಕೈಜೋಡಿಸಿದ್ದು, ತಮಿಳು ರಾಜಕೀಯಕ್ಕೆ ಪ್ರವೇಶಿಸುವಂತೆ ಮಾಡುತ್ತಿದೆ ಎಂದು ಆರೋಪಿಸಿದರು. ಈ ವಿಚಾರ ಇಲ್ಲ-ಸಲ್ಲದ ಚರ್ಚೆಗೆ ಕಾರಣವಾಗುತ್ತಿದ್ದಂತೆ ಸ್ವತಃ ಧನುಷ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

'ಓಂ' ಸಿನಿಮಾದ ಆಡಿಯೋ ಲಾಂಚ್​

ತಮ್ಮ ಇತ್ತೀಚಿನ 'ಓಂ' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಮುಖ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅವರ ಬಗ್ಗೆ ನಾನಾ ರೀತಿಯ ವದಂತಿಗಳು ಹರಿದಾಡುತ್ತಿದ್ದು, ಕೆಲವರು ಅವರ ಹಿಂದೆ ಇದ್ದಾರೆ, ಇನ್ನು ಕೆಲವರು ಬೆಂಬಲಿಸುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಆದರೆ, ದೇವರೇ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. "ನನ್ನ ಹಿಂದೆ ನನ್ನ ಅಭಿಮಾನಿಗಳಿದ್ದಾರೆ.. ನನ್ನ ಪಕ್ಕದಲ್ಲಿ ಜನರಿದ್ದಾರೆ. ಜನರು ನನ್ನೊಂದಿಗೆ ಇದ್ದಾರೆ" ಎಂದು ಧನುಷ್ ಹೇಳಿದ್ದಾರೆ.

ತಮ್ಮ ರಾಜಕೀಯ ಎಂಟ್ರಿ ಕುರಿತಾಗಿ ಹರಿದಾಡುತ್ತಿರುವ ಊಹಾಪೋಹಗಳಿಗೆ ನೇರವಾಗಿ ಉತ್ತರಿಸದ ಧನುಷ್​, "ಕಳೆದ ಕೆಲವು ದಿನಗಳಿಂದ ನನ್ನ ಬಗ್ಗೆ ಸಾಕಷ್ಟು ವದಂತಿಗಳನ್ನು ಹರಡಿಸಲಾಗುತ್ತಿದೆ. ಅದೇನೆಂದರೆ, ನನ್ನ ಜೊತೆ ಒಂದಷ್ಟು ಜನರಿದ್ದಾರೆ ಎಂದು. ಅಸಲಿಗೆ, ನನ್ನೊಂದಿಗೆ ದೇವರಿದ್ದಾನೆ, ಅಭಿಮಾನಿಗಳು ಜೊತೆಯಲ್ಲಿದ್ದಾರೆ ಮತ್ತು ಪ್ರೀತಿಸುವ ಮಂದಿ ನನಗೆ ಸಾಥ್​ ನೀಡಿದ್ದಾರೆ" ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಇದೆ ಎಂಬುದನ್ನು ಅವರು ತಳ್ಳಿಹಾಕಿದ್ದಾರೆ.

ಧನುಷ್ ನಾರ್ಪಾನಿ ​​ಇಯಕ್ಕಂ

ಈ ನಡುವೆ ಧನುಷ್ ಅಭಿಮಾನಿಗಳ ಸಂಘವು, ‘ಧನುಷ್ ನಾರ್ಪಾನಿ ​​ಇಯಕ್ಕಂ’ ಮೂಲಕ ತಮ್ಮ ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸಲು ಮುಂದಾಗಿದೆ. ಇದರ ಭಾಗವಾಗಿ ನಾಲ್ಕು ಉಚಿತ ಟ್ಯೂಷನ್ ಸೆಂಟರ್​ಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ಘೋಷಿಸಿದೆ. ಇವುಗಳಲ್ಲಿ ಮೂರು ಚೆನ್ನೈನಲ್ಲಿ ಮತ್ತು ಒಂದು ಕನ್ಯಾಕುಮಾರಿಯಲ್ಲಿ ಸ್ಥಾಪಿಸಲಾಗುವುದು. ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಕೇಂದ್ರಗಳನ್ನು ಮುಂದಿನ ಎರಡು ವರ್ಷಗಳಲ್ಲಿ ತಮಿಳುನಾಡಿನಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದೂ ಹೇಳಲಾಗಿದೆ.

ಮತ್ತೊಂದೆಡೆ, ತಮಿಳುನಾಡಿನಾದ್ಯಂತ 3 ಸಾವಿರ ಕಾನೂನು ಸಲಹೆಗಾರರನ್ನು ನೇಮಿಸಲು ಮತ್ತು ಇದಕ್ಕಾಗಿ ಜಿಲ್ಲಾವಾರು ವ್ಯವಸ್ಥೆ ಮಾಡಲು ಧನುಷ್ ನಿರ್ಧರಿಸಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಜನರು ಎದುರಿಸುತ್ತಿರುವ ಕಾನೂನು ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಕಾನೂನು ಸಲಹೆ ನೀಡುವುದು ಈ ವ್ಯವಸ್ಥೆಯ ಉದ್ದೇಶ ಎಂದು ಹೇಳಲಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ರಾಜಕೀಯಕ್ಕೆ ಬರುವುದು ಖಚಿತ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆದರೆ, ಧನುಷ್ ಮಾತ್ರ ಎಲ್ಲಿಯೂ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿ ಅಥವಾ ಸುಳಿವು ಬಿಟ್ಟುಕೊಡುವುದಾಗಲಿ ಮಾಡಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).