ಸಿನಿವಾಣಿ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸರ್ಜರಿ ಮಾಡಿಸದೇ ಆಸ್ಪತ್ರೆಯಿಂದ ಆರೋಪಿ ದರ್ಶನ್ ಡಿಸ್ಚಾರ್ಜ್! Actor Darshan

Actor Darshan : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್​ ಹೈಕೋರ್ಟ್​ನಿಂದ ಪೂರ್ಣಾವಧಿಗೆ ಜಾಮೀನು ಪಡೆದ ಬೆನ್ನಲ್ಲೇ ಯಾವುದೇ ಸರ್ಜರಿ ಇಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಕೆಂಗೇರಿಯ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್​ ಸುಮಾರು ಒಂದೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಫ್ಲ್ಯಾಟ್​ಗೆ ತೆರಳಿದ್ದಾರೆಂದು ತಿಳಿದುಬಂದಿದೆ. ಮನೆಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಬೆನ್ನು ನೋವಿನ ಕಾರಣ ನೀಡಿ ಒಂದೂವರೆ ತಿಂಗಳ ಹಿಂದೆಯೇ ನಟ ದರ್ಶನ್​ ಅವರು ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಡೆ ಬಂದಿದ್ದರು. ದರ್ಶನ್​ ಅವರಿಗೆ ಸರ್ಜರಿಯ ಅವಶ್ಯಕತೆ ಇದೆ. ಆಪರೇಷನ್​ ಆಗದೇ ಇದ್ದ ಪಾರ್ಶ್ವವಾಯುಗೆ ತುತ್ತಾಗುವ ಅಥವಾ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ದರ್ಶನ್​ ಪರ ವಕೀಲರು ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದರು. ಹೀಗಾಗಿ ಆರೋಗ್ಯ ದೃಷ್ಟಿಯಿಂದ ದರ್ಶನ್​ ಅವರಿಗೆ ಹೈಕೋರ್ಟ್ ಅಕ್ಟೋಬರ್‌ 31ರಂದು 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ದರ್ಶನ್​ ಬಳ್ಳಾರಿಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸಿ ಬಿಜಿಎಸ್​ ಆಸ್ಪತ್ರೆಗೆ ದಾಖಲಾಗಿದ್ದರು.

ಡಿ.11ರಂದು ಸರ್ಜರಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ಕೂಡ ನಡೆಯಲಿಲ್ಲ. ಇದರ ನಡುವೆ ಹೈಕೋರ್ಟ್​ನಿಂದ ರೇಣುಕಾಸ್ವಾಮಿ ಪ್ರಕರಣದ ಎಲ್ಲ ಆರೋಪಿಗಳಿಗೆ ಪೂರ್ಣಾವಧಿಗೆ ಜಾಮೀನು ಸಿಕ್ಕಿದೆ. ದರ್ಶನ್​ ಅವರು ಸರ್ಜರಿ ಮಾಡಿಸಿಕೊಳ್ಳುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಸರ್ಜರಿ ಮಾಡಿಸಿಕೊಳ್ಳದೇ ದರ್ಶನ್​ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇನ್ನು ದರ್ಶನ್‌ ಕುಟುಂಬ ಫಿಸಿಯೋಥೆರಪಿ ಮೂಲಕವೇ ಬೆನ್ನುನೋವು ಗುಣಪಡಿಸಿಕೊಳ್ಳುವ ಪ್ಲಾನ್​ ಮಾಡಿದೆ, ಹೀಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿದ್ದಾರೆ ಎನ್ನಲಾಗಿದೆ.

ನಿನ್ನೆಯೇ ಪವಿತ್ರಾ ಗೌಡ ರಿಲೀಸ್​

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ನಿನ್ನೆಯಷ್ಟೇ (ಡಿ.17) ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು. ಬಿಡುಗಡೆ ಬಳಿಕ ಜೈಲಿನ ಆವರಣದಲ್ಲಿರುವ ಮುನೇಶ್ವರ ದೇವಸ್ತಾನಕ್ಕೆ ತೆರಳಿದ ಪವಿತ್ರಾ ಕೈ ಮುಗಿದು ಅಲ್ಲಿಂದ ಹೊರಟರು. ಇದೇ ಸಂದರ್ಭದಲ್ಲಿ ಪವಿತ್ರಾ ಗೌಡ ಸಂಬಂಧಿ ದೇವಸ್ಥಾನದ ಮುಂದೆ ಈಡುಗಾಯಿ ಹೊಡೆದರು. ಇದಾದ ಬಳಿಕ ಕಾರು ಏರಿ ತಲಘಟ್ಟಪುರ ಕಡೆ ಪವಿತ್ರಗೌಡ ಹೊರಟರು. ಅಲ್ಲಿನ ವಜ್ರಮುನೇಶ್ವರ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದರ್ಶನ್​ ಹೆಸರಲ್ಲಿ ಅರ್ಚನೆ ಸಹ ಮಾಡಿಸಿದರು. ಇದಕ್ಕೂ ಮುನ್ನ ಅರ್ಚನೆ ಸಮಯದಲ್ಲಿ ಪವಿತ್ರಾ ಅವರ ತಾಯಿ ದರ್ಶನ್ ಹೆಸರನ್ನು ಹೇಳಲಾ ಎಂದು ಮಗಳನ್ನು ಕೇಳಿದರು. ಅದಕ್ಕೆ ಪವಿತ್ರಾ ಹೂ ಎಂದು ಪ್ರತಿಕ್ರಿಯಿಸಿದರು. ಬಳಿಕ ದರ್ಶನ್ ಹೆಸರು ಹೇಳಿ ಅರ್ಚನೆ ಮಾಡಿಸಿದರು.​ ಇದೇ ಸಂದರ್ಭದಲ್ಲಿ ಪವಿತ್ರಗೌಡ ತಲೆಗೆ ಅರ್ಚಕರು ನೀರು ಹಾಕಿದರು.