ಅಂಕಣ

ಹಸ್ತಕ್ಷೇಪಮುಕ್ತ ಸಹಕಾರ, ಸಮಸ್ಯೆಗಳಿಗೆ ಪರಿಹಾರ: ವಿಜಯವಾಣಿ ಸಂವಾದದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಸಂಕಲ್ಪ

ಬೆಂಗಳೂರು: ಆಮೂಲಾಗ್ರ ಸುಧಾರಣೆ, ಸುಸ್ಥಿರ ಅಭಿವೃದ್ಧಿ ಜತೆಗೆ ಸೇವಾ ಮನೋಭಾವ ವೃದ್ಧಿಗೆ ಸಹಕಾರ ರಂಗದ ಪಾತ್ರ ದೊಡ್ಡದಾಗಿದ್ದು, ಇಲಾಖೆ ಹಸ್ತಕ್ಷೇಪಮುಕ್ತ ಸಹಕಾರ ಸಾಕಾರಗೊಳಿಸುವುದು. -ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ‘ವಿಜಯವಾಣಿ’ ಸಂವಾದದಲ್ಲಿ ವ್ಯಕ್ತಪಡಿಸಿದ ದೃಢ ನಿಲುವಿದು. ಸರ್ಕಾರ, ಸಹಕಾರ ಸಚಿವರು ಬದಲಾಗಲೆಲ್ಲ ಸಹಕಾರ ಕಾಯ್ದೆಗೆ ತಿದ್ದುಪಡಿಗಳಾಗುತ್ತವೆ. ಇದರಿಂದ ಸಹಕಾರರಂಗದಲ್ಲಿ ಅಸ್ಥಿರತೆ, ಸಹಕಾರಿ ಧುರೀಣರಲ್ಲಿ ನಿರುತ್ಸಾಹ ಮೂಡುತ್ತದೆಂಬ ಆತಂಕ ಬೇಡ. ಸಮಸ್ಯೆಗಳಿಗೆ ಪರಿಹಾರ ಹಾಗೂ ನ್ಯೂನತೆ ಹೋಗಲಾಡಿಸಲೆಂದು ತಿದ್ದುಪಡಿ ತರಲಾಗಿದೆ. ಇದಕ್ಕೂ ಮುನ್ನ ಕ್ಷೇತ್ರದ ಪ್ರತಿಯೊಂದು ವಿಭಾಗದಲ್ಲಿ ಇರುವವರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದೂ ಸಮಜಾಯಿಷಿ ನೀಡಿದರು.

ಮಹತ್ವದ ನಿರ್ಧಾರಗಳು: ಸಹಕಾರ ಸಂಸ್ಥೆಯ ನಿರ್ದೇಶಕರು ಮೂರು ಸಭೆಗಳಿಗೆ ಹಾಜರಿ ಕಡ್ಡಾಯವೆಂಬ ನಿರ್ಬಂಧ ತೆಗೆದು ಹಾಕಿ, ಯಾವುದಾದರೂ ಎರಡು ಸಭೆಗೆ ಹಾಜರಿ ಅವಕಾಶ ಕಲ್ಪಿಸಲಾಗಿದೆ. ಸಾಲ ಪಡೆದು ಮರುಪಾವತಿ, ಸಣ್ಣ ಪ್ರಮಾಣದ ಠೇವಣಿಯಿಟ್ಟರೂ ಹಣಕಾಸಿನ ವ್ಯವಹಾರವೆಂದು ಪರಿಗಣಿಸಲಾಗಿದ್ದು, ಸಹಕಾರಿ ಸದಸ್ಯರ ಮೇಲಿನ ಹೊರೆ ಇಳಿದಿದೆ. ಚುನಾಯಿತ ನಿರ್ದೇಶಕರಲ್ಲಿ ಯಾರಾದರೂ ನಿಧನ, ಮತ್ತಿನ್ಯಾವುದೂ ಕಾರಣದಿಂದ ತೆರವಾಗಿ ಅವಧಿ ಎರಡೂವರೆ ವರ್ಷಕ್ಕಿಂತ ಮಿಕ್ಕಿದ್ದರೆ ಚುನಾವಣೆ ನಡೆಸಬೇಕು. ಈ ಪ್ರಕ್ರಿಯೆ ಮುಗಿಯುವ ತನಕ ನಾಮಕರಣದ ಅಧಿಕಾರ ಆಯಾ ಮಂಡಳಿಗೆ ದಕ್ಕಿದೆ. ಸರ್ಕಾರ ಮತ್ತು ಇಲಾಖೆ ಹಸ್ತಕ್ಷೇಪದಿಂದ ಮುಕ್ತಗೊಳಿಸುವುದು ಸೌಹಾರ್ದ ಕಾಯ್ದೆ ಮುಖ್ಯ ಉದ್ದೇಶವಾಗಿದ್ದು, ಅದಕ್ಕೆ ಪೂರಕ ಕ್ರಮವಹಿಸಿ ಸದೃಢ ಬೆಳವಣಿಗೆಗೆ ಒತ್ತಾಸೆ ನೀಡಲಾಗಿದೆ. ಯಾವುದೇ ಸ್ವರೂಪದ ದೂರು, ಆರೋಪ ಇದ್ದರೂ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಹಾಗೂ ಎಂಡಿ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲಿದ್ದಾರೆ. ಸಂಘಗಳ ಯಾವುದೇ ಸಿಬ್ಬಂದಿ ಚುನಾವಣೆಗೆ ಸ್ಪರ್ಧೆ ಹಾಗೂ ವೋಟ್ ಹಾಕುವುದಕ್ಕೂ ನಿರ್ಬಂಧ ವಿಧಿಸಿ, ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಎಸ್.ಟಿ.ಸೋಮಶೇಖರ್ ವಿವರಿಸಿದರು.

ಸಾಲ ಚುಕ್ತಾ ನಿಯಮ ಸೂಕ್ತ: ಸಾರ್ವತ್ರಿಕ ಚುನಾವಣೆಗೆ ಸ್ಪರ್ಧೆ ಬಯಸುವವರು ಆದಾಯ, ಆಸ್ತಿ, ನೀರಿನ ಕರ ಮತ್ತು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಅದೇ ರೀತಿ ಸಹಕಾರ ಸಾಲ ಚುಕ್ತಾ ಮಾಡಿರಬೇಕು ಎಂಬ ನಿಯಮ ಜಾರಿ ಸೂಕ್ತವಾಗಿದ್ದು, ಈ ಕಾಯ್ದೆಗೆ ತಿದ್ದುಪಡಿ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಸಹಕಾರ ಸಾಲ ಬೇಬಾಕಿ ಕಡ್ಡಾಯಗೊಳಿಸಿದರೆ ಪ್ಯಾಕ್ಸ್​ನಿಂದನಿಂದ ಅಪೆಕ್ಸ್​ವರೆಗೂ ಎಲ್ಲ ಸಂಸ್ಥೆಗಳು ನಷ್ಟದಿಂದ ಹೊರಬರಲಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಅರಿವು ಮೂಲ ಮಂತ್ರ: ಜನ-ಸಾಮಾನ್ಯರಲ್ಲಿ ಅರಿವು ಮೂಡಿಸುವುದು ಸಹಕಾರ ಸಪ್ತಾಹದ ಮೂಲಮಂತ್ರ. ಪ್ರತಿ ವರ್ಷ ನವೆಂಬರ್ 14-21ರವರೆಗೆ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ. ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿ ಕಾರಣ ಈ ಬಾರಿ ಮುಂದೂಡಿಕೆಯಾಗಿದೆ ಎಂದು ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು. ರಾಜ್ಯಮಟ್ಟದ ಉದ್ಘಾಟನಾ ಮತ್ತು ಸಮಾರೋಪ, ಉಳಿದ 5 ದಿನ ತಲಾ ಒಂದು ಜಿಲ್ಲೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ, ಆಯಾ ಜಿಲ್ಲಾ ಸಹಕಾರ ಯೂನಿಯನ್​ಗಳು ಏಳು ದಿನ ವಿವಿಧ ಕಾರ್ಯಕ್ರಮ. ಸಹಕಾರ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ, ಅನುಪಮ ಸೇವೆ ಸಲ್ಲಿಸಿದ ಸಹಕಾರಿ ಧುರೀಣರನ್ನು ಗುರುತಿಸಿ ‘ಸಹಕಾರ ರತ್ನ’ ಪ್ರಶಸ್ತಿ ಕೊಡಮಾಡ ಪ್ರೋತ್ಸಾಹಿಸಲಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ರದ್ದು ಚಿಂತನೆ: ಸಹಕಾರ ರಂಗದಲ್ಲಿ ಹೆಚ್ಚೆಚ್ಚು ಸದಸ್ಯರ ಸೇರ್ಪಡೆ, ಗ್ರಾಮೀಣ ಆರ್ಥಿಕ ವ್ಯವಸ್ಥೆ ಬಲವರ್ಧನೆಗಾಗಿ ಜಿಲ್ಲಾ ಸಹಕಾರ ಮಧ್ಯವರ್ತಿ (ಡಿಸಿಸಿ) ಬ್ಯಾಂಕ್​ಗಳನ್ನು ರದ್ದುಪಡಿಸಿ, ಪ್ಯಾಕ್ಸ್ ಮತ್ತು ಅಪೆಕ್ಸ್​ಗಳು ಸಾಕು ಎಂಬ ಚಿಂತನೆ ಕೇಂದ್ರಮಟ್ಟದಲ್ಲಿ ನಡೆದಿರುವುದು ನಿಜವೆಂದು ಎಸ್.ಟಿ.ಸೋಮಶೇಖರ್ ಬಹಿರಂಗಪಡಿಸಿದರು. ಈಗಾಗಲೆ ಗುಜರಾತ್​ನಲ್ಲಿ ಡಿಸಿಸಿ ಬ್ಯಾಂಕ್​ಗಳ ರದ್ದು ಪ್ರಕ್ರಿಯೆ ಚಾಲ್ತಿಯಲ್ಲಿರುವ ಮಾಹಿತಿ ಲಭ್ಯವಾಗಿದೆ. ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್​ಗಳ ಜಾಲ ವ್ಯಾಪಕ ಹಾಗೂ ಬಲಿಷ್ಠವಾಗಿದ್ದು, ರದ್ದು ಮಾಡುವ ಚಿಂತನೆಯಿಲ್ಲ ಎಂದೂ ಸ್ಪಷ್ಟಪಡಿಸಿದರು.

ಸುಧಾರಣೆಯತ್ತ ಹೆಜ್ಜೆ

  • ಆತ್ಮನಿರ್ಭರ ಭಾರತ ಯೋಜನೆಯಡಿ 384 ಕೋಟಿ ರೂ. ಲಭ್ಯವಾಗಿದ್ದು, ಪ್ಯಾಕ್ಸ್​ಗಳಿಗೆ ತಲಾ 2 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
  • ಸಹಕಾರ ಚಳವಳಿ ಅರಿವು, ಈ ಕ್ಷೇತ್ರಕ್ಕೆ ಹೊಸ ಪೀಳಿಗೆಯನ್ನು ಆಕರ್ಷಿಸುವ ಉದ್ದೇಶದಿಂದ ಪಠ್ಯ ಕ್ರಮದಲ್ಲಿ ಸಹಕಾರ ವಿಷಯ ಸೇರ್ಪಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.
  • ನಬಾರ್ಡ್ ಮರು ಹಣಕಾಸು ನೆರವಿನಡಿ 30 ಲಕ್ಷ ರೈತರಿಗೆ 20,868 ಕೋಟಿ ರೂ. ಸಾಲ ವಿತರಿಸುವ ಗುರಿ
  • ರಾಜ್ಯ ಭೂಅಭಿವೃದ್ಧಿ ಬ್ಯಾಂಕ್​ಗೆ ಕೊನೇ ಅವಕಾಶವಾಗಿ ಸರ್ಕಾರದಿಂದ ಸಹಾಯ
  • ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್​ಗಳಿಗೆ ಶೇ.80 ಸಾಲ ವಸೂಲಿ ಷರತ್ತು ವಿಧಿಸಿ ಬ್ಯಾಂಕ್ ಸಾಲ ಎತ್ತುವಳಿಗೆ ಸರ್ಕಾರದ ಖಾತರಿ
  • ರೋಗಗ್ರಸ್ತ ಕಲಬುರಗಿ, ಮೈಸೂರು, ಮಂಡ್ಯ ಡಿಸಿಸಿ ಬ್ಯಾಂಕ್​ಗಳ ಪುನಶ್ಚೇತನ. ತುಮಕೂರು ಮತ್ತು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ಗಳ ದೂರು ಗಂಭೀರ ಪರಿಗಣನೆ
  • 260 ಸಹಕಾರ ಬ್ಯಾಂಕ್​ಗಳಲ್ಲಿ ಏಕರೂಪ ಬಡ್ಡಿ ದರಕ್ಕೆ ಪ್ರಯತ್ನ.