| ಬಿ.ಎಸ್. ಮಂಜುನಾಥ್
ತಾಯ್ತನ ಬೇಡ, ತಾಯಿಯಾಗಬೇಕು, ಪ್ರಸವದ ನೋವು ಬೇಡ, ಮಗುವಿನ ನಲಿವು ಬೇಕು, ಹಾಲುಣಿಸುವುದು ಬೇಡ, ಮುತ್ತಿಡಲು ಹಾಲ್ಗೆನ್ನೆ ಬೇಕು. ಪತ್ನಿ ಮಗುವನ್ನು ಹೆರದೆಯೇ ಆರೋಗ್ಯವಾಗಿರಬೇಕು, ಆದರೂ ಅಮ್ಮನಾಗಬೇಕು....ಬದಲಾಗುತ್ತಿರುವ ಭಾರತ ಹಾಗೂ ಭಾರತೀಯ ಪತಿ, ಪತ್ನಿಯರ ತುಡಿತವಿದು, ಮನದ ಮಿಡಿತವಿದು. ಯಾರದ್ದೋ ಗರ್ಭ, ಯಾರದ್ದೋ ಕರುಳು, ಹಣ ಕೊಟ್ಟರೆ ಕತ್ತರಿಸಿದ ಬಳ್ಳಿ ಸಿಗುವಾಗ ಕೆಲಸ, ಕಾರ್ಯ ಬಿಟ್ಟು, ದೇಹಾರೋಗ್ಯ ಮರೆತು ಮಗು ಹೆರುವುದು ಯಾರಿಗೆ ಬೇಕು ಎಂಬ ಅನಿಸಿಕೆ. ಒಂದೆರಡು ಮನೆಯ ಕತೆಯಲ್ಲ ಇದು. ಆಗಷ್ಟೇ ಮದುವೆ ಆದವರು, ಎರಡನೇ ಮಗು ಬೇಕಾದವರು, ಸದಾ ಸುದ್ದಿಯಲ್ಲಿರಲು ಬಯಸುವವರು, ಹೆತ್ತರೆ ಸೌಂದರ್ಯ ಕೆಡುತ್ತದೆ ಎಂದು ಕೊರಗುವವರ ಮನೆಯ ನಾಲ್ಕು ಗೋಡೆಗಳ ನಡುವೆ ಈ ‘ಗರ್ಭಗುಡಿ’ಯ ಕಥೆ, ವ್ಯಥೆಯೀಗ ನಿತ್ಯ ಮಾಮೂಲು. ಎದೆ ಹಾಲಷ್ಟೇ ಅಲ್ಲ, ತಾಯಿಯ ಒಡಲೂ ಈಗ ಮಾರಾಟಕ್ಕಿದೆ. ಮಗು ಹೆತ್ತುಕೊಡುವ ಬಾಡಿಗೆ ತಾಯಂದಿರಿಗೆ ಮಮಕಾರ ಮಾರಿಕೊಳ್ಳುವ ಅಧಿಕಾರವೂ ಇದೆ. ರಕ್ತ ಸಂಬಂಧದ ಬೆಸುಗೆಯಲ್ಲಿ ಜನ್ಮತಾಳುವ ಕಂದಮ್ಮಗಳನ್ನು ರೆಡಿಮೇಡ್ ಗೊಂಬೆಗಳಂತೆ ತಂದು ಸಾಕುವವರು ಹೆಚ್ಚುತ್ತಿದ್ದಾರೆ. ಬಂಜೆ ಎಂದು ಕರೆಸಿಕೊಳ್ಳುವ ತಾಯಿ ಮಡಿಲಿಗೆ ಕಂದನನ್ನಿಡುವ ಆಶಯದ ಬಾಡಿಗೆ ತಾಯ್ತನ ಈಗ ತನ್ನ ಆಶಯವನ್ನೇ ಮರೆತು ವ್ಯವಹಾರಕ್ಕೆ ದಾರಿ ಮಾಡಿಕೊಟ್ಟಿದೆ.
ಮಸೂದೆಗೆ ಕಾರಣವೇನು?: ಭಾರತದಲ್ಲಿ ಬಾಡಿಗೆ ತಾಯ್ತನ ದಂಧೆಯಾಗಿದೆ. ಹಲವು ನಗರಗಳಲ್ಲಿ ಇದೇ ಉದ್ಯಮವಾಗಿದೆ. ಬಡ, ನಿರ್ಗತಿಕ, ಅಮಾಯಕ ಮಹಿಳೆಯರ ಕೈಗೆ ಅಷ್ಟೋ ಇಷ್ಟೋ ಹಣ ನೀಡಿ ಆಮಿಷವೊಡ್ಡಿ ಬಳಸಿಕೊಳ್ಳಲಾಗುತ್ತಿದೆ. ಮಗು ಸಿಕ್ಕ ಬಳಿಕ ತಾಯಿಯ ಆರೋಗ್ಯವನ್ನೂ ವಿಚಾರಿಸದೆ ಸಂಕಷ್ಟದ ಸ್ಥಿತಿಯಲ್ಲಿ ಕೈಕೊಟ್ಟು ಓಡಿ ಹೋಗುವ ಪ್ರಕರಣ ಹೆಚ್ಚಾಗಿದೆ. ಈ ದೌರ್ಜನ್ಯ ತಡೆದು ಮಹಿಳೆಯರಿಗೆ ಕಾನೂನಿನ ರಕ್ಷಣೆ ನೀಡಲು ಬಾಡಿಗೆ ತಾಯ್ತನ (ನಿಯಂತ್ರಣ ವಿಧೇಯಕ) ರೂಪಿಸಲಾಗಿದೆ.
ಏನಿದು ಬಾಡಿಗೆ ತಾಯ್ತನ?: ದಂಪತಿ ಸಮ್ಮತಿಯೊಂದಿಗೆ ಪುರುಷನೊಬ್ಬನ ವೀರ್ಯವನ್ನು ಜೈವಿಕ ತಾಯಿಯ (ಮಗು ಹೆರಲು ಒಪ್ಪಿದ ಮಹಿಳೆ) ಅಂಡಾಣುವಿನಲ್ಲಿ ಬೆಳೆಸಿ ಮಗು ಪಡೆಯುವ ವಿಧಾನ. ಕೆಲ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಕಾರಣಕ್ಕೆ ಪುರುಷ ದಾನಿಯಿಂದ ವೀರ್ಯ ಪಡೆದು ಮಗು ಪಡೆಯಲಾಗುತ್ತದೆ. ಅಂಕಿ-ಅಂಶದ ಪ್ರಕಾರ ಪ್ರತಿ ಬಾಡಿಗೆ ತಾಯಿಗೆ 8ರಿಂದ 17 ಲಕ್ಷ ರೂ.ವರೆಗೆ ಬೇಡಿಕೆ ಇದೆ.
ಭಾರತದಲ್ಲೇನಿದೆ?: ಕೆಲವೇ ವರ್ಷಗಳ ಹಿಂದೆ ವಿದೇಶಗಳಿಗೆ ಸೀಮಿತವಾಗಿದ್ದ ಬಾಡಿಗೆ ತಾಯ್ತನ ಈಗ ಭಾರತದಲ್ಲೂ ಸಹಜ ಪ್ರಕ್ರಿಯೆಯಾಗಿದೆ. ಈ ಪದ್ಧತಿಯನ್ನು 2002ರಲ್ಲಿ ಕಾನೂನುಬದ್ಧ ಮಾಡಲಾಗಿದೆ. 2011ರ ವೇಳೆಗೆ ಬಾಡಿಗೆ ತಾಯ್ತನದ ಪ್ರಕರಣ ದೇಶದಲ್ಲಿ 133 ಪಟ್ಟು ಏರಿಕೆ ಕಂಡಿರುವುದು ಇದರ ಪ್ರಾಬಲ್ಯಕ್ಕೆ ಸಾಕ್ಷಿ.
ಹೆಣ್ತನ ಗೌರವಿಸಿ: ಇದೊಂದು ವೈದ್ಯಕೀಯ ಪದ್ಧತಿಯಾದರೂ ಆರೋಗ್ಯ ವಲಯದಲ್ಲೇ ಬಾಡಿಗೆ ತಾಯ್ತನಕ್ಕೆ ವಿರೋಧವಿದೆ. ಋತುಮತಿ, ಗರ್ಭವತಿ ಆಗುವುದು ಹೆಣ್ತನದ ಲಕ್ಷಣ. ದೇಹ ಸೌಂದರ್ಯ, ಸ್ವಾತಂತ್ರ್ಯ, ಸ್ವೇಚ್ಛಾಚಾರ, ಪುರುಷರಿಗೆ ಸಮಾನರಾಗಬೇಕೆಂಬ ಕಾರಣ ಮುಂದಿಟ್ಟು ಇದನ್ನು ಕಡೆಗಣಿಸುವುದು ಆರೋಗ್ಯಕ್ಕೂ ಹಾನಿಕರ ಎಂದು ವೈದ್ಯರೇ ಬೇಸರ ವ್ಯಕ್ತಪಡಿಸಿದ್ದಾರೆ.
ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com