ನಟ ಗೋವಿಂದ (Govinda), ನಟಿ ನೀಲಂ ಕೋಠಾರಿ
- ತಮ್ಮ ಮೊದಲ ನಟಿ ನೀಲಂ ಕೋಠಾರಿ ಬಗ್ಗೆ ಮನಬಿಚ್ಚಿ ಮಾತಾಡಿದ ನಟ ಗೋವಿಂದ
- ಅವಳು ನೋಡಲು ಸಾಕ್ಷಾತ್ ಬೊಂಬೆಯಂತಿದ್ದಳು
- ಅವಳ ನನ್ನ ಅದೃಷ್ಟದ ನಾಯಕಿ ಎಂದರೆ ತಪ್ಪಾಗದು ಎಂದ ನಟ
ಬಾಲಿವುಡ್: 80-90ರ ದಶಕದ ಬಾಲಿವುಡ್ ಅಂದಾಕ್ಷಣ ಕಣ್ಣಮುಂದೆ ಬರೋದು ಗೋವಿಂದ (Govinda) ಮತ್ತು ನೀಲಂ (Neelam Kothari) ಜೋಡಿ. ಇವರ ಅದ್ಭುತ ಡ್ಯಾನ್ಸ್, ಕೆಮಿಸ್ಟ್ರಿ ನೋಡಿ ಅದೆಷ್ಟೋ ಜನ ಇವರು ನಿಜ ಜೀವನದಲ್ಲೂ ಒಂದಾಗಬಾರದೇ? ಎಂದು ಹಾರೈಸಿದ್ದೂ ಉಂಟು.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟ ಗೋವಿಂದ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದು, ತಮ್ಮ ಮೊದಲ ನಾಯಕಿ ನೀಲಂ ಕೊಠಾರಿ ಬಗ್ಗೆ ಅವರು ಆಡಿರುವ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ನನ್ನ ಪಾಲಿನ "ಗೊಂಬೆ" ನೀಲಂ!
ಗೋವಿಂದ ಅವರು 1986ರಲ್ಲಿ ಲವ್ 86 ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಾಗ, ಅವರ ಎದುರು ನಾಯಕಿಯಾಗಿದ್ದವರು ಸುಂದರಿ ನೀಲಂ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂಭಾಷಣೆಯಲ್ಲಿ ಗೋವಿಂದ ಅಂದಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಹಳ್ಳಿಯಿಂದ ಬಂದವನು, ನಮಗೆ ಅಪ್ಪಟ ಬಿಳಿ ಚರ್ಮದ, ವಿದೇಶಿ ಶೈಲಿಯ ಹುಡುಗಿಯರೆಂದರೆ ಒಂದು ರೀತಿಯ ಆಕರ್ಷಣೆ. ನೀಲಂ ನನಗೆ ಸಾಕ್ಷಾತ್ ಗೊಂಬೆಯಂತೆಯೇ ಕಾಣಿಸುತ್ತಿದ್ದರು, ಎಂದು ಗೋವಿಂದ ಹಳೆಯ ದಿನಗಳಿಗೆ ಜಾರಿದ್ದಾರೆ.
ನೀಲಂ ಅವರ ಮುಗ್ಧತೆ, ಆಕರ್ಷಕ ವ್ಯಕ್ತಿತ್ವ ಮತ್ತು ಅವರ ಸೊಬಗನ್ನು ಕಂಡಾಗ ತಮಗೆ ಒಂದು ರೀತಿಯ ಪಾಸಿಟಿವ್ ವೈಬ್ ಸಿಗುತ್ತಿತ್ತು ಎಂದು ಗೋವಿಂದ ಒಪ್ಪಿಕೊಂಡಿದ್ದಾರೆ. ಅಪೋಸಿಟ್ ಅಟ್ರಾಕ್ಷನ್ ಅಂತಾರಲ್ಲ, ಅದು ನಮ್ಮ ನಡುವೆ ಇತ್ತು. ಅವರು ತುಂಬಾ ಡೀಸೆಂಟ್ ಹುಡುಗಿ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಅದೃಷ್ಟದ ನಾಯಕಿ
ಗೋವಿಂದ ಅವರ ಕೆರಿಯರ್‌ನಲ್ಲಿ ನೀಲಂ ಕೇವಲ ನಾಯಕಿಯಾಗಿರಲಿಲ್ಲ, ಅವರ ಪಾಲಿನ ಅದೃಷ್ಟ ದೇವತೆಯೂ ಆಗಿದ್ದರು. ಇವರಿಬ್ಬರು ಒಂದಾಗಿ ನಡೆಸಿದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಸಿಂಧೂರ್, ಹತ್ಯಾ, ಫರ್ಜ್ ಕಿ ಜಂಗ್, ಬಿಲ್ಲು ಬಾದ್‌ಶಾ ಮತ್ತು ದೋ ಖೈದಿ ಚಿತ್ರಗಳ ಮೂಲಕ ಈ ಜೋಡಿ ಸಿನಿರಸಿಕರ ನೆಚ್ಚಿನ ಜೋಡಿಯಾಗಿ ಮಿಂಚಿತು. ನಾವು ಒಟ್ಟಿಗೆ ಕೆಲಸ ಮಾಡುವ ಮೊದಲು ನಾನು ಆಕೆಯನ್ನು ಸ್ಕ್ರೀನ್ ಮೇಲೆ ನೋಡುತ್ತಿದ್ದೆ, ಆಕೆಯ ಜೊತೆ ಕೆಲಸ ಮಾಡುವುದು ಒಂದು ಕನಸಿನಂತೆ ಇತ್ತು, ಎಂದು ಗೋವಿಂದ ಮನಬಿಚ್ಚಿ ಮಾತನಾಡಿದ್ದಾರೆ.
ಅಫೇರ್ ವದಂತಿಗಳ ಬಗ್ಗೆ ಗೋವಿಂದ ಏನಂತಾರೆ?
ಅಂದು ಗೋವಿಂದ ಮತ್ತು ನೀಲಂ ನಡುವೆ ಪ್ರೇಮ ಸಂಬಂಧವಿದೆ ಎಂಬ ಸುದ್ದಿಗಳು ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ನೇರವಾಗಿ ಮಾತನಾಡಿದ ಗೋವಿಂದ, ಇವತ್ತಿನ ಕಾಲದ ಅಫೇರ್‌ಗಳಿಗೂ ಅಂದಿನ ಪ್ರಣಯಕ್ಕೂ ತುಂಬಾನೇ ವ್ಯತ್ಯಾಸವಿದೆ. ಆಗಿನ ಪ್ರೀತಿ ಕೇವಲ ಕಣ್ಣೋಟಕ್ಕೆ ಸೀಮಿತವಾಗಿತ್ತು (ವೋ ದೇಖ್ನೆ ಮಾತ್ರ ಕಾ ಥಾ), ಎನ್ನುವ ಮೂಲಕ ಆ ಕಾಲದ ಮುಗ್ಧತೆಯನ್ನು ವಿವರಿಸಿದ್ದಾರೆ. ಅಂದರೆ, ಇಬ್ಬರ ನಡುವೆ ಗಾಢವಾದ ಸ್ನೇಹವಿತ್ತೇ ಹೊರತು, ಇವತ್ತಿನ ಕಾಲದಂತೆ ಜಟಿಲವಾದ ಸಂಬಂಧವಿರಲಿಲ್ಲ ಎಂಬುದು ಅವರ ಮಾತಿನ ತಾತ್ಪರ್ಯವಾಗಿದೆ,(ಏಜನ್ಸೀಸ್).