| ಸಿ.ಕೆ.ಮಹೇಂದ್ರ
ಅಧಿಕಾರ ದಾಹಕ್ಕಾಗಿ ನಿರಂತರ ದಾಳಿ, ಸ್ಪರ್ಧೆಗಿಳಿದಂತೆ ಸ್ಮಾರಕಗಳ ನಿರ್ವಣ, ಎತ್ತರ-ವಿಸ್ತಾರ, ವೈವಿಧ್ಯತೆಯಲ್ಲಿ ಅಗಾಧ ಕೌಶಲ ತೋರಿರುವ ‘ಐತಿಹಾಸಿಕ ಖಜಾನೆ’ ಕಾಲಿಟ್ಟಲ್ಲೆಲ್ಲ ಇಲ್ಲಿ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಮಾಂಡು ಉತ್ಸವದ ‘ಹೆರಿಟೇಜ್ ವಾಕ್’ನಲ್ಲಿ ಕಂಡುಬಂದ ದೃಶ್ಯಗಳಿವು. ಜಗತ್ತಿನ ಪ್ರಮುಖ ‘ಪ್ರೇಮಸ್ಮಾರಕ’ ಎಂದೇ ಹೆಸರಾಗಿರುವ ಆಗ್ರಾದ ತಾಜ್ವುಹಲ್ಗೆ ಸ್ಪೂರ್ತಿ ನೀಡಿದ ಸ್ಮಾರಕವೊಂದು ಇಲ್ಲಿದೆ ಎಂಬುದು ಮಾಂಡುವಿನ ವಿಶೇಷ. ಭಾರತದಲ್ಲೇ ಮೊದಲ ಬಾರಿಗೆ ಸಂಪೂರ್ಣ ಅಮೃತಶಿಲೆಯಲ್ಲಿ ನಿರ್ಮಾಣ ಮಾಡಲಾದ ‘ಹೌಸಂಗ್ ಷಾ ಟಂಬ್’ ಹೆಸರಿನ ಸ್ಮಾರಕ ಇಲ್ಲಿನ ಪ್ರಮುಖ ಆಕರ್ಷಣೆ. 1441ರಲ್ಲಿ ನಿರ್ವಣಗೊಂಡ ಈ ಸ್ಮಾರಕವನ್ನು ಮಾಂಡುವಿನ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಹೌಸಂಗ್ ಷಾ ಎಂಬಾತನ ಸಮಾಧಿಗಾಗಿ ನಿರ್ಮಾಣ ಮಾಡಲಾಗಿತ್ತು. ಇದಾದ ಸುಮಾರು 200 ವರ್ಷಗಳ ನಂತರ ತಾಜ್ವುಹಲ್ ನಿರ್ವಣಗೊಂಡಿರುವುದು ವಿಶೇಷ. ತಾಜ್ವುಹಲ್ ನಿರ್ಮಾಣ ಮಾಡಿದ ತಜ್ಞರನ್ನು ಷಹಜಹಾನ್ ಇಲ್ಲಿಗೆ ಕಳುಹಿಸಿಕೊಟ್ಟಿದ್ದ ಎನ್ನಲಾಗಿದೆ.
ನಿರಂತರ ದಾಳಿಗೆ ಸಾಕ್ಷಿಯಾಗಿರುವ ‘ಜುಹಜು ಮಹಲ್’: ಮಾಂಡು ಸಾಮ್ರಾಜ್ಯದ ಮೇಲೆ ನಡೆದ ನಿರಂತರ ದಾಳಿಗೆ ‘ಜುಹಜು ಮಹಲ್’ ಅಂದರೆ, ಹಡಗು ಮಾದರಿಯ ಮಹಲ್ ಸಾಕ್ಷಿಯಾಗಿ ನಿಂತಿದೆ. ಈ ಸ್ಮಾರಕದ ಮೇಲೆ ಕನಿಷ್ಠ 22 ಬಾರಿ ದಾಳಿ ನಡೆದಿದ್ದು, ಸಿಕ್ಕ ಸಿಕ್ಕಲ್ಲಿ ಸ್ಮಾರಕವನ್ನು ಉರುಳಿಸಲಾಗಿದೆ. ಈಗಲೂ ತನ್ನ ಐತಿಹಾಸಿಕ ವೈಭವ ಹಾಗೂ ವಾಸ್ತು ಕೌಶಲದಿಂದ ಈ ಕಟ್ಟಡ ಗಮನ ಸೆಳೆಯುತ್ತದೆ. ಎರಡೂ ಕಡೆ ಕೆರೆಗಳನ್ನು ನಿರ್ಮಾಣ ಮಾಡಿ, ಅದರ ಮಧ್ಯಭಾಗದಲ್ಲಿ ಈ ಕಟ್ಟಡವನ್ನು ನಿರ್ವಿುಸಲಾಗಿದೆ. ಕಟ್ಟಡದ ಯಾವುದೇ ಭಾಗದಲ್ಲಿ ನಿಂತರೂ ನೀರು ಕಾಣಿಸುತ್ತದೆ. ಹೊರಗಿನ ಕೆರೆಯ ನೀರು ಶುದ್ಧೀಕರಣಗೊಂಡು ಅರಮನೆ ಆವರಣದಲ್ಲಿ ನಿರ್ಮಾಣ ಮಾಡಲಾಗಿರುವ ಕೆರೆಗೆ ಪ್ರವೇಶಿಸುತ್ತದೆ. ಹಾಗೆ ನೀರು ತುಂಬಿಕೊಂಡ ಒಳಾಂಗಣದ ವಿಶಾಲ ಕೆರೆಯಲ್ಲಿ ವೀರ ಮಹಿಳೆಯರು ಈಜುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಈ ಕೆರೆಯಿಂದ ಏತ ತಂತ್ರಜ್ಞಾನದ ಮೂಲಕ ಕಟ್ಟಡದ ಮೇಲಂತಸ್ತಿಗೆ ನೀರನ್ನು ಎತ್ತಿ ಕಿರುಗಾಲುವೆ ಮೂಲಕ ಹರಿಸಿ, ವೇಗವಾಗಿ ಕೆಳಗೆ ಬೀಳುವ ರಭಸಕ್ಕೆ ಕಾರಂಜಿಯೊಂದನ್ನು ನಿರ್ಮಾಣ ಮಾಡಲಾಗಿದೆ. ಇದೇ ನೀರನ್ನು ಮಹಡಿಯ ಮೇಲಿರುವ ಕಮಲಾಕಾರದ ಈಜುಕೊಳ ಹಾಗೂ ಕೆಳಗಿನ ಆಮೆ ಆಕಾರದ ಈಜುಕೊಳಕ್ಕೂ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಮಳೆನೀರನ್ನು ಶುದ್ಧೀಕರಿಸಿ ಸಂಗ್ರಹಿಸುವ ತಾಂತ್ರಿಕತೆ 1452ರಲ್ಲಿಯೇ ಈ ಜನರಿಗೆ ಸಿದ್ಧಿಸಿತ್ತು. ಕುಡಿಯುವ ನೀರು ಶುದ್ಧೀಕರಣಕ್ಕಾಗಿ ವಿಶೇಷ ಕಟ್ಟಡವೊಂದನ್ನು ನಿರ್ವಿುಸಿರುವುದನ್ನು ಇಲ್ಲಿ ಕಾಣಬಹುದು.
ಪ್ರವಾಸಿಗರಿಗೆ ಆದಿ ಸಂಸ್ಕೃತಿ ಪರಿಚಯ: ಮಾಂಡು ಪ್ರದೇಶದ ಆದಿವಾಸಿಗಳೊಂದಿಗೆ ಶುಕ್ರವಾರ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡುವ ಮೂಲಕ ಅಲ್ಲಿಯ ಆದಿ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಯಿತು. ಸಂಜೆ ಎತ್ತರಕ್ಕೆ ಹಾರಿಬಿಡುವ ಬೆಂಕಿ ಉಗುಳುವ ಬಲೂನ್ಗಳು ನೋಡುಗರ ಮನಕ್ಕೆ ಮುದ ನೀಡುವಂತಿದ್ದವು. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆ ಕೈಗೊಂಡಿರುವ ಈ ಪ್ರಯತ್ನ ಯಶಸ್ವಿಯಾಗಿ ಮುನ್ನಡೆಯಿತು.
ಜಾಮಿ ಮಸೀದಿ, ಮಹಮದ್ ಖಿಲ್ಜಿ ಸ್ಮಾರಕ: ವಿಶಾಲ ಪ್ರಾಂಗಣ, ಎತ್ತರದ ಹಾಗೂ ಗೋಳಾಕಾರದ ಗುಂಬಜ್ಗಳನ್ನು ಹೊಂದಿರುವ ‘ಜಾಮಿ ಮಸೀದಿ’ ಮಸೀದಿಯಲ್ಲಿ ಆ ಕಾಲಕ್ಕೆ ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ‘ಮಹಮದ್ ಖಿಲ್ಜಿ’ ಸ್ಮಾರಕ ಇಲ್ಲಿ ಗಮನ ಸೆಳೆಯುವ ಮತ್ತೊಂದು ಐತಿಹಾಸಿಕ ಕಟ್ಟಡ. ಇದರ ಕೇಂದ್ರಭಾಗ ಕುಸಿದುಹೋಗಿದೆ.
ಒಂದಿಲ್ಲೊಂದು ಸ್ಮಾರಕ ನಿರ್ಮಾಣ: ಮಧ್ಯಪ್ರದೇಶದ ಪ್ರಮುಖ ಪ್ರವಾಸಿಕೇಂದ್ರಗಳಲ್ಲಿ ಮಾಂಡು ಸೇರಿದೆ. ಸಮುದ್ರ ಮಟ್ಟದಿಂದ 633 ಮೀಟರ್ ಎತ್ತರದಲ್ಲಿರುವ ಗಿರಿಕಂದರಗಳ ಈ ನಾಡು, 10ನೇ ಶತಮಾನಕ್ಕೂ ಮುಂಚೆಯೇ ‘ಮಾಂಡು’ ಎಂಬ ಹೆಸರನ್ನು ಪಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ವಿಂಧ್ಯಪರ್ವತದ ಅಂಚಿನಲ್ಲಿ, ನರ್ಮದಾ ನದಿಯ ದಕ್ಷಿಣ ದಡದಲ್ಲಿರುವ ಈ ಸುಂದರ ಪ್ರದೇಶದಲ್ಲಿ 10 ಮತ್ತು 12ನೇ ಶತಮಾನದಲ್ಲಿ ‘ಪರಮಾರ’ ವಂಶಸ್ಥರು ಆಳ್ವಿಕೆ ನಡೆಸುತ್ತಿದ್ದರು. ನಂತರ ದೆಹಲಿ ಸುಲ್ತಾನರ ಪ್ರತಿನಿಧಿಗಳು ನಿರಂತರವಾಗಿ ದಾಳಿ ನಡೆಸಿದರು. ಈ ಪ್ರದೇಶದ ಮೇಲೆ ದಾಳಿ ನಡೆಸಿದ ಎಲ್ಲ ಸುಲ್ತಾನರು ಒಂದಿಲ್ಲೊಂದು ಸ್ಮಾರಕಗಳನ್ನು ನಿರ್ವಿುಸಿರುವುದು ವಿಶೇಷ.