- ಭಾರತವು 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರ. ಇಷ್ಟೊಂದು ಬೃಹತ್ ಮಾನವ ಸಂಪನ್ಮೂಲಕ್ಕೆ ಉದ್ಯೋಗ ಒದಗಿಸುವುದು ಸವಾಲಿನ ಸಂಗತಿ. ಈಗಲೂ ಬಹುತೇಕರು ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುವ ಪರಿಸ್ಥಿತಿ ಇದೆ. ಇಂತಹುದರಲ್ಲಿ ಒಂದಿಷ್ಟು ಪ್ರತಿಭಾವಂತರು ವಿದೇಶಗಳಲ್ಲಿ ಉದ್ಯೋಗ ಕಂಡುಕೊಂಡರೆ, ಇಲ್ಲಿ ಉದ್ಯೋಗ ಸೃಷ್ಟಿಯ ಹೊರೆಯನ್ನು ತಗ್ಗಿಸಿದಂತಾಗುತ್ತದೆ.
- ಮುಂದುವರಿದ ದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಭಾರತದಿಂದ ವಲಸೆ ಹೋಗಿರುವವರು ಇದರಿಂದಾಗಿ ಹೆಚ್ಚಿನ ಅನುಭವ, ಪರಿಣತಿ ಪಡೆದುಕೊಳ್ಳುತ್ತಾರೆ. ಅವರು ಮರಳಿದರೆ ಪ್ರತಿಭಾ ಪಲಾಯನದ ವಾಪಸಾತಿ ಆಗುತ್ತದೆ. ಆಗ ಅವರ ಅನುಭವದಿಂದ ತಾಯ್ನಾಡಿಗೆ ಲಾಭ ಉಂಟಾಗುತ್ತದೆ. ತಾಯ್ನಾಡಿಗೆ ವಾಪಸಾಗಿ ಕೈಗಾರಿಕೆ, ಉದ್ಯಮ ಆರಂಭಿಸಿ ಉದ್ಯೋಗ ಸೃಷ್ಟಿಗೆ ಕಾರಣವಾದ ಉದಾಹರಣೆಗಳು ಸಾಕಷ್ಟಿವೆ.
- ವಲಸೆ ಹೋಗಿರುವ ಪ್ರತಿಭಾವಂತರೆಲ್ಲರೂ ಅಲ್ಲಿಯೇ ಉಳಿದುಕೊಳ್ಳುವುದಿಲ್ಲ. ಸಾಕಷ್ಟು ಮಂದಿ ತಾಯ್ನಾಡಿಗೆ ಮರಳುತ್ತಾರೆ. ಅಲ್ಲಿ ತಾವು ಗಳಿಸಿದ ಹಣವನ್ನು ತಮ್ಮೂರಿಗೆ ರವಾನಿಸುತ್ತಲೇ ಇರುತ್ತಾರೆ. ಆ ಊರಿನಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಲು ಈ ಹಣ ಅನುವು ಮಾಡಿಕೊಡುತ್ತದೆ. ಉದಾ: ಸ್ವಂತ ಊರಿನಲ್ಲಿ ಮನೆ ನಿರ್ವಿುಸಿದರೆ, ಅದರಿಂದ ಕಟ್ಟಡ ಕಾರ್ವಿುಕರಿಗೆ ಉದ್ಯೋಗ ಲಭಿಸುತ್ತದೆ; ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ವಹಿವಾಟು ಹೆಚ್ಚುತ್ತದೆ.
- ವಿದೇಶಗಳಲ್ಲಿ ಕೆಲಸ ಮಾಡುವವರು ವಿದೇಶಿ ವಿನಿಮಯ ಗಳಿಕೆಗೆ ಸಾಕಷ್ಟು ಕೊಡುಗೆ ನೀಡುತ್ತಾರೆ. ಇದರಿಂದ ದೇಶದ ಆರ್ಥಿಕ ಪ್ರಗತಿ, ವಿದೇಶಿ ವ್ಯಾಪಾರ ಸದೃಢವಾಗಿರಲು ಅನುಕೂಲವಾಗುತ್ತದೆ. ಉದಾ: ಪೆಟ್ರೋಲ್, ಡಿಸೇಲ್ ಉತ್ಪನ್ನಗಳ ಆಮದಿಗೆ ವಿದೇಶಿ ವಿನಿಮಯ ಲಭಿಸುತ್ತದೆ.
- ವಲಸೆ ಹೋಗಿರುವ ದೇಶದೊಂದಿಗೆ ತಾಯ್ನಾಡಿನ ವ್ಯಾಪಾರ ವಹಿವಾಟು ವೃದ್ಧಿಸಲು ಹಾಗೂ ರಫ್ತು ಉತ್ತೇಜನಕ್ಕೆ ಇವರು ನೆರವಾಗುತ್ತಾರೆ. ಅಲ್ಲದೆ, ಪರಸ್ಪರ ದೇಶಗಳ ನಡುವೆ ರಾಜಕೀಯವಾಗಿ ಸಂಬಂಧ ವೃದ್ಧಿಗೂ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.
- ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಇದು ಸಾಧು- ಸಂತರ ನಾಡು, ಹಾವಾಡಿಗರ ದೇಶ ಎಂಬ ಗ್ರಹಿಕೆ ವಿಶ್ವದ ಅನೇಕ ಕಡೆ ಮನೆ ಮಾಡಿತ್ತು. ಆದರೆ, ನಮ್ಮ ಪ್ರತಿಭೆಗಳು ವಿದೇಶಗಳಿಗೆ ತೆರಳಿ ತಮ್ಮ ಪರಿಣತಿ ಪ್ರದರ್ಶಿಸತೊಡಗಿದ ನಂತರ ಈ ಗ್ರಹಿಕೆ ಬದಲಾಗಿದೆ. ವಿಶೇಷವಾಗಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಪ್ರತಿಭೆಯನ್ನು ಇಡೀ ಜಗತ್ತೇ ಗುರುತಿಸಿ ಕೊಂಡಾಡುವಂತಾಗಿದೆ.
ಮಿದುಳಿನ ಠೇವಣಿ ಮೋದಿ ಶ್ಲಾಘನೆ: ‘ಬ್ರೇನ್ ಡ್ರೇನ್ ವಾಸ್ತವವಾಗಿ ಬ್ರೇನ್ ಗೇನ್ ಆಗಿದ್ದು ಅದು ಸೂಕ್ತ ಸಮಯದಲ್ಲಿ ಭಾರತಕ್ಕೆ ಸೇವೆ ಸಲ್ಲಿಸುತ್ತದೆ’ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಷ್ಟ ಅಭಿಪ್ರಾಯ. ‘ಅಮೆರಿಕದ ಭಾರತೀಯರ ಬೆರಳುಗಳಲ್ಲಿನ ಮ್ಯಾಜಿಕ್ನಿಂದಾಗಿ ಭಾರತದ ಬಗ್ಗೆ ವಿಶ್ವದ ಗ್ರಹಿಕೆ ಬದಲಾಗಿದೆ. ನಾನು ಇದನ್ನು ವಿಭಿನ್ನವಾಗಿ ನೋಡುತ್ತೇನೆ. ಇದು ನಿಜವಾಗಿ ಮಿದುಳಿನ ಠೇವಣಿಯಾಗಿದೆ. ಇದು ತಾಯ್ನಾಡಿಗೆ ಉಪಯೋಗವಾಗುವ ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಭಾರತೀಯ ಸಮುದಾಯವು ವಿದೇಶಿ ನೆಲದಲ್ಲಿ ಶ್ರಮ, ಶಿಸ್ತು, ಶಾಂತಿ ಮತ್ತು ಪ್ರೀತಿಯ ಸ್ವಭಾವಗಳ ಮೂಲಕ ಮಾದರಿಯಾಗಿ ಹೊರಹೊಮ್ಮಿದೆ’ ಎಂದೂ ಮೋದಿ ಸಾಕಷ್ಟು ಬಾರಿ ಶ್ಲಾಘಿಸಿದ್ದಾರೆ.
ರೆಮಿಟೆನ್ಸ್ ಗಳಿಕೆಯಲ್ಲಿ ಭಾರತ ನಂಬರ್ 1: ವಿದೇಶಗಳಿಗೆ ತೆರಳಿ ಉದ್ಯೋಗ, ವ್ಯಾಪಾರ ಮಾಡುವವರು ತಾವು ಗಳಿಸಿದ ಹಣವನ್ನು ಸ್ವದೇಶದಲ್ಲಿನ ತಮ್ಮ ಬಂಧುಗಳಿಗೆ ಕಳುಹಿಸುವ ಹಣವನ್ನು ರೆಮಿಟನ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಈ ರೀತಿ ನಮ್ಮ ದೇಶಕ್ಕೆ ಬರುವ ರಿಮಿಟೆನ್ಸ್ ಎಷ್ಟು ಗೊತ್ತೆ? ಕರ್ನಾಟಕ ಸರ್ಕಾರದ ಬಜೆಟ್ನ ಎರಡೂವರೆ ಪಟ್ಟು! ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ ಮೊತ್ತ 2,65,720 ಕೋಟಿ ರೂಪಾಯಿ. ಆದರೆ, ಕೋವಿಡ್ ಸಂಕಷ್ಟದ ನಡುವೆಯೂ 2020ರಲ್ಲಿ ಭಾರತಕ್ಕೆ ಬಂದ ರೆಮಿಟೆನ್ಸ್ ಮೊತ್ತ 82.73 ಬಿಲಿ ಯನ್ ಡಾಲರ್ (6,53,567 ಕೋಟಿ ರೂಪಾಯಿ) ಹಾಗೂ 2021ರಲ್ಲಿ 82.73 ಬಿಲಿಯನ್ ಡಾಲರ್ (7,03,100 ಕೋಟಿ ರೂಪಾಯಿ). ಜಗತ್ತಿನಲ್ಲಿಯೇ ಅತ್ಯಧಿಕ ರೆಮಿಟನ್ಸ್ ಗಳಿಸುವ ದೇಶ ಭಾರತ ವಾಗಿದೆ. ಮೆಕ್ಸಿಕೊ, ಚೀನಾ, ಫಿಲಿಪ್ಪಿನ್ಸ್, ಈಜಿಪ್ತ್ ದೇಶಗಳು ನಂತರದ ಸ್ಥಾನ ಪಡೆದುಕೊಳ್ಳುತ್ತವೆ. ಇನ್ನು, ಭಾರತದಲ್ಲಿ ಅತಿಹೆಚ್ಚು ರೆಮಿಟೆನ್ಸ್ ಪಡೆದುಕೊಳ್ಳುವ ರಾಜ್ಯ ಕೇರಳ (ಶೇ. 19). ಇಲ್ಲಿಯ ಲಕ್ಷಾಂತರ ಜನರು ವಿಶೇಷವಾಗಿ ಗಲ್ಪ್ ದೇಶಗಳಲ್ಲಿ ಉದ್ಯೋಗ ಕೈಗೊಳ್ಳುತ್ತಿರುವುದು ಇದಕ್ಕೆ ಕಾರಣ. ಇನ್ನು ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ಒಟ್ಟು ಭಾರತೀಯರ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ 3 ಕೋಟಿ 20 ಲಕ್ಷ ಎಂದು ಅಂದಾಜಿಸಲಾಗಿದೆ. ಅನಿವಾಸಿ ಭಾರತೀಯರ ಪೈಕಿ ಹೆಚ್ಚಿನವರು ಅರಬ್ ಸಂಯುಕ್ತ ರಾಷ್ಟ್ರ (ಯುಎಇ), ಸೌದಿ ಅರೇಬಿಯಾ, ಅಮೆರಿಕದಲ್ಲಿ ಇದ್ದಾರೆ.