ಬೆಂಗಳೂರು: ‘ಟೆನ್ಶನ್ ಇತ್ತು ...’ 25 ವರ್ಷಗಳ ಹಿಂದೆ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಮನಸ್ಥಿತಿ ಹೇಗಿತ್ತು ಎಂದರೆ, ‘ಟೆನ್ಶನ್ ಇತ್ತು ...’ ಎಂಬ ಎರಡೇ ಪದಗಳಲ್ಲಿ ಉತ್ತರಿಸುತ್ತಾರೆ ನಾಗಾಭರಣ. ‘ಈ ಚಿತ್ರ ಮಾಡಿರೋದು ಪ್ರಶಸ್ತಿಗಾಗಿ ಎಂಬ ಸುದ್ದಿ ಹಬ್ಬಿಸಿ ಬಿಟ್ಟಿದ್ದರು. ಅದಕ್ಕೆ ಸರಿಯಾಗಿ ಮೊದಲ ದಿನ, ಬೆಳಗಿನ ಆಟಕ್ಕೆ ಅರ್ಧ ಚಿತ್ರಮಂದಿರ ಮಾತ್ರ ತುಂಬಿತ್ತು. ನಾನು ಒಂದೆರಡು ಚಿತ್ರಮಂದಿರಗಳಲ್ಲಿ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿದುಕೊಂಡು, ಮಧ್ಯಾಹ್ನ ವಜ್ರೇಶ್ವರಿ ಕಂಬೈನ್ಸ್ ಕಚೇರಿಗೆ ಹೋಗುವಷ್ಟರಲ್ಲಿ ಪಾರ್ವತಮ್ಮನವರು ಕಾಯುತ್ತಿದ್ದರು. ಚಿತ್ರ ಬಹಳ ನಿಧಾನ ಎಂದು ಎಲ್ಲ ಕಡೆ ಪ್ರತಿಕ್ರಿಯೆ ಬರುತ್ತಿದ್ದರಿಂದ, ಒಂದಿಷ್ಟು ಎಡಿಟ್ ಮಾಡಿ, ಚುರುಕು ಮಾಡಿ ಎಂದರು. ನಾನು ವರದಪ್ಪನವರ (ಡಾ. ರಾಜ್ ಸಹೋದರ) ಜತೆಗೆ ಹೋಗಿ ಚರ್ಚೆ ಮಾಡಿ ನಂತರ ಎಡಿಟ್ ಮಾಡಿಸುತ್ತೇನೆ ಎಂದು ಹೇಳಿ, ವರದಪ್ಪನವರ ಮನೆಗೆ ಹೋದೆ. ಏನು ಮಾಡೋಣ ಎಂದು ಕೇಳಿದೆ. ‘ಏನೂ ಮಾಡಬೇಡ ಸ್ವಲ್ಪ ಇರಿ ...’ ಎಂದರು. ಕ್ರಮೇಣ, ಸಂಜೆಯ ಪ್ರದರ್ಶನದ ಹೊತ್ತಿಗೆ ಹೌಸ್ಫುಲ್ ಆಗಿರುವ ವಿಷಯವನ್ನು ಅವರೇ ತಿಳಿಸಿದರು. ಎಡಿಟಿಂಗ್ ಎಂದೆ. ‘ಎಡಿಟಿಂಗ್ ಯಾಕೆ? ಆರಾಮವಾಗಿ ಮನೆಗೆ ಹೋಗಿ ಎಂದರು. ನಾನು ಮನೆಗೆ ಹೋದೆ. ಮರುದಿನದಿಂದ ಹೌಸ್ಫುಲ್ ಪ್ರದರ್ಶನ ಮುಂದುವರೆಯಿತು. ಆ ನಂತರ ಇತಿಹಾಸ ಸೃಷ್ಟಿಯಾಯಿತು’ ಎನ್ನುತ್ತಾರೆ ನಾಗಾಭರಣ.
‘ಜನುಮದ ಜೋಡಿ’ ಚಿತ್ರವು ಗುಜರಾತಿ ಲೇಖಕ ಪನ್ನಾಲಾಲ್ ಪಟೇಲ್ ಅವರ ‘ಮಲಾಲಾ ಜೀವ್’ ಎಂಬ ಕಥೆಯನ್ನಾಧರಿಸಿದ ಚಿತ್ರ. ಆ ಕಥೆಯ ಹಕ್ಕುಗಳು ಅವರ ಬಳಿ 10 ವರ್ಷಗಳಿಂದ ಇದ್ದವಂತೆ. ಹಕ್ಕು ತರುವುದಕ್ಕೆ ಅಹ್ಮದಾಬಾದ್ಗೂ ಹೋಗಿದ್ದರಂತೆ ನಾಗಾಭರಣ. ‘ಈ ಕಥೆಯನ್ನು ಕನ್ನಡದಲ್ಲಿ ಹೇಗೆ ಮಾಡುತ್ತೀರಾ ಎಂದು ಪಟೇಲ್ ಮತ್ತು ಅವರ ಮಗ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಾನು ಅದನ್ನು ಇಲ್ಲಿಯ ಪರಿಸರಕ್ಕೆ ಒಗ್ಗಿಸಿ ಚಿತ್ರ ಮಾಡುವುದಕ್ಕೆ ಮುಂದಾದೆ. ಆದರೆ, ಯಾರಿಗೆ ಕಥೆ ಹೇಳಿದರೂ ಒಪ್ಪಲಿಲ್ಲ. ಕೊನೆಗೆ, ‘ಆಕಸ್ಮಿಕ’ ನಂತರ ವಜ್ರೇಶ್ವರಿ ಸಂಸ್ಥೆಗೆ ಈ ಚಿತ್ರ ಮಾಡುವ ಅವಕಾಶ ಬಂತು. ನಾನು ಈ ಕಥೆ ಹೇಳುವಾಗ, ಅಣ್ಣಾವು› ಸೋಫಾದ ಮೇಲೆ ಕುಳಿತಿದ್ದರು. ಕಥೆ ಮುಗಿಯುವ ಹೊತ್ತಿಗೆ ತುದಿಗೆ ಬಂದಿದ್ದರು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಕೊನೆಗೆ ನಾಯಕ-ನಾಯಕಿ ಇಬ್ಬರೂ ಒಂದಾಗುತ್ತಾರೆ ಅಂತ ಕೇಳಿ, ‘ಅಬ್ಬಾ ಸದ್ಯ ಬದುಕಿದೆ’ ಎಂದಿದ್ದರು. ಆಗಲೇ ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂದು ಹೇಳಿದ್ದೆ’ ಎಂದು ನೆನಪಿಸಿಕೊಳ್ಳುತ್ತಾರೆ ನಾಗಾಭರಣ. ‘ಜನುಮದ ಜೋಡಿ’, ಸಾಂಸ್ಕೃತಿಕವಾಗಿ ಕಾಲಾತೀತವಾಗಿ ನಿಲ್ಲುವ ಚಿತ್ರ ಎನ್ನುವುದು ಭರಣರ ಅಭಿಪ್ರಾಯ. ‘ಕನ್ನಡ ಚಿತ್ರರಂಗದಲ್ಲಿ ‘ಬಂಗಾರದ ಮನುಷ್ಯ’ ನಂತರ ಸಾಂಸ್ಕೃತಿಕವಾಗಿ, ಆಶಯದಲ್ಲಿ, ಭಾಷೆಯ ವಿಷಯದಲ್ಲಿ ‘ಜನುಮದ ಜೋಡಿ’ ಕಾಲಾತೀತವಾಗಿ ನಿಲ್ಲುತ್ತದೆ. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪಠ್ಯ ಆಗಿದೆ. ಅದಕ್ಕೆ ಕಾರಣ ಆ ಚಿತ್ರದ ಸತ್ವ’ ಎನ್ನುತ್ತಾರೆ.
‘ಜನುಮದ ಜೋಡಿ’ಯಲ್ಲಿ ನನ್ನದು ಚಿಕ್ಕ ಪಾತ್ರವಾದರೂ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಅದಕ್ಕೂ ಮುನ್ನ ಓದುವುದೋ, ಚಿತ್ರರಂಗದಲ್ಲಿ ಮುಂದುವರೆಯುವುದೋ ಎಂಬ ಸಣ್ಣ ಗೊಂದಲ ಇತ್ತು. ಆ ಚಿತ್ರದ ನಂತರ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿದವು. | ಪವಿತ್ರಾ ಲೋಕೇಶ್ ನಟಿ