ಅಂಕಣ

ಇ-ಸ್ಪೋರ್ಟ್ಸ್ ಕರಿಯರ್ ಜಗತ್ತಿನ ಹೊಸ ಆಕರ್ಷಣೆ

ಆನ್​ಲೈನ್ ಗೇಮಿಂಗ್​ಗಿಂತ ಭಿನ್ನವಾದ ಇ-ಸ್ಪೋರ್ಟ್ಸ್ ಈಗ ಬಿಲಿಯನ್ ಡಾಲರ್ ಉದ್ಯಮ. ಇದರಲ್ಲೂ ಈಗ ಕರಿಯರ್ ರೂಪಿಸಬಹುದು! 2025ರ ವೇಳೆಗೆ ಭಾರತದಲ್ಲಿ 20ಕ್ಕೂ ಹೆಚ್ಚು ಬ್ರಾಡ್​ಕಾಸ್ಟರ್ಸ್ (ಸಂಘಟಕರು) ಸೇರಿ ಇ-ಸ್ಪೋರ್ಟ್ಸ್ ಮಾರುಕಟ್ಟೆಯನ್ನು ಬಲಪಡಿಸಲಿದ್ದಾರೆ. ಇದೇ ವೇಳೆ, 15 ಲಕ್ಷ ಇ-ಸ್ಪೋರ್ಟ್ಸ್ ಆಟಗಾರರು ಇರಲಿದ್ದಾರೆ.

| ಜಗದೀಶ್ ಬಳಂಜ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ಡಿಜಿಟಲ್ ತಂತ್ರಜ್ಞಾನಗಳು ಜಗತ್ತನ್ನು ಅಳುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳು ಇಲೆಕ್ಟ್ರಾನಿಕ್ ವ್ಯವಸ್ಥೆಗೆ ಹೊಂದಿಕೊಂಡಿವೆ. ಆಧುನಿಕತೆಯ ನಾಗಲೋಟದ ಭರಾಟೆಯಲ್ಲಿ ಶಿಕ್ಷಣ, ಅರೋಗ್ಯ ಮತ್ತು ಉದ್ಯಮ ಕ್ಷೇತ್ರಗಳು ಹೊಸ ದಿಕ್ಕಿನತ್ತ ಮುಖಮಾಡಿದೆ. ಕ್ರೀಡಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಇ-ಸ್ಪೋರ್ಟ್ಸ್ ವಲಯವು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸುತ್ತಿದೆ. ಇ-ಸ್ಪೋರ್ಟ್ಸ್ ಎಂದರೆ ನಾವು ಮಾಮೂಲಿಯಾಗಿ ಕಂಡಿರುವ ವಿಡಿಯೋ ಗೆಮ್ಳಂತೆ ಒಂದಿಷ್ಟು ಸುಧಾರಿತ ವ್ಯವಸ್ಥೆ. ಕ್ರೀಡಾಂಗಣದಲ್ಲಿ ಆಡುವ ಬದಲಾಗಿ ಆಟಗಾರರು ಇಲೆಕ್ಟ್ರಾನಿಕ್ ಪರದೆಯಲ್ಲಿ ಛಾಪು ಮೂಡಿಸುತ್ತಾರೆ. ಗ್ಯಾಜೆಟ್​ಗಳ ಮೂಲಕವೆ ಎದುರಾಳಿಯೊಂದಿಗೆ ಗೆಲುವಿಗಾಗಿ ಸೆಣಸಾಡುವ ವೇದಿಕೆಯಾಗಿದೆ. ಒಟ್ಟಾರೆಯಾಗಿ ಇದೊಂದು ಕ್ರೀಡಾಕ್ಷೇತ್ರದಲ್ಲಿ ಉಂಟಾದ ಎಲೆಕ್ಟ್ರಾನಿಕ್ ಸ್ಪರ್ಶವೇ ಸರಿ.

ಜನಪ್ರಿಯವಾಗುತ್ತಿದೆ ಇ-ಕ್ರೀಡೆ: ಮತ್ತೊಂದೆಡೆ, ಐಓಸಿಯು 2032 ರಲ್ಲಿ ಬ್ರಿಸ್ಬನ್ ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇ-ಸ್ಪೋರ್ಟ್ಸ್​ಗೆ ಮಾನ್ಯತೆಯನ್ನು ನೀಡಿದೆ. ಯುವ ಸಮುದಾಯ ಇ-ಸ್ಪೋರ್ಟ್ಸ್​ನಲ್ಲಿ ಹೆಚ್ಚು ಉತ್ಸಾಹ, ಆಸಕ್ತಿ ತೋರುವುದರ ಜತೆಗೆ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿರುವುದರಿಂದ ಇ-ಸ್ಪೋರ್ಟ್ಸ್ ನಿಧಾನವಾಗಿ ಜಾಗತಿಕ ಕ್ರೀಡಾವಲಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. 2019 ರಲ್ಲಿ ಪೋರ್ಟ್​ನೈಟ್ ವಿಶ್ವಕಪ್​ನಲ್ಲಿ ಬಾಲಕನೊಬ್ಬ 3 ದಶಲಕ್ಷ ಡಾಲರ್ ನಗದು ಬಹುಮಾನವನ್ನು ಬಾಚಿಕೊಂಡಿದ್ದ. ಈ ಸ್ಪರ್ಧೆಯಲ್ಲಿ ಬರೋಬ್ಬರಿ 40 ದಶಲಕ್ಷ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಕೇವಲ 100 ಜನ ಮಾತ್ರ ಕನಿಷ್ಠ 50,000 ರೂಪಾಯಿ ಗೆದ್ದುಕೊಂಡರು. ಹಾಗಾಗಿ ಇ-ಸ್ಪೋರ್ಟ್ಸ್ ಮೂಲಕ ಎಲ್ಲರೂ ಹಣ ಗಳಿಸುವುದು ಅಸಾಧ್ಯ. ಒಬ್ಬ ಅದೃಷ್ಟಶಾಲಿ ಮಿಲಿಯನ್ ಗಟ್ಟಲೆ ಆದಾಯವನ್ನು ತನ್ನದಾಗಿಸಿಕೊಂಡು ಲಾಭಗಳಿಸುವ ವಿಫುಲ ಅವಕಾಶಗಳನ್ನು ಇ-ಸ್ಪೋರ್ಟ್ಸ್ ಒದಗಿಸುತ್ತದೆ.

ಅಮೆರಿಕದಲ್ಲಿ ವಿಶೇಷ ಪ್ರೋತ್ಸಾಹ: ಆರಂಭದಲ್ಲಿ ಹವ್ಯಾಸವಾಗಿ ರೂಪುಗೊಂಡ ಇ-ಸ್ಪೋರ್ಟ್ಸ್ ವ್ಯವಸ್ಥೆ ಇಂದು ಬಿಲಿಯನ್ ಡಾಲರ್ ಉದ್ಯಮವಾಗಿ ಬೆಳೆದಿದೆ. ಅಮೆರಿಕದಲ್ಲಿ 600 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಇ-ಸ್ಪೋರ್ಟ್ಸ್ ತಂಡವನ್ನು ಕಟ್ಟುವ ಸಲುವಾಗಿ ವಿಶೇಷ ಧನಸಹಾಯವನ್ನು ನೀಡುತ್ತಿವೆ. ಅಷ್ಟೇ ಅಲ್ಲದೆ ಪ್ಲೇವಿಎಸ್ ನ ಸಹಕಾರದಲ್ಲಿ 19,500 ಹೈಸ್ಕೂಲ್ ಗಳಲ್ಲಿ ಇ- ಸ್ಪೋರ್ಟ್ಸ್ ಕಲಿಸುವ ಘೊಷಣೆ ಮಾಡಿದೆ. ಈ ಅಂಕಿ-ಅಂಶಗಳೇ ಇ- ಸ್ಪೋರ್ಟ್ಸ್ ಅಮೆರಿಕದಲ್ಲಿ ಎಷ್ಟು ವ್ಯಾಪಕವಾಗಿದೆ ಎಂಬುವುದನ್ನು ತಿಳಿಸುತ್ತದೆ.

ಕ್ರೀಡಾ ಕೌಶಲವೂ ಬೇಕು: ವಿಡಿಯೋ ಗೇಮ್ಳಂತೆ ಕೇವಲ ಒಂದು ಸ್ವಿಚ್​ನ ಮೂಲಕ ಇಲ್ಲಿ ಗೆಲುವನ್ನು ಸಾಧಿಸಲು ಸಾಧ್ಯವಿಲ್ಲ. ಅದಕ್ಕಿಂತ ಭಿನ್ನವಾದ ಕೌಶಲಗಳ ಅಗತ್ಯ ಇ-ಸ್ಪೋರ್ಟ್ಸ್​ನಲ್ಲಿ ಇರಬೇಕಾಗುತ್ತದೆ. ಮೈದಾನಗಳಲ್ಲಿ ನಡೆಯುವ ಕ್ರೀಡೆಗಳಂತೆ ದೈಹಿಕ ಚುರುಕುತನ, ಏಕಾಗ್ರತೆ ಮತ್ತು ಕ್ರಿಯಾತ್ಮಕ ತಂತ್ರಗಾರಿಕೆಯ ಸಮ್ಮಿಲನವಾದಾಗ ಇ-ಸ್ಪೋರ್ಟ್ಸ್​ನಲ್ಲಿ ಯಶಸ್ಸು ಕಾಣಬಹುದು. ವೃತ್ತಿಪರ ಆಟಗಾರರು ಹೆಚ್ಚಾಗಿ ಅಧಿಕ ಆದಾಯ ಗಳಿಸುವ ಸಲುವಾಗಿ ತಂಡಗಳನ್ನು ಸೇರುತ್ತಾರೆ ಅಥವಾ ಏಕಾಂಗಿಯಾಗಿ ಆಡುತ್ತಾರೆ. ಪ್ರತಿಯೊಂದು ತಂಡವು ಲೀಗ್ ಆಫ್ ಲೆಜೆಂಡ್ಸ್, ಡೋಟಾ ಅಥವಾ ಕೌಂಟರ್-ಸ್ಟ್ರೈಕ್​ನಂತಹ ನಿರ್ದಿಷ್ಟ ಆಟದಲ್ಲಿ ಪರಿಣತಿ ಹೊಂದಿರುತ್ತದೆ. ಈ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವ ತಂಡಗಳು ಟ್ವಿಟರ್​ನಂತಹ ಸಾಮಾಜಿಕ ವಲಯದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಸಂಪಾದಿಸಿರುತ್ತವೆ. ಲಕ್ಷಾಂತರ ಜನ ಆನ್​ಲೈನ್ ಮೂಲಕ ಪಂದ್ಯವಳಿಗಳನ್ನು ವೀಕ್ಷಿಸುತ್ತಿರುತ್ತಾರೆ.

ಭಾರತದ್ದೂ ಇದೆ ತಂಡ: ಅರ್ನ್ಸ್ ಮತ್ತು ಯಂಗ್ ವರದಿಯ ಪ್ರಕಾರ 2025 ರ ವೇಳೆಗೆ ಭಾರತದಲ್ಲಿ ಇ-ಸ್ಪೋರ್ಟ್ಸ್ ವಲಯ ದಲ್ಲಿನ ವಹಿವಾಟು ಪ್ರಮಾಣ 1100 ಕೋಟಿ ರೂಪಾಯಿ ಗಡಿದಾಟುವ ಮೂಲಕ ಅವಕಾಶಗಳು ಮತ್ತಷ್ಟು ವಿಸ್ತಾರಗೊಳ್ಳಲಿವೆ. ಇದಕ್ಕೆ ಮುನ್ನುಡಿ ಎಂಬಂತೆ ಮೊದಲ ಬಾರಿಗೆ 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಕ್ರೀಡೆಯಾಗಿ ಇ-ಸ್ಪೋರ್ಟ್ಸ್ ಅನ್ನು ಸೇರ್ಪಡೆ ಗೊಳಿಸಲಾಗಿದೆ. ಸಮರ್ಥ ಅರವಿಂದ್ ತ್ರಿವೇದಿ, ಮಿಹಿರ್ ರಂಜನ್, ಆಕಾಶ್ ಶಾಂಡಿಲ್ಯ ಸೇರಿ 18 ಜನರ ಭಾರತದ ತಂಡವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ.

ಅಧಿಕೃತ ಕ್ರೀಡಾಕೂಟಗಳಲ್ಲೂ ಮಾನ್ಯತೆ: ಇ-ಸ್ಪೋರ್ಟ್ಸ್​ಗೆ ಅಧಿಕೃತ ಕ್ರೀಡಾಕೂಟಗಳಲ್ಲಿ 2021 ರಲ್ಲಿ ಮಾನ್ಯತೆ ಸಿಕ್ಕಿದೆ. ಈ ಕ್ರೀಡಾಕೂಟದ 4200 ಪಂದ್ಯಾಟಗಳಿಂದ ಆಟಗಾರರು ಸುಮಾರು 200 ದಶಲಕ್ಷ ಡಾಲರ್​ಗಳಷ್ಟು ಆದಾಯಗಳಿಸಿದ್ದಾರೆ. ಯಾವುದೇ ವ್ಯಕ್ತಿಗೆ ಇದರಲ್ಲಿ ಭಾಗವಹಿಸಲು ಅವಕಾಶವಿದು, ತನಗಿಷ್ಟವಾದ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಸೂಕ್ತ ತರಬೇತಿಯನ್ನು ಪಡೆಯಬೇಕು. ನಂತರ ಗ್ಲೋಬಲ್ ಇ-ಸ್ಪೋರ್ಟ್ಸ್ ನಂತಹ ವೇದಿಕೆಗಳಲ್ಲಿ ಸೇರಿಕೊಳ್ಳುವ ಮೂಲಕ ಯಶಸ್ವಿಯಾಗಬಹುದಾಗಿದೆ. ಈ ಇ-ಸ್ಪೋರ್ಟ್ಸ್ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿಯನ್ನು ಗಳಿಸಿದ್ದು ಫಿಫಾ, ವಿಶ್ವಕಪ್, ರಾಕೆಟ್ ಲೀಗ್, ಇ-ಸ್ಪೋರ್ಟ್ಸ್, ವಿಸಿಟಿ ಮುಂತಾದ ಟೂರ್ನಮೆಂಟ್​ಗಳಲ್ಲಿ ಆಟಗಾರರು ಮಿಂಚುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಂಪನಿಗಳು ವೇತನದ ಆಧಾರದಲ್ಲಿ ಕ್ರೀಡಾರ್ಥಿಗಳನ್ನು ನೇಮಿಸಿಕೊಳ್ಳುತ್ತಿರುವುದು ಇ-ಸ್ಪೋರ್ಟ್ಸ್ ಬೆಳವಣಿಗೆಯನ್ನು ಸೂಚಿಸುತ್ತದೆ.

ಭವಿಷ್ಯದತ್ತ ವರ್ತಮಾನದ ಕ್ರೀಡೆ: ಇ-ಸ್ಪೋರ್ಟ್ಸ್ ಇಂದು ಮನರಂಜನೆ ನೀಡುವುದ ರೊಂದಿಗೆ ಆದಾಯ ಗಳಿಕೆಯ ಪರ್ಯಾಯ ದಾರಿಯಾಗಿದ್ದರೂ, ಆರೋಗ್ಯದ ಮೇಲೆ ಅದು ಬೀರುವ ಪರಿಣಾಮಗಳನ್ನು ಅಲ್ಲಗೆಳೆಯುವಂತಿಲ್ಲ. ವಿಶ್ವದ ಪ್ರಸಿದ್ದ ಇ-ಸ್ಪೋರ್ಟ್ಸ್ ಆಟಗಾರ ಫೇಕರ್ ದಿನದ 12 ರಿಂದ 15 ಗಂಟೆ ಸಮಯವನ್ನು ಈ ಆಟದಲ್ಲಿ ಕಳೆಯುತ್ತಾರೆ. ಇ-ಸ್ಪೋರ್ಟ್ಸ್​ನಲ್ಲಿ ಯಶಸ್ವಿಯಾಗಲು ಬಯಸುವ ಎಲ್ಲರೂ ಗಂಟೆಗಟ್ಟಲೆ ಡಿಜಿಟಲ್ ಪರದೆಯ ಎದುರು ಕುಳಿತುಕೊಳ್ಳಬೇಕಾಗುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂಬುವುದನ್ನು ಸಂಶೋಧನೆಗಳು ದೃಢಪಡಿಸಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ತ್ವರಿತ ಬೆಳವಣಿಗೆಗಳಿಂದಾಗಿ ಇ-ಸ್ಪೋರ್ಟ್ಸ್ ವಲಯವು ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಆಟಗಾರರಿಗೆ ಪರಿಚಯಿಸುತ್ತಿವೆ. ಪ್ರಸ್ತುತ ಡಿಜಿಟಲ್ ವ್ಯವಸ್ಥೆ ವ್ಯಾಪಿಸುತ್ತಿರುವ ಗತಿಯನ್ನು ಗಮನಿಸಿದಾಗ ಮುಂದಿನ 5-10 ವರ್ಷಗಳಲ್ಲಿ ಇ-ಸ್ಪೋರ್ಟ್ಸ್ ಸಾಂಪ್ರದಾಯಿಕ ಕ್ರೀಡಾ ಪದ್ಧತಿಗಳ ಸೌಂದರ್ಯ ವನ್ನು ಮರೆಮಾಡುವುದರಲ್ಲಿ ಸಂಶಯವಿಲ್ಲ.

ಉದ್ಯೋಗಾವಕಾಶವೂ ಹೆಚ್ಚಳ: ಇ-ಸ್ಪೋರ್ಟ್ಸ್ ಬೆಳೆಯುತ್ತಿರುವಂತೆ ವಿಪುಲ ಉದ್ಯೋಗ ಅವಕಾಶಗಳು ಕೂಡಾ ಯುವಕರಿಗೆ ಸೃಷ್ಟಿಯಾಗುತ್ತಿದೆ. ಡಿಜಿಟಲ್ ವ್ಯವಸ್ಥೆಯ ಬಗ್ಗೆ ಜ್ಞಾನ ಹೊಂದಿರುವವರು ವೃತ್ತಿಪರ ಆಟಗಾರ, ವೀಕ್ಷಕ ವಿವರಣೆಗಾರ, ತರಬೇತುದಾರ, ತಂಡದ ನಿರ್ವಾಹಕ, ಪಂದ್ಯಾಟ ನಿರ್ವಾಹಕ ಮುಂತಾದ ಹಲವಾರು ವಿಭಾಗಗಳಲ್ಲಿ ಬದುಕು ರೂಪಿಸಿಕೊಳ್ಳಬಹುದು.