ರಾಜ್ಯದಲ್ಲಿರುವ ಯುವಜನರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಹೆಚ್ಚಿನ ಒಲವು ಉಂಟಾಗಿದೆ. ಪರಿಣಾಮ ತರಬೇತಿ ಪಡೆಯುವ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರುವ ವಿದ್ಯಾರ್ಥಿ ಯುವಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ 5 ವರ್ಷದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ 10,975 ವಿದ್ಯಾರ್ಥಿಗಳು ಹಾಗೂ ವಿದೇಶದ ವಿವಿಗಳಲ್ಲಿ ಉನ್ನತ ವ್ಯಾಸಂಗ ಮಾಡಲು 292 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರವೇಶ ಪಡೆದಿದ್ದಾರೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು 110 ಕೋಟಿ ರೂ. ವೆಚ್ಚ ಮಾಡಿದೆ. ಆ ಮೂಲಕ ಬಡ ವಿದ್ಯಾರ್ಥಿಗಳ ಕನಸನ್ನು ಸಮಾಜ ಕಲ್ಯಾಣ ಇಲಾಖೆಯು ನನಸು ಮಾಡಿದೆ. ಇಲ್ಲಿ ತರಬೇತಿ ಪಡೆದ ಬಹುತೇಕರು ಇಂದು ಯುಪಿಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿದ್ದಾರೆ.
ಏನಿದು ಯೋಜನೆ?: ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಭಾವಿ ತರಬೇತಿ ನೀಡುತ್ತದೆ. ಜತೆಗೆ ಮಾಸಿಕ ಶಿಷ್ಯವೇತನವನ್ನು ಸಹ ನೀಡಲಿದೆ. ದೆಹಲಿ, ಹೈದರಾಬಾದ್, ಕರ್ನಾಟಕ ಮತ್ತು ಚೆನ್ನೈ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯಬಹುದಾಗಿದೆ. ಅ ಪ್ರಕಾರವಾಗಿ 5ರಿಂದ 10 ಸಾವಿರ ರೂ. ಶಿಷ್ಯವೇತನ ದೊರೆಯಲಿದೆ. ಯುಪಿಎಸ್ಸಿ, ಕೆಎಎಸ್, ಬ್ಯಾಂಕಿಂಗ್, ಎಸ್ಎಸ್ಪಿ, ಆರ್ಆರ್ಬಿ, ಗ್ರೂಪ್ -ಸಿ ಹುದ್ದೆಗಳಿಗೆ ತರಬೇತಿ ನೀಡುತ್ತದೆ. ಇನ್ನೂ ಪ್ರಬುದ್ಧ ಯೋಜನೆ ಅಡಿ, ಆಯ್ಕೆ ಯಾಗುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಕೋರ್ಸ್ ಶುಲ್ಕ ಶೇ.100, ನಿರ್ವಹಣಾ ವೆಚ್ಚ ಗರಿಷ್ಠ 8 ಲಕ್ಷ ರೂ. ವೀಸಾ ಶುಲ್ಕ ಶೇ.100, ವಿಮಾ ಶುಲ್ಕ ಶೇ.100, ಪುಸ್ತಕ ಮತ್ತು ಇತರೆ ಶುಲ್ಕ 1. ಲಕ್ಷ ರೂ. ವಿಮಾನ ಪ್ರಯಾಣ ವೆಚ್ಚ ಶೇ.100 ನೀಡಲಿದೆ.
ಪ್ರಬುದ್ಧ ನೆರವು: ಸಮಾಜ ಕಲ್ಯಾಣ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಬರುತ್ತಿದೆ. ಇದೇ ರೀತಿ ‘ಪ್ರಬುದ್ಧ’ ಯೋಜನೆ ಅಡಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರಿಗೆ ಸಹಾಯ ಧನ ನೀಡುತ್ತಿದೆ. ಇದರ ಪ್ರಯೋಜನ ಪಡೆಯುವ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಹೆಚ್ಚಿದ್ದು, ಇದರಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ ಇದೆ. 2015ರಿಂದ 2021ರ ಅವಧಿಯಲ್ಲಿ ತರಬೇತಿ ಮತ್ತು ಉನ್ನತ ಶಿಕ್ಷಣಕ್ಕಾಗಿ 2,09,196 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಆಯ್ಕೆಯಾದವರು 11,267 ಮಾತ್ರ. ಸಮಾಜ ಕಲ್ಯಾಣ ಇಲಾಖೆಯು 2021-22ನೇ ಸಾಲಿನ ಅವಧಿಗೆ ತರಬೇತಿ ಮತ್ತು ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಅರ್ಜಿ ಆಹ್ವಾನಿಸಿತ್ತು. ತರಬೇತಿಗಾಗಿ 6,774 ಅರ್ಜಿ ಮತ್ತು ಉನನ್ತ ಶಿಕ್ಷಣಕ್ಕೆ 133 ಅರ್ಜಿಗಳು ಸಲ್ಲಿಕೆಯಾಗಿವೆ. ಎರಡು ಅಕ್ಟೋಬರ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿದ್ದವು. ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ.
ನಾವು ಬಡವರಾಗಿದ್ದು, ಸರ್ಕಾರ ತರಬೇತಿ ಸೌಲಭ್ಯವನ್ನು ಪಡೆದುಕೊಂಡು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ, ಇದರಿಂದ ನಾನು ಪಾಸ್ ಆಗಿದ್ದೇನೆ. ಅಭ್ಯರ್ಥಿಗಳು ಈ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಬೇಕು. | ಪ್ರಮೋದ್ ಆರಾಧ್ಯ 601ನೇ ರ‌್ಯಾಂಕ್, ಯುಪಿಎಸ್ಸಿ 2020
| ಡಾ. ಸಿದ್ದಲಿಂಗ ರಾಠೋಡ್ ಕೆಂಭಾವಿ ಯಾದಗಿರಿ
ಸ್ಪರ್ಧಾತ್ಮಕ ಪರೀಕ್ಷೆ ಬರೆಯೋದಕ್ಕೆ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಹೇಗಾದರೂ ಪರೀಕ್ಷೆ ಪಾಸ್ ಮಾಡಿಕೊಂಡು ಉದ್ಯೋಗ ಸೇರುವ ತವಕ ಅವರದ್ದು. ಆದರೆ ಸಿದ್ಧತೆ ಹೇಗೆ ಎಂಬ ವಿಚಾರ ಮಾತ್ರ ಎಂಥವರಲ್ಲೂ ಗೊಂದಲ ಸೃಷ್ಟಿಸುತ್ತದೆ. ಆದ್ದರಿಂದ ಈ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ಸಿದ್ಧತೆ ಹೇಗಿರಬೇಕೆಂಬ ವಿಚಾರದಲ್ಲಿ ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ. ಸಾಮಾನ್ಯವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಸೂಚನೆ ಪ್ರಕಟವಾದ ನಂತರ ತಯಾರಿ ಮಾಡುವವರ ಸಂಖ್ಯೆ ಹೆಚ್ಚು. ಆದರೆ ಅದಕ್ಕಿಂತ ಮುಂಚೆ ತಯಾರಿ ಮಾಡಿಕೊಂಡರೆ ನಷ್ಟಕ್ಕಿಂತ ಲಾಭವೇ ಹೆಚ್ಚು, ಇದರ ಜತೆಗೆ ಆತ್ಮವಿಶ್ವಾಸ, ನಂಬಿಕೆ ಹೆಚ್ಚುತ್ತಾ ಹೋಗುತ್ತದೆ. ಅಧಿಸೂಚನೆ ಹೊರಡಿಸಿದ ನಂತರ ಸಂಪೂರ್ಣ ಮಾಹಿತಿಗಾಗಿ ಅದನ್ನು ಸರಿಯಾಗಿ ಓದಿಕೊಳ್ಳುವುದು ಬಹಳ ಓಳ್ಳೆಯದು. ಈ ಕ್ರಮ ಪೂರ್ವ ಸಿಧ್ಧತೆಗೆ ನೆರವಾಗುತ್ತದೆ.
ಪಠ್ಯಕ್ರಮದ ಪ್ರಾಮುಖ್ಯತೆ: ಪಠ್ಯಕ್ರಮದ ಬಗ್ಗೆ ಸಹಜವಾಗಿಯೇ ಕುತೂಹಲವಿರುತ್ತದೆ. ಆದರೂ ಅದನ್ನು ಸರಿಯಾಗಿ ಓದಿರುವುದಿಲ್ಲ. ಪಠ್ಯಕ್ರಮಗಳನ್ನು ಸರಿಯಾಗಿ ಓದಿ ಬರೆದುಕೊಂಡರೆ ಅದು ಮನನವಾಗಿಬಿಡುತ್ತದೆ. ಇದು ಪರೀಕ್ಷೆ ತಯಾರಿಗೆ ಸಹಕಾರಿ.
ಅಧ್ಯಯನ ಸಾಮಗ್ರಿ ಸಂಗ್ರಹ: ಅಧ್ಯಯನ ಸಾಮಗ್ರಿಗಳು ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತವೆ. ಪುಸ್ತಕಗಳನ್ನು ಆಯ್ಕೆ ಮಾಡುವಾಗ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುಭವವುಳ್ಳ ಹಿರಿಯರನ್ನು ಸಂರ್ಪಸಿ, ಸಲಹೆಗಳನ್ನು ತೆಗೆದುಕೊಂಡರೆ ಉತ್ತಮ. ರಾಜ್ಯದಲ್ಲಿನ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 6 ರಿಂದ 12ನೇ ತರಗತಿಯ ರಾಜ್ಯ ಸರ್ಕಾರದ ಪಠ್ಯಪುಸ್ತುಕ, ಅದೇ ರೀತಿ ಕೇಂದ್ರ ಸರಕಾರದಲ್ಲಿನ ಪರೀಕ್ಷೆಗಳಿಗೆ ಎನ್ಸಿಆರ್ಟಿ ಪುಸ್ತುಕಗಳನ್ನು ಓದುವುದು ಒಳಿತು. ಬಹುತೇಕ ಎಲ್ಲಾ ಪರೀಕ್ಷೆಗಳಿಗೆ ಈ ಪುಸ್ತುಕಗಳೇ ಆಧಾರಸ್ತಂಭ.
ನೆರವಿಗೆ ಬರುವ ಹಳೆ ಪ್ರಶ್ನೆಪತ್ರಿಕೆ: ನೀವು ಯಾವ ಹುದ್ದೆಗೆ ತಯಾರಾಗುತ್ತಿದ್ದೀರಿ, ಅದರ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಸ್ಪರ್ಧಾಥಿಗಳಿಗೆ ನಂಬಿಕೆ, ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತದೆ. ಹಾಗೆಯೇ ಯಾವ ವಿಷಯಗಳ ಮೇಲೆ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎಂಬುದು ಗೊತ್ತಾಗುತ್ತದೆ.
ಬರವಣಿಗೆ ರೂಢಿಸಿಕೊಳ್ಳಿ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕಾದರೆ ಹತ್ತು ಸಲ ಓದುವುದಕ್ಕಿಂತ ಒಂದು ಸಲ ಬರೆಯುವುದೇ ಲೇಸು. ಹಾಗಾಗಿ ಓದಿನ ಜತೆಗೆ ಬರೆಯುವುದು, ಟಿಪ್ಪಣಿ ಮಾಡುವುದರಿಂದ ಅನುಕೂಲವಾಗುತ್ತದೆ. ಕೆಲವು ಪರೀಕ್ಷೆಗಳು ಬರವಣಿಗೆ ಆಧಾರಿತ ಪತ್ರಿಕೆ ಹೊಂದಿರುತ್ತವೆ. ಯುಪಿಎಸ್ಸಿ, ಕೆಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ಇದಕ್ಕೆ ಉದಾಹರಣೆ ಆಗಿ ಪರಿಗಣಿಸಬಹುದು. ಬರವಣಿಗೆ ಕೌಶಲ ಇರದಿದ್ದರೆ ಯಶಸ್ಸು ಕಷ್ಟ. ಅದನ್ನು ಇಷ್ಟಪಟ್ಟು ರೂಢಿಸಿಕೊಳ್ಳಿ.
ಐಚ್ಛಿಕ ವಿಷಯ: ಕೆಎಎಸ್, ಐಎಎಸ್ ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯುತ್ತವೆ. ಒಂದು ಪೂರ್ವಭಾವಿ ಪರೀಕ್ಷೆ, ಎರಡನೇಯದು, ಮುಖ್ಯ ಪರೀಕ್ಷೆ. ಐಚ್ಛಿಕ ವಿಷಯ ಆಯ್ಕೆ ಮಾಡುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕೆಎಎಸ್ ಅಥವಾ ಐಎಎಸ್ ಪರೀಕ್ಷೆಯಲ್ಲಿ ಪಾಸಾದವರಿಗೆ ಅಥವಾ ಅನುಭವ ಉಳ್ಳವರಿಗೆ ಕೇಳಿ ಆಯ್ಕೆ ಮಾಡುವುದು ಒಳಿತು.
ಸ್ವ ಸಾಮರ್ಥ್ಯದ ಅರಿವು: ಯಾವುದೇ ಹುದ್ದೆಯ ಪರೀಕ್ಷೆಗೆ ತಯಾರಿ ಮಾಡಬೇಕಾದರೆ ತಮ್ಮ ಸಾಮರ್ಥ್ಯ ಏನು ಎಂಬುದರ ಬಗೆಗೆ ಅರಿವಿರಬೇಕು. ಅಂದಾಗ ಮಾತ್ರ ಆ ಪರೀಕ್ಷೆಗಳಲ್ಲಿ ಯಶಸ್ವಿಯಾಗಬಹುದು.
ಮಾದರಿ ಸ್ಪರ್ಧಾತ್ಮಕ ಪರೀಕ್ಷೆ: ವಿವಿಧ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ನಡೆಯುವ ಮಾದರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು. ಇದರ ಮೂಲಕ ಪ್ರಶ್ನೆ ಪತ್ರಿಕೆ ಮಾದರಿ, ಯಾವ ರೀತಿ ಪ್ರಶ್ನೆಗಳಿರುತ್ತವೆ ಎಂಬುದು ಮನವರಿಕೆಯಾಗುತ್ತದೆ.
ದಿನಪತ್ರಿಕೆ ಓದಿ: ಪ್ರತಿ ದಿನ ಪತ್ರಿಕೆಗಳನ್ನು ಓದುವುದರ ಜತೆಗೆ ಟಿಪ್ಪಣಿ ಮಾಡುವುದು. ಅಂಕಿ- ಅಂಶಗಳು, ಘಟನೆಗಳು, ಸುದ್ದಿಗಳು, ಸಂಪಾದಕೀಯ, ಓದುಗರ ಅಂಕಣ, ಲೇಖನಗಳು, ಪುರವಣಿ ಲೇಖನಗಳು ಇತ್ಯಾದಿ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುತ್ತವೆ. ಇದೇ ರೀತಿ ನಿರಂತರ ಓದುವುದರಿಂದ ಪ್ರಚಲಿತ ವಿಷಯದ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭ.
ಸಮಯ ನಿರ್ವಹಣೆ: ಯಾವ ಸಮಯದಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು ಎಂಬುವುದೇ ಸಮಯ ನಿರ್ವಹಣೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕಾದರೆ ಸಮಯ ಪ್ರಜ್ಞೆ ಕೂಡ ಬಹಳ ಮುಖ್ಯ. ಸಮಯದ ಸದ್ಬಳಕೆ ಅತೀ ಅವಶ್ಯ ವಾಗಿದ್ದು, ಪ್ರತಿ ನಿಮಿಷ, ಪ್ರತಿ ಘಂಟೆ, ಪ್ರತಿ ದಿನ ಅಭ್ಯಾಸ ಮಾಡಿ, ಓದಿಗೆ ಸಮಯ ಕೊಟ್ಟು, ಪುನರ್ವುನನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಲಭವಾಗಿ ಗುರಿ ಮುಟ್ಟಲು ಸಾಧ್ಯ.
| ಕೆ.ತಿಮ್ಮೇಗೌಡ ಕೋಟಮಾರನಹಳ್ಳಿ ಬೆಂಗಳೂರು
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಮುಖ್ಯಭೂಮಿಕೆಗೆ ಬಂದಿವೆ. ಬಹುತೇಕ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಸ್ಪರ್ಧಾತ್ಮಕ ಪರೀಕ್ಷೆಗಳ ವಿವರಗಳನ್ನು ಹುಡುಕುತ್ತಿರುತ್ತಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಯುವಜನರ ಬದುಕಿನಲ್ಲಿ ಹತ್ತನೇ ತರಗತಿ ಎಂಬುದು ನಿರ್ಣಾಯಕ ಘಟ್ಟ. ಇಲ್ಲಿ ವೃತ್ತಿ ಬದುಕಿಗೆ ಉತ್ತಮ ಬುನಾದಿ ಒದಗಿಸುವ ವಿವಿಧ ಸ್ಕಾಲರ್ಶಿಪ್ ಪರೀಕ್ಷೆಗಳು ಒಂದಷ್ಟು ಇವೆ. ಈ ಪೈಕಿ ಸಿಬಿಎಸ್ಇ 1ರಿಂದ 10ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಅನ್ವಯಿಸುವ ಆಯ್ದ ಪರೀಕ್ಷೆಗಳ ಸಂಕ್ಷಿಪ್ತ ವಿವರ ಇಲ್ಲಿವೆ.
1. ಎನ್ಟಿಎಸ್ಇ - ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ - ರಾಷ್ಟ್ರಮಟ್ಟದ ಪ್ರತಿಷ್ಠಿತ ಸ್ಕಾಲರ್ಶಿಪ್ ಪರೀಕ್ಷೆ ಇದು. ಗರಿಷ್ಠ ಶೈಕ್ಷಣಿಕ ಪ್ರತಿಭೆ ಮತ್ತು ಅಸಾಧ್ಯ ಬೌದ್ಧಿಕ ಸಾಮರ್ಥ್ಯ ಹೊಂದಿದವರನ್ನು ಗುರುತಿಸುವ ಉದ್ದೇಶ ಇದರದ್ದು. ಎನ್ಸಿಇಆರ್ಟಿ ಪಠ್ಯಕ್ರಮದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಮೆಂಟಲ್ ಎಬಿಲಿಟಿ, ಸಾಮಾನ್ಯ ಜ್ಞಾನದ ವಿಷಯಗಳಿವೆ ಇದರಲ್ಲಿ. ಇಂಗ್ಲಿಷ್ /ಹಿಂದಿ ಮಾಧ್ಯಮದಲ್ಲಿ ಪರೀಕ್ಷೆ ನಡೆಯುತ್ತದೆ.
2. ಎನ್ಎಲ್ಎಸ್ಟಿಎಸ್ಇ - ನ್ಯಾಷನಲ್ ಲೆವೆಲ್ ಸೈನ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಂ - ಎರಡನೇ ತರಗತಿಯಿಂದ 12ನೇ ತರಗತಿ ತನಕ ವಿದ್ಯಾರ್ಥಿಗಳಿಗೆ ಅವರ ಒಟ್ಟಾರೆ ಕಲಿಕೆ ಸಾಮರ್ಥ್ಯ ಮತ್ತು ಶೈಕ್ಷಣಿಕ ಸಾಧನೆ ಸುಧಾರಿಸಲು ನೆರವಾಗುತ್ತದೆ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಾಮಾನ್ಯ ಜ್ಞಾನದ ವಿಷಯಗಳ ಪರೀಕ್ಷೆ ಆಂಗ್ಲ ಭಾಷೆಯಲ್ಲಿ ನಡೆಯುತ್ತದೆ. ಯೂನಿಫೈಡ್ ಕೌನ್ಸಿಲ್ ಇದನ್ನು ನಡೆಸುತ್ತದೆ.
3. ಐಎನ್ಒ - ಇಂಡಿಯನ್ ನ್ಯಾಷನಲ್ ಒಲಿಂಪಿಯಾಡ್ - ಇದಕ್ಕೆ ಭಾರತ ಸರ್ಕಾರದ ಹಣಕಾಸಿನ ನೆರವು ಇದೆ. ವಿಜ್ಞಾನ ಮತ್ತು ಗಣಿತದಲ್ಲಿ ಸಾಧನೆಯನ್ನು ಉತ್ತೇಜಿಸುವ ಯೋಜನೆ ಇದು. ಐದು ಹಂತದ ಪ್ರಕ್ರಿಯೆ ಇದರಲ್ಲಿ ಇದ್ದು ಮೊದಲ ಹಂತದ ವಿಷಯವನ್ನು ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಕ್ಸ್ ಟೀಚರ್ಸ್ (ಐಎಪಿಟಿ) ವಿಷಯ ಶಿಕ್ಷಕರ ಸಹಕಾರದೊಂದಿಗೆ ಆಯೋಜಿಸುತ್ತದೆ. ಇನ್ನುಳಿದ ಹಂತಗಳನ್ನು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಆಯೋಜಿಸುತ್ತದೆ. ಆಂಗ್ಲ ಭಾಷೆಯಲ್ಲಿ ಪರೀಕ್ಷೆಗಳು ನಡೆಯುತ್ತವೆ.
4. ಕೆವಿಪಿವೈ - ಕಿಶೋರ್ ವಿಜ್ಞಾನ ಪ್ರೋತ್ಸಾಹನ್ ಯೋಜನಾ - ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆ ಇದು. 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಇದನ್ನು ಬರೆಯಲು ಅರ್ಹರು. ವಿಜ್ಞಾನ, ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನಾ ವೃತ್ತಿ ಬದುಕು ಕಟ್ಟಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಇದು ಸಹಕಾರಿ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್ನಲ್ಲಿ ಐದು ವರ್ಷಗಳ ಎಂಎಸ್ ಪ್ರೋಗ್ರಾಂಗೆ ಪ್ರವೇಶ ಪಡೆಯಲು ಅರ್ಹರು. ವಿಜ್ಞಾನ ವಿಷಯವೇ ಮುಖ್ಯವಾಗಿದ್ದು, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ನಡೆಯುತ್ತದೆ.
ಇತರೆ ಸ್ಕಾಲರ್ಶಿಪ್ ಪರೀಕ್ಷೆಗಳು: ಎಸ್ಒಎಫ್ - ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್, ಜಿಯೋಜೀನಿಯಸ್, ಸಿಲ್ವರ್ ಝೋನ್ ಫೌಂಡೇಶನ್ ಪರೀಕ್ಷೆಗಳು, ಎಡುಹೀಲ್ ಫೌಂಡೇಶನ್ನ ನ್ಯಾಷನಲ್ ಇಂಟರ್ಆಕ್ಟಿವ್ ಮ್ಯಾಥ್ಸ್ ಒಲಿಂಪಿಯಾಡ್ (ಎನ್ಐಎಂಒ) ಪರೀಕ್ಷೆಗಳು ಪ್ರಮುಖವಾದವು.