ಬೆಂಗಳೂರು: ಕೆ.ಎಂ. ಚೈತನ್ಯ ಅಭಿನಯದ 'ಅಬ್ಬಬ್ಬ' ಚಿತ್ರದ ಟ್ರೇಲರ್ನ್ನು ಇತ್ತೀಚೆಗಷ್ಟೇ ಸುದೀಪ್ ಬಿಡಗುಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಚಿತ್ರತಂಡದಿಂದ ಹಾಡೊಂದು ಬಿಡುಗಡೆಯಾಗಿದೆ. ಇದು ಬರೀ ಹಾಡಲ್ಲ, ಚಿತ್ರದ ಶೀರ್ಷಿಕೆ ಗೀತೆ. ಆಲ್ ಓಕೆ ಹಾಡಿರುವ ಈ ಹಾಡು ಇತ್ತೀಚೆಗೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಅಬ್ಬಬ್ಬ' ಒಂದು ಪಕ್ಕಾ ಕಾಮಿಡಿ ಚಿತ್ರ. ನೂರು ವರ್ಷ ತುಂಬಲಿರುವ ಬಾಲಕರ ಹಾಸ್ಟೆಲ್ ನಲ್ಲಿ ನಡೆಯುವ ಕಥೆ ಇರುವ ಈ ಚಿತ್ರವನ್ನು ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ಚಿತ್ರದ ನಿರ್ದೇಶನ ಮಾಡಿದ್ದರ ಕುರಿತು ಮಾತನಾಡುವ ನಿರ್ದೇಶಕ ಕೆ.ಎಂ. ಚೈತನ್ಯ, 'ನನಗೆ ಹದಿನೈದು ವರ್ಷದ ಮಗಳಿದ್ದಾಳೆ. ಕರೊನಾದಿಂದಾಗಿ ಅವಳ ಜೀವನದ ಪ್ರಮುಖ ಘಟ್ಟವಾದ ಎಸ್.ಎಸ್.ಎಲ್.ಸಿಯನ್ನು ಶಾಲೆಗೆ ಹೋಗದೆ ಮನೆಯಲ್ಲೇ ಕಲಿತಳು. ಆನಂತರ ಕಾಲೇಜು ದಿನಗಳನ್ನು ಮಿಸ್ ಮಾಡಿಕೊಂಡಳು. ನನ್ನ ಮಗಳು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಎರಡು ವರ್ಷ ಶಾಲೆ ಹಾಗೂ ಕಾಲೇಜು ಜೀವನದಿಂದ ದೂರಾಗಿದ್ದರು. ಇದೆಲ್ಲಾ ನನ್ನನ್ನು ಕಾಡುತ್ತಿತ್ತು. ಆ ಸಮಯಕ್ಕೆ ಈ ಕಥೆ ಸೂಕ್ತವೆನಿಸಿ, ಚಿತ್ರ ಆರಂಭ ಮಾಡಿದ್ದೆವು. ಇದೊಂದು ಪಕ್ಕಾ ಮನರಂಜನೆಯ ಚಿತ್ರ. ಕರೊನಾ ಮುಗಿದ ನಂತರದ ವೃತ್ತಿ ಜೀವನವನ್ನು ನಗುವಿನೊಂದಿಗೆ ಆರಂಭಿಸೋಣ ಎಂದು ಈ ಚಿತ್ರ ನಿರ್ದೇಶಿಸಿದ್ದೇನೆ' ಎನ್ನುತ್ತಾರೆ ಚೈತನ್ಯ.
ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟಿಸುತ್ತಿದ್ದಾರೆ. ಲಿಖಿತ್ಗೆ ಚೈತನ್ಯ ನಿರ್ದೇಶನದಲ್ಲಿ ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಆಸೆ ಇತ್ತಂತೆ. ಅದು ಈ ಚಿತ್ರದಲ್ಲಿ ಈಡೇರಿದ್ದಾಗಿ ಅವರು ಹೇಳುತ್ತಾರೆ. ಇನ್ನು, ಅಮೃತಾ ಅಯ್ಯಂಗಾರ್ ಯಾವತ್ತೂ ಹಾಸ್ಟಲ್ನಲ್ಲಿ ವಾಸ್ತವ್ಯ ಮಾಡಿರಲಿಲ್ಲವಂತೆ. ಆದರೆ, ಇಲ್ಲಿ ಬಾಯ್ಸ್ ಹಾಸ್ಟಲ್ಗೆ ಚೈತನ್ಯ ಕಳುಹಿಸಿಬಿಟ್ಟರು ಎನ್ನುತ್ತಾರೆ ಅಮೃತಾ. 'ಹಾಸ್ಟೆಲ್ನಲ್ಲಿ ಸಿಕ್ಕಿಹಾಕಿಕೊಂಡ ನಾನು ಹೇಗೆ ಆಚೆ ಬರುತ್ತೇನೆ ಎನ್ನವುದೇ ಕಥೆ' ಎನ್ನುತ್ತಾರೆ ನಾಯಕಿ ಅಮೃತ ಅಯ್ಯಂಗಾರ್.
ಈ ಚಿತ್ರವನ್ನು ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ದೀಪಕ್ ಅಲೆಕ್ಸಾಂಡರ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಡಾಲಿ ಧನಂಜಯ, ಯೋಗರಾಜ್ ಭಟ್ ಹಾಗೂ ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ವಿಶೇಷವೆಂದರೆ, ಧನಂಜಯ್ ಬರೆದಿರುವ ಹಾಡನ್ನು ವಸಿಷ್ಠ ಸಿಂಹ ಹಾಡಿದ್ದಾರೆ.
ಈ ಚಿತ್ರವನ್ನು ಮೀರಾಮಾರ್ ಸಂಸ್ಥೆ ಮೂಲಕ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಿಸಿದ್ದಾರೆ. ಲಿಖಿತ್ ಮತ್ತು ಅಮೃತಾ ಜತೆಗೆ ಶರತ್ ಲೋಹಿತಾಶ್ವ, ಅಜಯ್ ರಾಜ್, ಧನರಾಜ್, ತಾಂಡವರಾಮ್, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ.