ಸಿನಿವಾಣಿ

ಕರೊನಾ ಹಿನ್ನೆಲೆಯಲ್ಲಿ ರಿಯಾಯಿತಿ ದರದಲ್ಲಿ 60 ಕೋಟಿಯ ಮನೆ ಖರೀದಿಸಿದ ಅಜಯ್ ದೇವಗನ್!

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಮುಂಬೈನ ಜುಹು ಪ್ರದೇಶದಲ್ಲಿ ಬರೋಬ್ಬರಿ 60 ಕೋಟಿ ರೂ ಮೌಲ್ಯದ ಭವ್ಯ ಮನೆಯನ್ನು ಖರೀದಿಸಿದ್ದಾರೆ. ಈಗಾಗಲೇ ಅದೇ ಪ್ರದೇಶದಲ್ಲಿ ಮನೆ ಹೊಂದಿರುವ ಅಜಯ್ ಇದೀಗ ಮತ್ತೊಂದು ಮನೆ ಖರೀದಿ ಮಾಡಿದ್ದಾರೆ. ಅಷ್ಟಕ್ಕೂ ಆ ಮನೆ ಖರೀದಿಗೆ ಕಾರಣವಾಗಿದ್ದು ಕರೊನಾ.

ಹೌದು, ಕರೊನಾ ಹಿನ್ನೆಲೆಯಲ್ಲಿ ರಿಯಲ್​ ಎಸ್ಟೇಟ್ ವ್ಯಾಪಾರ ಇಳಿಮುಖವಾಗಿದೆ. ಮೊದಲಿನ ವಹಿವಾಟು ಇಲ್ಲ. ಅದನ್ನೇ ಬಂಡವಾಳವಾಗಿಸಿಕೊಂಡು, ನೂರಾರು ಕೋಟಿ ಬೆಲೆ ಬಾಳುವ ಬಂಗಲೆಯನ್ನು 60 ಕೋಟಿಗೆ ಅಜಯ್ ದೇವಗನ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ 60 ಕೋಟಿಯ ಮನೆಯನ್ನೇ ಇನ್ನೂ ಕಡಿಮೆ ಬೆಲೆಗೆ ಪಡೆದಿದ್ದಾರೆ ಎಂದೂ ಹೇಳಲಾಗುತ್ತಿದೆ.

ಅಂದಹಾಗೆ ಕಳೆದ ಒಂದು ವರ್ಷದಿಂದ ಬೇರೊಂದು ಮನೆ ಖರೀದಿಸುವ ಸಲುವಾಗಿ ಮನೆಯ ಹುಡುಕಾಟದಲ್ಲಿದ್ದ ಸಂದರ್ಭದಲ್ಲಿಯೇ ಜುಹು ಪ್ರದೇಶದ ಮನೆ ಕಣ್ಣಿಗೆ ಬಿದ್ದಿದೆ. ಹಾಗಾಗಿ ಬೇರೆನೂ ಯೋಚಿಸದೆ ಅಜಯ್ ದೇವಗನ್ ಖರೀದಿಸಿದ್ದಾರೆ. ಈಗಾಗಲೇ ಮನೆಯ ಫರ್ನಿಚರ್​ ಕೆಲಸಗಳು ನಡೆಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ಹೊಸ ಮನೆಯ ಪ್ರವೇಶ ಪಡೆಯಲಿದ್ದಾರೆ. -ಏಜೆನ್ಸೀಸ್​