ಪಾಕಿಸ್ತಾನದ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಧುರಂಧರ್​ 
ಬಾಲಿವುಡ್

ಪಾಕಿಸ್ತಾನದ ಕಾಳಸಂತೆಯಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್: ಚಿಲ್ಲರೆ ಕಾಸಿಗೆ ಡಿವಿಡಿ ಮಾರುತ್ತಿರುವ ಪಾಕ್​ ಮಂದಿ | Dhurandhar

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಲ್ಲಿ ನಿಷೇಧವಾಗಿರುವ ಬಾಲಿವುಡ್​ ಸಿನಿಮಾ ಧುರಂಧರ್​
  • ಪಾಕಿಸ್ತಾನದ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಧುರಂಧರ್​
  • ಕೇವಲ 16 ರೂಪಾಯಿಗೆ ಸಿಗುತ್ತೆ ಬಾಲಿವುಡ್​ ಬ್ಲಾಕ್​ಬಾಸ್ಟರ್​
ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕವಾಗಿ ಏನೇ ಕಿತ್ತಾಟ ನಡೆದರೂ, ಗಡಿಯಾಚೆಗಿನ ಜನರಿಗೆ ಮಾತ್ರ ಬಾಲಿವುಡ್ ಸಿನಿಮಾ ಅಂದ್ರೆ ಪಂಚಪ್ರಾಣ ಎಂದರೆ ತಪ್ಪಾಗದು. ಪಾಕಿಸ್ತಾನ ಸರ್ಕಾರ ಭಾರತೀಯ ಸಿನಿಮಾಗಳನ್ನು ಅಧಿಕೃತವಾಗಿ ನಿಷೇಧಿಸಿರಬಹುದು.
ಆದರೆ ಅಲ್ಲಿನ ಬೀದಿಗಳಲ್ಲಿ ಬಾಲಿವುಡ್​ ಸಿನಿಮಾಗಳಿಗಿರುವ ಕ್ರೇಜ್​ನ್ನು ಕಡಿಮೆಮಾಡಲು ಸಾಧ್ಯವಾಗಿಲ್ಲ. ಈ ಮಾತಿಗೆ ಪುಷ್ಟಿ ನೀಡುವ ವಿಡಿಯೋವೊಂದನ್ನು ನ್ಯೂಜಿಲೆಂಡ್‌ನ ಪ್ರಖ್ಯಾತ ಯೂಟ್ಯೂಬರ್ ಕಾರ್ಲ್ ರಾಕ್ ತಮ್ಮ ಇತ್ತೀಚಿನ ವಿಡಿಯೋದಲ್ಲಿ ಎಳೆಎಳೆಯಾಗಿ ವಿವಿರಿಸಿದ್ದಾರೆ.

ಸರ್ಕಾರಕ್ಕೆ 'ಟಾಂಗ್' ಕೊಟ್ಟ ಪೈರಸಿ ಕಿಂಗ್ಸ್!

ಕರಾಚಿಯ ಕುಖ್ಯಾತ ರೇನ್‌ಬೋ ಸೆಂಟರ್​ಗೆ ಭೇಟಿ ನೀಡಿದ ಕಾರ್ಲ್ ರಾಕ್ ಅವರಿಗೆ ಒಂದು ಕ್ಷಣ ಶಾಕ್ ಆಗಿದೆ. ಕಾರಣ, ಭಾರತದಲ್ಲಿ ಧೂಳೆಬ್ಬಿಸುತ್ತಿರುವ ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಧುರಂಧರ್ (Dhurandhar) ಸಿನಿಮಾ ಅಲ್ಲಿನ ಕಂಪ್ಯೂಟರ್‌ಗಳಲ್ಲಿ ರಾರಾಜಿಸುತ್ತಿದೆ. ಸರ್ಕಾರವೇನೋ ಸಿನಿಮಾ ಬ್ಯಾನ್ ಮಾಡಿದೆ, ಆದರೆ ವ್ಯಾಪಾರಿಗಳು ಮಾತ್ರ, ಬನ್ನಿ ಸರ್​ ಇದು ಇಂಡಿಯಾದ  ಲೇಟೆಸ್ಟ್ ಸಿನಿಮಾ, ಬೇಗ ಖರೀದಿ ಮಾಡಿ ಎಂದು ಕೂಗಿ ಕರೆಯುತ್ತಿದ್ದಾರೆ.

ಟೀ ಬೆಲೆಗೆ ಸಿನಿಮಾ!

ಈ ಪೈರೇಟೆಡ್ ಸಿನಿಮಾದ ಬೆಲೆ ಕೇಳಿದರೆ ನಿಮಗೆ ನಗಬೇಕೋ, ಅಳಬೇಕೋ ಎಂದು ಕನ್ಪ್ಯೂಸ್​ ಆಗುತ್ತಿರಿ. ಏಕೆಂದರೆ ಧುರಂಧರ್​ ಸಿನಿಮಾವನ್ನು ಪೆನ್‌ಡ್ರೈವ್ ಅಥವಾ ಸಿಡಿಗೆ ಹಾಕಿಕೊಡಲು ಅವರು ಕೇಳುತ್ತಿರುವ ಮೊತ್ತ ಕೇಲವ 50 ಪಾಕಿಸ್ತಾನಿ ರೂಪಾಯಿ, ಭಾರತೀಯ ಮೌಲ್ಯದಲ್ಲಿ ಕೇಲವ 16 ರೂಪಾಯಿ!. ಇನ್ನೂ ಸುಲಭವಾಗಿ ಹೇಳ ಬೇಕೆಂದರೆ ನಾವು ಒಂದು ಕಪ್​ ಚಹಾ ಕುಡಿಯಲು ಖರ್ಚು ಮಾಡುವ ಹಣದಲ್ಲಿ ಸಂಪೂರ್ಣ ಒಂದು ಸನಿಮಾವನ್ನು ನೋಡಬಹುದಾಗಿದೆ.

ಕರಾಚಿಯ ಕಥೆ, ಕರಾಚಿಯಲ್ಲೇ ಬ್ಯಾನ್!

'ಧುರಂಧರ್' ಈ ಸಿನಿಮಾದ ಕಥೆಯನ್ನು ಕರಾಚಿಯ ಲಿಯಾರಿ ನಗರದ ಸುತ್ತ ಹೆಣೆಯಲಾಗಿದ್ದು, ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಕ್ರೀಯವಾಗಿದ್ದ ಗ್ಯಾಂಗ್ ವಾರ್ ಮತ್ತು ಭಯೋತ್ಪಾದನೆ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ. ರೆಹಮಾನ್ ಡಕೈತ್​, ಚೌಧರಿ ಅಸ್ಲಂ, ಕಾಶ್ಮೀರ್​ ಇಲ್ಯಾಸಿ ಮೊದಲಾದ ನೈಜ ವ್ಯಕ್ತಿಗಳ ಪಾತ್ರವನ್ನೇ ತೆರೆಯಮುಂದೆ ತೋರಿಸಲಾಗಿದೆ.
ಆದರೆ ಈ ಸಿನಿಮಾ ಪಾಕಿಸ್ತಾನದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಪಾಕಿಸ್ತಾನ ಸೇರಿದಂತೆ ಸುಮಾರು ಏಳು ಗಲ್ಫ್​ ದೇಶಗಳು ಈ ಧುರಂಧರ್​ ಸಿನಿಮಾವನ್ನು ಬ್ಯಾನ್​ ಮಾಡಿದ್ದಾರೆ. ಇಷ್ಟಾದರೂ ಪಾಕಿಸ್ತಾನದ ಜನರಿಗೆ ಮಾತ್ರ ತಮ್ಮೂರಿನ ಕಥೆಯನ್ನು ಭಾರತೀಯರು ಹೇಗೆ ತೋರಿಸಿದ್ದಾರೆ ಎಂಬ ಕುತೂಹಲ ತಡೆಯಲಾಗುತ್ತಿಲ್ಲ. ಹೀಗಾಗಿ ಕರಾಚಿಯ ಕಾಳಸಂತೆಯಲ್ಲಿ ಧುರಂಧರ್​ ಬಿಸಿ ದೋಸೆಯಂತೆ ಮಾರಾಟವಾಗಿತ್ತಿದೆ.

ರಣವೀರ್ ಸಿಂಗ್ ಅವರ ತವರಲ್ಲೇ ಫೈರಸಿ

ಇನ್ನೊಂದು ಮಜವಾದ ವಿಷಯವೆಂದರೆ, ಈ ಚಿತ್ರದ ನಾಯಕ ನಟ ರಣವೀರ್ ಸಿಂಗ್ ಅವರ ಅಜ್ಜ-ಅಜ್ಜಿ ವಿಭಜನೆಯ ಸಮಯದಲ್ಲಿ ಕರಾಚಿಯಿಂದಲೇ ಭಾರತಕ್ಕೆ ಬಂದವರಾಗಿದ್ದಾರೆ, ಅಂದರೆ ರಣವೀರ್ ಅವರ ಪೂರ್ವಜರ ಊರಿನಲ್ಲೇ ಅವರ ಸಿನಿಮಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.

ಮಾರ್ಚ್ 19 ಕ್ಕೆ ಎರಡನೇ ಭಾಗ

ಸದ್ಯಕ್ಕಂತೂ ಪಾಕಿಸ್ತಾನದಲ್ಲಿ 'ಧುರಂಧರ್' ಚಿತ್ರದ ಹವಾ ಜೋರಾಗಿದೆ. ಇದರ ಮುಂದುವರಿದ ಭಾಗ ಧುರಂಧರ್: ದಿ ರಿವೆಂಜ್ ಮಾರ್ಚ್ 19, 2026 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಜನರು ಥಿಯೇಟರ್‌ಗೆ ಟಿಕೆಟ್ ಬುಕ್ ಮಾಡುತ್ತಿದ್ದರೆ, ಇತ್ತ ಪಾಕಿಸ್ತಾನದ ರೇನ್‌ಬೋ ಸೆಂಟರ್ ವ್ಯಾಪಾರಿಗಳು ಪೆನ್‌ಡ್ರೈವ್‌ಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದರೆ ಆಶ್ಚರ್ಯವೆನಿಲ್ಲ,(ಏಜನ್ಸೀಸ್​).