ಸಾಂದರ್ಭಿಕ ಚಿತ್ರ 
ಧಾರ್ಮಿಕ

ನವರಾತ್ರಿಯ 9 ದಿನವೂ ಒಂದೊಂದು ಶಕ್ತಿ! ದೇವಿಯ ಒಂಬತ್ತು ರೂಪಗಳ ಮಹಿಮೆ ಕುರಿತು ಇಲ್ಲಿದೆ ಮಾಹಿತಿ...Navaratri 2026

ದುಷ್ಟ ಶಕ್ತಿಗಳ ನಾಶ, ಧರ್ಮದ ರಕ್ಷಣೆ ಹಾಗೂ ಒಳಿತಿನ ವಿಜಯವನ್ನು ಸಂಕೇತಿಸುವ ನವರಾತ್ರಿಯ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಮಹತ್ವವಿದೆ. ಹಾಗಾದರೆ, ನವರಾತ್ರಿಯ ಒಂಬತ್ತು ದಿನಗಳಲ್ಲಿ ಯಾವ ದೇವಿಯನ್ನು ಪೂಜಿಸಲಾಗುತ್ತದೆ? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ಏನು? ಈ ಪೂಜೆ ಹಿಂದೆ ಇರುವ ಆಧ್ಯಾತ್ಮಿಕ ಮಹತ್ವವೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Navaratri 2026 : ನವರಾತ್ರಿ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ನವರಾತ್ರಿ ಎಂದರೆ ಶಕ್ತಿ ಸ್ವರೂಪಿಣಿ ದುರ್ಗಾ ದೇವಿಯ ಆರಾಧನೆಗೆ ಮೀಸಲಾದ ಪವಿತ್ರ ಹಬ್ಬ. ಒಂಬತ್ತು ದಿನಗಳು ಆಚರಿಸುವ ಈ ಹಬ್ಬದ ವಿಶೇಷತೆ ಎಂದರೆ ದುರ್ಗೆಯನ್ನು ಒಂಬತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಪ್ರತಿಯೊಂದು ರೂಪವೂ ಒಂದೊಂದು ವಿಶೇಷ ಶಕ್ತಿ, ಗುಣ ಮತ್ತು ಜೀವನದ ಸಂದೇಶವನ್ನು ಸಾರುತ್ತದೆ.

ದುಷ್ಟ ಶಕ್ತಿಗಳ ನಾಶ, ಧರ್ಮದ ರಕ್ಷಣೆ ಹಾಗೂ ಒಳಿತಿನ ವಿಜಯವನ್ನು ಸಂಕೇತಿಸುವ ನವರಾತ್ರಿಯ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಮಹತ್ವವಿದೆ. ಹಾಗಾದರೆ, ನವರಾತ್ರಿಯ ಒಂಬತ್ತು ದಿನಗಳಲ್ಲಿ ಯಾವ ದೇವಿಯನ್ನು ಪೂಜಿಸಲಾಗುತ್ತದೆ? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ಏನು? ಈ ಪೂಜೆ ಹಿಂದೆ ಇರುವ ಆಧ್ಯಾತ್ಮಿಕ ಮಹತ್ವವೇನು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನವರಾತ್ರಿಯ ನವದುರ್ಗೆಯರ ರೂಪಗಳು

ಮೊದಲ ದಿನ – ಶೈಲಪುತ್ರಿ ದೇವಿ

ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆ ಪರ್ವತರಾಜ ಹಿಮವಂತನ ಪುತ್ರಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ದೇವಿಯು ಎತ್ತಿನ ಮೇಲೆ ಕುಳಿತಿದ್ದು, ಒಂದು ಕೈಯಲ್ಲಿ ತ್ರಿಶೂಲ ಮತ್ತು ಮತ್ತೊಂದು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಶೈಲಪುತ್ರಿ ದೇವಿಯು ಪ್ರಕೃತಿ, ಶಕ್ತಿ ಮತ್ತು ಸ್ಥಿರತೆಯ ಸಂಕೇತವಾಗಿದ್ದಾಳೆ. ಜೀವನದಲ್ಲಿ ದೃಢಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಈ ದೇವಿಯ ಆರಾಧನೆ ಮಹತ್ವದ್ದಾಗಿದೆ ಎಂದು ಭಕ್ತರು ನಂಬುತ್ತಾರೆ.

ಎರಡನೇ ದಿನ – ಬ್ರಹ್ಮಚಾರಿಣಿ ದೇವಿ

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ತಪಸ್ಸು, ತಾಳ್ಮೆ ಮತ್ತು ಭಕ್ತಿಯ ಸಂಕೇತವಾಗಿರುವ ಈ ದೇವಿಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಜೀವನದಲ್ಲಿ ಗುರಿ ಸಾಧಿಸಲು ಬೇಕಾದ ಏಕಾಗ್ರತೆ, ಶಿಸ್ತು ಮತ್ತು ಸಹನಶಕ್ತಿಯನ್ನು ಈ ದೇವಿಯ ರೂಪ ಪ್ರತಿನಿಧಿಸುತ್ತದೆ.

ಮೂರನೇ ದಿನ – ಚಂದ್ರಘಂಟಾ ದೇವಿ

ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಹಣೆಯ ಮೇಲಿರುವ ಅರ್ಧಚಂದ್ರವು ಗಂಟೆಯ ಆಕಾರದಲ್ಲಿರುವುದರಿಂದ ದೇವಿಗೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಸಿಂಹದ ಮೇಲೆ ಕುಳಿತಿರುವ ದೇವಿಯು ಧೈರ್ಯ ಮತ್ತು ಶೌರ್ಯದ ಸಂಕೇತವಾಗಿದ್ದಾಳೆ. ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಹಾಗೂ ಸಂಕಷ್ಟಗಳನ್ನು ಎದುರಿಸುವ ಧೈರ್ಯವನ್ನು ಈ ದೇವಿಯ ರೂಪ ಸಾರುತ್ತದೆ.

ನಾಲ್ಕನೇ ದಿನ – ಕೂಷ್ಮಾಂಡಾ ದೇವಿ

ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ದೇವಿಯು ತನ್ನ ದಿವ್ಯ ನಗುವಿನಿಂದ ಬ್ರಹ್ಮಾಂಡಕ್ಕೆ ಬೆಳಕು ನೀಡಿದಳು ಎಂಬ ನಂಬಿಕೆಯಿದೆ. ಆದ್ದರಿಂದ ಈ ದೇವಿಯನ್ನು ಸೃಷ್ಟಿಶಕ್ತಿಯ ಸಂಕೇತವಾಗಿ ಆರಾಧಿಸಲಾಗುತ್ತದೆ. ಆರೋಗ್ಯ, ಉತ್ಸಾಹ, ಸಕಾರಾತ್ಮಕತೆ ಮತ್ತು ಸಮೃದ್ಧಿಗಾಗಿ ಭಕ್ತರು ದೇವಿಯ ಪ್ರಾರ್ಥನೆ ಮಾಡುತ್ತಾರೆ.

ಐದನೇ ದಿನ – ಸ್ಕಂದಮಾತಾ ದೇವಿ

ಐದನೇ ದಿನ ಸ್ಕಂದಮಾತಾ ದೇವಿಯನ್ನು ಆರಾಧಿಸಲಾಗುತ್ತದೆ. ಇವರು ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯನ ತಾಯಿ. ಮಡಿಲಿನಲ್ಲಿ ಮಗುವನ್ನು ಕೂರಿಸಿಕೊಂಡಿರುವ ದೇವಿಯು ತಾಯಿಯ ಪ್ರೀತಿ, ಕರುಣೆ ಮತ್ತು ಮಮತೆಯನ್ನು ಪ್ರತಿನಿಧಿಸುತ್ತಾಳೆ. ಕುಟುಂಬದ ಸುಖ, ಮಕ್ಕಳ ಕ್ಷೇಮ ಮತ್ತು ಮನಸ್ಸಿನ ಶಾಂತಿಗಾಗಿ ಭಕ್ತರು ಈ ದೇವಿಯನ್ನು ಪೂಜಿಸುತ್ತಾರೆ.

ಆರನೇ ದಿನ – ಕಾತ್ಯಾಯನಿ ದೇವಿ

ನವರಾತ್ರಿಯ ಆರನೇ ದಿನ ಕಾತ್ಯಾಯನಿ ದೇವಿಯನ್ನು ಪೂಜಿಸಲಾಗುತ್ತದೆ. ಇವರು ದುಷ್ಟಶಕ್ತಿಗಳನ್ನು ಸಂಹರಿಸುವ ಶಕ್ತಿಶಾಲಿ ರೂಪವೆಂದು ಪ್ರಸಿದ್ಧರಾಗಿದ್ದಾರೆ. ಕೈಗಳಲ್ಲಿ ಆಯುಧಗಳನ್ನು ಹಿಡಿದು ಸಿಂಹದ ಮೇಲೆ ಕುಳಿತಿರುವ ದೇವಿಯು ಧೈರ್ಯ, ನ್ಯಾಯ ಮತ್ತು ವಿಜಯವನ್ನು ಪ್ರತಿನಿಧಿಸುತ್ತಾಳೆ. ಅಡೆತಡೆಗಳನ್ನು ಎದುರಿಸಲು ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸಲು ದೇವಿಯ ಆಶೀರ್ವಾದ ಕೋರಿ ಭಕ್ತರು ಪ್ರಾರ್ಥಿಸುತ್ತಾರೆ.

ಏಳನೇ ದಿನ – ಕಾಳರಾತ್ರಿ ದೇವಿ

ಏಳನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ನವದುರ್ಗೆಯ ಅತ್ಯಂತ ಉಗ್ರ ರೂಪಗಳಲ್ಲಿ ಒಂದಾದ ಈ ದೇವಿಯು ಭಯ, ಅಜ್ಞಾನ ಮತ್ತು ದುಷ್ಟಶಕ್ತಿಗಳ ನಾಶವನ್ನು ಸಂಕೇತಿಸುತ್ತಾಳೆ. ದೇವಿಯ ರೂಪ ಭಯಾನಕವಾಗಿ ಕಂಡರೂ ಭಕ್ತರನ್ನು ರಕ್ಷಿಸುವ ಕರುಣಾಮಯಿ ಎಂದು ನಂಬಲಾಗಿದೆ. ಭಯವನ್ನು ಗೆಲ್ಲುವ ಧೈರ್ಯ ಮತ್ತು ಸಂಕಷ್ಟಗಳನ್ನು ಎದುರಿಸುವ ಮನೋಬಲವನ್ನು ಈ ರೂಪ ಪ್ರತಿನಿಧಿಸುತ್ತದೆ.

ಎಂಟನೇ ದಿನ – ಮಹಾಗೌರಿ ದೇವಿ

ಎಂಟನೇ ದಿನ ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಬಿಳಿಯ ವಸ್ತ್ರಗಳನ್ನು ಧರಿಸಿರುವ ಶಾಂತ ಸ್ವರೂಪದ ದೇವಿಯು ಪವಿತ್ರತೆ, ಶಾಂತಿ ಮತ್ತು ಕರುಣೆಯ ಸಂಕೇತವಾಗಿದ್ದಾಳೆ. ಜೀವನದಲ್ಲಿ ಒಳ್ಳೆಯತನ, ಮನಸ್ಸಿನ ನೆಮ್ಮದಿ ಮತ್ತು ಹೊಸ ಆರಂಭವನ್ನು ಬಯಸುವ ಭಕ್ತರು ದೇವಿಯ ಆರಾಧನೆ ಮಾಡುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಈ ದಿನ ಕನ್ಯಾಪೂಜೆಗೂ ವಿಶೇಷ ಮಹತ್ವವಿದೆ.

ಒಂಬತ್ತನೇ ದಿನ – ಸಿದ್ಧಿದಾತ್ರಿ ದೇವಿ

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಇವರು ಸಿದ್ಧಿ ಮತ್ತು ಆಧ್ಯಾತ್ಮಿಕ ಸಾಧನೆಯ ಸಂಕೇತವಾಗಿದ್ದಾರೆ. ಕಮಲದ ಮೇಲೆ ಆಸೀನಳಾಗಿರುವ ದೇವಿಯು ಭಕ್ತರಿಗೆ ಜ್ಞಾನ, ವಿವೇಕ ಮತ್ತು ಸಾಧನೆಯ ಶಕ್ತಿಯನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆಯಿದೆ. ನವರಾತ್ರಿಯ ಕೊನೆಯ ದಿನ ದೇವಿಯ ಆರಾಧನೆಯ ಮೂಲಕ ಒಂಬತ್ತು ದಿನಗಳ ಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ.

ನವರಾತ್ರಿಯ ಒಂಬತ್ತು ದಿನಗಳ ಸಂದೇಶ

ನವರಾತ್ರಿಯ ಆಚರಣೆಯು ಕೇವಲ ಧಾರ್ಮಿಕ ಸಂಪ್ರದಾಯವಲ್ಲ, ಅದು ನಮ್ಮ ಜೀವನಕ್ಕೆ ಹಲವು ಮೌಲ್ಯಗಳನ್ನು ನೆನಪಿಸುತ್ತದೆ. ಮೊದಲ ದಿನದಿಂದ ಒಂಬತ್ತನೇ ದಿನದವರೆಗೆ ನವದುರ್ಗೆಯ ವಿವಿಧ ರೂಪಗಳನ್ನು ಪೂಜಿಸುವ ಮೂಲಕ ಧೈರ್ಯ, ತಾಳ್ಮೆ, ಏಕಾಗ್ರತೆ, ಪ್ರೀತಿ, ನ್ಯಾಯ, ಶುದ್ಧತೆ ಮತ್ತು ಜ್ಞಾನದಂತಹ ಗುಣಗಳನ್ನು ಗೌರವಿಸಲಾಗುತ್ತದೆ. ಹತ್ತನೇ ದಿನದ ವಿಜಯದಶಮಿಯು ಒಳಿತಿನ ಮೇಲೆ ಕೆಡುಕಿನ ವಿಜಯವನ್ನು ಸಂಕೇತಿಸುತ್ತದೆ. ಆದ್ದರಿಂದ ನವರಾತ್ರಿಯು ಭಕ್ತಿಗೆ ಮಾತ್ರವಲ್ಲದೆ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಜೀವನದಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಳ್ಳುವುದಕ್ಕೂ ಪ್ರೇರಣೆ ನೀಡುವ ಹಬ್ಬವಾಗಿದೆ.