ನಟಿ ಮೀನಾ 
ಸಿನಿವಾಣಿ

67 ವರ್ಷದ ಹಿರಿಯ ನಟನಿಂದ ಬೆದರಿಕೆ! ಸ್ಫೋಟಕ ಹೇಳಿಕೆ ನೀಡಿ ಕೊನೆಗೆ ಟ್ವಿಸ್ಟ್​ ಕೊಟ್ಟ ನಟಿ ಮೀನಾ

ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.

ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಬಣ್ಣದ ಜಗತ್ತಿನಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.

ತಾಜಾ ಸಂಗತಿ ಏನೆಂದರೆ, ಮೀನಾ ಅವರಿಗೆ ಕಾಲಿವುಡ್​ ಹಿರಿಯ ನಟ ಪ್ರಭು ಅವರು ಹಿಂದೊಮ್ಮೆ ಬೆದರಿಕೆ ಹಾಕಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಸ್ವತಃ ಮೀನಾ ಅವರೇ ಬಹಿರಂಗಪಡಿಸಿದ್ದಾರೆ.

ನಾನು ಒಂದು ಚಿತ್ರದಲ್ಲಿ ಪ್ರಭು ಅವರಿಗೆ ನಾಯಕಿಯಾಗಿ ನಟಿಸಿದ್ದೇನೆ. ಈ ಚಿತ್ರದ ಶೂಟಿಂಗ್​ ವೇಳೆ ಅವರೊಂದಿಗೆ ಮಾತನಾಡುವಾಗ ನಾನು ನಿಮ್ಮ ಚಿತ್ರದಲ್ಲಿ ಈಗಾಗಲೇ ಬಾಲ ನಟಿಯಾಗಿ ನಟಿಸಿದ್ದೇನೆ ಎಂದು ತಿಳಿಸಿದೆ. ಬಳಿಕ ಅಚ್ಚರಿಯಿಂದ ನನ್ನ ಕಡೆ ನೋಡುತ್ತಾ ಬೆದರಿಕೆ ಹಾಕಿದರು. ನನ್ನ ಬಳಿ ಹೇಳಿದಂತೆ ಬೇರೆ ಯಾರ ಬಳಿಯೂ ಹೇಳಬೇಡ. ಇದನ್ನು ಇಲ್ಲಿಗೆ ಬಿಟ್ಟುಬಿಡು ಎಂದು ಬೆದರಿಸಿದರು ಅಂತ ಮೀನಾ ನೆನೆಪಿಸಿಕೊಂಡಿದ್ದಾರೆ.

ಅಷ್ಟಕ್ಕೂ ಪ್ರಭು ಅವರ ಬೆದರಿಕೆ ಕೇವಲ ಜೋಕ್ಸ್​ ಅಷ್ಟೆ. ಬಾಲ ನಟಿಯಾಗಿದ್ದವಳು ತನ್ನೊಂದಿಗೆ ನಾಯಕಿಯಾಗಿದ್ದಾಳೆ ಎಂದು ಗೊತ್ತಾದರೆ ವಯಸ್ಸಾಗಿದೆ ಅಂತಾ ಅಂದುಕೊಳ್ಳುತ್ತಾರೆ. ಹೀಗಾಗಿ ಯಾರಿಗೂ ಹೇಳಬೇಡ ಎಂದು ತಮಾಷೆಯಾಗಿ ಪ್ರಭು ಅವರು ಮೀನಾರನ್ನು ಬೆದರಿಸಿದ್ದರಂತೆ.

ಅಂದಹಾಗೆ ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ವಿದ್ಯಾಸಾಗರ್ ಅವರು ಬಹು ಅಂಗಾಂಗ ವೈಫಲ್ಯ ಮತ್ತು ದೀರ್ಘಕಾಲದ ಕಾಯಿಲೆಯಿಂದ ಕೊನೆಯುಸಿರೆಳೆದರು. ಮೀನಾ ಮತ್ತು ವಿದ್ಯಾಸಾಗರ್​ ಅವರು 2009ರ ಜುಲೈ 12ರಲ್ಲಿ ಮದುವೆಯಾದರು. ದಂಪತಿಗೆ ನೈನಿಕಾ ಹೆಸರಿನ ಹೆಣ್ಣು ಮಗಳಿದ್ದಾಳೆ. ನೈನಿಕಾ, ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ನಟಿಸಿದ್ದಾಳೆ. (ಏಜೆನ್ಸೀಸ್​)