ಅಂಕಣ

ಬಣ್ಣದ ಹತ್ತಿಗೆ ಭಾರಿ ಬೇಡಿಕೆ; ಧಾರವಾಡ ಕೃಷಿ ವಿವಿಯ 2 ದಶಕದ ಶ್ರಮ ಸಾರ್ಥಕ

ಸಾಮಾನ್ಯವಾಗಿ ಎಲ್ಲ ಕಡೆ ಸಿಗೋದು ಬಿಳಿ ಹತ್ತಿ ಮಾತ್ರ. ಇದನ್ನು ಬಣ್ಣದ ಬಟ್ಟೆ ಮಾಡಿಕೊಳ್ಳಬೇಕಾದರೆ ಬಿಳಿ ಹತ್ತಿಗೆ ರಾಸಾಯನಿಕ ಬಣ್ಣ ಸೇರುವುದು ಅನಿವಾರ್ಯ. ಆದರೆ, ಧಾರವಾಡದ ಕೃಷಿ ವಿಶ್ವವಿದ್ಯಾಲಯ 25 ವರ್ಷಗಳ ಹಿಂದೆ ನೈಸರ್ಗಿಕವಾದ ಎರಡು ಬಣ್ಣದ ಹತ್ತಿ ತಳಿಗಳನ್ನು ಸಂಶೋಧಿಸಿತ್ತು. ಈ ಹತ್ತಿ ಬೆಳೆಯುತ್ತಲೇ ನೈಸರ್ಗಿಕ ಬಣ್ಣ ಹೊಂದುವಂಥದ್ದು. ಈ ತಳಿ ಸಂಶೋಧನೆಯಾದ ಎರಡು ದಶಕಗಳ ಬಳಿಕ ಈಗ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ.

| ಡಿ.ವಿ. ಕಮ್ಮಾರ್ ಧಾರವಾಡ

ಸುಮಾರು 25 ವರ್ಷಗಳ ಹಿಂದೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಿರಿಯ ತಳಿ ವಿಜ್ಞಾನಿ ಡಾ. ಬಿ.ಎಂ. ಖಾದಿ ಎಂಬುವರು ಸಂಶೋಧನೆ ಮಾಡಿ ಅಭಿವೃದ್ಧಿಪಡಿಸಿದ ಹತ್ತಿಯೇ ‘ಡಿಡಿಸಿಸಿ 1 (ಧಾರವಾಡ ದೇಸಿ ಕಲರ್ ಕಾಟನ್)’. ಕಂದು ಹಾಗೂ ತಿಳಿ ಹಸಿರು ಬಣ್ಣದ ಹತ್ತಿ ತಳಿ ಇದಾಗಿದ್ದು, ವಿಶ್ವಮನ್ನಣೆ ಪಡೆಯಲು ಸಿದ್ಧವಾಗಿದೆ. ಈ ತಳಿ ಸಂಶೋಧನೆಯಾದ ಬಳಿಕ ಕೃಷಿ ವಿವಿಯ ಹೆಬ್ಬಳ್ಳಿ ಫಾಮರ್್​ನಲ್ಲಿ ಹಾಗೂ ಉಪ್ಪಿನ ಬೆಟಗೇರಿ ಫಾಮರ್್​ನಲ್ಲಿ ಮಾತ್ರ ಬೆಳೆಸಿಕೊಂಡು ಬಂದಿದ್ದರು. ಈಗ ಬೆಂಗಳೂರಿನಲ್ಲಿರೋ ರಜಿಸ್ಟ್ರೀ ಆಫ್ ಸಾರೀಸ್ ಎನ್ನುವ ಸಂಸ್ಥೆ ಈ ಬಣ್ಣದ ಹತ್ತಿಯನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸಲು ಕೃಷಿ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಸಂಸ್ಥೆಗೆ 3 ಲಕ್ಷ ರೂ.ಗೆ 25 ಕೆಜಿ ಬೀಜವನ್ನು ಕೊಟ್ಟು ಗರಿಷ್ಠ 5 ವರ್ಷದಲ್ಲಿ ಈ ಬಣ್ಣದ ಹತ್ತಿ ಬೆಳೆಯಲು ಕೃಷಿ ವಿವಿ ಅನುಮತಿ ನೀಡಿದ್ದು, ಒಟ್ಟು ಇಳುವರಿಯಲ್ಲಿ ಮುಂದಿನ ವರ್ಷಕ್ಕೆ ಅಗತ್ಯವುಳ್ಳ ಬೀಜ ಇಟ್ಟುಕೊಂಡು ಉಳಿದ ಬೀಜವನ್ನು ವಿಶ್ವವಿದ್ಯಾಲಯಕ್ಕೆ ಮರಳಿಸುವ ಷರತ್ತು ಒಡಂಬಡಿಕೆಯಲ್ಲಿದೆ. ಈ ವಿಶೇಷ ಹತ್ತಿಯನ್ನು ವಿಶ್ವ ಮಾರುಕಟ್ಟೆಯವರೆಗೂ ಕೊಂಡೊಯ್ಯುವಲ್ಲಿ ಧಾರವಾಡ ಕೃಷಿ ವಿವಿಯ ಎರಡು ದಶಕದ ಅವಿರತ ಶ್ರಮ ಅಡಗಿದೆ. ಏಕೆಂದರೆ ಆರಂಭದಿಂದ ಇದಕ್ಕೆ ವಾಣಿಜ್ಯೀಕರಣದ ಬೇಡಿಕೆ ಇಲ್ಲದಿದ್ದರೂ ತಾನೇ ಹತ್ತಿ ಉತ್ಪಾದನೆ ಮಾಡಿ, ವಿವಿಯ ಜವಳಿ ವಿಭಾಗದಲ್ಲಿ ಶಾಲು, ವಿವಿಧ ಬಟ್ಟೆ, ಟಾವೆಲ್ ಮಾತ್ರವಲ್ಲದೆ, ಸೀರೆ, ಕೌದಿ ಸಹ ತಯಾರಿಸಿ ಉಪಯೋಗಿಸಿ ಪರೀಕ್ಷಿಸಲಾಗಿದೆ. ಅಲ್ಲದೆ, ಕೈಮಗ್ಗದಲ್ಲೇ ಸಿದ್ಧಗೊಳ್ಳುತ್ತಿರುವ ಇಲ್ಲಿನ ಶಾಲುಗಳು ಆಕರ್ಷಕ ವಿನ್ಯಾಸ ಸಹ ಹೊಂದಿವೆ. ಹೀಗಾಗಿ ವಿವಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹೊರಗಿನಿಂದ ಶಾಲು ತರಿಸುವ ಬದಲಿಗೆ, ಇದೇ ಶಾಲುಗಳಿಂದ ಅತಿಥಿಗಳನ್ನು ಸನ್ಮಾನ ಮಾಡುವ ಮೂಲಕ ಪರಿಚಯಿಸುತ್ತ ಬಂದಿದ್ದಾರೆ. ಇಷ್ಟೆಲ್ಲ ಶ್ರಮ ಹಾಕಿ, ತನ್ನಲ್ಲಿ ಉತ್ಪಾದನೆಯಾಗುತ್ತಿದ್ದ ಬಣ್ಣದ ಹತ್ತಿಗೆ ವಾಣಿಜ್ಯಕರಣದ ಬೇಡಿಕೆ ಬರದೇ ಇದ್ದರೂ ವಿಶ್ವವಿದ್ಯಾಲಯ ಎದೆಗುಂದದೆ ತನ್ನದೇ ಜವಳಿ ವಿಭಾಗ ಸೇರಿ ವಿವಿಧ ವಿಭಾಗಗಳಲ್ಲಿ ಬಳಸಿಕೊಂಡು, ಅದನ್ನೇ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪಾಠವನ್ನೂ ನೀಡುವ ಮೂಲಕ ವಿಶೇಷ ಬಟ್ಟೆ ತಯಾರಿಸುತ್ತಲೇ ಬಂದಿದೆ. ಸದ್ಯ ಈ ಶ್ರಮಕ್ಕೆ ಈಗ ರಜಿಸ್ಟ್ರೀ ಆಫ್ ಸಾರೀಸ್ ಮೂಲಕ ಪ್ರತಿಫಲ ಸಿಕ್ಕಂತಾಗಿದೆ. ಈ ಸಲ ಬೆಳೆದ ಹತ್ತಿಯು ಕೈಗೆ ಸಿಕ್ಕ ಬಳಿಕ ಸಂಸ್ಕರಣೆಗೊಂಡು ಬಟ್ಟೆಯಾಗಿ ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗಲಿದೆ. ಅದರಲ್ಲಿಯೂ ಇಲ್ಲಿನ ಬೆಲೆಗಿಂತಲೂ ವಿದೇಶಗಳಲ್ಲಿ ಈ ನೈಸರ್ಗಿಕ ಬಣ್ಣದ ಹತ್ತಿಗೆ ದುಪ್ಪಟ್ಟು ಬೆಲೆ ಬರುತ್ತಿದೆಯಂತೆ.

ದೇಹಕ್ಕೆ ಹಿತಾನುಕೂಲ: ವಿಶೇಷವಾದ ಈ ಹತ್ತಿ ನೈಸರ್ಗಿಕವಾಗಿಯೇ ಬಣ್ಣವನ್ನು ಹೊಂದಿರುವುದರಿಂದ ಇದರಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ. ಜತೆಗೆ ಇದು ಚರ್ಮಕ್ಕೆ ಹಾನಿ ಮಾಡುವಂತಹ ಸೂರ್ಯನ ಕಿರಣಗಳಿಂದ ದೇಹಕ್ಕೆ ರಕ್ಷಣೆ ನೀಡುತ್ತದೆ. ದೇಹಕ್ಕೆ ತಂಪು ನೀಡುತ್ತದೆ. ಹೀಗಾಗಿಯೇ ಈ ನೈಸರ್ಗಿಕ ಬಣ್ಣದ ಹತ್ತಿಗೆ ಐರೋಪ್ಯ ರಾಷ್ಟ್ರದ ಜನ ಮಾರು ಹೋಗಿದ್ದಾರೆ. ಅದರಲ್ಲಿಯೂ ಜಪಾನ್ ದೇಶದವರಂತೂ ಈ ಹತ್ತಿಯನ್ನು ದುಪ್ಪಟ್ಟು ಬೆಲೆಗೆ ಖರೀದಿಸುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಜಾಗರೂಕತೆ ಅಗತ್ಯ: ಡಿಡಿಸಿಸಿ 1 ಹತ್ತಿ ಬೆಳೆಯುವುದು ಸಹ ದೊಡ್ಡ ಸವಾಲಿನ ಕೆಲಸ. ಏಕೆಂದರೆ, ಈ ಹತ್ತಿಯ ಬೀಜ ಯಾವುದೇ ಕಾರಣಕ್ಕೂ ಬಿಳಿ ಹತ್ತಿಯ ಬೀಜಗಳೊಂದಿಗೆ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ. ಇದರ ಬೆಳೆ ಸುತ್ತಮುತ್ತಲೂ ಎಲ್ಲಿಯೂ ಬಿಳಿ ಹತ್ತಿ ಬೆಳೆಯುವಂತಿಲ್ಲ. ಒಂದು ರೀತಿ ಈ ತಳಿಯನ್ನು ರೈತರು ಹೊಲದಲ್ಲಿಯೇ ಐಸೊಲೇಷನ್ ಮಾಡಿದಂತೆ ಪ್ರತ್ಯೇಕವಾಗಿ ಬೆಳೆಯಬೇಕು. ಒಂದು ವೇಳೆ ಬೇರೆ ತಳಿಯ ಬೀಜಗಳೊಂದಿಗೆ ಮಿಶ್ರಣವಾದರೆ, ಬೇರ್ಪಡಿಸುವುದು ತುಂಬಾ ಕಷ್ಟ. ಜತೆಗೆ ಅಷ್ಟೂ ಬೀಜಗಳನ್ನು ಬಿಸಾಡಬೇಕಾದ ಸ್ಥಿತಿ ಎದುರಾಗುತ್ತದೆ. ಹೀಗಾಗಿ ಎಲ್ಲ ಸವಾಲುಗಳನ್ನು ಎದುರಿಸಿ, ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗಿರುವುದರಿಂದ ಸದ್ಯಕ್ಕೆ ಈ ಹತ್ತಿ ವಿಶ್ವ ಮಾರುಕಟ್ಟೆಗೆ ಮುಕ್ತವಾಗಿದ್ದರೂ ಬೆಳೆಯುವ ಜವಾಬ್ದಾರಿಯನ್ನು ಕೃಷಿ ವಿವಿಯವರೇ ವಹಿಸಿಕೊಳ್ಳುತ್ತಿದ್ದಾರೆ. ಅಗ್ರಿ ಇನ್ಹೋವೇಟ್ ಮೂಲಕ ಆಯ್ದ ರೈತರಿಗೆ ಬೀಜ ನೀಡಿದರೂ ಸಂಪೂರ್ಣ ನಿಗಾ ಕೃಷಿ ವಿವಿಯದ್ದೇ ಇರಲಿದೆ.

ನಮ್ಮ ವಿವಿಯ ಜವಳಿ ವಿಭಾಗದಿಂದ ಈಗಾಗಲೆ ಬಣ್ಣದ ಹತ್ತಿ ಉಡುಪು ತಯಾರಿಸಿದ್ದೇವೆ. ಖುದ್ದು ನಾವು ಬಳಸಿ ನೋಡಿದ್ದೇವೆ. ರಜಿಸ್ಟ್ರೀ ಆಫ್ ಸಾರೀಸ್ ಈ ತಳಿ ವಾಣಿಜ್ಯೀಕರಣಕ್ಕೆ ಸಹಕಾರ ನೀಡುತ್ತಿದ್ದಾರೆ. ಅವರು ಹಣ ನೀಡಿ ಬೀಜ ತೆಗೆದುಕೊಂಡು, ಆಯ್ದ ರೈತರಿಗೆ ನೀಡುತ್ತಾರೆ. ನಮ್ಮ ತಜ್ಞರ ನಿಗಾದಲ್ಲಿ ಹತ್ತಿ ಬೆಳೆ ಪೋಷಣೆ ಆಗುತ್ತದೆ. ಮೊದಲ ಹತ್ತಿಯ ಬಟ್ಟೆಗಳು ಕೈಗೆ ಸಿಕ್ಕ ತಕ್ಷಣವೇ ರಜಿಸ್ಟ್ರೀ ಆಫ್ ಸಾರೀಸ್​ನವರು ದೆಹಲಿ ಕೆಂಪು ಕೋಟೆಯಲ್ಲಿ ಪ್ರದರ್ಶನ ಏರ್ಪಡಿಸಿ ವಿಶ್ವ ಮಾರುಕಟ್ಟೆಯನ್ನು ಆಕರ್ಷಿಸಲಿದ್ದಾರೆ. | ಡಾ. ಎಂ.ಬಿ. ಚೆಟ್ಟಿ ಕುಲಪತಿ, ಕೃಷಿ ವಿವಿ, ಧಾರವಾಡ

ಎರಡು ಬಣ್ಣ ಮಾತ್ರ ಲಭ್ಯ: ಡಿಡಿಸಿಸಿ 1 ತಳಿಯಲ್ಲಿ ಕಂದು ಮತ್ತು ತಿಳಿ ಹಸಿರು ಬಣ್ಣ ಮಾತ್ರವೇ ಇವೆ. ಹೀಗಾಗಿ ಉದ್ಯಮಗಳು ಸಹ ಈ ಹತ್ತಿಯತ್ತ ಆಸಕ್ತಿ ತೋರಿಸಿರಲಿಲ್ಲ. ಆದರೆ, ಯಾವಾಗ ಈ ಹತ್ತಿ ಯಾವುದೇ ರಾಸಾಯನಿಕ ಇಲ್ಲದೆಯೇ ದೇಹಕ್ಕೆ ಅನುಕೂಲ ಆಗುತ್ತದೆ ಎನ್ನುವುದನ್ನು ರಜಿಸ್ಟ್ರೀ ಆಫ್ ಸಾರೀಸ್ ಸಂಸ್ಥೆಯವರು ತಿಳಿದುಕೊಂಡು ವಿಶ್ವ ಮಾರುಕಟ್ಟೆಯಲ್ಲಿ ತಮಗೆ ಸಂಪರ್ಕದಲ್ಲಿ ಇದ್ದವರಿಗೆ ತಿಳಿ ಹೇಳುವುದಕ್ಕೆ ಶುರು ಮಾಡಿದರೋ ಆಗಿನಿಂದ ಬೇಡಿಕೆ ಬರುವುದಕ್ಕೆ ಆರಂಭವಾಗಿದೆ. ಈ ಹತ್ತಿಯ ಮಹತ್ವ ತಿಳಿದ ಜಪಾನ್​ನಿಂದ ಮೊದಲ ಬೇಡಿಕೆ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಹತ್ತಿ ಸಮನ್ವಯ ಕೇಂದ್ರದಲ್ಲಿಯೂ ಡಿಡಿಸಿಸಿ 1 ತಳಿ ಹತ್ತಿಯ ವಿವಿಧ ಪ್ರಯೋಗಗಳನ್ನು ಮಾಡಿ ತೋರಿಸಲಾಗಿದೆ. ಹೀಗಾಗಿ ವಿಶೇಷ ಹತ್ತಿ ಈಗ ವಿಶ್ವಕ್ಕೆ ಪರಿಚಯ ಆಗುತ್ತಿದೆ.