ಲೆಸ್ಬಿಯನ್ ಎಂಬ ವದಂತಿಗೆ ಮೌನಿ ರಾಯ್ ಶಾಕಿಂಗ್ ಆನ್ಸರ್
- ಪತಿ ಸೂರಜ್ ನಂಬಿಯಾರ್‌ನಿಂದ ಬೇರ್ಪಟ್ಟ ನಟಿ ಮೌನಿ ರಾಯ್
- ದಿಶಾ ಪಟಾನಿ ಜೊತೆ ಸಲಿಂಗಕಾಮದ ಲಿಂಕ್?
- ತಾನು ಲೆಸ್ಬಿಯನ್ ಎಂಬ ವದಂತಿಗೆ ಮೌನಿ ರಾಯ್ ಶಾಕಿಂಗ್ ಆನ್ಸರ್
ಮುಂಬೈ: ಕಿರುತೆರೆಯ ನಾಗಿಣಿ ಖ್ಯಾತಿಯ, ಬಾಲಿವುಡ್ ನಟಿ ಮೌನಿ ರಾಯ್, ಈ ವರ್ಷದ ಆರಂಭದಲ್ಲೇ ತಮ್ಮ ಪತಿ ಸೂರಜ್ ನಂಬಿಯಾರ್ ನಿಂದ ದೂರವಾಗುತ್ತಿರುವುದಾಗಿ ಘೋಷಿಸಿ ಫ್ಯಾನ್ಸ್‌ಗೆ ಶಾಕ್ ನೀಡಿದ್ದ ಮೌನಿ, ಇದೀಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿದ್ದ ವದಂತಿಯೊಂದಕ್ಕೆ (Mouni Roy About Rumors) ಖಡಕ್ ಉತ್ತರ ನೀಡಿದ್ದಾರೆ.
ಹಲವು ವರ್ಷಗಳ ಕಾಲ ಡೇಟಿಂಗ್ ನಡೆಸಿ, 2022 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಈ ವರ್ಷ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಮೂಲಕ ತಮ್ಮ 4 ವರ್ಷಗಳ ಸಂಸಾರ ಜೀವನಕ್ಕೆ ಬ್ರೇಕ್ ಹಾಕಿದ್ದರು. ಆದರೆ, ಈ ಸ್ಟಾರ್ ಕಪಲ್ ಬೇರ್ಪಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ನೂರಾರು ಕಥೆಗಳು ಹುಟ್ಟಿಕೊಂಡವು. ಕೆಲವರಂತೂ ಈ ಡಿವೋರ್ಸ್ಗೆ ನಟಿ ದಿಶಾ ಪಟಾನಿ ಅವರೇ ಕಾರಣ ಎಂದು ಮೌನಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.
ನಾನು ಸಲಿಂಗಕಾಮಿನಿಯೇ? ಮೌನಿ ರಾಯ್ ಶಾಕಿಂಗ್ ಆನ್ಸರ್
ಈ ಎಲ್ಲ ಊಹಾಪೋಹಗಳು ಮತ್ತು ಟ್ರೋಲ್‌ಗಳ ಬೆನ್ನಲ್ಲೇ, ಮೌನಿ ರಾಯ್ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರೂಪಕಿ, ಇಂಡಸ್ಟ್ರಿಯಲ್ಲಿ ನಿಮ್ಮ ಬಗ್ಗೆ ಕೇಳಿಬಂದ ಅತ್ಯಂತ ವಿಚಿತ್ರ ವದಂತಿ ಯಾವುದು? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಮೌನಿ ರಾಯ್ ನಗುತ್ತಲೇ, ಓಹ್, ನಾನು ಲೆಸ್ಬಿಯನ್ (ಸಲಿಂಗಕಾಮಿ) ಅಂತ ಹಬ್ಬಿಸಿದ್ದು! ಎಂದು ಉತ್ತರಿಸಿದರು. ಪತಿಯಿಂದ ಬೇರ್ಪಟ್ಟ ನಂತರ ತಮ್ಮ ಲೈಂಗಿಕ ದೃಷ್ಟಿಕೋನದ ಬಗ್ಗೆ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದ ದೊಡ್ಡ ಗಾಸಿಪ್‌ಗೆ ಮೌನಿ ಈ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಕಷ್ಟದ ಕಾಲದಲ್ಲಿ ಜೊತೆ ನಿಂತ ಗರ್ಲ್ ಗ್ಯಾಂಗ್
ವಿಚ್ಛೇದನದ ನಂತರದ ದಿನಗಳು ತಮಗೆ ರೋಲರ್ ಕೋಸ್ಟರ್ ಸವಾರಿಯಂತಿತ್ತು ಎಂದು ನೆನೆಸಿಕೊಂಡ ಮೌನಿ, ನನ್ನ ಲೈಫ್‌ನಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ಈ ಕಷ್ಟದ ಹಂತದಲ್ಲಿ ನನ್ನ ಬೆನ್ನಿಗೆ ಬಂಡೆಯಂತೆ ನಿಂತಿದ್ದು ನನ್ನ ಗೆಳತಿಯರು ಮತ್ತು ಕುಟುಂಬ ಎಂದು ಭಾವುಕರಾಗಿದ್ದಾರೆ.
ನನ್ನ ಒಳ್ಳೆಯ, ಕೆಟ್ಟ ಮತ್ತು ಕೊಳಕು ದಿನಗಳಲ್ಲೂ ನನ್ನ ಬೆಂಬಲಕ್ಕೆ ನಿಲ್ಲಲು ನನ್ನ ಗರ್ಲ್ ಗ್ಯಾಂಗ್ ಇತ್ತು. ನಿಮ್ಮನ್ನು ಸದಾ ಮೇಲಕ್ಕೆತ್ತುವ ಇಂತಹ ಮಹಿಳೆಯರು ಜೀವನದಲ್ಲಿ ಇರುವುದು ತುಂಬಾ ಮುಖ್ಯ ಎಂದು ಮೌನಿ ತಮ್ಮ ಮಹಿಳಾ ಸ್ನೇಹಿತ ವಲಯಕ್ಕೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಇಂದಿನ ಹುಡುಗಿಯರು ಸದಾ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ವಾವಲಂಬಿಗಳಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
ಸೂರಜ್-ಮೌನಿ ಜಂಟಿ ಹೇಳಿಕೆಯಲ್ಲೇನಿತ್ತು?
ಮೌನಿ ಮತ್ತು ಸೂರಜ್ ತಮ್ಮ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಾ ಮಾಧ್ಯಮಗಳ ಅನಗತ್ಯ ಹಸ್ತಕ್ಷೇಪದ ವಿರುದ್ಧ ಬೇಸರ ಹೊರಹಾಕಿದ್ದಾರೆ. ನಾವು ಸೌಹಾರ್ದಯುತವಾಗಿಯೇ ಬೇರೆಯಾಗಲು ನಿರ್ಧರಿಸಿದ್ದೇವೆ. ಆದರೆ ಮಾಧ್ಯಮಗಳಲ್ಲಿ ನಮ್ಮ ಸಂಬಂಧದ ಬಗ್ಗೆ ಕಟ್ಟುಕಥೆಗಳನ್ನು ಹರಡುತ್ತಿವೆ. ನಾವು ಪರಸ್ಪರ ಗೌರವದಿಂದಲೇ ನಮ್ಮ ಹಾದಿಗಳನ್ನು ಬದಲಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲೂ ನಮ್ಮ ಸ್ನೇಹ ಹೀಗೇ ಇರಲಿದೆ. ದಯವಿಟ್ಟು ನಮ್ಮ ಪ್ರೈವೆಸಿಗೆ ಗೌರವ ಕೊಡಿ ಎಂದು ಜಂಟಿ ಹೇಳಿಕೆಯಲ್ಲಿ ವಿನಂತಿಸಿಕೊಂಡಿದ್ದಾರೆ, (ಏಜನ್ಸೀಸ್).