ದಾವೂದ್ ಪಾತ್ರದಲ್ಲಿ ಕಾಣಿಸಿಕೊಂಡ ಡ್ಯಾನಿಶ್ ಇಕ್ಬಾಲ್
- ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
- 15 ನೇ ದಿನದಲ್ಲಿ 1500 ಕೋಟಿ ಗಳಿಸಿದ ಸಿನಿಮಾ
- ದಾವೂದ್ ಪಾತ್ರದಲ್ಲಿ ಕಾಣಿಸಿಕೊಂಡ ಡ್ಯಾನಿಶ್ ಇಕ್ಬಾಲ್ ಸಿನಿಮಾ ಬಗ್ಗೆ ಹೇಳಿದ್ದೇನು?
ಮುಂಬೈ: ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್ ನಿರ್ದೇಶನದ ಸಿನಿಮಾ ಧುರಂಧರ್ 2 ದಿ ರಿವೆಂಜ್ ಸಿನಿಮಾ ಸದ್ಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ 15 ದಿನಗಳಲ್ಲಿ 1,500 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ಮೂಲಕ ತನ್ನ ನಾಗಾಲೋಟವನ್ನು ಮುಂದುವರಿಸಿದೆ.
ಈ ಸಿನಿಮಾದಲ್ಲಿ ನೀಜ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಮತ್ತು ನಿಜ ಜೀವನದಲ್ಲಿ ಬದುಕಿದ್ದ ಮತ್ತು ಬದುಕಿರುವ ವ್ಯಕ್ತಿಗಳನ್ನು ಪಾತ್ರದ ಮೂಲಕ ತೋರಿಸಿರುವ ಕಾರಣದಿಂದ ಈ ಸಿನಿಮಾ ಇಷ್ಟು ಯಶಸ್ಸನ್ನು ಕಾಣಲು ಸಾಧ್ಯವಾಗಿದೆ ಎನ್ನುವುದು ಚಲನಚಿತ್ರ ವಿಮರ್ಶಕರ ಅಭಿಪ್ರಾಯವಾಗಿದೆ.
ಆ ಒಂದು ಫೋಟೊ ತೆಗೆಯಲು 2-3 ಗಂಟೆ ತಗುಲಿದೆ
ಈ ಧುರಂಧರ್ ಸಿನಿಮಾದಲ್ಲಿ ಹಲವಾರು ಪ್ರಮುಖ ಪಾತ್ರಗಳಿವೆ, ಅದರಲ್ಲಿ ಈ ಬಡೇ ಸಾಬ್ ಪಾತ್ರ ಸಹ ಅತ್ಯಂತ ಮುಖ್ಯ ಪಾತ್ರಗಳಲ್ಲಿ ಒಂದಾಗಿದೆ. ಈ ಬಡೇ ಸಾಬ್ ಪಾತ್ರದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಚಿತ್ರಿಸಲಾಗಿದ್ದು, ಈ ಪಾತ್ರವನ್ನು ಡ್ಯಾನಿಶ್ (Danish Iqbal on Dhurandhar 2) ಇಕ್ಬಾಲ್ ಬಹಳ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡ್ಯಾನಿಶ್, ಈ ಸಿನಿಮಾದಲ್ಲಿ ನನಗೆ ಅವಕಾಶ ದೊರೆತಿದ್ದು, ನನಗೆ ಸಂತೋಷದಾಯಕವಾಗಿದೆ. ನಮ್ಮ ಚಿತ್ರತಂಡ ದಾವೂದ್ನ ಪಾತ್ರವನ್ನು ತೆರೆಮುಂದೆ ತರಲು ಬಹಳ ಶ್ರಮವಹಿಸಿದೆ.
ನನಗೆ ಮೇಕಪ್ ಮಾಡಲೇ ಸುಮಾರು 5 ರಿಂದ 6 ಗಂಟೆ ಹಿಡಿಯುತ್ತಿತ್ತು, ಹಾಗೆಯೇ ಸಿನಿಮಾದಲ್ಲಿ ತೋರಿಸಿರುವ ದಾವೂದ್ ಇಬ್ರಾಹಿಂನ ಫೋಟೊಗಾಗಿ ಅದೇ ರೀತಿಯ ಸೆಟಪ್ ರೆಡಿ ಮಾಡಿ ಫೋಟೊ ತೆಗೆಯಲು ಸುಮಾರು 3 ಗಂಟೆ ತಗುಲಿದೆ ಎಂದು ಡ್ಯಾನಿಶ್ ಇಕ್ಬಾಲ್ ತಿಳಿಸಿದ್ದಾರೆ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).