ಟಾಕ್ಸಿಕ್ ಮತ್ತು ಹನುಮಾನ್ ಅಂಶ್ ಸಿನಿಮಾ
ಮುಂಬೈ: ಕೇವಲ 2 ಕೋಟಿ ಬಂಡವಾಳದಲ್ಲಿ ನಿರ್ಮಾಣವಾಗಿ 300 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದ ಸಿನಿಮಾ ಎಂದರೆ ಅದು ಇತ್ತೀಚೆಗೆ ತೆರೆಕಂಡ ಹನುಮಾನ್ ಅಂಶ್ (Hanuman Ansh) ಸಿನಿಮಾವಾಗಿದೆ. ಆಧ್ಯಾತ್ಮಿಕ ಗುರು, ನೀಮ್ ಕರೋಲಿ ಬಾಬಾ ಅವರ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ ಈ ಸಿನಿಮಾ 2026 ರಲ್ಲಿ ಅತ್ಯಂತ ಕಡಿಮೆ ಹೂಡಿಕೆ ಮಾಡಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾ ಈಗ ಭರ್ಜರಿ ಯಶಸ್ಸನ್ನು ಕಂಡ ಹಿನ್ನಲೆ ಹನುಮಾನ್ ಅಂಶ್ ಭಾಗ 2 ನ್ನು ಸಿನಿಮಾ ತಂಡ ಘೋಷಿಸಿದ್ದು, ನಿರ್ಮಾಪಕಲ್ಲಿ ಒಬ್ಬರಾದ ರಾಗಿನಿ ಸೋನಾ ಸಿನಿಮಾದ ಕುರಿತಾದ ಕೆಲ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಟಾಕ್ಸಿಕ್ ಅನ್ನು ಎದುರಿಸಲು ನಮ್ಮಿಂದ ಸಾಧ್ಯವಿರಲಿಲ್ಲ!
ಹನುಮಾನ್ ಅಂಶ್ ಸಿನಿಮಾ ಬಿಡುಗಡೆಯಾದ ಸಮಯಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಾಗೂ ಗೀತು ಮೋಹನ್ದಾಸ್ ನಿರ್ದೇಶದ ಬಹುನೀರಿಕ್ಷಿತ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ ಸಿನಿಮಾ ಬಿಡುಗಡೆಯಾಗಿತ್ತು.
500-600 ಕೋಟಿ ಹೂಡಿಕೆಯ ಸಿನಿಮಾ ಅದು. ನಮ್ಮದು ಕೇವಲ 2 ಕೋಟಿಯಲ್ಲಿ ತೆರೆಕಂಡ ಸಿನಿಮಾ. ಹಾಗೆಯೇ ಅವರ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ದೈತ್ಯ ಕಲಾವಿದರ ಹಿಂಡೇ ಇತ್ತು. ಆದರೆ ನಮ್ಮ ಸಿನಿಮಾದಲ್ಲಿ ಯಾವುದೇ ಖ್ಯಾತನಾಮ ನಟರಿರಲಿಲ್ಲ.
ಅಂತಯೇ ಟಾಕ್ಸಿಕ್ಗೆ ಠಕ್ಕರ್ ಕೊಡಲು ನಾವು ಸಿನಿಮಾವನ್ನು ನಿರ್ಮಿಸಲೇ ಇರಲಿಲ್ಲ. ಅವರ ವಿರುದ್ಧ ಕಲೆಕ್ಷನ್ ಅಲ್ಲಿ ನಾವು ಗೆಲ್ಲುವ ಮಾತೇ ಇರಲಿಲ್ಲ. ಆದರೆ ದೈವದ ಕೃಪೆ, ನೀಮ್ ಕರೋಲಿ ಬಾಬಾ ಅವರ ಆರ್ಶೀವಾದದ ಫಲವಾಗಿ ನಮ್ಮ ಹೂಡಿಕೆಯ ನೂರಾರು ಪಟ್ಟು ನಾವು ಲಾಭ ಗಳಿಸುವಂತಾಯಿತೆಂದು ರಾಗಿಣಿ ಹೇಳಿದ್ದಾರೆ.
ನಮಗೆ ಥಿಯೇಟರ್ ಕೂಡ ಸಿಕ್ಕಿರಲಿಲ್ಲ!
ನಾನು ಮೊದಲೇ ಹೇಳಿದಂತೆ ಟಾಕ್ಸಿಕ್ ಒಂದು ರಾಷ್ಟ್ರಮಟ್ಟದ ಸಿನಿಮಾ. ಆದರೆ ನಾವು ಅವರಿಗಿಂತ ಮೊದಲೇ ಸಿನಿಮಾವನ್ನು ಬಿಡುಗಡೆ ಮಾಡಿದ್ದೇವು. ಮೊದಲು ನಮಗೆ 350 ಥಿಯೇಟರ್ಗಳನ್ನು ನೀಡಿದ್ದರು. ಆದರೆ ಟಾಕ್ಸಿಕ್ ಬಿಡುಗಡೆಯಾದ ನಂತರ ನಮಗೆ ದೇಶದಲ್ಲಿ 40 ಥಿಯೇಟರ್ ಕೂಡ ಸಿಕ್ಕಿಲ್ಲ. ಆದರೆ ನಮ್ಮ ಸಿನಿಮಾದ ಕತೆ ಜನರನ್ನು ತಲುಪಿತು.
ನಿಧಾನವಾಗಿ ಜನರು ಸಿನಿಮಾ ನೋಡಲು ಬರಲಾರಂಭಿಸಿದರು. ಥಿಯೇಟರ್ಗಳು ತುಂಬಲಾರಂಭಿಸಿದವು. ಹೆಚ್ಚಿನ ಥಿಯೇಟರ್ಗಳಲ್ಲಿ ನಮ್ಮ ಸಿನಿಮಾ ಹೌಸ್ಫುಲ್ ಆಯಿತು. ಇದರೆಲ್ಲದರ ಫಲವಾಗಿ ನಮ್ಮ ಸಿನಿಮಾ ಈಗ ಅತ್ಯಂತ ಹೆಚ್ಚಿಗೆ ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ ಎಂದು ನಿರ್ಮಾಪಕಿ ಸಂತಸ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).