- ವಿವಾದದ ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಬೇಡಿ ರಣವೀರ್ ಅಲ್ಲಾಬಾಡಿಯಾ ವಿರುದ್ಧ ಕುನಾಲ್ ಕೆಂಡಾಮಂಡಲ
- ನಿಮ್ಮ ವಿವಾದದಿಂದಾಗಿ 30ಕ್ಕೂ ಹೆಚ್ಚು ಕಲಾವಿದರಿಗೆ ಸಂಕಷ್ಟ ಎಂದು ಕುನಾಲ್ ಕಾಮ್ರಾ ಕಿಡಿ
- ನೀವು ನಿಮ್ಮ ಈಡ್ರಾಮಾಗಳನ್ನು ಇಲ್ಲಿಗೆ ನಿಲ್ಲಿಸಿ ನಿಮ್ಮ ಫ್ರಾಡ್ಕಾಸ್ಟಿಂಗ್ಗೆ ಮರಳಿ ಎಂದು ಟ್ವೀಟ್
ಹೊಸದೆಹಲಿ: `ನಿಮ್ಮ ಒಂದು ವಿವಾದಿಂದಾಗಿ ಇಡೀ ಕಾಮಿಡಿ ಲೋಕಕ್ಕೆ ಎಷ್ಟು ನಷ್ಟವಾಗಿದೆ ಎಂದು ನಿಮಗೆ ತಿಳಿದಿದೆಯೇ. ಇಂಡಿಯಾಸ್ ಗಾಟ್ ಲೇಟೆಂಟ್' (India's Got Latent) ಕಾರ್ಯಕ್ರಮವನ್ನು ನಿಮ್ಮ ಲಾಭಕ್ಕೆ ಬಳಸಿಕೊಂಡು, ನಾ ತುಂಬಾ ಒಳ್ಳೆ ಹುಡುಗ ಎಂಬಂತೆ ನಟಿಸಬೇಡಿ' ಎಂದು ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ವಿರುದ್ಧ ಕಾಮಿಡಿಯನ್ ಕುನಾಲ್ ಕಾಮ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
2025ರಲ್ಲಿ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಹಿರಿಯರ ಲೈಂಗಿಕತೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದರು. ಸುಪ್ರೀಂ ಕೋರ್ಟ್ ಅವರಿಗೆ ಛೀಮಾರಿ ಹಾಕಿತ್ತು. ಈ ಘಟನೆಯ ನಂತರ ತಮಗಾದ ನಷ್ಟವನ್ನು ಉಲ್ಲೇಖಿಸಿ, ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದರ ವಿರುದ್ಧ ಕುನಾಲ್ ಕಾಮ್ರಾ ಅವರು ಕಿಡಿಕಾರಿದ್ದಾರೆ.
ರಣವೀರ್ ಅಲ್ಲಾಬಾಡಿಯಾ ಪೋಸ್ಟ್ನಲ್ಲಿ ಏನಿದೆ?
`ದಿ ರಣವೀರ್ ಶೋ ಕಟ್ಟಿ ಬೆಳೆಸಲು ನನಗೆ ಮತ್ತು ನನ್ನ ತಂಡಕ್ಕೆ 10 ವರ್ಷ ಬೇಕಾಯಿತು. ಒಂದು ಸಣ್ಣ ಘಟನೆ(ಇಂಡಿಯಾಸ್ ಗಾಟ್ ಲೇಟೆಂಟ್')ನಂತರದಲ್ಲಿ ಸಂಪೂರ್ಣ ತಲೆಕೆಳಗಾದಂತಾಯಿತು. ಈಗ ನಾನು ಮತ್ತು ನನ್ನ ತಂಡ ಮತ್ತೆ ಮೊದಲಿನಿಂದ ಕಟ್ಟಲು ಯತ್ನಿಸುತ್ತಿದ್ದೇವೆ'ಎಂದು ಕಬೀರರ ಪದ್ಯವೊಂದನ್ನು ಉಲ್ಲೇಖಿಸಿ ತಮಗೆ ತಾವೇ ಸಮಾಧಾನ ಹೇಳಿಕೊಂಡು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಕುನಾಲ್ ಹೇಳಿದ್ದೇನು
ನೀವು ಮಾಡಿಕೊಂಡ ಒಂದು ವಿವಾದದಿಂದ ನನ್ನನ್ನು ಸೇರಿಸಿ 30ಕ್ಕೂ ಹೆಚ್ಚು ಕಲಾವಿದರಿಗೆ ಅಧಿಕಾರಿಗಳು ಸಮನ್ಸ್ ಕೊಟ್ಟರು. ಇಡೀ ಕಾಮಿಡಿ ಲೋಕವೇ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲೂ ಓಪನಿಂಗ್ಸ್ ಇಲ್ಲ. ವೇದಿಕೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಆದರೆ, ನೀವು ಮಾತ್ರ 'ನೈಸ್ ಗಾಯ್' ಎಂದು ತೋರಿಸಿಕೊಳ್ಳುತ್ತಾ ಈ ಪರಿಸ್ಥಿತಿಯನ್ನು ನಿಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಗುಡುಗಿದರು.
ನೀವು (Contraceptive for creativity) ಸೃಜನಶೀಲತೆಗೆ ಗರ್ಭನಿರೋಧಕವಿದ್ದಂತೆ. ಮೊದಲು ಇಂತಹ ಡ್ರಾಮಾಗಳನ್ನು ಇಲ್ಲಿಗೆ ನಿರ್ಬಂಧಗೊಳಿಸಿ, ನಿಮ್ಮ ಫ್ರಾಡ್‌ಕಾಸ್ಟಿಂಗ್ ಕೆಲಸಕ್ಕೆ ಮರಳಿ ಎಂದು ವ್ಯಂಗ್ಯವಾಡಿದ್ದಾರೆ.
ರಣವೀರ್ ಮಾಡಿಕೊಂಡಿದ್ದ ವಿವಾದವೇನು?
ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲೇಟೆಂಟ್' ಶೋನಲ್ಲಿ ರಣವೀರ್ ಅಲ್ಲಾಬಾಡಿಯಾ 2025ರಲ್ಲಿ ಭಾಗವಹಿಸಿದ್ದರು. ಪೋಷಕರು ಮತ್ತು ಲೈಂಗಿಕತೆಯ ಕುರಿತು ರಣವೀರ್ ಮಾತನಾಡಿದ್ದರು. ಈ ಹೇಳಿಕೆಗಳ ಬಗ್ಗೆ ಹಲವರು ಕಿಡಿಕಾರಿದ್ದರು. ಸುಪ್ರೀಂ ಕೋರ್ಟ್ ಅಸಹ್ಯಕರ ಎಂದು ಛೀಮಾರಿ ಹಾಕಿತ್ತು. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಶೋನ ಸಂಚಿಕೆಗಳನ್ನು ತೆಗೆದುಹಾಕಲಾಗಿತ್ತು ಮತ್ತು ಹಲವು ಕಲಾವಿದರ ಮೇಲೆ ಕಾನೂನು ಕ್ರಮ ಜರುಗಿಸಲಾಗಿತ್ತು, (ಏಜೆನ್ಸೀಸ್).