ಅಂಕಣ

ಯೋಗ ಎಂದರೆ ವ್ಯಾಯಾಮವಲ್ಲ, ಆಧ್ಯಾತ್ಮಿಕ ಸಾಧನೆ

lakshmihegde

ನೂರಾರು ಶಾಖೆಗಳಲ್ಲಿ, ಅನೇಕ ವಿಧಗಳಾಗಿ ಮತ್ತು ಸಂಕೀರ್ಣವಾಗಿ ಹರಡಿ ಹಂಚಿಹೋಗಿದ್ದ ಯೋಗಜ್ಞಾನವನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವಂತೆ ಕ್ರೋಡೀಕರಿಸಿದ್ದು ಪತಂಜಲಿ ಮುನಿಗಳ ಸಾಧನೆ. ಪತಂಜಲಿ ಈ ಎಲ್ಲ ಅಂಶಗಳನ್ನು ಯೋಗಸೂತ್ರಗಳ ರೂಪದಲ್ಲಿ ಒಟ್ಟುಗೂಡಿಸಿದರು ಎಂಬುದು ಗಮನಾರ್ಹ.

ಇಂದು, ಪ್ರತಿಯೊಂದು ಮುಖ್ಯ ಪುಸ್ತಕದಂಗಡಿಯಲ್ಲಿ, ‘ಒಂದು ವಾರದಲ್ಲಿ ಯೋಗವನ್ನು ಕಲಿಯುವುದು ಹೇಗೆ’ ಅಥವಾ ‘ಮೂರು ವಾರಗಳಲ್ಲಿ ಯೋಗಿ ಆಗುವುದು ಹೇಗೆ’ ಎಂಬ ಶೀರ್ಷಿಕೆಯಿರುವ ಕೊನೆಯಪಕ್ಷ ಹತ್ತು ಪುಸ್ತಕಗಳಾದರೂ ಇರುತ್ತವೆ. ಯೋಗ ಮೇಲ್ನೋಟಕ್ಕೆ ಬಹಳ ಸರಳ ಅಭ್ಯಾಸದಂತೆ ಕಾಣಿಸುತ್ತದೆ, ಆದರೆ ಅಭ್ಯಾಸಗಳನ್ನು ಮಾಡಲು ತೊಡಗಿದಾಗ, ಅವುಗಳಿಗೆ ಸೂಕ್ಷ್ಮ ಆಯಾಮ ಇರುವುದು ನಮ್ಮ ಗಮನಕ್ಕೆ ಬರುತ್ತದೆ. ಅನೇಕರು ಪುಸ್ತಕಗಳನ್ನು ಓದಿ ಯೋಗಾಭ್ಯಾಸ ಮಾಡಲು ಹೋಗಿ ಹಾನಿಯನ್ನು ಮಾಡಿಕೊಂಡಿದ್ದಾರೆ.

ವಸ್ತುನಿಷ್ಠ(ಆಬ್ಜೆಕ್ಟಿವ್) ಮತ್ತು ವಿಷಯನಿಷ್ಠ(ಸಬ್ಜೆಕ್ಟಿವ್) ತಂತ್ರಜ್ಞಾನಗಳು ಬೇರೆ ಬೇರೆಯಾಗಿವೆ. ನೀವೊಂದು ರಸಾಯನಶಾಸ್ತ್ರದ ಪ್ರಯೋಗವನ್ನು ಮಾಡುತ್ತಿದ್ದೀರಿ ಎಂದುಕೊಳ್ಳೋಣ. ಒಂದು ರಾಸಾಯನಿಕವನ್ನು ಇನ್ನೊಂದು ರಾಸಾಯನಿಕಕ್ಕೆ ಬೆರೆಸಿ, ಅದರ ಪರಿಣಾಮವನ್ನು ನೋಡಿ, ಅಲ್ಲಿ ಕಂಡಿದ್ದನ್ನು ಬರೆದು ಇಟ್ಟುಕೊಳ್ಳುತ್ತೀರಿ. ಇದು ವಸ್ತುನಿಷ್ಠ ತಂತ್ರಜ್ಞಾನ. ಆದರೆ ವಿಷಯನಿಷ್ಠ ತಂತ್ರಜ್ಞಾನದಲ್ಲಿ, ರಾಸಾಯನಿಕ ಮತ್ತು ರಾಸಾಯನಿಕತಜ್ಞ ಎರಡೂ ನೀವೇ ಆಗಿರುತ್ತೀರಿ. ನೀವು ನಿಮ್ಮನ್ನೇ ಅದರಲ್ಲಿ ತೊಡಗಿಸಿಕೊಳ್ಳದಿದ್ದರೆ ಅದು ಕೆಲಸ ಮಾಡುವುದಿಲ್ಲ. ಇದಕ್ಕೊಂದು ವಿಭಿನ್ನ ರೀತಿಯ ವಾತಾವರಣ ಬೇಕಾಗುತ್ತದೆ, ಬದ್ಧತೆ ಮತ್ತು ಏಕಾಗ್ರತೆಯೂ ಬೇಕಾಗುತ್ತದೆ. ಇಲ್ಲವಾದರೆ, ಜೀವನದ ವಿಷಯನಿಷ್ಠ ಅಂಶಗಳು ತಿಳಿಯದೇ ಹೋಗುತ್ತವೆ.

ದುರಾದೃಷ್ಟವಷಾತ್, ಅನೇಕ ಸ್ಥಳಗಳಲ್ಲಿ, ಯೋಗದ ಸೂಕ್ಷ್ಮ ಆಯಾಮಗಳ ಅರಿವಿಲ್ಲದ, ವಸ್ತುನಿಷ್ಠ ಅಂಶವಷ್ಟೇ ಸಿಗುತ್ತಿದೆ. ಶರೀರವನ್ನು ಹೀಗೆ ತಿರುಗಿಸುವುದು ಮತ್ತು ಹಾಗೆ ಉಸಿರಾಡುವುದರಿಂದ, ಹೀಗೆ ಆಗುತ್ತದೆ ಅಥವಾ ಹಾಗೆ ಆಗುತ್ತದೆ ಎಂದು ಜನರು ಹೇಳುತ್ತಾರೆ. ಇದು ಹಾಗಲ್ಲ. ವಿಷಯನಿಷ್ಠತೆ ಇಲ್ಲದಿದ್ದರೆ, ಅದೊಂದು ವಿಫಲ ಹೆರಿಗೆಯಾಗುತ್ತದೆ. ಈಗ, ಯೋಗದ ಶರೀರವು ಜೀವಂತಿಕೆ ಇಲ್ಲದೆ ಬಂದಿದೆ. ಜೀವನದ ವಿಷಯನಿಷ್ಠ ಅಂಶಗಳನ್ನು ವಸ್ತುನಿಷ್ಠ ಎಂಬಂತೆ ನಿರ್ವಹಿಸಲಾಗುತ್ತಿದೆ. ವಿಷಯನಿಷ್ಠವಾದುದನ್ನು ಪುಸ್ತಕದಿಂದ ತಿಳಿಯಲಾಗುವುದಿಲ್ಲ. ಅದಕ್ಕೆ ಮನುಷ್ಯನ ತೊಡಗಿಸಿಕೊಳ್ಳುವಿಕೆ ಬೇಕಾಗುತ್ತದೆ.

ಯೋಗ ಎನ್ನುವುದು ಒಂದು ವ್ಯಾಯಾಮದ ರೀತಿಯಲ್ಲ. ಯೋಗ ಎಂದರೆ, ದೈಹಿಕತೆಯನ್ನು ಮೀರಿದ ಆಯಾಮವೊಂದು ನಿಮ್ಮೊಳಗೆ ಜೀವಂತ ಯಥಾರ್ಥತೆಯಾಗಿ ಅನುಭವಕ್ಕೆ ಬರುವುದು. ಇದು ನಿಮ್ಮನ್ನು ಉನ್ನತ ಸಾಧ್ಯತೆಯೊಂದಕ್ಕೆ ಕೊಂಡೊಯ್ಯುವ ತಂತ್ರಜ್ಞಾನವಾಗಿದೆ. ಅಪಾರವಾದ ಪರಿವರ್ತನೆಯನ್ನು ಉಂಟುಮಾಡಬಲ್ಲ ಶಕ್ತಿಯುಳ್ಳ ಯಾವುದೇ ಸಂಗತಿಯಾದರೂ, ಸರಿಯಾಗಿ ನಿಭಾಯಿಸದಿದ್ದರೆ, ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ಯಾವಾಗಲೂ ಯೋಗವನ್ನು ಬದ್ಧತೆಯುಳ್ಳ ವಾತಾವರಣದಲ್ಲಿ ಕಲಿಸಲಾಗುತ್ತದೆ.

ಉಪ-ಯೋಗ ಎಂದು ಕರೆಯಲ್ಪಡುವ ಇತರ ಅಭ್ಯಾಸಗಳಿದ್ದು, ಅವುಗಳನ್ನು ಅಭ್ಯಾಸ ಮಾಡಲು ಅಷ್ಟೇನೂ ಬದ್ಧತೆ ಬೇಕಾಗಿಲ್ಲ, ಏಕೆಂದರೆ ಅವು ಬಹಳ ಸರಳವಾಗಿದ್ದು, ಕೇವಲ ಮಾನಸಿಕ ಮತ್ತು ದೈಹಿಕ ಲಾಭಗಳನ್ನು ಕೊಡುತ್ತವೆ. ಅವು ಆಧ್ಯಾತ್ಮಿಕ ಆಯಾಮವನ್ನು ರ್ಸ³ಸುವುದಿಲ್ಲ. ಆದರೆ ಯೋಗವನ್ನು ಸರಿಯಾದ ಅರಿವು ಮತ್ತು ಮಾರ್ಗದರ್ಶನದಲ್ಲಿ ಮಾಡಬೇಕು. ಇಲ್ಲವಾದರೆ, ಅದರಿಂದ ಅನೇಕ ತೊಂದರೆಗಳಾಗಬಹುದು.

15 ಸಾವಿರ ವರ್ಷಗಳಿಗೂ ಹಿಂದೆ ಮೊದಲ ಯೋಗಿ ಎನಿಸಿದ ಆದಿಯೋಗಿ-ಶಿವನು ತನ್ನ ಏಳು ಜನ ಶಿಷ್ಯರಿಗೆ ಯೋಗವಿಜ್ಞಾನಗಳನ್ನು ಕೊಟ್ಟಾಗ, ಅವನು ತಂತ್ರಜ್ಞಾನದ ಅನೇಕ ಆಯಾಮಗಳನ್ನು ಅನ್ವೇಷಿಸಿದ್ದಾನೆ ಮತ್ತು ಪ್ರತಿಪಾದಿಸಿದ್ದಾನೆ. ಅದೇ ಸಮಯದಲ್ಲಿ, ಅವನು ತಂತ್ರಜ್ಞಾನವನ್ನು ಪ್ರಸರಿಸುವುದನ್ನು ನಿಷೇಧಿಸುತ್ತಾನೆ. ಈಗ ಸಪ್ತ ಋಷಿಗಳೆಂದು ಆರಾಧಿಸಲ್ಪಡುತ್ತಿರುವ ಏಳು ಶಿಷ್ಯರಿಗೆ ಪೂರ್ವಸಿದ್ಧತೆಯ ಅಭ್ಯಾಸಗಳನ್ನು ನೀಡಿದಾಗ, ಅವನು ಅವರಿಗೆ ತಂತ್ರಜ್ಞಾನಗಳನ್ನು ನೀಡಿದನು. ಆದರೆ ಒಮ್ಮೆ ಅವರು ಒಂದು ಹಂತವನ್ನು ತಲುಪಿದಾಗ, ಅವನು ಅವರಿಗೆ ಶುದ್ಧ ವಿಜ್ಞಾನವನ್ನು ನೀಡಿದನು. ಏಕೆಂದರೆ ವಿಜ್ಞಾನದ ಮೂಲಭೂತ ಅಂಶಗಳನ್ನು ತಿಳಿದರೆ, ಸುತ್ತಲಿನ ಪರಿಸರದ ಅಗತ್ಯಗಳಿಗೆ ಅನುಸಾರವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಬಹುದು ಎಂಬುದು ಅವನಿಗೆ ತಿಳಿದಿತ್ತು.

ಆಧುನಿಕ ಸಂಸ್ಕೃತಿಗಳು ಇಂದು ಮಾಡುತ್ತಿರುವ ಗಂಭೀರವಾದ ತಪ್ಪೆಂದರೆ, ನಾವು ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುತ್ತಿಲ್ಲ. ಜನರು ಏನನ್ನಾದರೂ ಕಂಡುಹಿಡಿದಾಗ, ಅವರು ಈ ತಂತ್ರಜ್ಞಾನ ನಮಗೆ ನಿಜವಾಗಿಯೂ ಅಗತ್ಯವೇ ಎಂಬ ಮೌಲ್ಯಮಾಪನ ಮಾಡುತ್ತಿಲ್ಲ. ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುತ್ತೇವೆ ಮತ್ತು ಅದರ ಸುತ್ತಲೂ ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ನಮ್ಮಿಂದ ಸಾಧ್ಯವಿರುವ ಏನೋ ಒಂದನ್ನು ಮಾಡಿಬಿಡುವುದು ಮತ್ತು ಐವತ್ತು ವರ್ಷಗಳ ನಂತರ ಅದಕ್ಕಾಗಿ ಪರಿತಪಿಸಿ, ಇದು ಒಳ್ಳೆಯದಾಗಿರಲಿಲ್ಲ ಎಂದು ಹೇಳುವುದು ಸಾಮಾನ್ಯವಾಗಿದೆ.

ಸಮಯ ಕಳೆದಂತೆ, ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅದು ದಿನನಿತ್ಯದ ಜೀವನದಲ್ಲಿ ತಂದೊಡ್ಡುವ ಅನೇಕ ರೀತಿಯ ಸಮಸ್ಯೆಗಳಿಂದ ಪಶ್ಚಾತ್ತಾಪ ಪಡಬೇಕಾಗುವುದನ್ನು ಕಾಣುವಿರಿ. ಈ ತಲೆಮಾರಿನ ಜನರು ತಂತ್ರಜ್ಞಾನಕ್ಕೆ ಒಂದು ರೀತಿಯಲ್ಲಿ ಮಾರುಹೋಗಿದ್ದಾರೆ. ಅವರು ಅದರ ಕುರಿತಾಗಿ ತಮ್ಮ ವಿವೇಕವನ್ನು ಕಳೆದುಕೊಂಡಿದ್ದಾರೆ. ವಿವೇಕವನ್ನು ಕಾಯ್ದುಕೊಂಡರೆ, ತಂತ್ರಜ್ಞಾನ ದೊಡ್ಡ ವರವಾಗಬಲ್ಲುದು. ವಿವೇಕವನ್ನು ರೂಢಿಸಿಕೊಳ್ಳದಿದ್ದರೆ, ತಂತ್ರಜ್ಞಾನ ನಮ್ಮ ಜೀವನವನ್ನು ನಾಶಮಾಡುತ್ತದೆ.

ಯೋಗಾಸನಗಳನ್ನೂ ಬರವಣಿಗೆಯಲ್ಲಿ ದಾಖಲಿಸದೇ ಇರುವುದಕ್ಕೆ ಇದೇ ಕಾರಣ. ಆದರೆ ಇಂದು, ಯೋಗಕ್ಕೆ ಸಂಬಂಧಿಸಿದ ಯಾವುದೇ ಪ್ರಾಚೀನ ಪುಸ್ತಕಗಳಲ್ಲಿ ಯೋಗಾಸನಗಳ ಉಲ್ಲೇಖ ಇಲ್ಲದಿರುವುದರಿಂದ, ಅವುಗಳನ್ನು ಯುರೋಪಿನ ವ್ಯಾಯಾಮ ಪದ್ಧತಿಗಳಿಂದ ನಕಲು ಮಾಡಿರಬೇಕೆಂದು ಕೆಲವು ಲೇಖಕರು ಹೇಳುತ್ತಾರೆ! ಕಳೆದ ಕೆಲವು ವರ್ಷಗಳಿಂದ, ಹೀಗೆ ಹೇಳುವ ಕೆಲವು ಪುಸ್ತಕಗಳನ್ನು ಬರೆಯಲಾಗಿದೆ.

ಆದರೆ ಯೋಗ ಎನ್ನುವುದು ಇತ್ತೀಚಿನ ಸಂಶೋಧನೆಯಲ್ಲ. ಅದು ಸಾವಿರಾರು ವರ್ಷಗಳಿಂದ ಇದೆ. ಜನರಿಗೆ ಯೋಗದ ಇತಿಹಾಸ ಸಿಗುವುದಿಲ್ಲ. ಏಕೆಂದರೆ ಕೇವಲ ಅದರ ಸಿದ್ಧಾಂತವನ್ನಷ್ಟೇ ಬರೆಯಲಾಗಿದೆ, ಅಭ್ಯಾಸಗಳನ್ನು ಬರೆದಿಡಲಾಗಿಲ್ಲ. ಕೆಲವು ದೇವಸ್ಥಾನಗಳಲ್ಲಿ, ಯೋಗದ ಭಂಗಿಗಳನ್ನು ನೋಡಬಹುದು, ಆದರೆ ಅವು ಬೋಧನೆಗಾಗಿ ಮಾಡಿದವಲ್ಲ, ಕೇವಲ ಅಲಂಕಾರಿಕವಷ್ಟೆ. ಅಭ್ಯಾಸಕ್ರಮಗಳೆಲ್ಲವೂ ಯಾವಾಗಲೂ ಸಜೀವವಾದ ಸಂಪ್ರದಾಯಗಳಾಗಿವೆ. ಯೋಗಾಭ್ಯಾಸವನ್ನು ಯಾವಾಗಲೂ ಬಲ್ಲವರ ಉಪಸ್ಥಿತಿಯಲ್ಲೇ ಕಲಿಯಬೇಕೆಂಬುದು ನಮ್ಮ ಸಂಪ್ರದಾಯ.

ಯೋಗ ಸೂತ್ರದಲ್ಲೂ, ಪತಂಜಲಿ ಮುನಿ ಯಾವುದೇ ರೀತಿಯ ಅಭ್ಯಾಸಕ್ರಮವನ್ನು ಬೋಧಿಸಲಿಲ್ಲ. ಅವರು ಉದ್ದೇಶಪೂರ್ವಕವಾಗಿ ಹೀಗೆ ಮಾಡಿದರು. ಪತಂಜಲಿಯನ್ನು ‘ಆಧುನಿಕ ಯೋಗದ ಪಿತಾಮಹ’ ಎಂದು ಕರೆಯಲಾಗುತ್ತದೆ. ಅವರು ಯೋಗವನ್ನು ಕಂಡುಹಿಡಿಯಲಿಲ್ಲ. ಅವರು ಬಂದಾಗ, ಯೋಗ ಅನೇಕ ರೂಪಗಳಲ್ಲಿ ಅದಾಗಲೇ ಇತ್ತು, ಪತಂಜಲಿ ಅವುಗಳಿಗೆ ವ್ಯವಸ್ಥಿತ ರೂಪ ನೀಡಿದರು. 15 ಸಾವಿರ ವರ್ಷಗಳಿಗೂ ಹಿಂದೆ ಕೇದಾರನಾಥದಿಂದ ಕೆಲವು ಕಿಲೋಮೀಟರುಗಳಾಚೆ ಇರುವ ಕಾಂತಿ ಸರೋವರದ ತಟದಲ್ಲಿ, ಆದಿಯೋಗಿ ಎನಿಸಿದ ಶಿವನು ಸಪ್ತ ಋಷಿಗಳಿಗೆ ಯೋಗಜ್ಞಾನವನ್ನು ನೀಡಿದನು. ಆದಿಯೋಗಿಗೆ ಮನುಷ್ಯನ ಸ್ವರೂಪದ ಅತ್ಯುನ್ನತ ಅರಿವಿತ್ತು, ಆದರೆ ಅವನು ಏನನ್ನೂ ಬರವಣಿಗೆಯಲ್ಲಿ ದಾಖಲಿಸಿಡಲಿಲ್ಲ. ಅವನು ಅಷ್ಟು ನಾಜೂಕಿನವನಾಗಿರಲಿಲ್ಲ. ತನಗೆ ತಿಳಿದ ಎಲ್ಲವನ್ನೂ ಒಬ್ಬ ಮನುಷ್ಯನಲ್ಲಿ ಸಂಚಯಿಸುವುದು ಸಾಧ್ಯ ಇಲ್ಲ ಎಂಬುದನ್ನು ತಿಳಿದ ಅವನು, ಏಳು ಜನರನ್ನು ಆಯ್ಕೆ ಮಾಡಿಕೊಂಡ ಮತ್ತು ಅವರಲ್ಲಿ ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಅಂಶಗಳನ್ನು ಸಂಚಯಿಸಿದ. ಹಾಗಾಗಿ, ನಾವು ಯೋಗದ ಏಳು ಮೂಲಭೂತ ಸ್ವರೂಪಗಳನ್ನು ಹೊಂದಿದ್ದೇವೆ, ಅವು ಇಂದು ನೂರಾರು ಶಾಖೆಗಳಾಗಿ ವಿಭಜನೆಗೊಂಡಿವೆ. ಆದರೂ ನೀವಿನ್ನೂ ಈ ಏಳು ವಿಶಿಷ್ಟ ರೂಪಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬ್ಯಾಟರಿ ಇಲ್ಲದ ಇ-ವಾಹನ ಮಾರಾಟಕ್ಕೆ ಅನುಮತಿ: ಅಧಿಸೂಚನೆ ಹೊರಡಿಸಿದ ರಸ್ತೆ ಸಾರಿಗೆ ಸಚಿವಾಲಯ

ನೂರಾರು ಶಾಖೆಗಳಲ್ಲಿ, ಅನೇಕ ವಿಧಗಳಾಗಿ ಮತ್ತು ಸಂಕೀರ್ಣವಾಗಿ ಹರಡಿ ಹಂಚಿಹೋಗಿದ್ದ ಈ ಜ್ಞಾನವನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವಂತೆ ಕ್ರೋಡೀಕರಿಸಿದ್ದು ಪತಂಜಲಿ ಮುನಿಯ ಸಾಧನೆ. ಪತಂಜಲಿ ಈ ಎಲ್ಲ ಅಂಶಗಳನ್ನು ಯೋಗಸೂತ್ರಗಳ ರೂಪದಲ್ಲಿ ಒಟ್ಟುಗೂಡಿಸಿದರು. ಸೂತ್ರವೆಂದರೆ ದಾರ. ಯೋಗಸೂತ್ರಗಳು ಗಣಿತದ ಸೂತ್ರಗಳಿದ್ದಂತೆ. ಭೌತಶಾಸ್ತ್ರದಲ್ಲಿ, ಐನ್​ಸ್ಟೀನ್​ನ  E=MC2 ಸೂತ್ರ ಒಂದು ಆಂಗ್ಲ ಪದಗಳ ಸಣ್ಣ ಗುಂಪು. ಆದರೆ ಅದರಲ್ಲಿ ಅಪಾರ ಪ್ರಮಾಣದ ವಿಜ್ಞಾನವಿದೆ. ಯೋಗಸೂತ್ರಗಳೂ ಹಾಗೆಯೇ. ಜನರು ಅವುಗಳನ್ನು ಹಾಗೆಯೇ ಜಾರಿಗೊಳಿಸಲು ನೋಡಿದರು, ಅವರಿಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ, ದಾರವಿಲ್ಲದೇ ಯಾವುದೇ ಮಾಲೆಯನ್ನು ಕಟ್ಟಲು ಸಾಧ್ಯ ಇಲ್ಲದಿದ್ದರೂ, ನೀವು ದಾರಕ್ಕಾಗಿ ಮಾಲೆಯನ್ನು ಧರಿಸುವುದಿಲ್ಲ. ಪ್ರತಿಯೊಬ್ಬ ಗುರುವೂ ದಾರವನ್ನು ಉಪಯೋಗಿಸಿ ತನ್ನದೇ ಆದ ಮಾಲೆಯನ್ನು ಮಾಡುತ್ತಾರೆ. ನೀವು ಅದರಲ್ಲಿ ಹೂವುಗಳು, ಮಣಿಗಳು, ಮುತ್ತುರತ್ನಗಳನ್ನು ಪೋಣಿಸಬಹುದು. ದಾರವು ಅತ್ಯಗತ್ಯವಾದರೂ ಅದನ್ನೇ ಧರಿಸಲಾಗುವುದಿಲ್ಲ. ಇದನ್ನೂ ಓದಿ: ಅಮೃತಧಾರೆ ಅಂಕಣ: ಅಸ್ತಿತ್ವದ ಭವ್ಯತೆಯೇ ವಿಶಾಲ ಎಂಬುದನ್ನು ಅರಿಯೋಣ

ಹಾಗಾಗಿ, ಇತಿಹಾಸದುದ್ದಕ್ಕೂ, ಯೋಗದಲ್ಲಿ ತಂತ್ರಜ್ಞಾನವನ್ನು ಹೇಳುವುದಿಲ್ಲ, ವಿಜ್ಞಾನವನ್ನು ಮಾತ್ರ ವಿಸ್ತರಿಸಲಾಗುತ್ತದೆ. ಪೂರ್ವಸಿದ್ಧತೆಯ ಹಂತಗಳಲ್ಲಿ, ತಂತ್ರಜ್ಞಾನವೇ ಮುಖ್ಯ ಮತ್ತು ಸಾಧನಕ್ರಮವನ್ನು ಹೇಳಿಕೊಡಲಾಗುತ್ತದೆ. ಆದರೆ ಅದರ ನಂತರ, ವಿಜ್ಞಾನ ಮಾತ್ರ ಮುಖ್ಯವಾಗುತ್ತದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಅಧ್ಯಾತ್ಮಿಕ ನಾಯಕ)