Hindu Beliefs : ಸಂಜೆ ದೀಪ ಹಚ್ಚಿದ ಮೇಲೆ ಬಾಗಿಲು ಮುಚ್ಚಬೇಡ, ಲಕ್ಷ್ಮೀ ದೇವಿ ಮನೆಗೆ ಬರುತ್ತಾಳೆ ಎಂದು ಹಿರಿಯರು ಹೇಳುತ್ತಿದ್ದ ಮಾತು ನಿಮಗೆ ನೆನಪಿದೆಯೇ? ಆಗ ಮಕ್ಕಳಿಗೆ ಈ ಮಾತುಗಳನ್ನು ಕೇಳಿದರೆ ಒಂದು ಕಡೆ ಭಯ, ಇನ್ನೊಂದು ಕಡೆ ಕುತೂಹಲ. ಹಿರಿಯರು ಹೇಳಿದಂತೆ ನಿಜಕ್ಕೂ ಲಕ್ಷ್ಮೀ ದೇವಿ ಬಾಗಿಲಿನಿಂದಲೇ ಬರುತ್ತಾಳಾ? ಸಂಜೆ ಸಮಯಕ್ಕೆ ಮಾತ್ರ ಇಂತಹ ನಿಯಮಗಳನ್ನು ಹಿರಿಯರು ಏಕೆ ಹೇಳುತ್ತಿದ್ದರು? ಈ ಎಲ್ಲ ಪ್ರಶ್ನೆಗಳಿಗೆ ನಾವೀಗ ಉತ್ತರ ಕಂಡುಕೊಳ್ಳೋಣ.
ಅಂದಹಾಗೆ, ನಮ್ಮ ಹಿರಿಯರು ಹೇಳುತ್ತಿದ್ದ ಇಂತಹ ಮಾತುಗಳು ಒಂದೆರಡು ಅಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮನೆಯಲ್ಲಿನ ಹಲವು ಕೆಲಸಗಳಿಗೆ ಒಂದೊಂದು ನಿಯಮ ಇರುತ್ತಿತ್ತು. ಇವುಗಳಲ್ಲಿ ಕೆಲವು ಧಾರ್ಮಿಕ ನಂಬಿಕೆಗಳಾಗಿದ್ದರೆ, ಕೆಲವು ಹಳೆಯ ಕಾಲದ ಜೀವನಶೈಲಿಯಿಂದ ಬಂದ ಅಭ್ಯಾಸಗಳಾಗಿರಬಹುದು.
ಸಂಜೆಯ ಸಮಯವನ್ನು ಶುಭ ಸಮಯವೆಂದು ಪರಿಗಣಿಸುವ ಸಂಪ್ರದಾಯ ನಮ್ಮಲ್ಲಿ ಬಹಳ ಹಿಂದಿನಿಂದಲೂ ಇದೆ. ದೀಪ ಹಚ್ಚುವುದು ಮನೆಯೊಳಗೆ ಬೆಳಕು ಮತ್ತು ಶುಭದ ಸಂಕೇತ ಎಂದು ನಂಬಲಾಗುತ್ತಿತ್ತು. ಅಲ್ಲದೆ, ದೀಪ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ಹೇಳುತ್ತಾರೆ. ಸಂಜೆ ಸಮಯದಲ್ಲಿ ಮುಖ್ಯ ಬಾಗಿಲನ್ನು ತೆರೆದಿಡುವುದು ಮನೆಯೊಳಗೆ ಒಳ್ಳೆಯ ಶಕ್ತಿ ಬರಲಿ ಎಂಬ ನಂಬಿಕೆಗೆ ಸಂಬಂಧಿಸಿದೆ.
ಸಂಜೆ ಕಸ ಹೊರಗೆ ಹಾಕಬೇಡ ಎಂಬ ಮಾತನ್ನೂ ಹಲವರು ಕೇಳಿರಬಹುದು. ಹಿಂದಿನ ಕಾಲದಲ್ಲಿ ಸಂಜೆ ವೇಳೆಗೆ ಬೆಳಕು ಕಡಿಮೆಯಾಗುತ್ತಿತ್ತು. ಹೀಗಾಗಿ ಕಸ ತೆಗೆಯುವಾಗ ಸಣ್ಣ ವಸ್ತುಗಳು ಅಥವಾ ಮನೆಯ ಅಗತ್ಯ ವಸ್ತುಗಳು ತಪ್ಪಾಗಿ ಹೊರಗೆ ಹೋಗುವ ಸಾಧ್ಯತೆ ಇತ್ತು. ಈ ಕಾರಣವೂ ಇಂತಹ ಪದ್ಧತಿ ಬೆಳೆಸಲು ಕಾರಣವಾಗಿದೆ.
ಕೆಲವು ಮನೆಗಳಲ್ಲಿ ಸೂರ್ಯ ಮುಳುಗಿದ ನಂತರ ಹಣ ಅಥವಾ ಉಪ್ಪನ್ನು ಬೇರೆಯವರಿಗೆ ಕೊಡಬಾರದು ಎಂಬ ನಂಬಿಕೆ ಇದೆ. ಇವೆರಡನ್ನೂ ಮನೆಯ ಅಗತ್ಯ ಮತ್ತು ಸಂಪತ್ತಿಗೆ ಸಂಬಂಧಿಸಿದ ವಸ್ತುಗಳೆಂದು ಹಿಂದಿನ ಕಾಲದಲ್ಲಿ ನೋಡಲಾಗುತ್ತಿತ್ತು. ಅದನ್ನು ರಾತ್ರಿ ಹೊರಗೆ ಕೊಡುವುದನ್ನು ತಪ್ಪಿಸುವ ಪದ್ಧತಿ ಕೆಲವು ಕಡೆ ಬೆಳೆದಿದೆ. ಹೊರಗಡೆ ಇವುಗಳನ್ನು ನೀಡಿದರೆ ಸಂಪತ್ತು ಕಡಿಮೆಯಾಗುತ್ತದೆ ಹಾಗೂ ಐಶ್ವರ್ಯ ವೃದ್ಧಿ ಆಗುವುದಿಲ್ಲ ಅಂತನೂ ಹಿರಿಯರು ಹೇಳುತಿದ್ದರು.
ಸಂಜೆ ಹೊತ್ತಿನಲ್ಲಿ ಮಲಗಬಾರದು ಎಂದು ಹಿರಿಯರು ಹೇಳುತ್ತಿದ್ದ ಮಾತು ಕೂಡ ಸಾಮಾನ್ಯ. ಹಿಂದಿನ ಕಾಲದಲ್ಲಿ ದಿನದ ಕೆಲಸ ಮುಗಿಸಿ ಮನೆಯವರು ಸಂಜೆ ಸಮಯದಲ್ಲಿ ಒಟ್ಟಿಗೆ ಸೇರುತ್ತಿದ್ದರು. ಆ ಸಮಯವನ್ನು ವಿಶ್ರಾಂತಿ, ಮನೆಯ ಕೆಲಸ ಮತ್ತು ಪೂಜೆಗೆ ಬಳಸುತ್ತಿದ್ದರು. ಹೀಗಾಗಿ ಸಂಜೆ ನಿದ್ರಿಸುವ ಅಭ್ಯಾಸವನ್ನು ತಪ್ಪಿಸಲು ಈ ಮಾತು ರೂಢಿಯಾಗಿದೆ.
ಹಿಂದೆ ಮನೆಗಳಲ್ಲಿ ವಿದ್ಯುತ್ ಬೆಳಕು ಇರಲಿಲ್ಲ. ಕಡಿಮೆ ಬೆಳಕಿನಲ್ಲಿ ಉಗುರು ಅಥವಾ ಕೂದಲು ಕತ್ತರಿಸುವಾಗ ಗಾಯವಾಗುವ ಸಾಧ್ಯತೆ ಇತ್ತು. ಕತ್ತರಿಸಿದ ಭಾಗಗಳು ಮನೆಯೊಳಗೆ ಬಿದ್ದರೂ ಸ್ವಚ್ಛಗೊಳಿಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ಇಂತಹ ಕೆಲಸಗಳನ್ನು ಹಗಲಿನಲ್ಲೇ ಮಾಡಬೇಕು ಎಂಬ ನಿಯಮ ಬಂದಿದೆ. ಆದರೆ, ಹಲವರು ಇಂದಿಗೂ ಕೂಡಾ ಅದನ್ನೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಇನ್ನೂ ಕಡಿಮೆ ಬೆಳಕಿನಲ್ಲಿ ಕಸ ಗುಡಿಸಬಾರದು ಎಂದು ಹೇಳುತಿದ್ದರು. ಗುಡಿಸುವಾಗ ನೆಲದಲ್ಲಿರುವ ಸಣ್ಣ ವಸ್ತುಗಳು, ಹಣ ಅಥವಾ ಆಭರಣಗಳು ಕಸದ ಜೊತೆ ಹೊರಗೆ ಹೋಗುವ ಸಾಧ್ಯತೆ ಇತ್ತು. ಲಕ್ಷ್ಮೀ ಹೊರಗೆ ಹೋಗುತ್ತಾಳೆ ಎಂಬ ನಂಬಿಕೆಯ ಮೂಲಕ ಹಿರಿಯರು ಇದನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಹೇಳುತ್ತಿದ್ದಿರಬಹುದು.
ಹೀಗೆ ನೋಡಿದರೆ, ಹಿರಿಯರು ಹೇಳುತ್ತಿದ್ದ ಪ್ರತಿಯೊಂದು ಮಾತನ್ನೂ ಒಂದೇ ಕಾರಣಕ್ಕೆ ಜೋಡಿಸಲು ಸಾಧ್ಯವಿಲ್ಲ. ಕೆಲವು ಧಾರ್ಮಿಕ ನಂಬಿಕೆಗಳು, ಕೆಲವು ಸಾಮಾಜಿಕ ಪದ್ಧತಿಗಳು ಮತ್ತೆ ಕೆಲವು ಆ ಕಾಲದ ಜೀವನಶೈಲಿಯಿಂದ ಬಂದ ಎಚ್ಚರಿಕೆಗಳು ಆಗಿರಬಹುದು. ಲಕ್ಷ್ಮೀ ದೇವಿ ಬರುವುದಿಲ್ಲ, ಅದೃಷ್ಟ ಹೋಗುತ್ತದೆ ಎನ್ನುವ ನಂಬಿಕೆಗಳಿಗೆ ವೈಜ್ಞಾನಿಕ ಪುರಾವೆ ಇಲ್ಲ. ಆದರೆ, ಈ ಮಾತುಗಳು ಹೇಗೆ ನಮ್ಮ ಮನೆಗಳ ಸಂಪ್ರದಾಯದ ಭಾಗವಾದವು ಎಂಬುದನ್ನು ತಿಳಿದುಕೊಳ್ಳುವುದು ಮಾತ್ರ ನಿಜಕ್ಕೂ ಕುತೂಹಲಕಾರಿಯಾಗಿದೆ, (ಏಜೆನ್ಸೀಸ್).