ಧಿರೇಂದ್ರ ಶಾಸ್ತ್ರಿಗೆ ನಟ ರಿತೇಶ್​ ದೇಶ್​ಮುಖ್​ ಕೌಂಟರ್​ 
ಬಾಲಿವುಡ್

ಇತಿಹಾಸ ತಿರುಚಿದ್ರೆ ಸಹಿಸಲ್ಲ: ಬಾಗೇಶ್ವರ್ ಬಾಬಾ ಹೇಳಿಕೆಗೆ ರಿತೇಶ್ ಕೌಂಟರ್; ಸಹ್ಯಾದ್ರಿ ಇರುವವರೆಗೆ ಶಿವಾಜಿ ಮಹಾರಾಜರ ಹೆಸರು ಶಾಶ್ವತ! Riteish Deshmukh on Bageshwar Baba

ಪ್ರಮುಖ ಮುಖ್ಯಾಂಶಗಳು

  • ಶಿವಾಜಿ ಮಹಾರಾಜರ ಬಗ್ಗೆ ನಾಲಿಗೆ ಹರಿಬಿಟ್ಟ ಭಾಗೇಶ್ವರ ಬಾಬಾ
  • ಧಿರೇಂದ್ರ ಶಾಸ್ತ್ರಿಗೆ ನಟ ರಿತೇಶ್​ ದೇಶ್​ಮುಖ್​ ಕೌಂಟರ್​
  • ಇತಿಹಾಸವನ್ನು ತಿರುಚಬೇಡಿ ಎಂದ ನಟ
ಮುಂಬೈ: ಮರಾಠ ಸಾಮ್ರಾಜ್ಯದ ಅಧಿಪತಿ, ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡಿದರೆ ಸಾಕು, ಇಡೀ ಮಹಾರಾಷ್ಟ್ರವೇ ಕೆರಳಿ ಕೆಂಡವಾಗುತ್ತದೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದೆ.
ಬಾಗೇಶ್ವರ್ ಬಾಬಾ ಎಂದೇ ಖ್ಯಾತರಾದ ಧೀರೇಂದ್ರ ಶಾಸ್ತ್ರಿ, ಶಿವಾಜಿ ಮಹಾರಾಜರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ನಟ ರಿತೇಶ್ ದೇಶಮುಖ್ (Riteish Deshmukh on Bageshwar Baba) ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಏನಿದು ವಿವಾದ?

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧೀರೇಂದ್ರ ಶಾಸ್ತ್ರಿ, ಛತ್ರಪತಿ ಶಿವಾಜಿ ಮಹಾರಾಜರು ಯುದ್ಧಗಳನ್ನು ಮಾಡಿ ದಣಿದಿದ್ದರು. ಹಾಗಾಗಿ ಅವರು ತಮ್ಮ ಕಿರೀಟವನ್ನು ಸಮರ್ಥ ರಾಮದಾಸ ಸ್ವಾಮಿಗಳ ಪಾದದ ಬಳಿ ಇಟ್ಟು, ತಮಗೆ ಇನ್ನು ಯುದ್ಧ ಮಾಡಲು ಆಸಕ್ತಿಯಿಲ್ಲ, ರಾಜ್ಯದ ಉಸ್ತುವಾರಿಯನ್ನು ನೀವೇ ವಹಿಸಿಕೊಳ್ಳಿ ಎಂದು ವಿನಂತಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಮಾತುಗಳು ಮರಾಠಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಇತಿಹಾಸವನ್ನು ತಿರುಚಲಾಗುತ್ತಿದೆ, ನಮ್ಮ ರಾಜ ಎಂದೂ ದಣಿದಿರಲಿಲ್ಲ ಎಂದು ಜನ ಕಿಡಿಕಾರುತ್ತಿದ್ದಾರೆ.

ರಿತೇಶ್ ದೇಶಮುಖ್ ‘ಪವರ್‌ಫುಲ್’ ರಿಪ್ಲೈ!

ರಿತೇಶ್ ದೇಶಮುಖ್ ಸದ್ಯ ಶಿವಾಜಿ ಮಹಾರಾಜರ ಜೀವನ ಆಧಾರಿತ ರಾಜಾ ಶಿವಾಜಿ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆ ಕೇಳಿ ಕೆಂಡಾಮಂಡಲವಾದ ರಿತೇಶ್, ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಯಾರೋ ಒಬ್ಬರು ಬಂದು ನಮ್ಮ ಪ್ರೀತಿಯ ದೇವರ ಬಗ್ಗೆ, ಶಿವ-ಭಕ್ತರ ಬಗ್ಗೆ ಕೆಲವು ವಿಕೃತ ಅಸಂಬದ್ಧತೆಗಳನ್ನು ಹೊರಹಾಕಿದಾಗ, ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ನಿಜಕ್ಕೂ ಕೋಪ ತರಿಸುತ್ತದೆ. ಇತಿಹಾಸವನ್ನು ತಮ್ಮ ಚೌಕಟ್ಟಿನೊಳಗೆ ಸಿಲುಕಿಸುವ ಇಂತಹ ವ್ಯರ್ಥ ಪ್ರಯತ್ನಗಳು ಕಾಲದ ಸುಳಿಯಲ್ಲಿ ನಾಶವಾಗುತ್ತವೆ ಎಂದು ರಿತೇಶ್ ಆಕ್ರೋಶ ಹೊರಹಾಕಿದ್ದಾರೆ.
ಅಷ್ಟಕ್ಕೇ ನಿಲ್ಲದ ಅವರು, ಸಹ್ಯಾದ್ರಿ ಪರ್ವತಗಳು ಹೇಗೆ ಅಚಲವೋ, ಹಾಗೆಯೇ ಕೋಟಿ ವರ್ಷಗಳ ಕಾಲ ಆ ಒಂದು ಹೆಸರು ಶಾಶ್ವತವಾಗಿ ಉಳಿಯುತ್ತದೆ. ಆ ಹೆಸರೇ... ಪ್ರತಾಪ್ ಪುರಂದರ... ಕ್ಷತ್ರಿಯ ಕುಲವತಂಸ... ಸಿಂಹಾಸನದ ಅಧೀಶ್ವರ... ಛತ್ರಪತಿ ಶಿವಾಜಿ ಮಹಾರಾಜ ಎಂದು ಸಿಂಹಗರ್ಜನೆ ಮಾಡಿದ್ದಾರೆ.

ಸಿನಿಮಾ ಲೋಕದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ ರಾಜಾ ಶಿವಾಜಿ

ಒಂದೆಡೆ ವಿವಾದ ನಡೆಯುತ್ತಿದ್ದರೆ, ಇನ್ನೊಂದೆಡೆ ರಿತೇಶ್ ಅವರ ಈ ಸಿನಿಮಾ ಬಗ್ಗೆ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಭಾರಿ ಚರ್ಚೆ ನಡೆಯುತ್ತಿದೆ. ಕೇವಲ ಮರಾಠಿ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗವೇ ಈ ಕಡೆ ತಿರುಗಿ ನೋಡುತ್ತಿದೆ.
ಈ ಚಿತ್ರದಲ್ಲಿ ತಾರಾಗಣವೇ ದೊಡ್ಡ ಹೈಲೈಟ್. ರಿತೇಶ್ ದೇಶಮುಖ್ ಮುಖ್ಯ ಪಾತ್ರದಲ್ಲಿದ್ದರೆ, ಅವರ ಜೊತೆ ಸಂಜಯ್ ದತ್, ಅಭಿಷೇಕ್ ಬಚ್ಚನ್, ಫರ್ದೀನ್ ಖಾನ್, ಭಾಗ್ಯಶ್ರೀ ಮತ್ತು ಜೆನೆಲಿಯಾ ದೇಶಮುಖ್ ಅವರಂತಹ ದಿಗ್ಗಜ ನಟರು ಕಾಣಿಸಿಕೊಳ್ಳುತ್ತಿದ್ದಾರೆ. ಶಿವಾಜಿ ಮಹಾರಾಜರ ಪರಂಪರೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಬೆಳ್ಳಿತೆರೆಯ ಮೇಲೆ ತರಲು ರಿತೇಶ್ ಪಣತೊಟ್ಟಿದ್ದಾರೆ.

ಟ್ರೇಲರ್ ಹೈಪ್ ಮತ್ತು ಆನ್‌ಲೈನ್ ವಾರ್

ಸಿನಿಮಾದ ಟ್ರೇಲರ್ ನೋಡಿದ ಮೇಲೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ, ಕೆಲವು ದೃಶ್ಯಗಳು ಮತ್ತು ಪಾತ್ರಗಳ ಆಯ್ಕೆಯ ಬಗ್ಗೆ ಆನ್‌ಲೈನ್‌ನಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಬಾಗೇಶ್ವರ್ ಬಾಬಾ ಅವರ ಈ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಒಟ್ಟಿನಲ್ಲಿ, ರಾಜಾ ಶಿವಾಜಿ ಸಿನಿಮಾ ಬಿಡುಗಡೆಗೂ ಮುನ್ನವೇ ಇಷ್ಟೊಂದು ಸದ್ದು ಮಾಡುತ್ತಿದೆ ಎಂದರೆ, ಥಿಯೇಟರ್‌ಗೆ ಬಂದ ಮೇಲೆ ಬಾಕ್ಸ್ ಆಫೀಸ್ ಧೂಳಿಪಟವಾಗುವುದು ಖಚಿತ ಎನ್ನುವುದು ಸಿನಿ ರಸಿಕರ ವಾದವಾಗಿದೆ, (ಏಜನ್ಸೀಸ್​).