ಬೆಂಗಳೂರು: ಕನ್ನಡದಲ್ಲಿ ಹಾರರ್, ಥ್ರಿಲ್ಲರ್ ಶೈಲಿಯ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ’1900’ ಎಂಬ ಇನ್ನೊಂದು ಹೊಸ ಚಿತ್ರ ಪ್ರಾರಂಭವಾಗಿದ್ದು, ಈ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಇದನ್ನೂ ಓದಿ: VIDEO| ಗಂಧದ ಗುಡಿ ಟ್ರೈಲರ್ ಬಿಡುಗಡೆ: ಅ. 28ಕ್ಕೆ ತೆರೆಯ ಮೇಲೆ ರಾರಾಜಿಸಲಿದೆ ಅಪ್ಪುವಿನ ಅದ್ಭುತ ಕನಸು
ಈ ಹಿಂದೆ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಾ.ಪೂಜಾ ರಮೇಶ್, ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ದೃಶ್ಯಕ್ಕೆ ಲವ್ ಮಾಕ್ಟೆಲ್ ಖ್ಯಾತಿಯ ಕೃಷ್ಣ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಪದ್ಮಾವತಿ ಪ್ರೊಡಕ್ಷನ್ ಅಡಿಯಲ್ಲಿ ರಾಜೇಶ್.ಬಿ ಮತ್ತು ಉಮೇಶ್.ಕೆ.ಎನ್ ನಿರ್ಮಿಸುತ್ತಿದ್ದಾರೆ.
ಈ ಚಿತ್ರವು ಎರಡು ಕಾಲಘಟ್ಟದಲ್ಲಿ ನಡೆಯಲಿದ್ದು, 1900ರಲ್ಲಿ ಪ್ರಾರಂಭವಾಗಿ ಈಗ ಮುಕ್ತಾಯವಾಗುತ್ತದೆ. ಶಿವಪುರ ಎಂಬ ಗ್ರಾಮದಲ್ಲಿ ಅತೀಂದ್ರೆಯ ವಿದ್ಯೆಗಳನ್ನು ಕಲಿತಿರುವ ಹುಂಬನೊಬ್ಬ ನರಬಲಿ ಕೊಡುತ್ತಿರುತ್ತಾನೆ. ಇದನ್ನು ತಿಳಿದ ಜನರು ಅವನನ್ನು ಜೀವಂತ ಸುಡುತ್ತಾರೆ. ಆ ಸಂದರ್ಭದಲ್ಲಿ ಇವನು ಶಾಪ ಕೊಡುತ್ತಾನೆ. ಅದೇ ಶಾಪವು ಪ್ರಸಕ್ತ ಕಾಲಕ್ಕೂ ಮುಂದುವರೆದಿರುತ್ತದೆ. ಇದನ್ನು ತನಿಖೆ ಮಾಡಲು ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಯ ಅಧಿಕಾರಿ ನೇಮಕಗೊಳ್ಳುತ್ತಾರೆ. ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆಯುವ ಘಟನೆಗಳು ಈ ಚಿತ್ರದ ಕಥೆಯಂತೆ.
ಮೂಡಿಬಿದರೆಯ ರಾಜೇಶ್.ಬಿ ಮೂಲತ: ನಟನಾಗಿ ಗುರುತಿಸಿಕೊಂಡಿದ್ದು, ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಉಡುಪಿ, ಮೂಡಿಗೆರೆ, ಕನಕಪುರ ಕಡೆಗಳಲ್ಲಿ ಅಕ್ಟೋಬರ್ ಕೊನೆವಾರದಿಂದ ಚಿತ್ರೀಕರಣ ನಡೆಯಲಿದೆ.
ಇದನ್ನೂ ಓದಿ: ರಾಜಾಜಿನಗರದಲ್ಲಿರುವ ನೆಚ್ಚಿನ ಮನೆ ಖಾಲಿ ಮಾಡಿದ್ದನ್ನು ನೆನೆದು ವೇದಿಕೆಯಲ್ಲೇ ಭಾವುಕರಾಗಿ ಮಾತನಾಡಿದ ರವಿಚಂದ್ರನ್
'1900' ಚಿತ್ರದಲ್ಲಿ ವಿ.ಮನೋಹರ್, ಮಿಮಿಕ್ರಿ ಗೋಪಿ, 'ಮಜಾಭಾರತ' ಚಂದ್ರಪ್ರಭಾ, ಗುರುದೇವ್, ಮದನ್‌ರಾಜ್, ಮೀರಶ್ರೀ, ಚೈತನ್ಯಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ.