ಸಿನಿವಾಣಿ

'ಅಲ್ಲಮ' ಆಯ್ತು, ಈಗ 'ಶ್ರೀ ಅಲ್ಲಮಪ್ರಭು' ...

ಬೆಂಗಳೂರು: 12ನೇ ಶತಮಾನದ ಸಂತ ಮತ್ತು ವಚನಕಾರ ಅಲ್ಲಮಪ್ರಭುಗಳ ಕುರಿತಾಗಿ ಹಿರಿಯ ನಿರ್ದೇಶಕ ಟಿ.ಎಸ್​. ನಾಗಾಭರಣ ಅವರು ಕೆಲವು ವರ್ಷಗಳ ಹಿಂದೆ 'ಅಲ್ಲಮ' ಎಂಬ ಚಿತ್ರವನ್ನು ನಿರ್ದೇಶಿಸಿದ್ದು ಗೊತ್ತೇ ಇದೆ. ಈಗ ಅಲ್ಲಮಪ್ರಭುಗಳ ಕುರಿತಾಗಿ, 'ಶ್ರೀ ಅಲ್ಲಮಪ್ರಭು' ಎಂಬ ಇನ್ನೊಂದು ಚಿತ್ರ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ.

ಕಳೆದ ವಾರ ಭಾರತೀಯ ವಿದ್ಯಾ ಭವನದಲ್ಲಿ 'ಶ್ರೀ ಅಲ್ಲಮಪ್ರಭು' ಚಿತ್ರದ ಮುಹೂರ್ತ ಹಲವು ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರಿತು. ಈ ಹಿಂದೆ 'ಎನ್​ಕೌಂಟರ್​ ದಯಾನಾಯಕ್' ಎಂಬ ಚಿತ್ರದಲ್ಲಿ ನಟಿಸಿದ್ದ ಸಚಿನ್​ ಸುವರ್ಣ ಈ ಚಿತ್ರದಲ್ಲಿ ಅಲ್ಲಮಪ್ರಭುಗಳ ಪಾತ್ರ ಮಾಡಿದರೆ, 'ಚೈತನ್ಯ' ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸದ್ದ ಶಿವರಾಜ್​ ಎನ್ನುವವರು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಮುಹರ್ತೂದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಶಂಕರ್​ ಬಿದರಿ, 'ಆಗಿನ ಮಹಾಪುರುಷರ ಕಾಲ ಅತ್ಯಂತ ಶ್ರೇಷ್ಠವಾದ ಕಾಲ. ಇಂತಹ ಆಧುನಿಕ ಕಾಲಘಟ್ಟದಲ್ಲಿ ಶ್ರೀ ಅಲ್ಲಮಪ್ರಭುಗಳ ಕುರಿತು ಸಿನಿಮಾ ಆಗುತ್ತಿರುವುದು ಬಹಳ ಸಂತೋಷದ ವಿಷಯ' ಎಂದರು.

'ಶ್ರೀ ಅಲ್ಲಮಪ್ರಭು' ಚಿತ್ರವನ್ನು ಮಹಾವೀರಪ್ರಭು ಮತ್ತು ಮಾಧವಾನಂದ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಹಿರಿಯ ಛಾಯಾಗ್ರಾಹಕ ಆರ್​. ಮಂಜುನಾಥ್​ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕುಮಾರ್ ಈಶ್ವರ್​ ಸಂಗೀತವಿದೆ. ಇನ್ನು ನಿರ್ಮಾಪಕ ಮಾಧವಾನಂದ ಅವರೇ ಕಥೆ-ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ಸಚಿನ್​ ಜೊತೆಗೆ ರಾಮಕೃಷ್ಣ, ಬಿರಾದಾರ್​, ಮೂಗು ಸುರೇಶ್​, ಗಣೇಶ್​ರಾವ್​ ಕೇಸರ್​ಕರ್​, ಸಂಗೀತಾ, ಶ್ರೀಧೆವಿ ಮೇಳ್ಳಿಗಟ್ಟಿ ಮುಂತಾದವರು ನಟಿಸಲಿದ್ದಾರೆ.