ಅಂಕಣ

ಯೂನಿಕಾರ್ನ್ ಹವಾ: ನವ ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳು

ನವ ಭಾರತದ ನವೋದ್ಯಮಗಳು ಪ್ರವರ್ಧಮಾನಕ್ಕೆ ಬರತೊಡಗಿವೆ. ದಶಕಗಳ ಹಿಂದೆ ನವೋದ್ಯಮಗಳು ಎಂದರೆ ಬೆರಳೆಣಿಕೆಯಲ್ಲಿದ್ದವು. ಕಳೆದ 10 ವರ್ಷದ ಅವಧಿಯಲ್ಲಿ 84 ನವೋದ್ಯಮಗಳಷ್ಟೇ ಯೂನಿಕಾರ್ನ್ ಕ್ಲಬ್ ಸೇರಿದ್ದವು. ಆದರೆ ಕಳೆದ ಒಂದೇ ವರ್ಷ 46 ನವೋದ್ಯಮ ಈ ಕ್ಲಬ್ ಸೇರಿದ್ದು ವಿಶೇಷ.

| ಉಮೇಶ್ ಕುಮಾರ್ ಶಿಮ್ಲಡ್ಕ

ಭಾರತದಲ್ಲಿ ಈಗ ನವೋದ್ಯಮಗಳ ಸುವರ್ಣಯುಗ ಆರಂಭವಾಗಿದೆ. ಎಲ್ಲ ಸೆಕ್ಸರ್​ಗಳಲ್ಲೂ ನವೋದ್ಯಮಗಳ ಸ್ಥಾಪನೆ ಆಗತೊಡಗಿದೆ. ಕಳೆದ 12 ತಿಂಗಳ ಅವಧಿಯಲ್ಲಿ 46 ನವೋದ್ಯಮಗಳು ಯೂನಿಕಾರ್ನ್ ಕ್ಲಬ್ ಸೇರ್ಪಡೆ ಆಗಿವೆ. ಇನ್ನೂ ವಿಶೇಷ ಎಂದರೆ, 2021ರ ಡಿ.4ರ ತನಕದ ಲೆಕ್ಕಾಚಾರ ಪ್ರಕಾರ 38.4 ಶತಕೋಟಿ ಡಾಲರ್ ಫಂಡ್ ಅನ್ನು ಈ ನವೋದ್ಯಮಗಳು ತಮ್ಮಲ್ಲಿ ಹೂಡಿಕೆ ಮಾಡಿಸಿಕೊಂಡಿವೆ. ಭಾರತದ ನವೋದ್ಯಮಗಳ ಪಾಲಿಗೆ 2021 ಎಂಬುದು ನವೋದ್ಯಮಗಳ ವರ್ಷ.

ಮೊದಲ ಹೆಲ್ತ್​ಟೆಕ್, ಸೋಷಿಯಲ್ ಕಾಮರ್ಸ್, ಇ-ಫಾರ್ಮಸಿ ಯೂನಿಕಾರ್ನ್​ಗಳು ಕಳೆದ ವರ್ಷವೇ ಹುಟ್ಟಿಕೊಂಡವು. ಪರಿಣತರ ಮುನ್ನೋಟ ವರದಿಗಳು ಭಾರತದ ನವೋದ್ಯಮಗಳು 2023ಕ್ಕೆ ಈ ಸಾಧನೆ ಮಾಡಲಿವೆ ಎಂದು ಹೇಳುತ್ತಿವೆ. ಆದರೂ ಭಾರತದ 82 ಟೆಕ್ ನವೋದ್ಯಮಗಳು ಇದುವರೆಗೆ ಯೂನಿಕಾರ್ನ್ ಕ್ಲಬ್ ಸೇರಿವೆ. ಇದೇ ವೇಗದಲ್ಲಿ ಮುನ್ನಡೆದರೆ, ಈ ವರ್ಷವೇ ಭಾರತದ 100 ನವೋದ್ಯಮಗಳು ಯೂನಿಕಾರ್ನ್ ಕ್ಲಬ್​ನಲ್ಲಿ ಕಾಣಿಸಿಕೊಳ್ಳಲಿವೆ. ಐಎನ್​ಸಿ42 ಮಾಹಿತಿ ಪ್ರಕಾರ, ಭಾರತದಲ್ಲಿ ಕಳೆದ ವರ್ಷ ಯೂನಿಕಾರ್ನ್ ಕ್ಲಬ್ ಸೇರಿದ ನವೋದ್ಯಮಗಳ ವಿವರ ಹೀಗಿದೆ - ವಿಮಾ ಕಂಪನಿ ಡಿಜಿಟ್ (ಜನವರಿ), ಇನ್ನೋವೇಸರ್, ಇನ್​ಫ್ರಾ ಮಾರ್ಕೆಟ್(ಫೆಬ್ರವರಿ), ಚಾರ್ಜ್​ಬೀ, ಕ್ರೆಡ್, ಗ್ರೋವ್, ಶೇರ್​ಚಾಟ್, ಗಪ್​ಶುಪ್, ಮೀಷೊ, ಫಾಮರ್್​ಈಸಿ, ಅರ್ಬನ್ ಕಂಪನಿ (ಏಪ್ರಿಲ್), ಝೆಟಾ, ಮೊಗ್ಲಿಕ್ಸ್ (ಮೇ), ಬ್ರೌಸರ್​ಸ್ಟಾಕ್ (ಜೂನ್), ಬ್ಲಾ್ಯಕ್ ಬಕ್, ಆಫ್​ಬಿಜಿನೆಸ್, ಡ್ರೂಮ್ (ಜುಲೈ), ಭಾರತ್​ಪೇ, ಇರುಡಿಟಸ್ ಎಕ್ಸಿಕ್ಯೂಟಿವ್ ಎಜುಕೇಶನ್, ಕಾಯಿನ್ ಡಿಸಿಎಕ್ಸ್, ಅಪ್​ಗ್ರಾಡ್, ಝೆಟ್​ರೆಕ್, ಗ್ರೋಫರ್ಸ್, ಮೈಂಡ್ ಟಿಕಲ್ (ಆಗಸ್ಟ್), ವೇದಾಂತು, ಅಪ್ನಾ, ಎಂಪಿಎಲ್ (ಮೊಬೈಲ್ ಪ್ರೀಮಿಯರ್ ಲೀಗ್) (ಸೆಪ್ಟೆಂಬರ್), ಕಾಯಿನ್​ಸ್ವಿಚ್ ಕುಬೇರ್, ರೆಬೆಲ್ ಫುಡ್ಸ್, ಲಿಸಿಯಸ್, ಮೊಬಿಕ್ವಿಕ್, ಕಾರ್​ದೇಖೋ, ಎಸಿಕೆಒ (ಅಕ್ಟೋಬರ್), ಮೈಗ್ಲಾಮ್ ಕ್ಯೂರ್​ಫಿಟ್, ಸ್ಪಿನ್ನಿ, ಮೆನ್ಸಾ, ನೋಬ್ರೋಕರ್, ಸ್ಲೆ ೖಸ್ (ನವೆಂಬರ್), ಪ್ರಿಸ್ಟನ್ ಕೇರ್, ಗ್ಲೋಬಲ್​ಬೀಸ್, ಮಾಮಾಅರ್ಥ್ (ಡಿಸೆಂಬರ್).

ಯೂನಿಕಾರ್ನ್ ಎಂದರೆ..: ಯೂನಿಕಾರ್ನ್ ಎಂದರೆ ನಿಘಂಟಿನಲ್ಲಿ ಏಕಶೃಂಗಿ ಅಥವಾ ಒಕ್ಕೊಂಬಿ ಎಂಬ ಅರ್ಥವಿದೆ. ಆದರೆ ಈ ಪದವನ್ನು ವೆಂಚರ್ ಕ್ಯಾಪಿಟಲ್ ಇಂಡಸ್ಟ್ರಿ (ಉದ್ಯಮ ಬಂಡವಾಳ ಕೈಗಾರಿಕೆ)ಯಲ್ಲಿ 100 ಕೋಟಿ ರೂಪಾಯಿ ಮೌಲ್ಯ ತಲುಪಿದ ಖಾಸಗಿ ಮಾಲೀಕತ್ವದ ನವೋದ್ಯಮ ಕಂಪನಿ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಕೌಬಾಯ್ ವೆಂಚರ್ಸ್​ನ ಸಂಸ್ಥಾಪಕ ಐಲೀನ್ ಲೀ ಎಂಬುವವರು 2013ರಲ್ಲಿ ಮೊದಲ ಸಲ ‘ಯೂನಿಕಾರ್ನ್’ ಪದವನ್ನು ಇದಕ್ಕಾಗಿ ಬಳಸಿದರು. ಆ ವರ್ಷ 39 ನವೋದ್ಯಮಗಳು 100 ಕೋಟಿ ಡಾಲರ್​ಗೂ ಅಧಿಕ ಮೌಲ್ಯ ತಲುಪಿದ್ದವು.

ಬೆಂಗಳೂರು ದೇಶಕ್ಕೆ ನಂ.1: ದೇಶದ ನವೋದ್ಯಮಗಳಿಗೆ ಆಶ್ರಯ ಒದಗಿಸುತ್ತಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ ದಲ್ಲಿದೆ. ಜಾಗತಿಕ ಮಟ್ಟದಲ್ಲಿ 7ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 35 ನವೋದ್ಯಮಗಳಿದ್ದು, ಈ ಪೈಕಿ 18 ಯೂನಿಕಾರ್ನ್ ಕಂಪನಿಗಳಾಗಿವೆ. ದೇಶದ ನಗರ ಗಳ ಪಟ್ಟಿಯಲ್ಲಿ ದೆಹಲಿ 2ನೇ ಸ್ಥಾನದಲ್ಲಿದ್ದು 13 ಯೂನಿಕಾರ್ನ್, ಮುಂಬೈ 3ನೇ ಸ್ಥಾನದಲ್ಲಿ 11 ಕಂಪನಿಗಳನ್ನು ಕಳೆದ ವರ್ಷ ಹೊಂದಿವೆ.

ಜಗತ್ತಿನಲ್ಲಿ ಭಾರತ ನಂ.3: ಹರೂನ್ ರೀಸರ್ಚ್ ಇನ್​ಸ್ಟಿಟ್ಯೂಟ್ ಡಿ.22ರಂದು ಬಿಡುಗಡೆ ಮಾಡಿದ ಜಾಗತಿಕ ಯೂನಿಕಾರ್ನ್ ಪಟ್ಟಿಯಲ್ಲಿ ಭಾರತದ 33 ಯೂನಿ ಕಾರ್ನ್​ಗಳು ಸೇರಿವೆ. ಇದರೊಂದಿಗೆ ಒಟ್ಟು 54 ಯೂನಿಕಾರ್ನ್​ಗಳು ಭಾರತದ ಪಟ್ಟಿಯಲ್ಲಿ ಅಸ್ತಿತ್ವದಲ್ಲಿವೆ. 2020ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಬ್ರಿಟನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದೆ. ಬ್ರಿಟನ್​ನ 14 ನವೋದ್ಯಮಗಳಷ್ಟೇ ಈ ಸಲ ಯೂನಿಕಾರ್ನ್ ಪಟ್ಟಿ ಸೇರಿದ್ದು, ಒಟ್ಟು 39 ಯೂನಿಕಾರ್ನ್​ಗಳಾಗಿವೆ. ಭಾರತ ಬಿಟ್ಟು ಹೊರದೇಶದಲ್ಲೂ ಭಾರತೀಯರು ಯೂನಿಕಾರ್ನ್ ನವೋದ್ಯಮಗಳ ಸ್ಥಾಪಿಸಿದ್ದಾರೆ. ವಿಶೇಷವಾಗಿ ಸಿಲಿಕಾನ್ ವ್ಯಾಲಿಯಲ್ಲಿ ಇವುಗಳ ಸ್ಥಾಪನೆ ಆಗಿದೆ. ಅವುಗಳ ಸಂಖ್ಯೆ 65. ಹೀಗೆ ಭಾರತೀಯರು ಸ್ಥಾಪಿಸಿದ ಒಟ್ಟು ನವೋದ್ಯಮಗಳ ಸಂಖ್ಯೆ 119.

ಅಮೆರಿಕದಲ್ಲಿ 90 ಭಾರತೀಯ ಸಂಸ್ಥಾಪಕರು: ಅಮೆರಿಕದಲ್ಲಿ 500 ಯೂನಿಕಾರ್ನ್ ಕಂಪನಿಗಳ 1,078 ಸಂಸ್ಥಾಪಕರ ಪೈಕಿ 90 ಭಾರತೀಯರು. ಅದೇ ರೀತಿ ಶೇಕಡ 44 ಸಂಸ್ಥಾಪಕರು ಅಮೆರಿಕದಲ್ಲಿ ಜನಿಸಿದವರಲ್ಲ ಎಂಬ ಕುತೂಹಲಕಾರಿ ಅಂಶವನ್ನು ಸ್ಟಾ್ಯಂಡ್​ಫೋರ್ಡ್ ಯೂನಿವರ್ಸಿಟಿಯ ಗ್ರಾಜುವೇಟ್ ಸ್ಕೂಲ್ ಆಫ್ ಬಿಜಿನೆಸ್​ನ ಫೈನಾನ್ಸ್ ಪ್ರೊಫೆಸರ್ ಐಲ್ಯಾಎ ಸ್ಟ್ರೆಬುಲೇವ್ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಜಗತ್ತಿನ ಟಾಪ್: ಜಾಗತಿಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೈಟ್ ಡ್ಯಾನ್ಸ್ 350 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಅಗ್ರಸ್ಥಾನಿಯಾಗಿದೆ. ಆಂಟ್ ಗ್ರೂಪ್ 150 ಶತಕೋಟಿ ಡಾಲರ್, ಸ್ಪೇಸ್​ಎಕ್ಸ್ 100 ಶತಕೋಟಿ ಡಾಲರ್, ಫಿಂಚ್ ಸ್ಟ್ರೈಪ್ 95 ಶತಕೋಟಿ ಡಾಲರ್, ಕ್ಲಾರ್ನಾ 46 ಶತಕೋಟಿ ಡಾಲರ್, ಕ್ಯಾನ್ವಾ 40 ಶತಕೋಟಿ ಡಾಲರ್, ಇನ್​ಸ್ಟಾಕಾರ್ಟ್ 39 ಶತಕೋಟಿ ಡಾಲರ್, ಡಾಟಾಬ್ರಿಕ್ಸ್ 38 ಶತಕೋಟಿ ಡಾಲರ್, ಕೈನಿಯೋ 34 ಶತಕೋಟಿ ಡಾಲರ್, ರೆವೋಲ್ಟ್ 33 ಶತಕೋಟಿ ಡಾಲರ್ ಮೌಲ್ಯ ಹೊಂದಿ ನಂತರದ ಸ್ಥಾನಗಳಲ್ಲಿವೆ.