ಬಾಲಿವುಡ್ ಹಾಸ್ಯನಟ ರಾಜ್ಪಾಲ್ ಯಾದವ್
- ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಾಸ್ಯನಟ ರಾಜ್ಪಾಲ್ ಯಾದವ್
- ಸೋಮವಾರ(ಫೆ.16) ಜಾಮೀನು ನೀಡಿದ ದೆಹಲಿ ಹೈಕೋರ್ಟ್
- ನನ್ನ ಹಿಂದೆ ಬಾಲಿವುಡ್ ಇರುವವರೆಗೆ ನಾನು ಯಾವುದಕ್ಕೂ ಹೆದರುವುದಿಲ್ಲ : ರಾಜ್ಪಾಲ್ ಯಾದವ್ ಫಸ್ಟ್ ರಿಯಾಕ್ಷನ್
ನವದೆಹಲಿ: ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಾಲಿವುಡ್ ಹಾಸ್ಯನಟ ರಾಜ್ಪಾಲ್ ಯಾದವ್ (Rajpal Yadav) ಗೆ ಜಾಮೀನು ದೊರೆತ್ತಿದ್ದು, ನನ್ನ ಹಿಂದೆ ಬಾಲಿವುಡ್ ಇರುವವರೆಗೆ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದ್ದಿದ್ದಾರೆ.
ಮಂಗಳವಾರ (ಫೆ.17) ತಿಹಾರ್ ಜೈಲಿನಿಂದ ಹೊರಬಂದ ರಾಜ್ಪಾಲ್, ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಾನು ಸರಿಸುಮಾರು 30 ವರ್ಷ ಬಾಲಿವುಡ್ನಲ್ಲಿ ಕಳೆದಿದ್ದೆನೆ, ನನಗೆ ಬಾಲಿವುಡ್ನಿಂದ ಹಿಡಿದು ದೇಶದ ಮತ್ತು ಪ್ರಪಂಚದ ಎಲ್ಲೆಡೆಯಿಂದ ಬೆಂಬಲ ಸಿಕ್ಕಿದೆ. ನಾನು ಹೈಕೋರ್ಟ್ನ ಆದೇಶವನ್ನು ಪಾಲಿಸುತ್ತೇನೆ. ನನಗೆ ನನ್ನ ಜನರ ಬೆಂಬಲವಿರುವ ತನಕ ಯಾವುದಕ್ಕೂ ಹೆದರುವುದಿಲ್ಲ ಎಂದು ರಾಜ್ಪಾಲ್ ಹೇಳಿದ್ದಾರೆ.
ಮಾರ್ಚ್ 19 ರಂದು ರಾಜ್ಪಾಲ್ ತನ್ನ ಸಂಬಂಧಿಯೊಬ್ಬರ ಮದುವೆಗೆ ಹಾಜರಾಗುವ ಕಾರಣ ನ್ಯಾಯಾಲಯ ಜಾಮೀನನ್ನು ನೀಡಿದೆ, ಆದರೆ ಮಾರ್ಚ್ 18 ರಂದು ನಡೆಯಲಿರುವ ಪ್ರಕರಣದ ವಿಚಾರಣೆಗೆ ದೈಹಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ತಿಳಿಸಿದೆ.
2010 ರಲ್ಲಿ ರಾಜ್ಪಾಲ್ ಯಾದವ್ ಅತಾ ಪತಾ ಲಾಪತಾ ಎಂಬ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ದೇಶಿಸಲು, ಮುರಳಿ ಪ್ರಾಜೆಕ್ಟ್ ಎಂಬ ಸಂಸ್ಥೆಯಿಂದ 5 ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.
ಆದರೆ ಬಿಡುಗಡೆಯಾದ ಈ ಸಿನಿಮಾ ನೆಲಕಚ್ಚಿದ ಪರಿಣಾಮ, ಹಣವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯವಕಾಶ ನೀಡಿದ ಬಳಿಕವು ರಾಜ್ಪಾಲ್ ಹಣವನ್ನು ಮರಳಿ ನೀಡದಿದ್ದಾಗ, ಮುರಳಿ ಪ್ರಾಜೆಕ್ಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ನ್ಯಾಯಾದಲ್ಲಿ ಸಹ ರಾಜ್ಪಾಲ್ ಹಣವನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ಮೇಲೂ, ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾದರು.
ಕೊನೆಗೆ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದಾಗ ರಾಜ್ಪಾಲ್, ನನ್ನ ಬಳಿ ಹಣವಿಲ್ಲ, ಇದ್ದರೆ ಖಂಡಿತವಾಗಿ ಇವರ ಹಣವನ್ನು ಹಿಂದಿರುಗಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದಾಗ, ನ್ಯಾಯಾಲಯ ನೀವು ಹಣವನ್ನು ಮರು ಪಾವತಿ ಮಾಡುವವರೆಗೆ ಜೈಲಿನಲ್ಲಿ ಇರಿ ಎಂದು ಹೇಳಿ, ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಶರಣಾಗುವಂತೆ ಆದೇಶಿಸಿತು.
ಹಾಸ್ಯನಟನ ಬೆಂಬಲಕ್ಕೆ ನಿಂತ ಬಾಲಿವುಡ್
ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಕಳುಹಿಸಿದ ನಂತರ, ಹಲವಾರು ನಟರು ಯಾದವ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದರು. ಮತ್ತು ಈ ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡುವಂತೆ ಉದ್ಯಮದ ಸಹ ಸದಸ್ಯರಿಗೆ ಸಾರ್ವಜನಿಕವಾಗಿ ಮನವಿ ಮಾಡಿದರು. ಸೋನು ಸೂದ್, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್‌ನಿಂದ ಹಿಡಿದು ಗುರ್ಮೀತ್ ಚೌಧರಿಯವರೆಗೆ ಅನೇಕರು ಅವರಿಗೆ ಬೆಂಬಲ ನೀಡಿದರು. ಈ ಮಧ್ಯೆ, ಅನೇಕ ಗಾಯಕರು ಮತ್ತು ಚಲನಚಿತ್ರ ನಿರ್ಮಾಪಕರು ಅವರಿಗೆ ಮುಂಗಡ ಹಣ ನೀಡಿ ತಮ್ಮ ಮುಂಬರುವ ಸಿನಿಮಾಗಳಲ್ಲಿ ಅವಕಾಶವನ್ನು ಸಹ ನೀಡಿದ್ದಾರೆ,(ಏಜನ್ಸೀಸ್).