- 2 ಸಾಲು ಹಾಡು ಹಾಡೋಕೆ ಕೇಳ್ಬೇಡಿ..ಕೈಲಾಶ್ ಖೇರ್ ಹೀಗೆಂದಿದ್ಯಾಕೆ?
- ಸಚಿನ್ ಬಳಿ ಸಿಕ್ಸರ್ ಬಾರಿಸೋಕೆ ಕೇಳುತ್ತೀರಾ ಎಂದು ವೇದಿಕೆ ಮೇಲೆಯೇ ನಿರೂಪಕಿಗೆ ಪ್ರಶ್ನೆ
- ನಾವು ಮನರಂಜನೆ ನೀಡೋಕೆ ಮಾತ್ರ ಸೀಮಿತವಲ್ಲ, ಕೇಳ್ದಂಗೆಲ್ಲ ಹಾಡೋಕೆ ಸಾಧ್ಯವಿಲ್ಲ ಎಂದ ಖೇರ್
Kailash Kher : ತಮ್ಮದೇ ಶೈಲಿ ಹಾಡುಗಳನ್ನು ಹಾಡಿ ಇಂದಿಗೂ ಪ್ರತಿಯೊಂದನ್ನು ಗುನುಗುವಂತೆ ಮಾಡುವ ಸಾಮರ್ಥ್ಯವುಳ್ಳವರು ಎಂದರೆ ಅದು ಕೈಲಾಶ್ ಖೇರ್. ಜಂಗ್ಲಿಯ ಹಳೆ ಪಾತ್ರೆ ಹಳೆ ಕಬ್ಬುಣ, ತುಂಡು ಬೀಡಿ ಹಚ್ಚಿಕೊಂಡು, ಹಿಂದಿ ಸಿನಿಮಾದ ಬಾಮ್ ಲಹರಿ, ತೆಲುಗಿನ ಬಾಹುಬಲಿ ಸಿನಿಮಾದ ಹಾಡುಗಳು ಸಖತ್ ಹಿಟ್ ಕಂಡಿದ್ದವು ಏಳು ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಇವರು ಸದ್ಯ ನೆಟ್ಟಿಗರ ಸಿಟ್ಟಿಗೆ ಸಿಲುಕಿಕೊಂಡಿದ್ದಾರೆ.
ಹೌದು, ಪ್ರಪಂಚದಲ್ಲಿ ಎಲ್ಲೇ ಪ್ರಯಾಣಿಸಿದರು ಅವರ ಅಭಿಮಾನಿಗಳನ್ನು ಸೆಳೆಯುವ ಇವರು, ಇತ್ತಿಚೆಗೆ ದೆಹಲಿಯಲ್ಲಿ ನಡೆದ 'ಸಿಕ್ಸ್ ಸಿಗ್ಮಾ ಲೀಡರ್ ಶಿಪ್ ಸಮಿಟ್ ಕಾರ್ಯಕ್ರದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ನಿರೂಪಕಿಯೊಬ್ಬರು 'ಸರ್ ದಯವಿಟ್ಟು ಪ್ರೇಕ್ಷಕರ ಕೋರಿಕೆ ಮೇರೆಗೆ ಎರಡು ಸಾಲು ಹಾಡನ್ನು ಹಾಡಿ, ಮೂಡ್ ಸರಿ ಮಾಡಿ' ಎಂದು ಕೇಳಿಕೊಂಡಿದ್ದಾರೆ. ನಿರೂಪಕಿಯ ಈ ಮಾತಿಗೆ ಸಿಟ್ಟಾದ ಕೈಲಾಶ್ ವಿನಮ್ರವಾಗಿಯೇ ಅವರ ಮನವಿ ನಿರಾಕರಿಸಿದ್ದಾರೆ.
ಈ ಅಭ್ಯಾಸ ನನಗಿಷ್ಟವಿಲ್ಲ
ಯಾವುದೇ ಸಿನಿಮಾ ಪ್ರೀ ರಿಲೀಸ್, ಪ್ರಶಸ್ತಿ ಕಾರ್ಯಕ್ರಮಗಳ ಸಂದರ್ಭದಲ್ಲಿ ನಟ-ನಟಿಯರಿಗೆ ಡೈಲಾಗ್ ಹೇಳಲು ಮತ್ತು ಸಿಂಗರ್ಸ್ಗೆ ಹಾಡು ಹೇಳಲು ಕೇಳಲಾಗುತ್ತದೆ. ನಟ-ನಟಿಯರನ್ನು ನಿಲ್ಲಿಸಿ ಡ್ಯಾನ್ಸ್ ಮಾಡಿಸಲಾಗುತ್ತದೆ. ಈ ಅಭ್ಯಾಸವು ಸರಿಯಿಲ್ಲ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ.
'ಸಚಿನ್ ತೆಂಡೂಲ್ಕರ್ ಅವರು ಬ್ಯಾಟಿಂಗ್ಗೆ ಫೇಮಸ್ ಹಾಗಂತ ಎಲ್ಲೆಂದರಲ್ಲಿ ಸಿಕ್ಸ್ ಹೊಡೆಯಲು ಜನ ಕೇಳಿಕೊಳ್ಳುತ್ತಾರೆಯೇ, ಇಂತಹ ಅಭ್ಯಾಸವನ್ನು ದಯವಿಟ್ಟು ಫಾಲೋ ಮಾಡಬೇಡಿ. ಈ ಅಭ್ಯಾಸ ನನಗೆ ನಿಜಕ್ಕೂ ಇಷ್ಟವಿಲ್ಲ' ಎಂದು ವಿನಮ್ರವಾಗಿ ವಿನಂತಿಸಿಕೊಂಡರು.
ಎರಡು ಸಾಲು ಅಲ್ಲ ಹಾಡೋದೆ ಇಲ್ಲ..
'ಸೇನಾ ಸಿಬ್ಬಂದಿ ಬಳಿ ಶತ್ರುಗಳ ವಿರುದ್ಧ ಗುಂಡು ಹಾರಿಸಿ ತೋರಿಸಿ ಎಂದು ಕೇಳುತ್ತಾರೆಯೇ?, ಸಚಿನ್ ಕಾಣಿಸಕೊಂಡಲ್ಲೆಲ್ಲ ಸಿಕ್ಸರ್ ಬಾರಿಸೋಕೆ ಮನವಿ ಮಾಡುತ್ತಾರೆಯೇ? ಕಲಾವಿದರ ಬಳಿ ಹೀಗ್ಯಾಕೆ. ನಮ್ಮನ್ನು ಜೋಕರ್ಗಳಂತೆ ಕಾಣಬೇಡಿ. ನಮ್ಮ ಬಳಿಯೂ ಹಾಡು ಹೇಳಲು, ಡ್ಯಾನ್ಸ್ ಮಾಡಲು ಕೇಳಬೇಡಿ. ನನಗೆ ಈ ಪದ್ಧತಿ ಫಾಲೋ ಮಾಡಲು ಇಷ್ಟವಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಮನರಂಜನೆಗೆ ಮಾತ್ರ ಸೀಮಿತ ಅಲ್ಲ
'ಕಲಾವಿದರು ಸಾಧಕರು, ಕೇವಲ ಮನರಂಜನೆ ನೀಡೋಕೆ ಮಾತ್ರ ಸೀಮಿತವಾಗಿಲ್ಲ. ಗಾಯನ ಎನ್ನುವುದು ಮನಸ್ಸಿನ ಆಳದಿಂದ ಬರಬೇಕು, ಬೇಕಾದ ಕಡೆಯಲ್ಲೆಲ್ಲ ಹಾಡಿ ಎಂದ ಕೂಡಲೇ ಹಾಡಲು ಸಾಧ್ಯವಿಲ್ಲ' ಎಂದಿದ್ದಾರೆ.
ನೆಟ್ಟಿಗರು ಏನಂದ್ರು?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾತನಾಡಿರುವ ಈ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಎರಡು ಸಾಲು ಹಾಡಿ ಎಂದಿದ್ದು ಅಪರಾಧವಲ್ಲ. ಹಾಡಿದ್ದರೆ ಗಂಟೇನು ಗೋಗುತ್ತಿರಲಿಲ್ಲ ಎಂದು ಕೆಲವರು ಟೀಕೆ ಮಾಡಿದ್ದಾರೆ, ಇನ್ನು ಕೆಲವರು ಅವರ ವಾದವನ್ನು ಸರಿ ಎಂದು ಒಪ್ಪಿಕೊಂಡಿದ್ದಾರೆ, (ಏಜೆನ್ಸೀಸ್).