ಅರ್ಜುನ್ ಸರ್ಜಾರ ನಿಜ ನಾಮವೇ ಬೇರೆ: ಅವರ ಕುಟುಂಬ ಕರೆಯುವ ಹೆಸರು ಕೇಳಿದ್ರೆ ನೀವು ನಂಬೋದೇ ಇಲ್ಲ! Arjun Sarja  
ಸಿನಿವಾಣಿ

ಅರ್ಜುನ್ ಸರ್ಜಾರ ನಿಜ ನಾಮವೇ ಬೇರೆ: ಅವರ ಕುಟುಂಬ ಕರೆಯುವ ಹೆಸರು ಕೇಳಿದ್ರೆ ನೀವು ನಂಬೋದೇ ಇಲ್ಲ! Arjun Sarja

ಪ್ರಮುಖ ಮುಖ್ಯಾಂಶಗಳು

  • ಆ್ಯಕ್ಷನ್​ ಕಿಂಗ್​ ಅರ್ಜುನ್​ ಸರ್ಜಾ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ
  • ಮೂಲತಃ ಕನ್ನಡದವರೇ ಆದ ಅರ್ಜುನ್​ ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್​ನಲ್ಲಿ
  • ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ
  • ಇತ್ತೀಚೆಗೆ ಅರ್ಜುನ್​ ಸರ್ಜಾ ಕುರಿತಾದ ಆಸಕ್ತಿದಾಯಕ ಸಂಗತಿಯೊಂದು ಬೆಳಕಿಗೆ ಬಂದಿದೆ
Arjun Sarja : ಆ್ಯಕ್ಷನ್​ ಕಿಂಗ್​ ಅರ್ಜುನ್​ ಸರ್ಜಾ ಬಗ್ಗೆ ಕನ್ನಡಿಗರಿಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಮೂಲತಃ ಕನ್ನಡದವರೇ ಆದ ಅರ್ಜುನ್​ ಹೆಚ್ಚಾಗಿ ಮಿಂಚಿದ್ದು ಮಾತ್ರ ಕಾಲಿವುಡ್​ನಲ್ಲಿ. ಸದ್ಯ ಅರ್ಜುನ್​ ಕುಟುಂಬ ಚೆನ್ನೈನಲ್ಲೇ ನೆಲೆಸಿದೆ. ಹೀಗಿದ್ದರೂ ಅರ್ಜುನ್​ ಅವರಿಗೆ ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗಾಗ ಕನ್ನಡ ಸಿನಿಮಾಗಳನ್ನು ಸಹ ಮಾಡುತ್ತಿರುತ್ತಾರೆ.
ಅಂದಹಾಗೆ ಅರ್ಜುನ್​ ಸರ್ಜಾ, ಕನ್ನಡದ ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ಅವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆದರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.
ಅರ್ಜುನ್​ ಸರ್ಜಾ ಅವರ ಮಡದಿಯ ಹೆಸರು ನಿವೇದಿತ ಅರ್ಜುನ್. ಇವರು ಶಿವರಾಜ್​ಕುಮಾರ್​ ಅಭಿನಯದ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಅರ್ಜನ್​ ಸರ್ಜಾ ಅವರು ಇತ್ತೀಚೆಗೆ ಖಳನಾಯಕನ ಪಾತ್ರದಲ್ಲೂ ಮಿಂಚಿದ್ದಾರೆ. ಲಿಯೋ ಸಿನಿಮಾದಲ್ಲಿ ಅರ್ಜುನ್​ ಸರ್ಕಾ ವಿಲನ್​ ಆಗಿ ನಟಿಸಿದರು. ಈ ಸಿನಿಮಾ ಸಖತ್​ ಸದ್ದು ಮಾಡಿತು. ವಯಸ್ಸು 62 ಆದರೂ ಇಂದಿಗೂ ಅರ್ಜುನ್​ ಸರ್ಜಾ ಸಖತ್​ ಬಿಜಿಯಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅರ್ಜುನ್​ ಸರ್ಜಾ ಕುರಿತಾದ ಆಸಕ್ತಿದಾಯಕ ಸಂಗತಿಯೊಂದು ಬೆಳಕಿಗೆ ಬಂದಿದೆ.
ಹೌದು, ನಮಗೆಲ್ಲ ಅರ್ಜುನ್​ ಸರ್ಜಾ ಎಂದೇ ಪರಿಚಿತರಾಗಿರುವ ಆ್ಯಕ್ಷನ್ ಕಿಂಗ್​ ಅವರ ಒರಿಜಿನಲ್​ ಹೆಸರೇ ಬೇರೆ ಇದೆ. ಇತ್ತೀಚೆಗೆ ಈ ವಿಚಾರವವನ್ನು ಸಿನಿಮಾ ವಿಕಟನ್​ ಹೆಸರಿನ ತಮಿಳು ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಸಿನಿಮಾಗಳಲ್ಲಿ ತಾವು ಬಳಸುವ 'ಅರ್ಜುನ್' ಎಂಬುದು ಕೇವಲ ತೆರೆಯ ಮೇಲಿನ ಹೆಸರಷ್ಟೇ ವಿನಃ ಅದು ತಮ್ಮ ನಿಜವಾದ ಹೆಸರಲ್ಲ ಎಂಬುದನ್ನು ನಟ ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ. ಅವರ ಅಸಲಿ ಹೆಸರು 'ಶ್ರೀನಿವಾಸ್'. ಮನೆಯಲ್ಲಿ ಸೀನು ಅಂತ ಕರೆದರೆ, ಅವರ ಶಾಲಾ-ಕಾಲೇಜು ದಿನಗಳಲ್ಲಿ ಮಾತ್ರ ಎಲ್ಲರೂ ಅವರನ್ನು 'ಅಶೋಕ್' ಎಂದೇ ಕರೆಯುತ್ತಿದ್ದರಂತೆ. ಹೀಗಾಗಿ ಅವರ ಸ್ನೇಹಿತರ ವಲಯದಲ್ಲೂ ಅವರು ಅಶೋಕ್ ಎಂದೇ ಪರಿಚಿತರಾಗಿದ್ದಾರೆ.
ಶ್ರೀನಿವಾಸ್ ಅಥವಾ ಅಶೋಕ್ ಎಂಬ ಹೆಸರು 'ಅರ್ಜುನ್' ಆಗಿ ಬದಲಾಗಿದ್ದು ಅವರ ಮೊದಲ ಸಿನಿಮಾದ ಮೂಲಕ. ತಾವು ನಟಿಸಿದ ಚೊಚ್ಚಲ ಚಿತ್ರದಲ್ಲಿ ಅವರ ಪಾತ್ರದ ಹೆಸರು ಅರ್ಜುನ್ ಎಂದಾಗಿತ್ತು. ಆ ಪಾತ್ರದ ಹೆಸರನ್ನು ಗಮನಿಸಿದ ಚಿತ್ರದ ನಿರ್ದೇಶಕರು, "ಈ ಹೆಸರು ನಿನಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ, ಇದನ್ನೇ ನಿನ್ನ ಸಿನಿಮಾ ಹೆಸರಾಗಿ ಏಕೆ ಇಟ್ಟುಕೊಳ್ಳಬಾರದು?" ಎಂದು ಸಲಹೆ ನೀಡಿದರು. ಅದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಅವರು ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ಎಂದೇ ಗುರುತಿಸಿಕೊಂಡರು ಎಂದು ಹೇಳಿದ್ದಾರೆ. ಇಂದಿಗೂ ಮನೆಯಲ್ಲಿ ನನ್ನನ್ನು ಸೀನು ಅಂತಾನೇ ಕರೆಯುತ್ತಾರೆ ಎಂದು ಅರ್ಜುನ್​ ಸರ್ಜಾ ತಿಳಿಸಿದ್ದಾರೆ.
ಹೆಸರು ಬದಲಾದ ಆರಂಭದ ದಿನಗಳಲ್ಲಿ ತಮಗೆ ಎದುರಾದ ಗೊಂದಲದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮನೆಯಲ್ಲಿ ಎಲ್ಲರೂ 'ಸೀನು' (ಶ್ರೀನಿವಾಸ್) ಎಂದು ಕರೆಯುತ್ತಿದ್ದರೆ, ಶಾಲೆಯ ಫ್ರೆಂಡ್ಸ್ 'ಅಶೋಕ್' ಎನ್ನುತ್ತಿದ್ದರು. ಹೀಗಿರುವಾಗ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಯಾರಾದರೂ ಹಠಾತ್ತನೆ 'ಅರ್ಜುನ್' ಎಂದು ಕರೆದರೆ, ಅವರು ಬೇರೆ ಯಾರನ್ನೋ ಕರೆಯುತ್ತಿದ್ದಾರೆ ಅಂದುಕೊಂಡು ಸುಮ್ಮನಾಗುತ್ತಿದ್ದರಂತೆ. ಆ ನಂತರವಷ್ಟೇ ತಾವೇ ಅರ್ಜುನ್ ಎಂಬುದನ್ನು ಅರಿತುಕೊಂಡು ತಿರುಗಿ ನೋಡಲು ಆರಂಭಿಸಿದ್ದಾಗಿ ನಗುತ್ತಾ ನೆನಪಿಸಿಕೊಂಡಿದ್ದಾರೆ, (ಏಜೆನ್ಸೀಸ್​).