ಸಿನಿವಾಣಿ

ಭರ್ಜರಿ ಎಂಟರ ಗಂಟು; ಈ ವಾರಾಂತ್ಯ ಸಿನಿ ಪ್ರಿಯರಿಗೆ ರಸದೌತಣ

ಬೆಂಗಳೂರು: ಈ ಹಿಂದೆ ಸುಮಾರು 23 ವಾರಗಳಲ್ಲಿ ಪ್ರತಿ ವಾರ ಸರಾಸರಿ ಮೂರ್ನಾಲ್ಕು ಚಿತ್ರಗಳು ಮಾತ್ರ ಬಿಡುಗಡೆಯಾಗಿದ್ದವು. ಆದರೆ, ಕಳೆದ ವಾರ ಇದು ಬ್ರೇಕ್ ಆಗಿದ್ದು, ಐದು ಸಿನಿಮಾಗಳು ರಿಲೀಸ್ ಆಗಿದ್ದವು. ಆದರೆ, ವಿಶೇಷವೆಂದರೆ ಈ ವಾರ ಭಿನ್ನ ವಿಭಿನ್ನ ಜಾನರ್‌ಗಳ ಎಂಟು ಸಿನಿಮಾಗಳು ತೆರೆಗೆ ಬರಲು ಸಿದ್ಧತೆ ನಡೆಸಿವೆ.

ಹಾಸ್ಟೆಲ್ ಹುಡುಗರ ಹಾವಳಿ:
ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿರುವ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಹಾಸ್ಟೆಲ್‌ನಲ್ಲಿ ನಡೆಯುವ ಒಂದು ಘಟನೆಯ ಸುತ್ತ ಸುತ್ತುವ ಕಥೆಯಿದು. ಬಹುತೇಕ ಹೊಸಬರೇ ಇರುವ ಈ ಚಿತ್ರ ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ಕುತೂಹಲ ಕೆರಳಿಸಿದೆ. ಜತೆಗೆ ರಿಷಬ್ ಶೆಟ್ಟಿ, ದಿಗಂತ್, ಪವನ್ ಕುಮಾರ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದು, ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಹೀಗೆ ಹಲವು ಸ್ಟಾರ್‌ಗಳು ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಕಾರಣ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಇನ್ನೂ ಏಳು ಸಿನಿಮಾಗಳು:
ಶ್ರೀನಿ ಹನುಮಂತರಾಜು ನಿರ್ದೇಶನದ, ರಜಿನಿ ಹಾಗೂ ಶುಭಾ ಪೂಂಜ ಮುಖ್ಯ ಭೂಮಿಕೆಯಲ್ಲಿರುವ ಕ್ರೈಂ ಥ್ರಿಲ್ಲರ್ ಸಿನಿಮಾ ‘ಅಂಬುಜ’ ನಾಳೆ ರಿಲೀಸ್ ಆಗಲಿದೆ. ಪೊಲೀಸ್ ಅಧಿಕಾರಿಯೊಬ್ಬನ ಕಥೆಯನ್ನು ಹೇಳುವ ಕಾಮಿಡಿ ಸಿನಿಮಾ ‘ನಿಮ್ಮೆಲ್ಲರ ಆಶೀರ್ವಾದ’ ಕೂಡ ಶುಕ್ರವಾರ ತೆರೆಗೆ ಬರಲಿದೆ. ಇದಕ್ಕೆ ರವಿಕಿರಣ್ ಭಟ್ ಆ್ಯಕ್ಷನ್ ಕಟ್ ಹೇಳಿದ್ದು, ಪ್ರತೀಕ್ ಶೆಟ್ಟಿ, ಪಾಯಲ್ ರಾಧಾಕೃಷ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚೊಚ್ಚಲ ಬಾರಿಗೆ ನಿರ್ದೇಶಿಸಿ, ನಟಿಸುತ್ತಿರುವ ಶ್ರೇಯಸ್ ಚಿಂಗಾ ಅವರ ‘ಡೇವಿಡ್’, ನಾಗೇಶ್ ಕುಮಾರ್ ನಿರ್ದೇಶನದ ಬೆಂಗಳೂರಿನ ಡಾನ್ ಒಬ್ಬನ ಕಥೆ ಹೇಳುವ ಆ್ಯಕ್ಷನ್ ಸಿನಿಮಾ ‘ಡಾನ್ ಕುಮಾರ’, ಪ್ರೇಮ್ ಸಿಡೇಗಲ್ ಅಭಿನಯದ, ಸಂತೋಷ್ ಕೈದಾಳ ನಿರ್ದೇಶನದ ಪೂರ್ವಜರ ಕನಸನ್ನು ಈಡೇರಿಸುವವನ ‘ಪರಂವಃ’, ಮಧುಸೂದನ್ ಕ್ಯಾತನಹಳ್ಳಿ ನಿರ್ದೇಶಿಸಿ, ನಟಿಸಿರುವ ಆಯುರ್ವೇದದ ಕುರಿತು ಜಾಗೃತಿ ಮೂಡಿಸುವ ‘ಮಧುರ ಕಾವ್ಯ’, ಸುರೇಶ್ ಲಕ್ಕೂರ್ ನಿರ್ದೇಶನದ ‘ದೇವರ ಕನಸು’ ಈ ವಾರ ರಿಲೀಸ್ ಆಗಲಿವೆ.