ಹೈದರಾಬಾದ್: 'ಆರ್ಆರ್ಆರ್' ಚಿತ್ರದಲ್ಲಿ ರಾಮ್ಚರಣ್ ತೇಜ ಎದುರು ಆಲಿಯಾ ಭಟ್ ನಾಯಕಿಯಾಗಿ ನಟಿಸಬೇಕಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಚಿತ್ರ ಪ್ರಾರಂಭವಾದ ಹೊಸದರಲ್ಲೇ, ಆಲಿಯಾ ನಾಯಕಿಯಾಗಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು.
ಆದರೆ, ಇತ್ತೀಚಿನ ದಿನಗಳಲ್ಲಿ 'ಆರ್ಆರ್ಆರ್' ಚಿತ್ರದಲ್ಲಿ ಆಲಿಯಾ ನಟಿಸುವುದೇ ಡೌಟ್ ಎಂಬ ಮಾತು ಕೇಳಿ ಬಂದಿತ್ತು. 'ಸಡಕ್ 2' ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಎಲ್ಲಿ ರಾಜಮೌಳಿ ಸಹ ಆಲಿಯಾ ಅವರನ್ನು ತಮ್ಮ ಚಿತ್ರದಿಂದ ಕೈಬಿಡುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.
ನಿರ್ದೇಶಕ ರಾಜಮೌಳಿ ಮಾತ್ರ ಯಾರು ಏನೇ ಹೇಳಿದರೂ, ತಮ್ಮ 'ಆರ್ಆರ್ಆರ್' ಚಿತ್ರದಿಂದ ಯಾವುದೇ ಕಾರಣಕ್ಕೂ ಆಲಿಯಾ ಅವರನ್ನು ಕೈಬಿಡುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಈಗಾಗಲೇ 'ಆರ್ಆರ್ಆರ್' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಆಲಿಯಾ ಭಟ್ ಸಹ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, 'ಆರ್ಆರ್ಆರ್' ಚಿತ್ರದಲ್ಲಿ ಆಲಿಯಾ ಬಹಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಅವರ ಅಭಿನಯದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಇನ್ನು ಒಂದು ದೊಡ್ಡ ದೃಶ್ಯದ ಚಿತ್ರೀಕರಣ ಮುಗಿದರೆ, ಆಲಿಯಾ ಭಾಗದ ಚಿತ್ರೀಕರಣವೇ ಮುಕ್ತಾಯವಾಗುತ್ತದಂತೆ. ಈ ಹಿನ್ನೆಲೆಯಲ್ಲಿ ನವೆಂಬರ್ನಲ್ಲಿ ಆಲಿಯಾ ಡೇಟ್ಸ್ ಕೊಟ್ಟಿದ್ದು, ಆಗ ಅವರ ಭಾಗದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತದಂತೆ.
ಈ ದೃಶಯದಲ್ಲಿ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಸಹ ಅಭಿನಯಿಸುತ್ತಿದ್ದು, ಈ ದೃಶ್ಯವು ಚಿತ್ರದ ಪ್ರಮುಖ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ.