ಅಂಕಣ

ನಿಮ್ಮಿಷ್ಟದಂತೆಯೇ ಮಗು ಪಡೆಯುವುದು ಸಾಧ್ಯ: ಹೇಗೆ ಗೊತ್ತಾ?

ತಮಗೆ ಹುಟ್ಟುವ ಮಗು ಬುದ್ಧಿವಂತವಾಗಿರಬೇಕು, ಎಲ್ಲದರಲ್ಲಿಯೂ ಫಸ್ಟ್ ಮತ್ತು ಬೆಸ್ಟ್ ಇರಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು, ಅದರ ಹಾಗೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಬೇಕು... ಹೀಗೆ ಏನೇನೋ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ ಪಾಲಕರು. ಆದರೆ ಮಗು ಬೇಕೆಂದು ದಂಪತಿ ಯೋಚನೆ ಮಾಡುವ ವೇಳೆಯಿಂದ ಹಿಡಿದು ಗರ್ಭದಲ್ಲಿ ಮಗು ಇರುವವರೆಗೆ ಅಂಥದ್ದೇ ಮಗುವನ್ನು ಪಡೆಯಬಹುದು ಎನ್ನುವುದು ನಿಮಗೆ ಗೊತ್ತೆ?

ಊರಿನ ಪ್ರತಿಷ್ಠಿತ ಶಾಲೆ, ಆ ಶಾಲೆಯ ಬೆಳ್ಳಿ ಮಹೋತ್ಸವ. ಸುಂದರ ವೇದಿಕೆ. ಮಕ್ಕಳೆಲ್ಲಾ ವೇದಿಕೆಯ ಹಿಂಬದಿಯಲ್ಲಿ. ಪೋಷಕರ ಉತ್ಸಾಹಕ್ಕೆ ಎಣೆಯೇ ಇಲ್ಲ. ಪ್ರಚಂಡ ಕರತಾಡನ. ಮಕ್ಕಳೆಲ್ಲಾ ಒಬ್ಬೊಬ್ಬರಾಗಿ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಆಗ ಬಂತು ಸುಮೇರುವಿನ ಹೆಸರು. ವಿವೇಕಾನಂದ ಪ್ರತಿರೂಪದಂತೆ ಕಾಣಿಸುತ್ತಿದ್ದ ಸುಮೇರು ವೇದಿಕೆಗೆ ಬಂದು ನಿಂತು ಚಿಕಾಗೋ ಭಾಷಣವನ್ನು ಯಥಾವತ್ ಹೇಳುತ್ತಿದ್ದರೆ ಪೋಷಕರೆಲ್ಲಾ ಕಿವಿಗಡಚಿಕ್ಕುವ ಚಪ್ಪಾಳೆ ತಟ್ಟುತ್ತಿದ್ದಾರೆ.

ಶಾಲೆ ಪ್ರಾಂಶುಪಾಲರು ಸುಮೇರುವನ್ನು ಹೊಗಳಿ ಆ ಮಗು ಮುಂದೊಂದು ದಿನ ನಮ್ಮ ದೇಶಕ್ಕೆ ವಿವೇಕಾನಂದರಂತೆಯೇ ಬೆಳಕಾಗಿ ಒಳ್ಳೆಯ ಹೆಸರು ತರುವಂತೆ ಆಗಲಿ ಎನ್ನುತ್ತಾ ಬಹುಮಾನವನ್ನು ಕೊಡುತ್ತಿದ್ದಾರೆ. ಸುಮೇರುವಿನ ತಾಯಿ ಸುಶೀಲಾ ಜೋರಾಗಿ ಚಪ್ಪಾಳೆ ತಟ್ಟುತ್ತಿದ್ದಾಳೆ, ಬಹಳ ಸಂತೋಷದಿಂದ. ‘ಏ ಏನೇ ಇದು, ನಿದ್ದೆಯಲ್ಲಿ ಚಪ್ಪಾಳೆ? ಯಾವ ಕನಸೇ ಅದು?’ ಎಂದು ಪಕ್ಕದಲ್ಲಿದ್ದ ಗಂಡ ಸುಶೀಲಾಳನ್ನು ಎಬ್ಬಿಸಿದ.

‘ಇಷ್ಟರತನಕ ಕಂಡಿದ್ದು ಕನಸೇ...’ ಎನ್ನುತ್ತಾ ನಿಧಾನವಾಗಿ ಎದ್ದು ಕೂತ ಸುಶೀಲಾ ತನ್ನ ಹೊಟ್ಟೆಯ ಮೇಲೆ ಕೈಯಾಡಿಸಿದಳು. ತನಗಿನ್ನೂ ಐದು ತಿಂಗಳು ತುಂಬಿದೆಯಷ್ಟೆ. ಬಸುರಿಯಾಗಿದ್ದರೂ ಕನಸಿನಲ್ಲಿಯೇ ಕಂದನನ್ನು ಕಂಡು ಹರ್ಷಿಸಿದ್ದಳು. ತನ್ನ ತಾಯ್ತನದ ಸುಖವನ್ನು ಹೀಗೆ ಅನುಭವಿಸುತ್ತಿದ್ದಳು. ಕುಳಿತಲ್ಲಿ, ನಿಂತಲ್ಲಿ ಎಲ್ಲ ಕಡೆ ಮಗುವಿನ ಕನಸು ಕಟ್ಟುತ್ತಿದ್ದಳು. ಒಟ್ಟಿನಲ್ಲಿ ಅವಳು ಧ್ಯಾನಸ್ಥ ಸ್ಥಿತಿಯಲ್ಲಿಯೇ ಸದಾ ಕಾಲ ಇರುತ್ತಿದ್ದಳು. ತನ್ನ ಮಗು ವಿವೇಕಾನಂದರ ಅತ್ಯುತ್ತಮ ಗುಣಗಳೊಂದಿಗೆ ಜನಿಸಬೇಕೆಂಬ ಉತ್ಕಟ ಬಯಕೆ ಅವಳದ್ದಾಗಿತ್ತು.

ಇದು ಸುಶೀಲಾ ಒಬ್ಬಳ ಕಥೆ ಅಲ್ಲ, ಪ್ರತಿಯೊಬ್ಬ ಹೆಣ್ಣಿನ ತಾಯ್ತನದ ಕಲ್ಪನೆಯೂ ಹೀಗೆಯೇ. ತನ್ನ ಮಗು ಹೀಗಿರಬೇಕು, ಹಾಗಿರಬೇಕು, ಅವರಂತಿರಬೇಕು ಎಂಬ ಆಸೆ. ಆ ಕನಸಿನ ಸಾಕಾರಕ್ಕೆ ಬೇಕು, ಮನೆಯಲ್ಲಿ ಅನುಕೂಲ ವಾತಾವರಣ.

ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ನನ್ನಲ್ಲಿಗೆ ಯೋಗ ತರಬೇತಿಗೆ ಬರುವ ಗರ್ಭಿಣಿಯರ ಪೈಕಿ ಅನೇಕರು ಅತ್ತೆಯರೊಂದಿಗೆ ನಕಾರಾತ್ಮಕ ಭಾವನೆ ಹೊಂದಿರುತ್ತಾರೆ. ಧ್ಯಾನಕ್ಕೆ ಅವರನ್ನು ಕುಳ್ಳರಿಸಿದಾಗ ಧ್ಯಾನದಲ್ಲಿ ಅವರಿಗೆ ಕಾಣಿಸುವುದು ಅವರ ಜತೆಗಿರುವ ನಕಾರಾತ್ಮಕ ಧೋರಣೆಯೇ! ಹಾಗಿದ್ದಾಗ, ಹುಟ್ಟುವ ಮಗುವಿನಲ್ಲಿ ನಾವು ಬಿತ್ತುವ ವಿಷಯ ಏನು? ಬರಿಯ ಕೆಟ್ಟ ಯೋಚನೆಯ ಫಲ ಕೆಟ್ಟ ಮನಸ್ಥಿತಿಯ ಮಗು, ಮುಂದೆ ಅದು ಹುಟ್ಟಿದ ನಂತರ ಅದರ ಆಲೋಚನೆಗಳೆಲ್ಲಾ ಕೆಟ್ಟವೇ ಇರುತ್ತವೆ. ಹಾಗಾಗಿ ಸಮಾಜಕ್ಕೊಂದು ಧೂರ್ತ ಶಿಶುವಿನ ಆಗಮನ. ನಂತರ ಸಮಾಜದಲ್ಲಿರುವ ಇನ್ನಷ್ಟು ದುಷ್ಟ ಸ್ನೇಹಿತರೊಡಗೂಡಿ ಎಲ್ಲಾ ಪರಿಸರವನ್ನು ಹಾಳುಗೆಡವಿ ದೇಶವನ್ನು ಕತ್ತಲೆಯ ಕಡೆಗೆ ಕರೆದೊಯ್ಯುವ ಹುನ್ನಾರ. ಇಂಥದ್ದೊಂದು ವಿಷ ಚಕ್ರ ಪ್ರಾರಂಭವಾಗುವುದು ಹೆಣ್ಣುಮಗಳಿಂದ ಹಾಗೂ ಅಂತ್ಯವಾಗುವುದು ಸಮಾಜದ ದುಷ್ಟತನದಲ್ಲಿ. ಹಾಗಾಗಿಯೇ ಆಯ್ಕೆಯಲ್ಲಿ ಹೆಣ್ಣುಮಕ್ಕಳು ಹುಷಾರಾಗಿರಬೇಕು.

ಶರೀರಕ್ಕೆ, ಮನಸ್ಸಿಗೆ ವ್ಯಾಯಾಮ: ಗರ್ಭಿಣಿಯಾಗಿದ್ದಾಗ ಶರೀರಕ್ಕಾಗಿ ವ್ಯಾಯಾಮ, ಮನಸ್ಸಿಗಾಗಿ ವ್ಯಾಯಾಮ, ಒಳ್ಳೆಯ ಆಚಾರ, ಒಳ್ಳೆಯ ವಿಚಾರ, ಒಳ್ಳೆಯ ಅನುಕೂಲಕರ ಆಹಾರ ಪದ್ಧತಿ ಅಳವಡಿಸಿಕೊಂಡು ಅದರಂತೆ ನಡೆಯುತ್ತಾ ಹೋದರೆ ಖಂಡಿತವಾಗಿಯೂ ಒಳ್ಳೆಯ ಮಗುವನ್ನು ಪಡೆದುಕೊಳ್ಳಬಹುದು. ಆ ಮಗುವಿಗೆ ಬಾಲ್ಯದಲ್ಲಿಯೂ ಇಂತಹ ವಾತಾವರಣವೇ ಸಿಕ್ಕರೆ ಉತ್ತಮ ಯುವಕ, ಯುವತಿಯರಾಗಿ ರೂಪುಗೊಳ್ಳುತ್ತಾರೆ. ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಹೊಂದಿರುವ ಇತರ ಸ್ನೇಹಿತರೊಡಗೂಡಿ ಒಳ್ಳೆಯ ಸಮಾಜಕ್ಕೆ ಇಂಥ ಮಕ್ಕಳು ಆಧಾರಸ್ತಂಭಗಳಾಗುತ್ತಾರೆ. ಇದು ಕೂಡ ಸಾಧ್ಯವಾಗುವುದು ಒಬ್ಬ ಒಳ್ಳೆಯ ಚಿಂತನೆಯ ಹೆಣ್ಣುಮಗಳಿಂದಲೇ ಮತ್ತು ಕೊನೆಗೊಳ್ಳುವುದು ಸಮಾಜದಲ್ಲಿರುವ ಸತ್ಪ್ರಜೆಗಳಾಗಿ. ಈ ಚಕ್ರ ಸಮಾಜದ ಇಂದಿನ ಅನಿವಾರ್ಯತೆ. ಎಲ್ಲ ಹೆಣ್ಣುಮಕ್ಕಳು ಇಂತಹ ಸಮಾಜ ನಿರ್ವಣಕ್ಕೆ ತಯಾರಾಗಿ ನಿಂತಾಗ ನಮ್ಮ ಭುಮಿಯ ಭಾಗ್ಯದ ಬಾಗಿಲು ತೆರೆದಂತೆ. ಅದಕ್ಕೆ ಅವರನ್ನು ಪ್ರೇರೇಪಿಸಲು ನಮ್ಮಲ್ಲಿ ಹಲವಾರು ಕಥೆಗಳಿವೆ. ರಾಮಾಯಣ. ಮಹಾಭಾರತದಂಥ ಪ್ರೇರೇಪಣಾ ಗ್ರಂಥಗಳು, ಭಗವದ್ಗೀತೆಯಂಥ ಜೀವನ ಪಾಠಗಳೂ ಜೀವನವನ್ನು ಬಹಳ ಚೆನ್ನಾಗಿ ಅನುಭವಿಸಿ ನಮ್ಮ ಮಾರ್ಗದರ್ಶಕರಾಗಬಲ್ಲಂತಹ ವ್ಯಕ್ತಿ ಚಿತ್ರಗಳೂ ಸಾಕಷ್ಟಿವೆ. ಇವೆಲ್ಲಾ ತಾಯಿಯಾಗಲು ಹೊರಟಿರುವವರಿಗೆ ಸ್ಪೂರ್ತಿ ಎಂದರೂ ತಪ್ಪಾಗಲಾರದು.

ಗರ್ಭಿಣಿ ಏನು ಮಾಡಬೇಕು?: ಒಳ್ಳೆಯ ಧೀಶಕ್ತಿಯ, ಶರೀರ ಶಕ್ತಿಯ ಮಗು ಬೇಕೆಂದರೆ ಪ್ರತಿದಿನ ಹನುಮಂತನನ್ನು ನೆನೆಯಬೇಕು. ಗೋಡೆಯ ಮೇಲಿರುವ ಹನುಮನ ಪಟವನ್ನು ನೋಡುತ್ತ ಮನದಲ್ಲಿಯೇ ಕಲ್ಪಿಸುತ್ತಾ ಹೋಗಬೇಕು. ಒಳ್ಳೆಯ ವಿಜ್ಞಾನಿಯಾಗಬೇಕೆಂದರೆ ಆರ್ಯಭಟನನ್ನು, ವೈದ್ಯನಾಗಬೇಕೆಂಬ ಬಯಕೆ ಇದ್ದರೆ ಸುಶ್ರೂತ, ಚರಕನನ್ನು, ಸಂಗೀತಗಾರರಾಗಬೇಕೆಂದರೆ ಎಂ.ಎಸ್.ಸುಬ್ಬಲಕ್ಷ್ಮಿಯನ್ನು, ಕವಿಯಾಗಬೇಕೆಂದರೆ ಡಿ.ವಿ.ಗುಂಡಪ್ಪನವರನ್ನು... ಹೀಗೆ ಆಯಾ ಕ್ಷೇತ್ರದ ಅಪರೂಪದ ವ್ಯಕ್ತಿಗಳನ್ನು ನೆನೆಯಬೇಕು. ಇಲ್ಲಿ ಕೊಟ್ಟಿರುವುದು ಕೆಲವರ ಉದಾಹರಣೆಗಳಷ್ಟೇ. ನಿಮಗೆಂಥ ಮಗು ಬೇಕು ಎಂದು ನಿಮಗಾರು ಆದರ್ಶವೋ, ಅವರನ್ನು ಸ್ಮರಿಸಿಕೊಳ್ಳಿ. ಬರಿಯ ಸ್ಮರಣೆಯೊಂದೇ ಆದರೆ ಎಂಬತ್ತು ಪ್ರತಿಶತ ಫಲ. ತಂದೆ- ತಾಯಿ ಇಬ್ಬರೂ ಆ ಪಾತ್ರವೇ ಆಗಿಬಿಟ್ಟರೆ ನೂರಕ್ಕೆ ನೂರು ಫಲ ಗ್ಯಾರಂಟಿ. ಒಳ್ಳೆಯ ಆಲೋಚನೆಗಳ ಜತೆಗೆ ಅದನ್ನು ತಾಯಿ ತಂದೆಯೂ ಆಚರಿಸಲಾರಂಭಿಸಿದರೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ.

ಪುರಾಣ, ವಿಜ್ಞಾನ: ಅಭಿಮನ್ಯು ಚಕ್ರವ್ಯೂಹ ಭೇದಿಸಿದ ಕಥೆ ಎಲ್ಲರಿಗೂ ತಿಳಿದದ್ದೇ. ಅಮ್ಮ ಸುಭದ್ರೆಯ ಹೊಟ್ಟೆಯಲ್ಲಿ ಅಭಿಮನ್ಯು ಇದ್ದಾಗ ಆಕೆಯ ಸಹೋದರ ಕೃಷ್ಣ ಚಕ್ರವ್ಯೂಹದ ರಚನೆ ಹಾಗೂ ಅದರೊಳಗೆ ಹೊಕ್ಕು ಮಾಡುವ ಯುದ್ಧದ ಬಗ್ಗೆ ವಿವರಿಸಿದ್ದ. ಹೊರಬರುವ ಬಗ್ಗೆ ತಿಳಿಸುತ್ತಿದ್ದ ಸಂದರ್ಭದಲ್ಲಿ ಸುಭದ್ರೆ ನಿದ್ದೆಗೆ ಜಾರಿದ್ದಳು, ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಗರ್ಭದಲ್ಲಿದ್ದ ಅಭಿಮನ್ಯು ಕೂಡ ನಿದ್ದೆ ಹೋಗಿದ್ದ. ಮುಂದೆ ಮಹಾಭಾರತ ಯುದ್ಧದ ಸಮಯದಲ್ಲಿ ಚಕ್ರವ್ಯೂಹ ಭೇದಿಸಿದ್ದ ಅಭಿಮನ್ಯು ಹೊರಕ್ಕೆ ಬರುವ ದಾರಿ ತಿಳಿಯದೇ ಮೃತಪಟ್ಟಿದ್ದ. ಇನ್ನೊಂದು ಉದಾಹರಣೆ ಕಯಾದುವಿನದು. ಹಿರಣ್ಯಕಶ್ಯಪನ ಹೆಂಡತಿ ಕಯಾದು ತನ್ನ ಹೊಟ್ಟೆಯಲ್ಲಿ ಪ್ರಹ್ಲಾದನನ್ನು ಬೆಳೆಸುತ್ತಿದ್ದಾಗ ನಾರದ ಮಹರ್ಷಿ ವಿಷ್ಣುವಿನ ಅಪರಿಮಿತ ಗುಣಗಳ ಬಗ್ಗೆ ಹೇಳುತ್ತಿದ್ದ. ಇದು ಗರ್ಭದಲ್ಲಿದ್ದ ಪ್ರಹ್ಲಾದನಲ್ಲಿ ವಿಷ್ಣು ಭಕ್ತಿಯನ್ನು ಬಿತ್ತಿತ್ತು. ಹಾಗಾಗಿ ಅಸುರನ ಮಗನಾಗಿ ಹುಟ್ಟಿದರೂ ಪ್ರಹ್ಲಾದ ವಿಷ್ಣು ಭಕ್ತನಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮುಂದಾದ. ಅಸುರನಾದ ತನ್ನ ತಂದೆ ಹಿರಣ್ಯಕಶ್ಯಪನನ್ನೇ ತಿರಸ್ಕರಿಸಿದ. ವಿಷ್ಣುವು ನರಸಿಂಹಾವತಾರವನ್ನೆತ್ತಿ ಬಂದು ಹಿರಣ್ಯಕಶ್ಯಪನನ್ನು ಹತ್ಯೆಗೈದು ನಂತರ ಪ್ರಜೆಗಳಿಗೆ ಹಿತವಾಗುವಂತೆ ಪ್ರಹ್ಲಾದ ರಾಜ್ಯವಾಳಿದ. ಇಂಥ ಕಥೆಗಳನ್ನು ನಮ್ಮ ಹಿರಿಯರು ಹೇಳುತ್ತಿದ್ದಾಗ ವಿಜ್ಞಾನ ಪ್ರಪಂಚ ಹಾಸ್ಯಾಸ್ಪದವಾಗಿ ನೋಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹಲವಾರು ಸಂಶೋಧನೆಗಳನ್ನು ಮಾಡಿದ ವಿಜ್ಞಾನಿಗಳೇ ಇದನ್ನೀಗ ಒಪ್ಪಿಕೊಂಡಿದ್ದಾರೆ. ಗರ್ಭಿಣಿಯ ಸುಪ್ತ ಮನಸ್ಸಿನ ಆಲೋಚನೆಗಳು, ಅವಳು ಗರ್ಭಾವಸ್ಥೆಯಲ್ಲಿ ಕೇಳುವ, ನೋಡುವ ವಿಚಾರಗಳು ಅವಳ ಮನಸ್ಸಿನಲ್ಲಿ ಪ್ರಕಟವಾಗುತ್ತವೆ ಎಂದು ಸಂಶೋಧನೆಗಳು ಸಾಬೀತು ಮಾಡಿವೆ.

ಪ್ರಸವ ಪೂರ್ವದಲ್ಲಿಯೇ ಅಂದರೆ ವಿವಾಹದ ನಂತರ ಮನೆಯ ಸದಸ್ಯರೆಲ್ಲಾ ಸೇರಿ ಮಾತಾಡಿಕೊಂಡು ಸನ್ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುವಂಥ ವಾತಾವರಣ ಸೃಷ್ಟಿ ಮಾಡಿಕೊಳ್ಳಬೇಕು. ಅದರಲ್ಲಿಯೂ ಅತ್ತೆಯಾದವಳು ಸೊಸೆಯನ್ನು ತನ್ನ ಮಗಳಂತೆ ಕಂಡು ಪ್ರೀತಿಯಿಂದ ಅವಳಿಗೊಂದು ಮಾದರಿಯಾಗಬೇಕು. ಸೊಸೆಯಾದವಳು ಅತ್ತೆಯನ್ನು ತಾಯಿಯಂತೆ ಪ್ರೀತಿಸಬೇಕು. ಇಂತಹ ಮನೆಯ ಹಿತಕರ ವಾತಾವರಣದಲ್ಲಿ ಗರ್ಭಿಣಿಯಾದ ಹೆಣ್ಣಿನ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳಷ್ಟೇ ಹುಟ್ಟುತ್ತವೆ. ಇಲ್ಲಿಂದ ಒಳ್ಳೆಯ ಚಕ್ರ ಪ್ರಾರಂಭವಾಗುತ್ತದೆ.

(ಲೇಖಕರು ಲೈಫ್​ಸ್ಟೈಲ್ ಕನ್ಸಲ್ಟಂಟ್ ಹಾಗೂ ಪ್ರೆಗ್ನೆನ್ಸಿ ಯೋಗ ಕೌನ್ಸೆಲರ್)