ಮುಂಬೈ: ಸದ್ಯ 'ಲಾಲ್ ಸಿಂಗ್ ಚಡ್ಢಾ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಆಮೀರ್ ಖಾನ್ ಮುಂದಿನ ಚಿತ್ರ ಯಾವುದು? ಈ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇರಬಹುದು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. 'ಲಾಲ್ ಸಿಂಗ್ ಚಡ್ಢಾ' ನಂತರ ಆಮೀರ್ ಖಾನ್, 'ಮೊಘಲ್' ಎಂಬ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.
'ಮೊಘಲ್' ಎಂಬ ಹೆಸರನ್ನು ಎಲ್ಲೋ ಕೇಳಿರುವ ಹಾಗಿದೆಯಲ್ಲಾ ಎಂದನಿಸಬಹುದು. ಅದು ಸಹಜ. ಏಕೆಂದರೆ, ಈ 'ಮೊಘಲ್' ಎಂಬ ಹೆಸರು ಕಳೆದ ನಾಲ್ಕು ವರ್ಷಗಳಿಂದ ಬಾಲಿವುಡ್ನಲ್ಲಿ ಕೇಳಿಬರುತ್ತಲೇ ಇದೆ. ಇದು ಟಿ-ಸೀರೀಸ್ನ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಬಯೋಪಿಕ್.
ಬಾಲಿವುಡ್ ಸಂಗೀತ ಮತ್ತು ನಿರ್ಮಾಣದಲ್ಲಿ ದೊಡ್ಡ ಹೆಸರು ಮಾಡಿದ್ದ ಗುಲ್ಶನ್ ಕುಮಾರ್ ಅವರು ಎರಡು ದಶಕಗಳ ಹಿಂದೆ ದುಷ್ಕರ್ಮಿಗಳ ಗುಂಡೇಟಿನಿಂದ ಹತರಾಗಿದ್ದರು. ಅವರ ಕುರಿತು ಚಿತ್ರ ಮಾಡಬೇಕು ಎಂಬುದು ಅವರ ಮಗ ಭೂಷಣ್ ಕುಮಾರ್ ಅವರ ಬಹಳ ದಿನಗಳ ಕನಸು. ಅದರಂತೆ ಕಥೆ-ಚಿತ್ರಕಥೆ ಮಾಡಿಸಿ, ಕೆಲವು ವರ್ಷಗಳ ಹಿಂದೆಯೇ ಈ ಚಿತ್ರವನ್ನು ಘೋಷಿಸಿದ್ದರು ಭೂಷಣ್.
ಮುಂಚೆ ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ನಟಿಸುವುದಾಗಿ ಸುದ್ದಿಯಾಗಿತ್ತು. ಈ ಕುರಿತು ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರದಿಂದ ಅವರು ಹೊರನಡೆದರು. ನಂತರ ಗುಲ್ಶನ್ ಕುಮಾರ್ ಅವರ ಪಾತ್ರದಲ್ಲಿ ಆಮೀರ್ ಖಾನ್ ನಟಿಸಬಹುದು ಎಂದು ಸುದ್ದಿಯಾಯಿತು. ಬರೀ ನಟನೆಯಷ್ಟೇ ಅಲ್ಲ, ಚಿತ್ರದ ನಿರ್ಮಾಣದಲ್ಲೂ ಅವರು ತೊಡಗಿಸಿಕೊಳ್ಳುತ್ತಾರೆ ಎಂಬ ವಿಷಯ ಕೇಳಿ ಬಂದಿತ್ತು.
ಇದನ್ನೂ ಓದಿ: ಮೆಟ್ರೋದಲ್ಲಿ ಶೂಟಿಂಗ್ಗೆ ಹೋದ್ರಂತೆ ಪವನ್ ಕಲ್ಯಾಣ್
ಅದೀಗ ನಿಜವಾಗಿ. ಖುದ್ದು ಭೂಷಣ್ ಕುಮಾರ್ ಅವರೇ ಆಮೀರ್ ಖಾನ್ ನಟಿಸುತ್ತಿರುವುದಷ್ಟೇ ಅಲ್ಲ, ಚಿತ್ರದ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರ ಶುರುವಾಗಬೇಕಿತ್ತಂತೆ. ಆದರೆ, ಕರೊನಾ ಬಂದು ಎಲ್ಲಕ್ಕೂ ಅಡ್ಡಗಾಲು ಹಾಕಿತು ಎಂಬುದು ಅವರ ಅಭಿಪ್ರಾಯ.
ಸದ್ಯ, 'ಲಾಲ್ ಸಿಂಗ್ ಚಡ್ಢಾ' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಆಮೀರ್, ಈ ಚಿತ್ರ ಮುಗಿಸಿ, ಮುಂದಿನ ವರ್ಷದ ಜುಲೈ ನಂತರ 'ಮೊಘಲ್' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರಂತೆ.