Dipawali celebration : ದೀಪಾವಳಿ ಎಂದರೆ ಬೆಳಕು, ಸಿಹಿತಿಂಡಿ, ಪಟಾಕಿ ಮತ್ತು ಸಂಭ್ರಮ. ಆದರೆ ಭಾರತದ ಹಿಮಾಚಲ ಪ್ರದೇಶದ ಒಂದು ಗ್ರಾಮದಲ್ಲಿ ಮಾತ್ರ ದೀಪಾವಳಿ ದಿನ ಇಡೀ ಊರು ಕತ್ತಲಲ್ಲಿ ಮುಳುಗಿರುತ್ತದೆ. ಮನೆಗಳಲ್ಲಿ ದೀಪಗಳನ್ನು ಹಚ್ಚುವುದಿಲ್ಲ, ಪಟಾಕಿ ಸಿಡಿಸುವುದಿಲ್ಲ, ಹಬ್ಬದ ಸಂಭ್ರಮವೂ ಇರುವುದಿಲ್ಲ. ಅಷ್ಟಕ್ಕೂ ಈ ಗ್ರಾಮದ ಜನರು ದೀಪಾವಳಿಯನ್ನು ಆಚರಿಸದಿರಲು ಕಾರಣವೇನು? ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಸಮ್ಮೂ ಗ್ರಾಮದಲ್ಲಿ ಹಲವು ತಲೆಮಾರುಗಳಿಂದ ಈ ವಿಚಿತ್ರ ಸಂಪ್ರದಾಯ ನಡೆದುಕೊಂಡು ಬಂದಿದೆ. ಸುತ್ತಮುತ್ತಲಿನ ಗ್ರಾಮಗಳು ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದ್ದರೆ, ಈ ಗ್ರಾಮದಲ್ಲಿ ಮಾತ್ರ ದೀಪಾವಳಿ ದಿನ ಸಾಮಾನ್ಯ ದಿನದಂತೆಯೇ ಇರುತ್ತದೆ.
ಗ್ರಾಮದ ಹಿರಿಯರು ಹೇಳುವ ಕಥೆಯ ಪ್ರಕಾರ, ಹಲವು ವರ್ಷಗಳ ಹಿಂದೆ ದೀಪಾವಳಿಯ ಸಂದರ್ಭದಲ್ಲಿ ಗರ್ಭಿಣಿಯೊಬ್ಬಳು ತನ್ನ ತವರು ಮನೆಯಲ್ಲಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಳು. ಇದೇ ವೇಳೆ ರಾಜನ ಸೈನ್ಯದಲ್ಲಿ ಸೈನಿಕನಾಗಿದ್ದ ಆಕೆಯ ಪತಿಯ ಮೃತದೇಹ ಮನೆಗೆ ತರಲಾಯಿತು. ಪತಿಯ ಸಾವಿನ ಸುದ್ದಿ ಕೇಳಿ ಆಕೆ ತೀವ್ರ ಆಘಾತಕ್ಕೊಳಗಾದಳು. ದುಃಖ ತಾಳಲಾರದೆ ಪತಿಯ ಅಂತ್ಯಸಂಸ್ಕಾರದ ಚಿತೆಗೆ ಹಾರಿ ಪ್ರಾಣ ಕಳೆದುಕೊಂಡಳು ಎನ್ನಲಾಗಿದೆ. ಸಾಯುವ ಮುನ್ನ ಆಕೆ ಗ್ರಾಮಸ್ಥರಿಗೆ ಶಾಪ ನೀಡಿದ್ದಳು ಎಂಬುದು ಸ್ಥಳೀಯರ ನಂಬಿಕೆ. ಇನ್ನು ಮುಂದೆ ಈ ಗ್ರಾಮದಲ್ಲಿ ಯಾರೂ ದೀಪಾವಳಿ ಆಚರಿಸಬಾರದು ಎಂಬ ಶಾಪದ ಭಯವೇ ಇಂದಿಗೂ ಈ ಸಂಪ್ರದಾಯ ಮುಂದುವರಿಯಲು ಕಾರಣವಾಗಿದೆ.
ಗ್ರಾಮಸ್ಥರ ನಂಬಿಕೆಯ ಪ್ರಕಾರ, ಯಾರಾದರೂ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರೆ ಕುಟುಂಬದಲ್ಲಿ ಸಾವು ಅಥವಾ ಯಾವುದಾದರೂ ಅನಾಹುತ ಸಂಭವಿಸಬಹುದು. ಹೀಗಾಗಿ ಪಟಾಕಿ ಸಿಡಿಸುವುದು, ವಿಶೇಷ ಅಡುಗೆ ಮಾಡುವುದು ಮತ್ತು ಅದ್ಧೂರಿಯಾಗಿ ಹಬ್ಬ ಆಚರಿಸುವುದನ್ನು ಜನರು ತಪ್ಪಿಸುತ್ತಾರೆ. ಕೆಲವರು ಮನೆಯಲ್ಲಿಯೇ ಉಳಿಯುತ್ತಾರೆ. ಸತಿ ಎಂದು ಪೂಜಿಸಲ್ಪಡುವ ಮಹಿಳೆಯ ಸ್ಮರಣೆಗೆ ದೀಪ ಹಚ್ಚುವ ಪದ್ಧತಿಯೂ ಇದೆ.
ಈ ನಂಬಿಕೆಯನ್ನು ಬದಲಾಯಿಸಲು ಗ್ರಾಮದಲ್ಲಿ ಹಲವು ಬಾರಿ ಹೋಮ, ಹವನ ಮತ್ತು ಯಜ್ಞಗಳನ್ನು ನಡೆಸಲಾಗಿದೆ ಎನ್ನಲಾಗಿದೆ. ಆದರೂ ಶಾಪದ ಭಯ ಮಾತ್ರ ಜನರ ಮನಸ್ಸಿನಿಂದ ದೂರವಾಗಿಲ್ಲ. ಇಂದಿನ ಯುವ ಪೀಳಿಗೆಯ ಕೆಲವರಲ್ಲಿ ಈ ಸಂಪ್ರದಾಯ ಬದಲಾಗಿ ಮತ್ತೆ ದೀಪಾವಳಿ ಆಚರಿಸುವ ಆಸೆಯೂ ಇದೆ.
ಬೆಳಕಿನ ಹಬ್ಬದ ದಿನವೇ ಒಂದು ಗ್ರಾಮ ಕತ್ತಲಲ್ಲಿ ಉಳಿಯುವುದು ನಿಜಕ್ಕೂ ಅಚ್ಚರಿಯ ಸಂಗತಿ. ಆದರೆ ಈ ಸಂಪ್ರದಾಯದ ಹಿಂದೆ ಅಡಗಿರುವುದು ಕೇವಲ ವಿಚಿತ್ರ ಆಚರಣೆಯಲ್ಲ ಹಲವು ತಲೆಮಾರುಗಳಿಂದ ಜನರ ಮನಸ್ಸಿನಲ್ಲಿ ಉಳಿದುಕೊಂಡಿರುವ ಒಂದು ದುರಂತದ ನೆನಪು ಮತ್ತು ಸ್ಥಳೀಯ ನಂಬಿಕೆ.