ಅಂಕಣ

ನೀವೂ ಆರ್​ಬಿಐ ಆರ್​ಡಿಜಿ ಖಾತೆ ತೆರೆದ್ರಾ?; ಜಿ-ಸೆಕ್ಯುರಿಟೀಸ್ ಹೂಡಿಕೆಗೆ ಹೊಸ ಅವಕಾಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್​ನ ರಿಟೇಲ್ ಡೈರೆಕ್ಟ್ (ಆರ್​ಬಿಐ-ಆರ್​ಡಿ) ಸ್ಕೀಮ್ ಚಿಲ್ಲರೆ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವಂಥದ್ದು. ಒಂದೇ ದಿನದಲ್ಲಿ 12000+ ಹೂಡಿಕೆದಾರರು ಖಾತೆ ತೆರೆದಿರುವುದು ಗಮನಾರ್ಹ.

| ಉಮೇಶ್ ಕುಮಾರ್ ಶಿಮ್ಲಡ್ಕ

ಸರ್ಕಾರಿ ಸಾಲಪತ್ರ (ಜಿ-ಸೆಕ್ಯುರಿಟೀಸ್) ಮಾರುಕಟ್ಟೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ಇದು. ಜಿ-ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಹೂಡಿಕೆಗೆ ಚಿಲ್ಲರೆ ಹೂಡಿಕೆದಾರರ ಪಾಲಿಗೆ ಆರ್​ಬಿಐ-ಆರ್​ಡಿ ‘ಏಕ-ಗವಾಕ್ಷಿ’ಯಾಗಿ ಗೋಚರಿಸಿದೆ. ಜಿ-ಸೆಕ್ಯುರಿಟೀಸ್ ಮೇಲಿನ ಹೂಡಿಕೆ ಜನಸಾಮಾನ್ಯರಿಗೂ ನಿಲುಕುವಂತೆ ಸರಳಗೊಳಿಸುವ ಸರ್ಕಾರದ ಪ್ರಯತ್ನ ಇದು. ನಿಶ್ಚಿತ ಆದಾಯ ಮಾರುಕಟ್ಟೆ (ಫಿಕ್ಸೆಡ್ ಇನ್​ಕಂ ಮಾರ್ಕೆಟ್) ಯಲ್ಲಿ ಸರ್ಕಾರಿ ಸಾಲಪತ್ರಗಳು ಗರಿಷ್ಠ ಪ್ರಮಾಣದಲ್ಲಿದ್ದು, ಅಪಾಯರಹಿತ ಲಾಭಾಂಶ (ರಿಸ್ಕ್ ಫ್ರೀ ರೇಟ್) ಒದಗಿಸುತ್ತಿರುವೆ. ಹೀಗಾಗಿ ಇಲ್ಲಿ ಬೇರೆ ಅಪಾಯಗಳಿಲ್ಲ. ಇದುವರೆಗೆ ಚಿಲ್ಲರೆ ಹೂಡಿಕೆದಾರರು ಡೆಟ್ ಮ್ಯೂಚುವಲ್ ಫಂಡ್​ಗಳ ಮೂಲಕವೇ ಜಿ-ಸೆಕ್ಯುರಿಟೀಸ್​ಗೆ ಹೂಡಿಕೆ ಮಾಡಬೇಕಿತ್ತು. ಅದರಲ್ಲೂ ಬಹಳ ಸೀಮಿತ ಅವಕಾಶಗಳಷ್ಟೇ ಇದ್ದವು. ಸೂಚ್ಯಂಕದ ಶೇ.20 ದೀರ್ಘಾವಧಿ ಕ್ಯಾಪಿಟಲ್ ಗೇನ್ (ಲಾಭಾಂಶ) ಪಡೆಯಬೇಕು ಎಂದರೆ ಗ್ರೋತ್ ಆಪ್ಶನ್ ತೆಗೆದುಕೊಂಡು ಕನಿಷ್ಠ 3 ವರ್ಷದ ಅವಧಿಗೆ ಹೂಡಿಕೆ ಮಾಡಬೇಕಾಗಿತ್ತು. ಆರ್​ಬಿಐ-ಆರ್​ಡಿ ಯೋಜನೆಯು ಈಗ ವಿವಿಧ ಅವಧಿಯ ಬಹಳ ಅನುಕೂಲಕರ ಹೂಡಿಕೆಯ ವ್ಯಾಪ್ತಿಯನ್ನು ಚಿಲ್ಲರೆ ಹೂಡಿಕೆದಾರರಿಗೆ ಒದಗಿಸಿಕೊಟ್ಟಿದೆ. ಆರ್​ಬಿಐ-ಆರ್​ಡಿ ಸಮಗ್ರ ಯೋಜನೆಯಾಗಿದ್ದು, ಇದರಲ್ಲಿ ಚಿಲ್ಲರೆ ಹೂಡಿಕೆದಾರರು ಆನ್​ಲೈನ್ ಪೋರ್ಟಲ್ ‘rbiretaildirect.org.in’ ಮೂಲಕ ‘ಆರ್​ಬಿಐ-ಆರ್​ಡಿಜಿ’ ಖಾತೆ ತೆರೆಯಬಹುದು ಮತ್ತು ನಿರ್ವಹಿಸಬಹುದು. ಪ್ರೖೆಮರಿ ಮತ್ತು ಸೆಕೆಂಡರಿ ಮಾರ್ಕೆಟ್​ನಲ್ಲಿ ವಹಿವಾಟು ನಡೆಸಬಹುದು.

ಕನಿಷ್ಠ ಹೂಡಿಕೆ ಎಷ್ಟು?: ಸಾಂಸ್ಥಿಕ ಹೂಡಿಕೆದಾರರಿಗೆ ಬಾಂಡ್ ಮಾರುಕಟ್ಟೆಯಲ್ಲಿ ಕನಿಷ್ಠ ಲಾಟ್ ಗಾತ್ರ 5 ಕೋಟಿ ರೂ.. ಚಿಲ್ಲರೆ ಹೂಡಿಕೆದಾರರಿಗೆ ಸ್ಪರ್ಧಾತ್ಮಕವಲ್ಲದ ಸಾವರಿನ್ ಡೆಟ್ ಮುಂತಾದವುಗಳ ಖರೀದಿಗೆ ಪ್ರಾಥಮಿಕ ಹರಾಜಿನಲ್ಲಿ ಕನಿಷ್ಠ ಹೂಡಿಕೆ 10,000 ರೂ. ಕೋವಿಡ್ ಸಂಕಷ್ಟದ ನಂತರದಲ್ಲಿ ಅನ್ವಯಿಸಿ ಕೊಳ್ಳಲಾದ ಅತ್ಯಂತ ಸಡಿಲ ವಿತ್ತ ನೀತಿ ಒದಗಿಸಿದ ಪ್ರಯೋಜನ ಇದು.

ಸೆಕೆಂಡರಿ ಮಾರುಕಟ್ಟೆ: ಇಲ್ಲಿ ಹೂಡಿಕೆದಾರರು ‘ಆಡ್ ಲಾಟ್’ ಮತ್ತು ‘ರಿಕ್ವೆಸ್ಟ್ ಫಾರ್ ಕೋಟ್ಸ್’ ಸೆಗ್ಮೆಂಟ್​ಗಳಲ್ಲಿ ‘ಎನ್​ಡಿಎಸ್-ಒಎಂ’ (ನೆಗೋಷಿಯೆಬಲ್ ಡೀಲಿಂಗ್ ಸಿಸ್ಟಮ್​ಡರ್ರ್ ಮ್ಯಾಚಿಂಗ್) ಎಂದರೆ ಆರ್​ಬಿಐನ ಪರದೆ ಆಧಾರಿತ ಅನಾಮಧೇಯ ಇಲೆಕ್ಟ್ರಾನಿಕ್ ಆರ್ಡರ್ ಮ್ಯಾಚಿಂಗ್ ಸಿಸ್ಟಮ್ ಮೂಲಕ ಗವರ್ನಮೆಂಟ್ ಸೆಕ್ಯುರಿಟೀಸ್ ಅನ್ನು ಖರೀದಿ ಮತ್ತು ಮಾರಾಟ ಮಾಡಬಹುದು. ಉಳಿತಾಯ ಖಾತೆ ಬಳಸಿಕೊಂಡು ಇಂಟರ್​ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಈ ವಹಿವಾಟಿಗೆ ಹಣ ಪಾವತಿಸಬಹುದು.

ಖಾತೆ ತೆರೆಯುವುದಕ್ಕೆ ಮುನ್ನ: ಚಿಲ್ಲರೆ ಹೂಡಿಕೆದಾರರು ‘rbiretaildirect.org.in’ನಲ್ಲಿ ಖಾತೆ ತೆರೆಯುವುದಕ್ಕೆ ಮುನ್ನ, ಭಾರತದಲ್ಲಿ ನಿರ್ವಹಿಸಲ್ಪಡುವ ಬ್ಯಾಂಕಿನಲ್ಲಿ ಉಳಿತಾಯ ಖಾತೆ, ಪ್ಯಾನ್ ಸಂಖ್ಯೆ, ಕೆವೈಸಿಗಾಗಿ ಅಗತ್ಯ ಮಾನ್ಯ ದಾಖಲೆ, ಸರಿಯಾದ ಇಮೇಲ್ ಐಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಹೊಂದಿರಬೇಕು. ಅನಿವಾಸಿ ಭಾರತೀಯರು ಕೂಡ ಇದರಲ್ಲಿ ಹೂಡಿಕೆ ಖಾತೆ ತೆರೆಯಬಹುದು. ಆನ್​ಲೈನ್ ಪೋರ್ಟಲ್​ನಲ್ಲಿ ‘rbiretaildirect.in/#/rdg-account-registration’ ಖಾತೆ ತೆರೆಯಲು ಅಗತ್ಯ ವಿವರಗಳನ್ನು ಭರ್ತಿ ಮಾಡಿದ ಕೂಡಲೇ ನೋಂದಾಯಿತ ಮೊಬೈಲ್ ಮತ್ತು ಇಮೇಲ್ ಐಡಿಗೆ ಒಟಿಪಿ ರವಾನೆಯಾಗುತ್ತದೆ. ಅದನ್ನು ನಮೂದಿಸಿ ಬಳಿಕ ಪರದೆ ಮೇಲಿನ ಸೂಚನೆ ಅನುಸರಿಸುತ್ತ ಖಾತೆ ತೆರೆಯಬಹುದು.

ಜಿ-ಸೆಕ್ಯುರಿಟೀಸ್ ಅಂಕಿ ನೋಟ

  • 97 ಅತ್ಯುತ್ತಮ ಸರ್ಕಾರಿ ಸೆಕ್ಯುರಿಟೀಸ್
  • 3 ತಿಂಗಳಿಂದ 40 ವರ್ಷ ತನಕದ ಅವಧಿ
  • 78.5 ಲಕ್ಷ ಕೋಟಿ ರೂ. ಇವುಗಳ ಒಟ್ಟು ಮೌಲ್ಯ

ಹೊಸ ಹೂಡಿಕೆ ವ್ಯವಸ್ಥೆಯು ಹೂಡಿಕೆದಾರರಿಗೆ ಅವಧಿ ಠೇವಣಿ (ಎಫ್​ಡಿ), ಡೆಟ್ ಮ್ಯೂಚುವಲ್ ಫಂಡ್, ಅಂಚೆ ಕಚೇರಿ ಹೂಡಿಕೆ ಯೋಜನೆಗಳನ್ನು ಹೊರತುಪಡಿಸಿ ಹೂಡಿಕೆಗೆ ಹೊಸ ಅವಕಾಶವನ್ನು ಕಲ್ಪಿಸಿದೆ. ದೀರ್ಘಾವಧಿಯಲ್ಲಿ ಸರ್ಕಾರಿ ಬಾಂಡ್​ಗಳಲ್ಲಿ ಬಡ್ಡಿದರವು ಅವಧಿ ಠೇವಣಿಗಿಂತ ಹೆಚ್ಚೇ ಇದೆ. ಈ ಹೂಡಿಕೆಯಲ್ಲಿ ರಿಸ್ಕ್ ಕಡಿಮೆಯಾದರೂ, ನಗದೀಕರಣ ಸ್ವಲ್ಪ ಕಷ್ಟವೆನಿಸಬಹುದು.

| ಶರತ್ ಎಂ.ಎಸ್. ಇಂಡಿಯನ್​ವೊನಿ.ಕಾಮ್ ಉಪಾಧ್ಯಕ್ಷ

ಶುಲ್ಕ ರಹಿತ ಸೇವೆ: ಆರ್​ಬಿಐ-ಆರ್​ಡಿಜಿ ಯೋಜನೆಯಲ್ಲಿ ಚಿಲ್ಲರೆ ಹೂಡಿಕೆದಾರರಿಗೆ ಶುಲ್ಕ ರಹಿತ ಸೇವೆ ಲಭ್ಯವಿದೆ. ಪೇಮೆಂಟ್ ಗೇಟ್​ವೇ ವಿಧಿಸುವ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರತಿಯೊಂದು ವಹಿವಾಟಿನ ಮಾಹಿತಿ, ಬ್ಯಾಲೆನ್ಸ್ ಸ್ಟೇಟ್​ವೆುಂಟ್, ನಾಮಿನೇಷನ್ ಸೌಲಭ್ಯ, ಸೆಕ್ಯುರಿಟೀಸ್ ಅಡಮಾನ ಅಥವಾ ಉಡುಗೊರೆಯಾಗಿ ನೀಡುವುದಕ್ಕೂ ಅವಕಾಶವಿದೆ. ಇದು ಸುರಕ್ಷಿತ, ಸುಲಭ, ನೇರ ಮತ್ತು ಸೆಕ್ಯೂರ್ ಆಗಿರುವ ವೇದಿಕೆ ಎಂದು ಆರ್​ಬಿಐ ಹೇಳಿದೆ.

ವಹಿವಾಟು ಹೇಗೆ?: ಚಿಲ್ಲರೆ ಹೂಡಿಕೆದಾರರು ಆರ್​ಡಿಜಿ ಖಾತೆ ತೆರೆದ ಬಳಿಕ ಸರ್ಕಾರದ ಬಾಂಡ್​ಗಳನ್ನು (ಸಾಲಪತ್ರ) ಪ್ರೖೆಮರಿ ಡೆಟ್ ಸೇಲ್ಸ್ ಅಥವಾ ಸೆಕೆಂಡರಿ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಸರ್ಕಾರದ ಡೆಟ್ ಮ್ಯಾನೇಜರ್ ಪ್ರತಿ ಶುಕ್ರವಾರ ಈ ಬಾಂಡ್​ಗಳ ಪ್ರಾಥಮಿಕ ಹರಾಜನ್ನು ನಿರ್ವಹಿಸುತ್ತಾರೆ.

ಪ್ರಾಥಮಿಕ ಮಾರುಕಟ್ಟೆ: ಸಾವರಿನ್ ಗೋಲ್ಡ್ ಬಾಂಡ್ಸ್ ಮತ್ತು ಇತರ ಸ್ಪರ್ಧೆ ಇಲ್ಲದ ಗವರ್ನಮೆಂಟ್ ಸೆಕ್ಯುರಿಟೀಸ್/ಬಾಂಡ್​ಗಳ ಮೇಲೆ ಹೂಡಿಕೆದಾರರು ಇಲ್ಲಿ ಬಿಡ್ ಸಲ್ಲಿಸಬಹುದು.

ಸಮಸ್ಯೆ ಆದರೆ...: ಜಿ-ಸೆಕ್ಯುರಿಟೀಸ್ ಮಾರುಕಟ್ಟೆ ಸಂಬಂಧ ಸಮಸ್ಯೆ ಆದರೆ ಅಥವಾ ಹೆಚ್ಚಿನ ಮಾಹಿತಿ ಬೇಕಾದರೆ ಶುಲ್ಕ ರಹಿತ ದೂರವಾಣಿ ಸಂಖ್ಯೆ 1800-267-7955 (ಬೆಳಗ್ಗೆ 10ರಿಂದ ರಾತ್ರಿ 7) ಕರೆ ಮಾಡಬಹುದು.

12.06 ಲಕ್ಷ ಕೋಟಿ ರೂ. ಬಾಂಡ್ ವಿತರಣೆ: ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಇದಕ್ಕೆ ಸಂಪ ನ್ಮೂಲ ಕ್ರೋಡೀಕರಣ ದೊಡ್ಡ ಸವಾಲು. ಹೀಗಾಗಿ ಅನೇಕ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ. ಈ ವರ್ಷ ಒಟ್ಟು 12.06 ಲಕ್ಷ ಕೋಟಿ ರೂ. ಮೌಲ್ಯದ ಗವರ್ನಮೆಂಟ್ ಬಾಂಡ್ಸ್ ಅನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.

ಲಾಭಾಂಶ ಮತ್ತು ಗ್ರಾಹಕರು: ಸರ್ಕಾರಿ ಬಾಂಡ್​ಗಳ 10 ವರ್ಷಗಳ ಲೆಕ್ಕಾಚಾರ ಗಮನಿಸಿದಾಗ ಕಳೆದ ವರ್ಷದ ಲಾಭಾಂಶದ ಬೆಂಚ್ ಮಾರ್ಕ್ ಶೇ.6. ಬೆಂಚ್ ಮಾರ್ಕ್ ಎಂದು ಪರಿಗಣಿಸಬಹುದಾದ ಬಾಂಡ್ ತಂದುಕೊಟ್ಟ ಲಾಭಾಂಶ ಶೇಕಡ 6.36. ದೇಶದ ಮುಂಚೂಣಿ ಮತ್ತು ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂ.ಗಿಂತ ಕಡಿಮೆ ಹಣವನ್ನು 5ರಿಂದ 10 ವರ್ಷ ಠೇವಣಿ ಇಟ್ಟರೆ ಕೊಡುವ ಬಡ್ಡಿದರ ಶೇಕಡ 5.4. ಈ ರೀತಿ ಗಮನಿಸಿದರೆ, ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇರಿಸುವವರನ್ನು ಆರ್​ಬಿಐ ಆರ್​ಡಿಜಿ ತನ್ನತ್ತ ಸೆಳೆಯುವ ಗುರಿ ಇರಿಸಿಕೊಂಡಿರುವುದು ಸ್ಪಷ್ಟ.