ಇಂದು ಬಿಡುಗಡೆಯಾಗುತ್ತಿರುವ ‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ 14 ಹಾಡುಗಳಿವೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಹಾಡುಗಳಿರುವ ಚಿತ್ರ ಬಂದ ಉದಾಹರಣೆ ಇಲ್ಲ. ಆದರೆ, ಇದೇನೂ ಹೊಸದಲ್ಲ. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ದಲ್ಲಿ 15 ಹಾಡುಗಳು ಇದ್ದವು ಎಂದು ಹೇಳಲಾಗುತ್ತದೆ.
‘ರಾಜಸೂಯ ಯಾಗ’ ಎಂಬ ಚಿತ್ರದಲ್ಲಿ 18 ಹಾಡುಗಳು ಇದ್ದವಂತೆ. ‘ಮಲಯ ಮಾರುತ’ ಚಿತ್ರದಲ್ಲಿ 15 ಹಾಡುಗಳಿದ್ದರೆ, ‘ಪ್ರೇಮಲೋಕ’ದಲ್ಲಿ 11 ಹಾಡುಗಳಿದ್ದವು. ಆದರೆ, ಅತೀ ಹೆಚ್ಚು ಹಾಡುಗಳಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯು ಗುಬ್ಬಿ ವೀರಣ್ಣ, ಹೊನ್ನಪ್ಪ ಭಾಗವತರ್ ಮತ್ತು ಬಿ. ಜಯಮ್ಮ ಅಭಿನಯದ ‘ಸುಭದ್ರ’ ಚಿತ್ರಕ್ಕೆ ಸಲ್ಲುತ್ತದೆ.
ಈ ಚಿತ್ರದಲ್ಲಿ ದಾಖಲೆಯ 30 ಹಾಡು ಗಳಿದ್ದವಂತೆ. ಎಚ್.ಆರ್. ಪದ್ಮನಾಭ ಶಾಸ್ತ್ರಿಗಳು ಸಂಗೀತ ಸಂಯೋಜಿಸಿದರೆ, ‘ಕವಿಕೇಸರಿ’ ಬಿ. ನರಹರಿ ಶಾಸ್ತ್ರಿಗಳು ಗೀತೆಗಳಿಗೆ ಸಾಹಿತ್ಯ ರಚಿಸಿದ್ದರು.