ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದ ಡೇವಿಡ್​ ಧವನ್​ ಕುಟುಂಬ 
ಬಾಲಿವುಡ್

ಭೂಗತ ದೊರೆಗೆ ತಾಕತ್ತಿದ್ರೆ ಬಾ ಎಂದಿದ್ದ ಕೆಲಸಗಾರ: ವರುಣ್ ಧವನ್ ಕುಟುಂಬ ರಾತ್ರೋರಾತ್ರಿ ಮನೆ ಬಿಟ್ಟು ಓಡಿದ್ಯಾಕೆ? Varun Dhawan on Underworld

ಪ್ರಮುಖ ಮುಖ್ಯಾಂಶಗಳು

  • 90 ರ ದಶಕದಲ್ಲು ಭೂಗತ ಜಗತ್ತಿನ ನಿಯಂತ್ರಣದಲ್ಲಿದ್ದ ಬಾಲಿವುಡ್​
  • ಭೂಗತ ಲೋಕದ ಡಾನ್​ ಜೊತೆ ಜಗಳವಾಡಿಕೊಂಡಿದ್ದ ವರುಣ್​ ಧವನ್​ ಮನೆಕೆಲಸದವ
  • ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದ ಡೇವಿಡ್​ ಧವನ್​ ಕುಟುಂಬ
ಮುಂಬೈ: ಬಾಲಿವುಡ್ ಎಂದ ತಕ್ಷಣ ನಮ್ಮ ಕಣ್ಮುಂದೆ ಬರುವುದು ಗ್ಲಾಮರ್, ಕೋಟಿ ಕೋಟಿ ಹಣ, ಲಕ್ಸುರಿ ಲೈಫ್. ಆದರೆ 90ರ ದಶಕದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅಂದು ಮುಂಬೈನ ಸಿನಿಮಾ ಲೋಕ ಅಕ್ಷರಶಃ ಭೂಗತ ಲೋಕದ ನೆರಳಿನಲ್ಲಿತ್ತು. ಶಾರುಖ್ ಖಾನ್‌ನಿಂದ ಹಿಡಿದು ರಾಕೇಶ್ ರೋಷನ್ ಅವರವರೆಗೆ ಎಲ್ಲರಿಗೂ ಡಾನ್‌ಗಳ ಬೆದರಿಕೆ ಕರೆಗಳು ಬರುತ್ತಿದ್ದವು. ಇದೀಗ ಇದೇ ಸಾಲಿಗೆ ನಟ ವರುಣ್ ಧವನ್ (Varun Dhawan on Underworld) ಕುಟುಂಬ ಕೂಡ ಸೇರಿತ್ತು ಎನ್ನುವು ಶಾಕಿಂಗ್ ವಿಚಾರ ಹೊರಬಿದ್ದಿದೆ.
ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟ ವರುಣ್ ಧವನ್, ತಮ್ಮ ತಂದೆ ಡೇವಿಡ್ ಧವನ್ ಖ್ಯಾತ ನಿರ್ದೇಶಕರಾಗಿದ್ದ ಕಾಲದಲ್ಲಿ ನಡೆದ ಒಂದು ವಿಚಿತ್ರ ಮತ್ತು ಅಷ್ಟೇ ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 

ಡಾನ್ ಜೊತೆ ಜಗಳಕ್ಕೆ ಬಿದ್ದಿದ್ದ ಕೆಲಸಗಾರ!

ಅಂದು ಅಂಡರ್‌ವರ್ಲ್ಡ್‌ನಿಂದ ಬಾಲಿವುಡ್‌ನ ದೊಡ್ಡ ದೊಡ್ಡ ಮಂದಿಗೆ ಹಫ್ತಾ (ಸುಲಿಗೆ) ಕರೆಗಳು ಬರೋದು ಕಾಮನ್ ಆಗಿತ್ತು. ಡೇವಿಡ್ ಧವನ್ ಮನೆಗೂ ಇಂತಹದ್ದೇ ಒಂದು ಕರೆ ಬಂದಿತ್ತು. ಆದ್ರೆ ಟ್ವಿಸ್ಟ್ ಅಂದ್ರೆ, ಆ ಕರೆಯನ್ನು ಮನೆ ಕೆಲಸದವ ರಿಸೀವ್ ಮಾಡಿದ್ದು. ಆತ ಎಂತಹ ಕಿಲಾಡಿ ಅಂದ್ರೆ, ಫೋನ್ ಮಾಡಿದ ವ್ಯಕ್ತಿ ಡಾನ್ ಅಂತ ಗೊತ್ತಿದ್ರೂ ಅವರ ಕರೆಗೆ ಕೇರ್ ಮಾಡ್ಲಿಲ್ಲ.
ವರುಣ್ ಹೇಳುವ ಪ್ರಕಾರ, ಆ ಕಡೆ ಫೋನ್ ಮಾಡಿದ ವ್ಯಕ್ತಿ ಬೆದರಿಕೆ ಹಾಕುತ್ತಿದ್ದರೂ, ನಮ್ಮ ಮನೆಯ ಕೆಲಸದವ ಅವನ ಜೊತೆ ಫುಲ್ ಜಗಳಕ್ಕೆ ಬಿದ್ದಿದ್ದ. ಅವನಿಗೆ ಯಾರು ಕರೆ ಮಾಡಿದ್ದಾರೆ ಎನ್ನುವುದೇ ಗೊತ್ತಿರಲಿಲ್ಲ. ಆ ವ್ಯಕ್ತಿ ಬೈಯ್ಯೋಕೆ ಶುರು ಮಾಡಿದಾಗ, ನಮ್ಮವನು ಒಂದು ಹೆಜ್ಜೆ ಮುಂದೆ ಹೋಗಿ, ಲೋ, ತಾಕತ್ತಿದ್ರೆ ಆ ತೋಟಕ್ಕೆ ಬಾ, ನಿನ್ನನ್ನ ಅಲ್ಲೇ ಹೊಡೆದು ಹಾಕ್ತೀನಿ ಅಂತ ಚಾಲೆಂಜ್ ಹಾಕಿದ್ನಂತೆ. ಅಷ್ಟೇ ಅಲ್ಲ, ನಮ್ಮ ಮನೆಯ ಪೂರ್ತಿ ಅಡ್ರೆಸ್ ಕೊಟ್ಟು, ಆ ಡಾನ್‌ಗೆ ಇಲ್ಲೇ ಬರೋಕೆ ಹೇಳಿದ್ದ ಎಂದು ವರುಣ್​ ಹೇಳಿದ್ದಾರೆ

ಕೈ ಮೀರಿದ ಪರಿಸ್ಥಿತಿ: ಮನೆ ಬಿಟ್ಟು ಓಡಿದ ಧವನ್ ಫ್ಯಾಮಿಲಿ

ಇದು ಸುಮ್ಮನೆ ಫೋನ್ ಜಗಳ ಅಂತ ಧವನ್ ಕುಟುಂಬ ಅಂದುಕೊಂಡಿತ್ತು. ಆದ್ರೆ ವಿಷಯ ಗಂಭೀರವಾಗಿದ್ದು ಯಾವಾಗ ಅಂದ್ರೆ, ಬಾಲಿವುಡ್‌ನ ಇನ್ನೊಬ್ಬ ನಟ ಡೇವಿಡ್ ಧವನ್‌ಗೆ ಫೋನ್ ಮಾಡಿ ಎಚ್ಚರಿಸಿದಾಗ. ಡೇವಿಡ್ ಅವರೇ, ವಿಷಯ ಕೈ ಮೀರಿ ಹೋಗಿದೆ. ಆ ವ್ಯಕ್ತಿ ಈಗ ಗನ್ ಹಿಡಿದುಕೊಂಡು ನಿಮ್ಮ ಮನೆಗೆ ಬರೋಕೆ ಹೊರಟಿದ್ದಾನೆ. ನಿಮ್ಮ ಮನೆಯ ಫುಲ್ ಅಡ್ರೆಸ್ ಮತ್ತು ಆಫೀಸ್ ಟೈಮಿಂಗ್ಸ್ ಎಲ್ಲವೂ ಅವನಿಗೆ ಗೊತ್ತಿದೆ ಅಂತ ಆ ನಟ ಹೇಳಿದಾಗ ಇಡೀ ಕುಟುಂಬ ಬೆಚ್ಚಿಬಿದ್ದಿತ್ತು.
ಯಾವಾಗ ಅಂಡರ್‌ವರ್ಲ್ಡ್ ಶೂಟರ್‌ಗಳು ಅಡ್ರೆಸ್ ಹಿಡಿದು ಮನೆಗೆ ಬರ್ತಾರೆ ಅಂತ ಗೊತ್ತಾಯ್ತೋ, ಅಂದು ರಾತ್ರೋರಾತ್ರಿ ವರುಣ್ ಧವನ್ ಕುಟುಂಬ ತಮ್ಮ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ತಲೆಮರೆಸಿಕೊಳ್ಳಬೇಕಾಯಿತು. ಆ ಒಂದು ದಿನ ನಮ್ಮ ಕುಟುಂಬ ಅನುಭವಿಸಿದ್ದಿ ಅಷ್ಟಿಷ್ಟಲ್ಲ ಎನ್ನುತ್ತಾರೆ ವರುಣ್​. 

ಇದು ತಮಾಷೆ ಅನ್ಸುತ್ತೆ, ಆದ್ರೆ ಅಂದು ಜೀವ ಕೈಲಿ ಹಿಡಿದಿದ್ವಿ

ಈ ಘಟನೆಯ ಬಗ್ಗೆ ಮಾತಾಡ್ತಾ ವರುಣ್ ಧವನ್, ಇವತ್ತು ಇದನ್ನ ಹೇಳ್ತಿದ್ರೆ ಕಾಮಿಡಿ ಅನ್ಸುತ್ತೆ. ಒಬ್ಬ ಸಾಮಾನ್ಯ ಕೆಲಸಗಾರ ಡಾನ್‌ಗೆ ಅಡ್ರೆಸ್ ಕೊಟ್ಟು ಜಗಳ ಆಡಿದ್ದು ವಿಚಿತ್ರವಾಗಿತ್ತು. ಆದ್ರೆ ಆ ಸಮಯದಲ್ಲಿ ನಮಗೆ ಅದು ನಿಜಕ್ಕೂ ತಮಾಷೆ ಅನ್ಸಿರಲಿಲ್ಲ. ಭೂಗತ ಲೋಕದ ಆ ಕರಾಳ ನೆರಳಿನಲ್ಲಿ ನಮ್ಮ ಬಾಲಿವುಡ್ ಮಂದಿ ಹೇಗೆ ಬದುಕುತ್ತಿದ್ದರು ಅನ್ನೋದಕ್ಕೆ ಇದೊಂದು ಸಾಕ್ಷಿ ಎಂದು ಹೇಳಿದ್ದಾರೆ,(ಏಜನ್ಸೀಸ್​).