ನೀಟ್ ಪ್ರತಿಭಟನೆಯನ್ನು ಬೆಂಬಲಿಸಲು ನನಗೆ ಹಣ, ವಿಮಾನದ ಟಿಕೆಟ್ ಹಾಗೂ ಹೋಟೆಲ್ ವಸತಿ ಆಫರ್ ಬಂದಿತ್ತು 
ಬಾಲಿವುಡ್

NEET ಪ್ರತಿಭಟನೆ ಬೆಂಬಲಿಸಲು ಹಣದ ಆಫರ್​? ನನಗೆ ದುಡ್ಡು, ಹೋಟೆಲ್​ ಫ್ಲೈಟ್ ಟಿಕೆಟ್ ಆಫರ್ ಬಂದಿತ್ತು; ಸಿಜೆಪಿ ವಿರುದ್ಧ ನಟಿ ಆಕಾಂಕ್ಷಾ ಪುರಿ ಗಂಭೀರ ಆರೋಪ! Akanksha Puri on NEET Protest

ಪ್ರಮುಖ ಮುಖ್ಯಾಂಶಗಳು

  • ಜಂತರ್​​ ಮಂತರ್​ನಲ್ಲಿ ನಡೆಯುತ್ತಿರುವ ನೀಟ್​ ಅಕ್ರಮ ವಿರೋಧಿ ಪ್ರತಿಭಟನೆ
  • ನೀಟ್ ಪ್ರತಿಭಟನೆಯನ್ನು ಬೆಂಬಲಿಸಲು ನನಗೆ ಹಣ, ವಿಮಾನದ ಟಿಕೆಟ್ ಹಾಗೂ ಹೋಟೆಲ್ ವಸತಿ ಆಫರ್ ಬಂದಿತ್ತು
  • ಆದರೆ, ನಾನು ಇದಕ್ಕೆ ಒಪ್ಪಲಿಲ್ಲ
ನವದೆಹಲಿ: ಸದ್ಯ ದೇಶದಲ್ಲಿ ನೀಟ್​​ ಪರೀಕ್ಷಾ ಅಕ್ರಮವನ್ನು ಖಂಡಿಸಿ, ಜಂತರ್​ ಮಂತರ್​ನಲ್ಲಿ ಕಾಕ್ರೋಚ್​ ಜನತಾ ಪಾರ್ಟಿ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಹೋರಾಟಕ್ಕೆ ಬಾಲಿವುಡ್​, ಕಿರುತೆರೆ ಸೇರಿದಂತೆ ಭಾರತದ ವಿವಿಧ ಚಿತ್ರರಂಗದ ಕಲಾವಿದರು ತಮ್ಮ ಬೆಂಬಲವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಆದರೆ, ಈ ನಟ-ನಟಿಯರು ಹೋರಾಟಕ್ಕೆ ಬೆಂಬಲ ನೀಡುವ ಕುರಿತು ಬಾಲಿವುಡ್ ಮತ್ತು ಕಿರುತೆರೆ ನಟಿ ಆಕಾಂಕ್ಷಾ ಪುರಿ (Akanksha Puri on NEET Protest) ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನನಗೆ ಹಣ, ಫ್ಲೈಟ್ ಟಿಕೆಟ್ ಆಫರ್ ಬಂದಿತ್ತು!

ನೀಟ್​ ಕುರಿತು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ, ಆಕಾಂಕ್ಷಾ ಪುರಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ಜಂತರ್ ಮಂತರ್ ಪ್ರತಿಭಟನೆಯನ್ನು ಬೆಂಬಲಿಸಲು ನನಗೆ ಹಣದ ಆಫರ್ ನೀಡಲಾಗಿತ್ತು. ಅಷ್ಟೇ ಅಲ್ಲದೆ, ದೆಹಲಿಗೆ ಹೋಗಲು ವಿಮಾನದ ಟಿಕೆಟ್‌ಗಳು ಹಾಗೂ ಅಲ್ಲಿ ಉಳಿದುಕೊಳ್ಳಲು ಹೋಟೆಲ್​ನಲ್ಲಿ ವಸತಿ ಸೌಕರ್ಯವನ್ನೂ ನೀಡುವುದಾಗಿ ಹೇಳಿದ್ದರು.
ಜೊತೆಗೆ, ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್‌ಗಳನ್ನು ಹಾಕಿ ಪ್ರಚಾರ ಮಾಡುವಂತೆಯೂ ಕೇಳಿಕೊಂಡರು. ನಾನೊಬ್ಬಳೇ ಅಲ್ಲ, ನನ್ನಂತೆ ಇನ್ನೂ ಅನೇಕ ಕಂಟೆಂಟ್ ಕ್ರಿಯೇಟರ್‌ಗಳಿಗೂ ಇಂತಹ ಆಫರ್‌ಗಳು ಬಂದಿದ್ದವು. ಆದರೆ ನಾನು ಆ ಎಲ್ಲ ಆಫರ್‌ಗಳನ್ನು ನೇರವಾಗಿ ತಿರಸ್ಕರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಹೋರಾಟ ಎನ್ನುವುದು ಗಿಮಿಕ್ ಅಲ್ಲ, ಅದು ಅವರ ಭವಿಷ್ಯದ ಪ್ರಶ್ನೆ, ನಾವು ವಿದ್ಯಾರ್ಥಿಗಳನ್ನು ಪ್ರಾಮಾಣಿಕವಾಗಿ ಬೆಂಬಲಿಸಬೇಕೆ ಹೊರತು, ಇದನ್ನು ಯಾವುದೇ ಕಾರಣಕ್ಕೂ ಮಾರ್ಕೆಟಿಂಗ್ ಮಾಡಿಕೊಳ್ಳುವ ಅವಕಾಶವನ್ನಾಗಿ ಬಳಸಿಕೊಳ್ಳಬಾರದು ಎಂದು ಖಡಕ್ ಆಗಿ ನುಡಿದಿದ್ದಾರೆ.

ರಾಜಕಾರಣಿಗಳೇ, ದಯವಿಟ್ಟು ಇದನ್ನ ಮಾರ್ಕೆಟಿಂಗ್ ಮಾಡ್ಬೇಡಿ!

ಇದೇ ವೇಳೆ ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ವಿರುದ್ಧವೂ ಆಕಾಂಕ್ಷಾ ಅಸಮಾಧಾನ ಹೊರಹಾಕಿದ್ದು, ಎಲ್ಲಾ ರಾಜಕಾರಣಿಗಳಿಗೆ ನನ್ನದೊಂದು ಕಳಕಳಿಯ ವಿನಂತಿ. ದಯವಿಟ್ಟು ವಿದ್ಯಾರ್ಥಿಗಳ ಈ ಪ್ರತಿಭಟನೆಯನ್ನು ನಿಮ್ಮ ಸ್ವಾರ್ಥಕ್ಕೋ ಅಥವಾ ಪ್ರಚಾರಕ್ಕೋ ಬಳಸಿಕೊಳ್ಳಬೇಡಿ. ಅವರ ನೋವನ್ನು ಆಲಿಸಿ, ಅವರಿಗೆ ಏನು ಬೇಕೋ ಅದನ್ನು ಈಡೇರಿಸಿ. ಅಷ್ಟು ಬಿಟ್ಟು ಇದನ್ನು ಬೇರೆ ಯಾವುದಕ್ಕೂ ಬಳಸಬೇಡಿ ಎಂದು ಮನವಿ ಮಾಡಿದ್ದಾರೆ.

ಸೆಲೆಬ್ರಿಟಿಗಳು ಏನು ಮಾಡಿದರೂ ಟ್ರೋಲ್!

ಇದೇ ವೇಳೆ ಕೆಲವು ಸೆಲೆಬ್ರಿಟಿಗಳು ಈ ಪ್ರತಿಭಟನೆಯನ್ನು ಬೆಂಬಲಿಸಿದಾಗ ಅವರ ಮೇಲೆ ನಡೆಯುವ ಟ್ರೋಲ್‌ಗಳ ಬಗ್ಗೆಯೂ ಆಕಾಂಕ್ಷಾ ಮಾತನಾಡಿದ್ದಾರೆ. ಯಾರೇ ಆಗಲಿ, ಸಾರ್ವಜನಿಕವಾಗಿ ಯಾವುದಾದರೂ ಒಳ್ಳೆಯ ಉದ್ದೇಶಕ್ಕೆ ಬೆಂಬಲ ನೀಡಿದರೆ ಸಾಕು, ಜನರು ಅವರನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡುತ್ತಿದ್ದಾರೆ.
ದೊಡ್ಡ ಮಟ್ಟದಲ್ಲಿ ಬೆಂಬಲಿಸಿದರೆ ನೀವು ಕೇವಲ ವೀಕ್ಷಣೆಗಾಗಿ ಕಂಟೆಂಟ್ ಮಾಡುತ್ತಿದ್ದೀರಿ' ಎನ್ನುತ್ತಾರೆ. ಸ್ವಲ್ಪ ಹೆಚ್ಚು ಮಾತನಾಡಿದರೆ ಇದು ಮಾರ್ಕೆಟಿಂಗ್' ಎನ್ನುತ್ತಾರೆ. ಜನರಿಗೆ ಪ್ರತಿಯೊಂದರಲ್ಲೂ ತಪ್ಪು ಹುಡುಕುವುದೇ ಅಭ್ಯಾಸವಾಗಿಬಿಟ್ಟಿದೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ, (ಏಜನ್ಸೀಸ್​).