ಮುಂಬೈ: ಬಾಲಿವುಡ್ ತಾರಾದಂಪತಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಇಂದು (ಜುಲೈ 3) ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಡಿವೋರ್ಸ್ ಘೋಷಣೆಯೊಂದಿಗೆ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.
ಈ 15 ವರ್ಷಗಳು ನಾವಿಬ್ಬರು ಒಟ್ಟಿಗೆ ಜೀವಿಸಿ ಸಂತೋಷ ಮತ್ತು ನಗೆಯ ಜೀವಿತಾವಧಿಯ ಅನುಭವಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ನಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ನಾವಿಬ್ಬರು ಬಯಸಿದ್ದೇವೆ. ಇನ್ನು ಮುಂದೆ ನಾವಿಬ್ಬರು ಪತಿ-ಪತ್ನಿಯಾಗಿರುವುದಿಲ್ಲ. ಆದರೆ, ನಮ್ಮ ಕುಟುಂಬಕ್ಕೆ ಸಹ ಪಾಲಕರಾಗಿ ಇರಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆಯೇ ನಾವಿಬ್ಬರು ಬೇರೆಯಾಗುವ ಪ್ಲಾನ್ ಆರಂಭಿಸಿದೆವು. ಈಗ ಅಂತಿಮ ನಿರ್ಧಾರಕ್ಕೆ ಬಂದಿದ್ದು, ನಾವು ಪ್ರತ್ಯೇಕವಾಗಿ ವಾಸಿಸುವ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಮಗ ಅಜಾದ್ಗೆ ಒಳ್ಳೆಯ ಪಾಲಕರಾಗಿಯೇ ಉಳಿಯುತ್ತೇವೆ. ಆತನ ಉತ್ತಮ ಭವಿಷ್ಯಕ್ಕೆ ನೆರವಾಗುತ್ತೇವೆ ಎಂದಿದ್ದಾರೆ.
ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳಲ್ಲಿ ಸಹಭಾಗಿತ್ವದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ಸಂಬಂಧದಲ್ಲಿನ ಈ ಬದಲಾವಣೆಯನ್ನು ಅರಿತು ಬೆಂಬಲವಾಗಿ ನಿಂತ ನಮ್ಮ ಕುಟುಂಬಗಳು ಮತ್ತು ಸ್ನೇಹಿತರಿಗೆ ದೊಡ್ಡ ಧನ್ಯವಾದಗಳು ಎಂದು ಹೇಳಿದ್ದಾರೆ.
ಆಮೀರ್ ಖಾನ್ ತಮ್ಮ ಎರಡನೇ ಮಗ ಆಜಾದ್ ರಾವ್ ಖಾನ್ರನ್ನು ಪತ್ನಿ ಕಿರಣ್ ರಾವ್ ಅವರೊಂದಿಗೆ ಡಿಸೆಂಬರ್ 5, 2011 ರಂದು ಬಾಡಿಗೆ ತಾಯ್ತನದ ಮೂಲಕ ಪಡೆದರು. (ಏಜೆನ್ಸೀಸ್)