ಹಾವುಗಳು ಹಾಲು ಕುಡಿಯುತ್ತವೆ ಅನ್ನೋ ನಂಬಿಕೆ ಯಾವಾಗ ಹುಟ್ಟಿಕೊಂಡಿತು? ಇಲ್ಲಿದೆ ಅಚ್ಚರಿಯ ಉತ್ತರ...Snakes  
ಧಾರ್ಮಿಕ

ಹಾವುಗಳು ಹಾಲು ಕುಡಿಯುತ್ತವೆ ಅನ್ನೋ ನಂಬಿಕೆ ಯಾವಾಗ ಹುಟ್ಟಿಕೊಂಡಿತು? ಇಲ್ಲಿದೆ ಅಚ್ಚರಿಯ ಉತ್ತರ...Snakes

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ನಾಗರ ಪಂಚಮಿ ಮತ್ತು ನಾಗ ಚೌತಿ ಹಬ್ಬಗಳಲ್ಲಿ ಹಾವುಗಳಿಗೆ ಹಾಲೂಣಿಸುವ ಆಚರಣೆ
  • ಹಾವುಗಳು ಸಸ್ತನಿಗಳಲ್ಲದ ಕಾರಣ ಅವುಗಳ ದೇಹದಲ್ಲಿ ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ
  • ಬಾಯಾರಿಕೆಯಿಂದ ಬಳಲುವ ಹಾವುಗಳು ಅನಿವಾರ್ಯವಾಗಿ ನೀರು ಎಂದು ಭಾವಿಸಿ ಹಾಲು ಕುಡಿಯುತ್ತವೆ
  • ಮೂಕಪ್ರಾಣಿಗಳಿಗೆ ಹಿಂಸೆ ನೀಡದೆ ಮೂಢನಂಬಿಕೆಗಳನ್ನು ಬದಿಗಿಟ್ಟು ಹಬ್ಬಗಳನ್ನು ಆಚರಿಸುವುದು ಒಳಿತು
Snakes : ಹಿಂದೂ ಧರ್ಮದ ಸಂಪ್ರದಾಯಗಳಲ್ಲಿ ನಾಗರ ಪಂಚಮಿ ಮತ್ತು ನಾಗ ಚೌತಿ ಹಬ್ಬಗಳ ಸಂದರ್ಭದಲ್ಲಿ ಹಾವುಗಳಿಗೆ ಹಾಲನ್ನು ಎರೆಯುವುದು ಅಥವಾ ಹಾಲನ್ನುಣಿಸುವುದು ತಲತಲಾಂತರದಿಂದ ನಡೆದುಕೊಂಡು ಬಂದಿರುವ ಆಚರಣೆಯಾಗಿದೆ. ಹೀಗಾಗಿ, ಹಾವುಗಳು ಹಾಲು ಕುಡಿಯುತ್ತವೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಶತಶತಮಾನಗಳಿಂದ ಗಟ್ಟಿಯಾಗಿ ಬೇರೂರಿದೆ. ಆದರೆ, ವೈಜ್ಞಾನಿಕವಾಗಿ ಹೇಳುವುದಾದರೆ ಹಾವುಗಳು ನಿಜಕ್ಕೂ ಹಾಲನ್ನು ಕುಡಿಯುವುದಿಲ್ಲ! ಹಾಗಾದರೆ ಹಾವುಗಳು ಹಾಲು ಕುಡಿಯುತ್ತವೆ ಎಂಬ ಈ ನಂಬಿಕೆ ಹೇಗೆ ಹುಟ್ಟಿಕೊಂಡಿತು? ಇದರ ಹಿಂದೆ ಇರುವ ನೈಜ ಸತ್ಯ ಹಾಗೂ ವೈಜ್ಞಾನಿಕ ಸಂಗತಿಗಳೇನು ಎಂಬುದನ್ನು ಈಗ ವಿವರವಾಗಿ ತಿಳಿಯೋಣ.

ವಿಜ್ಞಾನ ಹೇಳುವುದೇನು?

ಹಾವುಗಳು ಸಸ್ತನಿಗಳಲ್ಲ, ಬದಲಿಗೆ ಅವು ಸರೀಸೃಪಗಳಾಗಿವೆ. ಇವುಗಳ ದೇಹದಲ್ಲಿ ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಅಗತ್ಯವಿರುವ ಕಿಣ್ವಗಳು ಇರುವುದಿಲ್ಲ. ಹಾವುಗಳು ಸಂಪೂರ್ಣವಾಗಿ ಮಾಂಸಾಹಾರಿ ಜೀವಿಗಳಾಗಿದ್ದು, ಅವು ಕೇವಲ ಇಲಿಗಳು, ಕಪ್ಪೆಗಳು ಮತ್ತು ಸಣ್ಣ ಕೀಟಗಳನ್ನು ಮಾತ್ರ ತಿಂದು ಬದುಕುತ್ತವೆ. ಒಂದು ವೇಳೆ ಹಾವುಗಳ ಹೊಟ್ಟೆಗೆ ಹಾಲು ಹೋದರೆ ಅವುಗಳಿಗೆ ತೀವ್ರವಾದ ಜೀರ್ಣಾಂಗ ಸಮಸ್ಯೆಯಾಗಿ ಸೋಂಕು ಉಂಟಾಗುತ್ತದೆ, ಇದು ಅವುಗಳ ಜೀವಕ್ಕೇ ಕುತ್ತು ತರಬಹುದು.

ಹಾಲು ಕುಡಿಯುತ್ತವೆ ಅನ್ನೋ ನಂಬಿಕೆ ಹುಟ್ಟಿಕೊಂಡಿದ್ದು ಹೇಗೆ?

ಈ ಹಿಂದೆ ಹಬ್ಬಗಳ ಕೆಲ ದಿನಗಳ ಮುಂಚಿತವಾಗಿ ಹಾವಾಡಿಗರು ಹಾವನ್ನು ಹಿಡಿದು ಕತ್ತಲೆ ಕೋಣೆಗಳಲ್ಲಿ ಅಥವಾ ಪೆಟ್ಟಿಗೆಗಳಲ್ಲಿ ಬಂಧಿಸಿಡುತ್ತಾರೆ. ಅವರಿಗೆ ದಿನಗಟ್ಟಲೆ ನೀರಾಗಲಿ ಆಹಾರವಾಗಲಿ ನೀಡುವುದಿಲ್ಲ, ಇದರಿಂದ ಹಾವುಗಳು ಹಸಿವಿನಿಂದ ಹಾಗೂ ತೀವ್ರ ಬಾಯಾರಿಕೆಯಿಂದ ನರಳುತ್ತವೆ. ಹಬ್ಬದ ದಿನ ಬಟ್ಟಲಿನಲ್ಲಿ ಹಾಲು ಇಟ್ಟಾಗ, ಬಾಯಾರಿಕೆಯಿಂದ ಬಳಲುತ್ತಿರುವ ಹಾವು ಅದನ್ನು ನೀರು ಎಂದು ಭ್ರಮಿಸಿ ತನ್ನ ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಕುಡಿಯುತ್ತದೆ. ಇದೇ ವರ್ತನೆ ನಂಬಿಕೆಯಾಗಿ ಬದಲಾಯಿತು.

ಹಳ್ಳಿಗಾಡಿನ ವದಂತಿಗಳು

ಹಳ್ಳಿಗಳಲ್ಲಿ ಕೇರೆ ಹಾಗೂ ನಾಗರ ಹಾವುಗಳು ಹಸುಗಳ ಕೊಟ್ಟಿಗೆಗೆ ಬಂದು ಹಾಲನ್ನು ಕುಡಿಯುತ್ತವೆ ಎಂಬ ಬಲವಾದ ನಂಬಿಕೆಯಿದೆ ಆದರೆ, ಅದು ಕೇವಲ ಒಂದು ವದಂತಿ ಅಷ್ಟೇ. ಹಾವುಗಳು ದನಗಳ ಕೊಟ್ಟಿಗೆಗೆ ಹಾಲನ್ನು ಕುಡಿಯಲು ಬರುವುದಿಲ್ಲ, ಬದಲಿಗೆ ಅಲ್ಲಿ ಓಡಾಡುವ ಇಲಿಗಳನ್ನು ಬೇಟೆಯಾಡಲು ಮಾತ್ರ ಬರುತ್ತವೆ.
ಇನ್ನು 'ಹಾವಿಗೆ ಹಾಲರೆದರೂ ವಿಷ ಕಕ್ಕದೇ ಇರದು' ಎಂಬ ಗಾದೆ ನಮ್ಮ ಹಿರಿಯರಿಂದ ಬಂದಿದೆ. ಇದು ಹಾವಿನ ದೈಹಿಕ ಸ್ವಭಾವಕ್ಕೆ ಮಾತ್ರ ಸೀಮಿತವಲ್ಲ, ಬದಲಿಗೆ ಕೆಟ್ಟ ಜನರಿಗೆ ಎಷ್ಟೇ ಒಳ್ಳೆಯದು ಮಾಡಿದರೂ ಅವರು ತಮಗೆ ಒಳಿತು ಮಾಡಿದವರಿಗೂ ಹಾನಿ ಮಾಡುತ್ತಾರೆ ಎಂಬ ಸತ್ಯವನ್ನು ಸಾರುವ ಜಾನಪದ ನಂಬಿಕೆಯಾಗಿದೆ.

ಮೂಢನಂಬಿಕೆಗಳನ್ನು ಬಿಟ್ಟು ಮೂಕಪ್ರಾಣಿಗಳನ್ನು ರಕ್ಷಿಸೋಣ

ನಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳ ಹಿಂದೆ ಇರುವ ವಾಸ್ತವಿಕತೆಯನ್ನು ಅರಿತುಕೊಂಡು ಮೂಕಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಪ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕುರುಡು ನಂಬಿಕೆಗಳಿಗಿಂತ ವೈಜ್ಞಾನಿಕ ಅರಿವು ಮತ್ತು ಪ್ರಾಣಿ ದಯೆ ಇಂದಿನ ಸಮಾಜಕ್ಕೆ ಅತ್ಯಂತ ಮುಖ್ಯವಾಗಿದೆ. ಇಂತಹ ಆಚರಣೆಗಳಿಂದ ಅಮಾಯಕ ಪ್ರಾಣಿಗಳನ್ನು ರಕ್ಷಿಸಿ ಪ್ರಕೃತಿಯ ಸಮತೋಲನವನ್ನು ಕಾಪಾಡುವುದು ನಮ್ಮ ಕರ್ತವ್ಯ.
ಗಮನಿಸಿ: ನಾಗರ ಪಂಚಮಿ ಮತ್ತು ನಾಗಲ ಚೌತಿ ಹಬ್ಬಗಳ ಸಂದರ್ಭದಲ್ಲಿ ಹಾವುಗಳಿಗೆ ಬಲವಂತವಾಗಿ ಹಾಲುಣಿಸುವುದು ಅವುಗಳ ಸಾವಿಗೆ ಕಾರಣವಾಗಬಹುದು. ಜೀವಗಳಿಗೆ ಹಿಂಸೆ ನೀಡದೆ ಹಬ್ಬಗಳನ್ನು ಆಚರಿಸುವುದು ಬುದ್ಧಿವಂತಿಕೆಯಾಗಿದೆ.