ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ವರ್ಷ 2022. ಅದಕ್ಕೆ ಕಾರಣ ಕನ್ನಡ ಚಿತ್ರಗಳಿಗೆ ಸಿಕ್ಕಿರುವ ಅತ್ಯದ್ಭುತ ಯಶಸ್ಸು. ವರ್ಷಾರಂಭದಲ್ಲಿ ಕರೋನಾ ಮೂರನೇ ಅಲೆಯ ಆತಂಕದಲ್ಲಿ ನಿಧಾನವಾಗಿ ಪ್ರಾರಂಭವಾದರೂ ಕ್ರಮೇಣ ಹಿಂದೆಂದೂ ನೋಡದ ಯಶಸ್ಸನ್ನು ಸ್ಯಾಂಡಲ್ವುಡ್ ಈ ವರ್ಷ ತನ್ನದಾಗಿಸಿಕೊಂಡಿದೆ. ನೂರು ಕೋಟಿ ಗಳಿಕೆಯೂ ಮರೀಚಿಕೆ ಎನ್ನುತ್ತಿರುವಾಗಲೇ ಕನ್ನಡದ ಐದು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು, ಅದರಲ್ಲೊಂದು ಸಿನಿಮಾ ಸಾವಿರ ಕೋಟಿ ಬಾಚಿಕೊಂಡು ಎಲ್ಲರೂ ಬೆರಗಾಗುವಂತೆ ಮಾಡಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎಂದು ಇಡೀ ವಿಶ್ವವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದೆ.
ಈ ವರ್ಷ ಕನ್ನಡದಲ್ಲಿ ಒಟ್ಟು 202 ಚಿತ್ರಗಳು ಬಿಡುಗಡೆಯಾಗಿದ್ದು, ಶೇಕಡಾ 10ರಷ್ಟು ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಗೆದ್ದು ಬೀಗಿವೆ.
ಚಿನ್ನದ ಗಣಿ ‘ಕೆಜಿಎಫ್ ಚಾಪ್ಟರ್ 2’
ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ವಪಕ ವಿಜಯ್ ಕಿರಗಂದೂರು ಕಾಂಬಿನೇಷನ್ 2018ರಲ್ಲಿ ‘ಕೆಜಿಎಫ್ ಚಾಪ್ಟರ್ 1’ ಚಿತ್ರವನ್ನು ಪಂಚ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆ ಮಾಡಿತ್ತು. ಆಗ ಸಿನಿಮಾ 250 ಕೋಟಿ ರೂ. ಗಳಿಕೆ ಮಾಡಿಕೊಂಡಿತ್ತು. ಅದು ಆಗ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆಯಾಗಿತ್ತು. ಅದಾಗಿ ನಾಲ್ಕು ವರ್ಷಗಳ ಬಳಿಕ ‘ಕೆಜಿಎಫ್ 2’ ಇದೇ ಏ. 14ರಂದು ವಿಶ್ವಾದ್ಯಂತ ರಿಲೀಸ್ ಆಯಿತು. ಹಿಂದಿ ಭಾಷೆಯಲ್ಲಿ 500 ಕೋಟಿ ರೂ. ಸೇರಿದಂತೆ ವಿಶ್ವಾದ್ಯಂತ ಈ ಸೀಕ್ವಲ್ ಬರೋಬ್ಬರಿ 1250 ಕೋಟಿ ರೂ. ಗಳಿಕೆ ಮಾಡಿಕೊಂಡು, ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿತು.
ನೆಲದ ಸಂಸ್ಕೃತಿ ಸಾರುವ ‘ಕಾಂತಾರ’
ದೊಡ್ಡ ಬಜೆಟ್ನಲ್ಲಿ ದೊಡ್ಡ ಸ್ಟಾರ್ಗಳ ಜತೆ ಸಿನಿಮಾ ಮಾಡಿದರೆ ಗಳಿಕೆ ಕೂಡ ಭರ್ಜರಿಯಾಗಿರುತ್ತೆ ಎಂಬುದು ಹಳೆಯ ಮಾತು. ಆದರೆ 20 ಕೋಟಿ ರೂ. ಸಿನಿಮಾ ಮಾಡಿ 410 ಕೋಟಿ ರೂ. ಗಳಿಕೆ ಮಾಡಿಕೊಂಡ ಉದಾಹರಣೆ ಇತಿಹಾಸದಲ್ಲಿಲ್ಲ. ಆ ಇತಿಹಾಸ ಸೃಷ್ಟಿಸಿದ ಹೆಗ್ಗಳಿಕೆ ರಿಷಭ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕಾಂತಾರ’ ಚಿತ್ರಕ್ಕೆ ಸಲ್ಲುತ್ತದೆ. ಭೂತ ಕೋಲ, ದೈವಗಳು, ಕಂಬಳದಂತಹ ಕನ್ನಡದ ಕರಾವಳಿ ಭಾಗದ ಸಂಸ್ಕೃತಿಯನ್ನು ತೆರೆಯ ಮೇಲೆ ಕಣ್ತುಂಬಿಕೊಂಡು ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ.
ಎಮೋಷನಲ್ ಹಿಟ್ ‘777 ಚಾರ್ಲಿ’
ಈ ವರ್ಷ ಪ್ಯಾನ್ ಇಂಡಿಯಾ ಸದ್ದು ಮಾಡಿದ ಮತ್ತೊಂದು ಕನ್ನಡದ ಚಿತ್ರ ‘777 ಚಾರ್ಲಿ’. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ನಟಿಸಿ ಕಿರಣ್ ರಾಜ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಲ್ಯಾಬ್ರಡಾರ್ ಶ್ವಾನವೇ ಹೈಲೈಟ್. ಈ ಸಿನಿಮಾ ಕೂಡ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡು ಎಮೋಷನಲ್ ಹಿಟ್ ಆಯಿತು.
‘ವಿಕ್ರಾಂತ್ ರೋಣ’ ಅಬ್ಬರ, ‘ಜೇಮ್ಸ್' ಜಾತ್ರೆ
ದಶಕದ ಹಿಂದೆಯೇ ಬಾಲಿವುಡ್ ಸೇರಿದಂತೆ ಬೇರೆ ಚಿತ್ರರಂಗಗಳಲ್ಲೂ ಮಿಂಚಿ, ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ ಕಿಚ್ಚ ಸುದೀಪ್. ಈ ವರ್ಷ ‘ವಿಕ್ರಾಂತ್ ರೋಣ’ ಮೂಲಕ ಮತ್ತೆ ಪಂಚ ಭಾಷೆಗಳಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದರು ಸುದೀಪ್. ಚಿತ್ರ 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿಕೊಂಡಿದೆ ಎನ್ನಲಾಗಿದೆ. ಹಾಗೆಯೇ ಪುನೀತ್ ರಾಜಕುಮಾರ್ ನಾಯಕನಾಗಿರುವ ಕೊನೆಯ ಚಿತ್ರ ‘ಜೇಮ್್ಸ’ ಕೂಡ ಬಾಕ್ಸಾಫೀಸಿನಲ್ಲಿ ಭರ್ಜರಿಯಾಗಿ ಗಳಿಕೆ ಮಾಡಿಕೊಂಡಿತು.
ತೆಲುಗಿನಲ್ಲಿ ನೂರು ಸಿನಿಮಾಗಳು ತೆರೆಗೆ
ದಕ್ಷಿಣ ಭಾರತದಲ್ಲಿ ಅತಿದೊಡ್ಡ ಚಿತ್ರರಂಗವೆಂದರೆ ಅದು ಟಾಲಿವುಡ್ ಅರ್ಥಾತ್ ತೆಲುಗು ಚಿತ್ರರಂಗ. ಆದರೆ, ಈ ವರ್ಷ ತೆಲುಗಿನಲ್ಲಿ ಹಿಂದಿನ ಸರಾಸರಿಗಿಂತ ಕಡಿಮೆ ಅರ್ಥಾತ್ 100 ಚಿತ್ರಗಳಷ್ಟೇ ಬಿಡುಗಡೆಯಾಗಿದ್ದು, ಅವುಗಳಲ್ಲಿ ‘ಆರ್ಆರ್ಆರ್’ ಸದ್ಯ ಆಸ್ಕರ್ ಬಾಗಿಲಲ್ಲಿ ನಿಂತಿದೆ. ಉಳಿದಂತೆ ‘ಸರ್ಕಾರು ವಾರಿ ಪಾಟ’, ‘ಕಾರ್ತಿಕೇಯ 2’, ‘ಎಫ್ 3’, ‘ಸೀತಾರಾಮಂ’ ಚಿತ್ರಗಳು ಬಾಕ್ಸಾಫೀಸಿನಲ್ಲಿ ಸದ್ದು ಮಾಡಿವೆ.
ವಿಜಯಾನಂದ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ
ವಿಆರ್ಎಲ್ ಸಮೂಹಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ ‘ವಿಜಯಾನಂದ’ ಸಹ ಪ್ಯಾನ್ ಇಂಡಿಯಾ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಕನ್ನಡಿಗರೇ ನಿರ್ವಿುಸಿದ ಕನ್ನಡದ ಸಾಧಕನ ಕುರಿತ ಮೊದಲ ಬಯೋಪಿಕ್ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಸಲ್ಲುತ್ತದೆ. ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಡಾ. ಆನಂದ ಸಂಕೇಶ್ವರ ನಿರ್ವಿುಸಿದ್ದ ಈ ಬಯೋಪಿಕ್ ರಿಷಿಕಾ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿತ್ತು. ಅನಂತ್ ನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಶೈನ್ ಶೆಟ್ಟಿ, ವಿನಯಾ ಪ್ರಸಾದ್, ದಯಾಳ್ ಪದ್ಮನಾಭನ್, ನಿಹಾಲ್, ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ವರ್ಷ ಸ್ಯಾಂಡಲ್ವುಡ್ನಲ್ಲಿ ನಿರ್ವಣವಾಗಿ ಪ್ಯಾನ್ ಇಂಡಿಯಾ ಪ್ರೇಕ್ಷಕರ ಮನಗೆದ್ದ ಮತ್ತೊಂದು ಚಿತ್ರವಿದು.
ಮಲಯಾಳಂ 250, ತಮಿಳಿನಲ್ಲಿ 210!
ಈ ವರ್ಷ ತಮಿಳಿನಲ್ಲಿ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ 1’ 500 ಕೋಟಿ ರೂ. ಗಳಿಕೆ ಮಾಡಿಕೊಂಡಿದ್ದು, ಕಮಲ್ ಹಾಸನ್ ನಟಿಸಿರುವ ‘ವಿಕ್ರಮ್ 400 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದೆ. ಉಳಿದಂತೆ ವಿಜಯ್ ಅಭಿನಯದ ‘ಬೀಸ್ಟ್’, ಅಜಿತ್ ನಟನೆಯ ‘ವಲಿಮೈ’, ಬಾಕ್ಸಾಫೀಸ್ನಲ್ಲಿ ಗೆಲುವಿನ ನಗು ಬೀರಿವೆ. ಇನ್ನು ಮಲಯಾಳಂನಲ್ಲಿ ಈ ವರ್ಷ 250ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ, ಮಮ್ಮೂಟಿ ಅಭಿನಯದ ‘ಭೀಷ್ಮ ಪರ್ವಂ’ ಮಾತ್ರ ನೂರು ಕೋಟಿ ಕ್ಲಬ್ ಸೇರಿದ್ದು, ‘ತಲ್ಲುಮಾಲ’, ಪೃಥ್ವಿರಾಜ್ ನಾಯಕನಾಗಿರುವ ‘ಜನ ಗಣ ಮನ’ 50 ಕೋಟಿ ರೂ. ಕ್ಲಬ್ ಸೇರಿಕೊಂಡಿವೆ.