ಬಾಲಿವುಡ್ ಹಾಸ್ಯನಟ ರಾಜ್ಪಾಲ್ ಯಾದವ್
- ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ಪಾಲ್ ಯಾದವ್
- ಹಾಸ್ಯನಟನಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್
- ರಾಜ್ಪಾಲ್ ಬೆನ್ನಿಗೆ ನಿಂತಿದ್ದ ಬಾಲಿವುಡ್
ನವದೆಹಲಿ: ಆರ್ಥಿಕ ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲು ಸೇರಿದ್ದ ಬಾಲಿವುಡ್ ಹಾಸ್ಯನಟ ರಾಜ್ಪಾಲ್ ಯಾದವ್ (Rajpal Yadav) ಗೆ ಸೋಮವಾರ(ಫೆ.16) ದೆಹಲಿ ಹೈಕೋರ್ಟ್ ಮಂಧ್ಯಂತರ ಜಾಮೀನನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ರಾಜಪಾಲ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದ ದೂರುದಾರರಿಗೆ 1.5 ಕೋಟಿ ಹಣವನ್ನು ಸಂದಾಯ ಮಾಡಿದ ಬಳಿಕ ನ್ಯಾಯಪೀಠ ರಾಜ್ಪಾಲ್ ಯಾದವ್‌ಗೆ ಮಂಧ್ಯಂತರ ಜಾಮೀನನ್ನು ನೀಡಿದೆ.
ಮಾರ್ಚ್ 19 ರಂದು ರಾಜಪಾಲ್ ತನ್ನ ಸೊಸೆಯ ಮದುವೆಗೆ ತೆರಳಬೇಕು ಎಂದು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನೀವು ಮದುವೆಗೆ ಖಂಡಿತವಾಗಿ ಹೋಗಬಹುದು ಆದರೆ ಮಾರ್ಚ್ 18 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದ್ದು ಅದನ್ನು ನೀವು ದೈಹಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿರಬೇಕೆಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣದ ಹಿನ್ನಲೆ
2010 ರಲ್ಲಿ ರಾಜ್ಪಾಲ್ ಯಾದವ್ ಅತಾ ಪತಾ ಲಾಪತಾ ಎಂಬ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ದೇಶಿಸಲು, ಮುರಳಿ ಪ್ರಾಜೆಕ್ಟ್ ಎಂಬ ಸಂಸ್ಥೆಯಿಂದ 5 ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.
ಆದರೆ ಬಿಡುಗಡೆಯಾದ ಈ ಸಿನಿಮಾ ನೆಲಕಚ್ಚಿದ ಪರಿಣಾಮ, ಹಣವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯವಕಾಶ ನೀಡಿದ ಬಳಿಕವು ರಾಜ್ಪಾಲ್ ಹಣವನ್ನು ಮರಳಿ ನೀಡದಿದ್ದಾಗ, ಮುರಳಿ ಪ್ರಾಜೆಕ್ಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ನ್ಯಾಯಾದಲ್ಲಿ ಸಹ ರಾಜ್ಪಾಲ್ ಹಣವನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ಮೇಲೂ, ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾದರು.
ಕೊನೆಗೆ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದಾಗ ರಾಜ್ಪಾಲ್, ನನ್ನ ಬಳಿ ಹಣವಿಲ್ಲ, ಇದ್ದರೆ ಖಂಡಿತವಾಗಿ ಇವರ ಹಣವನ್ನು ಹಿಂದಿರುಗಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದಾಗ, ನ್ಯಾಯಾಲಯ ನೀವು ಹಣವನ್ನು ಮರು ಪಾವತಿ ಮಾಡುವವರೆಗೆ ಜೈಲಿನಲ್ಲಿ ಇರಿ ಎಂದು ಹೇಳಿ, ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಶರಣಾಗುವಂತೆ ಆದೇಶಿಸಿತು.
ಹಾಸ್ಯನಟನ ಬೆಂಬಲಕ್ಕೆ ನಿಂತ ಬಾಲಿವುಡ್
ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಕಳುಹಿಸಿದ ನಂತರ, ಹಲವಾರು ನಟರು ಯಾದವ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದರು. ಮತ್ತು ಈ ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡುವಂತೆ ಉದ್ಯಮದ ಸಹ ಸದಸ್ಯರಿಗೆ ಸಾರ್ವಜನಿಕವಾಗಿ ಮನವಿ ಮಾಡಿದರು. ಸೋನು ಸೂದ್, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್‌ನಿಂದ ಹಿಡಿದು ಗುರ್ಮೀತ್ ಚೌಧರಿಯವರೆಗೆ ಅನೇಕರು ಅವರಿಗೆ ಬೆಂಬಲ ನೀಡಿದರು. ಈ ಮಧ್ಯೆ, ಅನೇಕ ಗಾಯಕರು ಮತ್ತು ಚಲನಚಿತ್ರ ನಿರ್ಮಾಪಕರು ಅವರಿಗೆ ಮುಂಗಡ ಹಣ ನೀಡಿ ತಮ್ಮ ಮುಂಬರುವ ಸಿನಿಮಾಗಳಲ್ಲಿ ಅವಕಾಶವನ್ನು ಸಹ ನೀಡಿದ್ದಾರೆ,(ಏಜನ್ಸೀಸ್).