ಸಿನಿವಾಣಿ

ಹಾಫ್​ ಸೆಂಚ್ಯುರಿ ಬಾರಿಸಿದ '5 ಅಡಿ 7 ಅಂಗುಲ'

manjunathktgns

ಬೆಂಗಳೂರು: ಒಂದು ಚಿತ್ರ 50 ದಿನ ಓಡಿದ ಅಥವಾ ಸೆಂಚ್ಯುರಿ ಬಾರಿಸಿದ ಸುದ್ದಿಯನ್ನು ಕೇಳಿ ಅದೆಷ್ಟು ದಿನಗಳಾದವೋ ಗೊತ್ತಿಲ್ಲ. '5 ಅಡಿ 7 ಅಂಗುಲ' ಎಂಬ ಲಾಕ್​ಡೌನ್​ ನಂತರ ಬಿಡುಗಡೆಯಾದ ಚಿತ್ರವೊಂದು 50 ದಿನ ಮುಗಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡದವರು ಕೇಕ್ ಕತ್ತರಿಸಿ ಸಂಭ್ರಮಪಟ್ಟಿದ್ದಾರೆ.

'5 ಅಡಿ 7 ಅಂಗುಲ' ಮಾರ್ಚ್​ 13ರಂದು ಬಿಡುಗಡೆಯಾಗಿ ಕೇವಲ ಮೂರು ಪ್ರದರ್ಶನಗಳನ್ನು ಮಾತ್ರ ಕಂಡಿತ್ತು. ಆ ನಂತರ ಲಾಕ್​ಡೌನ್​ ಕಾರಣದಿಂದ ಚಿತ್ರಪ್ರದರ್ಶನ ರದ್ದಾಗಿತ್ತು. ಲಾಕ್​ಡೌನ್​ ಮುಗಿದು ಚಿತ್ರಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಈ ಚಿತ್ರವು ಭಾರತೀಯ ಅಕ್ಟೋಬರ್ 16 ರಂದು ಬಿಡುಗಡೆ ಆಗಿ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಹಾಗೂ ಒರಿಯಾನ್​ ಮಾಲ್​ನ ಪಿವಿಆರ್​ ಸಿನಿಮಾಸ್​ನಲ್ಲಿ 50 ದಿನಗಳ ಪ್ರದರ್ಶನವನ್ನು ಕಂಡಿದೆ.

ಕೇವಲ 10 ಪ್ರೇಕ್ಷಕರಿಂದ ಪ್ರಾರಂಭವಾದ ಪ್ರದರ್ಶನ, ಮುಂದೊಂದು ದಿನ 210 ಪ್ರೇಕ್ಷಕರು ಬರುವ ತನಕ ಮುಂದುವರೆದು ಕಳೆದ ಗುರುವಾರ 50 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪಿವಿಆರ್ ಸಿನಿಮಾಸ್​ನಲ್ಲಿ ಚಿತ್ರತಂಡದವರು ಒಂದು ಸಮಾರಂಭ ಆಯೋಜಿಸಿ, ಚಿತ್ರಕ್ಕೆ ದುಡಿದವರಿಗೆ ಸ್ಮರಣಫಲಕಗಳನ್ನು ನೀಡಿ ಗೌರವಿಸಿದ್ದಾರೆ. ಸುಧಾರಾಣಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಧಾರಾಣಿ, '50 ದಿವಸದ ಕಾರ್ಯಕ್ರಮದ ಬಗ್ಗೆ ಕೇಳಿಯೇ ಬಹಳ ವರ್ಷಗಳು ಆದವು, ನಾನು ಮನೆಯಿಂದ ಹೊರಟಾಗ, ನನ್ನ ಮೊದಲ ಸಿನಿಮಾ ‘ಆನಂದ್’ 100 ದಿವಸದ ಸಮಾರಂಭ ಜ್ಞಾಪಕಕ್ಕೆ ಬಂದಿತು. ಈ ಸಿನಿಮಾ ಸಹ 100 ದಿವಸ, ಸಿಲ್ವರ್ ಜುಬಿಲಿ ಆಚರಿಸುವಂತೆ ಆಗಲಿ. ಪ್ರೇಕ್ಷಕರು ಈ ಸಿನಿಮಾ ಪ್ರೋತ್ಸಾಹಿಸಿದ್ದಾರೆ. ಇದರಿಂದ ‘ಇತರ ನಿರ್ಮಾಪಕರುಗಳಿಗೆ ಧೈರ್ಯ ಬಂದಿದೆ' ಎಂದರು.

'5 ಅಡಿ 7 ಅಂಗುಲ' ಚಿತ್ರವನ್ನು ನೋಡಲಾಗಲಿಲ್ಲ ಎಂದು ಬೇಸರಿಸಿಕೊಂಡೇ ಮಾತನಾಡಿದ ವಿಜಯ್​, 'ನಾನು ಸಹ 5 ಅಡಿ 7 ಅಂಗುಲ ಎತ್ತರದವ' ಎಂದು ಹೇಳಿಕೊಳ್ಳುತ್ತಾ ಹೊಸ ತಂಡ ಜವಾಬ್ದಾರಿಯಿಂದ ಕೆಲಸ ಮಾಡಿರುವುದರಿಂದಲೇ ಈ ಚಿತ್ರ 50 ದಿವಸಕ್ಕೆ ಕಾಲಿಟ್ಟಿರುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಪ್ರಚಾರಕರ್ತ ವಿಜಯಕುಮಾರ್ ಅವರ ಜನುಮದಿನ ಆದ್ದರಿಂದ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.