More

    ಅಮೃತಧಾರೆ|ನಿರ್ಣಯ ತೆಗೆದುಕೊಳ್ಳಲು ಅಂತರ್​ದೃಷ್ಟಿ ಅವಲಂಬಿಸಬಹುದೆ?

    ನಿಮ್ಮಲ್ಲೂ ಅಂತರ್​ದೃಷ್ಟಿಯ ಶಕ್ತಿ ಇದೆ. ಆದರೆ ಏಕೆ ಆ ಶಕ್ತಿಯನ್ನು ಕಳೆದುಕೊಂಡಿರಿ? ಕಾರಣ ಅತಿಯಾಗಿ ಮಾನಸಿಕರಾಗಿದ್ದೀರಿ; ನೀವು ಲೋಕದೊಂದಿಗೆ ಇಲ್ಲ. ಸದಾ ಕಾಲ ಮರ್ಕಟ ಬುದ್ಧಿ ನಿಮ್ಮದೆ ಆದ ಮಂಗಾಟದಲ್ಲಿ ತೊಡಗಿರುವುದರಿಂದ ಸಾಧ್ಯವಾಗಬಹುದಾದ ಎಲ್ಲ ಸುಂದರ ವಿಷಯಗಳು ನಶಿಸಿ ಹೋಗಿವೆ ಅಷ್ಟೆ.

    ಅಮೃತಧಾರೆ|ನಿರ್ಣಯ ತೆಗೆದುಕೊಳ್ಳಲು ಅಂತರ್​ದೃಷ್ಟಿ ಅವಲಂಬಿಸಬಹುದೆ?ಸಾಮಾನ್ಯವಾಗಿ ಜನರು ಹೇಳುವಂತೆ ಇನ್​ಟ್ಯೂಷನ್(ಅಂತರ್​ದೃಷ್ಟಿ) ಗ್ರಹಿಕೆಯ ಬೇರೊಂದು ಆಯಾಮವೇನಲ್ಲ. ಅಂತರ್ದೃಷ್ಟಿ ಎನ್ನುವುದು ಉತ್ತರವನ್ನು ತ್ವರಿತವಾಗಿ ಪಡೆಯುವ ವಿಧಾನವಷ್ಟೆ. ಅಂತರ್ದೃಷ್ಟಿ ಎನ್ನುವುದು ಮಾಹಿತಿಯನ್ನು ಆಧರಿಸಿ ಹಲವು ಹಂತಗಳನ್ನು ಒಮ್ಮೆಲೆ ಕ್ರಮಿಸುವ ಒಂದು ವಿಧಾನ ಅಷ್ಟೆ. ಉದಾಹರಣೆಗೆ, ‘ಈ ವರ್ಷದ ಸೆಪ್ಟೆಂಬರ್ 1ನೇ ತಾರೀಖು ಯಾವ ವಾರ’ ಎಂದು ಕೇಳಿದೆ ಎಂದಿಟ್ಟುಕೊಳ್ಳಿ, ಪೆನ್ನು, ಕಾಗದ ತೆಗೆದು ಲೆಕ್ಕ ಹಾಕಲು ಶುರು ಮಾಡುತ್ತೀರಿ. ಉತ್ತರ ಪಡೆಯಲು ಎಂಟು-ಹತ್ತು ಹಂತ ಬೇಕಾಗಬಹುದು. ಆದರೆ ಈ ಲೆಕ್ಕಾಚಾರಗಳೆಲ್ಲ ತಲೆಯಲ್ಲಿ ಹೇಗೂ ಇದ್ದೇ ಇರುತ್ತವೆ. ನೀವು ಅಂತರ್ದೃಷ್ಟಿ ಉಳ್ಳವರಾದಲ್ಲಿ ಆ ಎಲ್ಲ ಹತ್ತು ಹಂತಗಳನ್ನೂ ಹಾದು ಬರುವುದಿಲ್ಲ; ಸೀದಾ ಉತ್ತರವನ್ನು ಪಡೆಯುತ್ತೀರಿ. ನಿಮ್ಮ ಬುದ್ಧಿ ಈ ರೀತಿ ಕೆಲಸ ಮಾಡಿದಲ್ಲಿ ಪ್ರತಿಯೊಂದನ್ನು ಪ್ರತಿಬಾರಿಯೂ ಲೆಕ್ಕ ಹಾಕಬೇಕಿಲ್ಲ. ಬೇಕೆಂದಾಗ ಬೇಕೆನಿಸಿದ ಮಾಹಿತಿಯನ್ನು ಸೀದಾ ಹೊರತೆಗೆಯಬಹುದು, ಅದುವೇ ಅಂತರ್ದೃಷ್ಟಿ.

    ತುಂಬ ಜನ ಮಕ್ಕಳು, ವಿಶೇಷವಾಗಿ ಆಟಿಸಂ ಉಳ್ಳ ಮಕ್ಕಳು, ಅಂದರೆ ಯಾರಿಗೆ ಸಾಧಾರಣ ಕಾರ್ಯಗಳನ್ನು ಮಾಡಿಕೊಂಡು ಹೋಗುವ ನಿಟ್ಟಿನಲ್ಲಿ ಕೆಲವು ನ್ಯೂನತೆಗಳು ಇವೆಯೋ, ಅವರಿಗೆ ಸಾಮಾನ್ಯವಾಗಿ ಬೇರೆ ವಿಷಯಗಳಲ್ಲಿ ಅಂತರ್ದೃಷ್ಟಿ ಇರುತ್ತದೆ. ಕೆಲ ಸಮಯದ ಹಿಂದೆ 11 ವರ್ಷದ ಒಬ್ಬ ಹುಡುಗನನ್ನು ಭೇಟಿಯಾಗಿದ್ದೆ. ಅವನು ಒಂದು ವಿಶೇಷ ಮಕ್ಕಳ ಶಾಲೆಯಲ್ಲಿ ಕಲಿಯುತ್ತಿದ್ದಾನೆ. ಅವನ ಹತ್ತಿರ ‘ಕ್ರಿಪೂ 3000 ಮಾರ್ಚ್ 1ನೇ ತಾರೀಖು ಯಾವ ವಾರ?’ ಎಂದು ಕೇಳಿದರೆ, ಅವನು ಆ ಕ್ಷಣವೇ ಉತ್ತರಿಸುತ್ತಿದ್ದ. ನೀವದನ್ನು ಪರಿಶೀಲಿಸಿದರೆ ಅದು ಸರಿಯಾಗಿಯೇ ಇರುತ್ತದೆ. ಅವನ ಉತ್ತರ ಯಾವತ್ತೂ ತಪ್ಪಾಗುವುದೇ ಇಲ್ಲ. ಅವನು ಉತ್ತರ ಹೇಳಲು ಯೋಚಿಸಬೇಕಾಗಿಯೆ ಇಲ್ಲ. ಅದು ಅನಾಯಾಸವಾಗಿ ಅವನಿಗೆ ಬರುತ್ತಿತ್ತು.

    ಇದನ್ನೂ ಓದಿ: ಗ್ರಾಪಂ ಚುನಾವಣೆ ಅಕ್ಟೋಬರ್​ನಲ್ಲಿ?

    ತರ್ಕಬದ್ಧವಾದ ವಿವಿಧ ಹಂತಗಳನ್ನು ದಾಟದೆ ನೇರವಾಗಿ ಉತ್ತರವನ್ನು ಪಡೆಯುವ ಬೇರೊಂದು ವಿಧಾನವೇ ಅಂತರ್ದೃಷ್ಟಿ . ತರ್ಕವನ್ನು ಬಿಟ್ಟು ನೇರವಾಗಿ ಉತ್ತರ ಪಡೆಯುತ್ತೀರಿ. ರ್ತಾಕ ಮನಸ್ಸು ಎಲ್ಲ ಪ್ರಕ್ರಿಯೆಗಳನ್ನು ಬಳಸಿ ಬೇಕಾದ ಮಾಹಿತಿ ಪಡೆಯುತ್ತದೆ; ಅದೇ ಅಂತರ್ದೃಷ್ಟಿ ಉಳ್ಳ ಮನಸ್ಸು ಆ ಎಲ್ಲ ಪ್ರಕ್ರಿಯೆಗಳನ್ನು ಒಳಗೊಳ್ಳದೆ ಬೇಕಾದ ಮಾಹಿತಿಯನ್ನು ಬೇಕಾದ ಸಮಯದಲ್ಲಿ ಪಡೆಯುತ್ತದೆ. ಇದಕ್ಕೆ ನಿಮ್ಮನ್ನು ತರಬೇತುಗೊಳಿಸಬಹುದು.

    ಅಂತರ್ದೃಷ್ಟಿಗಾಗಿ ಮನಸ್ಸಿನ ತರಬೇತಿ: * ದಿನನಿತ್ಯದ ವ್ಯವಹಾರದಲ್ಲಿ ನಿರ್ಣಯ ತೆಗೆದುಕೊಳ್ಳುವಾಗ ಹೆಚ್ಚು ಪರಿಣಾಮಕಾರಿಯಾಗುವಂತೆ ನಮ್ಮನ್ನು ಅಂತರ್ದೃಷ್ಟಿವುಳ್ಳವರಾಗಲು ತರಬೇತಿ ಕೊಡಬಹುದೆ?

    -ನಾವು ಕಲಿಸಿ ಕೊಡುವ ಸರಳವಾದ ಯೋಗಾಭ್ಯಾಸಗಳು ತರ್ಕಶಕ್ತಿ ಹಾಗೂ ಇನ್​ಟ್ಯೂಶನ್ ಎರಡನ್ನೂ ವೃದ್ಧಿಗೊಳಿಸುತ್ತವೆ. ನಾನು ತರ್ಕಬದ್ಧವಾಗಿದ್ದೇನೆಯೆ? ಹೌದು. ಆದರೆ ನಾನು ಯಾವುದನ್ನೂ ರ್ತಾಕವಾಗಿ ಮಾಡುವುದಿಲ್ಲ; ಎಲ್ಲವೂ ನನಗೆ ಅಂತರ್ದೃಷ್ಟಿಯ ಮೂಲಕವೇ ನಡೆಯುತ್ತದೆ. ಜೀವನದಲ್ಲಿ ಮಾಡುವ ಚಟುವಟಿಕೆಗಳ ಪ್ರಮಾಣ ಹಾಗೂ ವೈವಿಧ್ಯ ನೋಡಿದರೆ ಜನರಿಗೆ ಆಶ್ಚರ್ಯವಾದೀತು; ಆದರೆ ಅವೆಲ್ಲವನ್ನು ರ್ತಾಕವಾಗಿ ಮಾಡುವುದಿಲ್ಲ ಮತ್ತು ಅಂತರ್ದೃಷ್ಟಿ ಮೂಲಕವೇ ಎಲ್ಲ ನಡೆಯುವ ಕಾರಣದಿಂದ ಅಲ್ಲಿ ಶ್ರಮ ಇರುವುದಿಲ್ಲ. ಅದು ಸುಮ್ಮನೆ ನಡೆಯುತ್ತದೆ ಅಷ್ಟೆ.

    ಮಾಹಿತಿ ಇಲ್ಲದೆ ಅಂತರ್ದೃಷ್ಟಿ ಕೆಲಸ ಮಾಡುವುದಿಲ್ಲ. ಮಾಹಿತಿಯ ಅಗತ್ಯ ಖಂಡಿತ ಇದೆ, ಆದರೆ ಅಲ್ಲಿ ಲೆಕ್ಕಾಚಾರ ಇಲ್ಲ. ಮಾಹಿತಿಯ ಸಂಗ್ರಹ ಪ್ರತಿ ಕ್ಷಣವೂ ನಡೆಯುತ್ತಿರುತ್ತದೆ; ಎಲ್ಲ ಐದು ಜ್ಞಾನೇಂದ್ರಿಯಗಳು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿರುತ್ತವೆ. ಜನರು ನನ್ನ ಬಳಿ ತರುವ ವಿಷಯಗಳು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ. ಕಟ್ಟಡ ಕಟ್ಟುವವರು, ಕಟ್ಟಡ ನಿರ್ವಣದಲ್ಲಿ ಇಂಜಿನಿಯರಿಂಗ್ ಸಮಸ್ಯೆಯೇನಾದರು ಇದ್ದಲ್ಲಿ ನನ್ನ ಬಳಿ ಬರುತ್ತಾರೆ. ಯಾರಾದರೂ ಒಂದು ಮಷೀನು ರಿಪೇರಿ ಮಾಡುವಾಗ ಏನಾದರೂ ತೊಂದರೆ ಆದಲ್ಲಿ ನನ್ನ ಹತ್ತಿರ ಬರುತ್ತಾರೆ. ನಾನು ಅವೆಲ್ಲದರಲ್ಲಿ ತರಬೇತಿ ಹೊಂದಿದ್ದೇನೆಂದು ಅಲ್ಲ. ನೀವು ಕಟ್ಟಡವನ್ನು ನೋಡುತ್ತೀರಷ್ಟೆ? ಕಟ್ಟಡವನ್ನು ನೋಡಿದರೆ, ಗಮನವಿಟ್ಟು ನೋಡಿರಿ ಇಲ್ಲ ಗಮನವಿಡದೆ ನೋಡಿರಿ, ಕಣ್ಣುಗಳು ಅದರ ಪೂರ್ತಿ ಚಿತ್ರವನ್ನು ಗ್ರಹಿಸಿರುತ್ತವೆ. ನಿಮಗೆ ಸ್ವಲ್ಪ ಮಟ್ಟಿಗಿನ ಪ್ರಜ್ಞೆ ಇದ್ದಲ್ಲಿ, ಯಾವಾಗ ಬೇಕಾದರೂ ಆ ಚಿತ್ರಣವನ್ನು ಮರುಸೃಷ್ಟಿಸಬಹುದು.

    ಇದನ್ನೂ ಓದಿ: ರಾಹುಲ್ ಗಾಂಧಿಯವರ ಮಾಜಿ ಕ್ಷೇತ್ರ ಅಮೇಠಿಯ ಗೌರಿಗಂಜ್​​ ರೈಲ್ವೆ ನಿಲ್ದಾಣದ ಚಿತ್ರ ಅಂದು-ಇಂದು!

    ನಾನಿಂದು ಕಾರ್ ಚಲಾಯಿಸಿದರೆ, ವಿಶೇಷವಾಗಿ ಹಿಮಾಲಯದ ಶ್ರೇಣಿಗಳಲ್ಲಿ, ನನಗೆ ರಸ್ತೆಯ ಪ್ರತಿಯೊಂದು ತಿರುವು, ಪ್ರತಿಯೊಂದು ಕಲ್ಲು, ಪ್ರತಿಯೊಂದು ಪ್ರಮುಖ ಮರ ಎಲ್ಲವೂ ಗೊತ್ತು. ವಾಹನ ಚಲಾಯಿಸುವಾಗ, ಮುಂದೆ ಬರುವ ತಿರುವು ಅದಾಗಲೇ ನನ್ನ ಕಣ್ಮುಂದೆ ಬಂದಿರುತ್ತದೆ. ಜನರಿಗೆ ನಾನೇಕೆ ಅಷ್ಟು ವೇಗವಾಗಿ ಚಲಾಯಿಸುತ್ತಿದ್ದೇನೆ ಎಂದು ಅರ್ಥವಾಗುವುದಿಲ್ಲ. ಬೇರೆಯವರೆಲ್ಲ 20-30 ಕಿ.ಮೀ. ವೇಗದಲ್ಲಿ ಹೋಗುತ್ತಿದ್ದರೆ ನಾನು ವಾಯುವೇಗದಲ್ಲಿ ಹೋಗುತ್ತಿರುತ್ತೇನೆ. ಏಕೆಂದರೆ ಮುಂದೆ ಬರುವ ಎರಡು-ಮೂರು ತಿರುವುಗಳು ಈಗಾಗಲೇ ನನ್ನ ಕಣ್ಮುಂದೆ ಇರುತ್ತವೆ. ರಸ್ತೆಯಲ್ಲಿ ಬರುವ ಬೇರೆ ವಾಹನಗಳ ಬಗ್ಗೆ ನಾನು ಸ್ವಲ್ಪ ಗಮನಹರಿಸಬೇಕು ಅಷ್ಟೆ. ರಸ್ತೆಯ ಬಗ್ಗೆ ನಾನು ಚಿಂತಿಸಬೇಕಾಗಿಯೆ ಇಲ್ಲ. ಏಕೆಂದರೆ ರಸ್ತೆ ನಿಚ್ಚಳವಾಗಿ ನನ್ನ ಮನಸ್ಸಿನಲ್ಲಿ ಇರುತ್ತದೆ. ಅದು ಪ್ರತಿಯೊಬ್ಬರ ಮನಸ್ಸಿನಲ್ಲೂ ಇರುತ್ತದೆ; ಆದರೆ ಅವರು ಎಲ್ಲ ಮಾಹಿತಿಯ ಕಲಸುಮೇಲೋಗರ ಮಾಡಿಕೊಂಡು ಬೇಕಾದ ಮಾಹಿತಿಯನ್ನು ಅವಶ್ಯಕತೆ ಇರುವಾಗ ಪಡೆಯಲಾಗುವುದಿಲ್ಲ.

    ಆದ್ದರಿಂದ ಯೋಗಸಾಧನೆ ಮಾಡುವಾಗ, ಪ್ರಜ್ಞೆಯೊಂದಿಗೆ ನೀವು ಸಂಪರ್ಕದಲ್ಲಿ ಇದ್ದರೆ ಮನಸ್ಸು ಮುಕ್ತವಾಗಿ ಇರುತ್ತದೆ. ಎಷ್ಟರಮಟ್ಟಿಗೆ ಎಂದರೆ ನೀವು ಮೂಸಿದ, ರುಚಿ ನೋಡಿದ, ಮುಟ್ಟಿದ, ಕೇಳಿದ ಮತ್ತು ನೋಡಿದ ಎಲ್ಲವೂ ಅಲ್ಲಿ ಗ್ರಹಿಕೆಯಾಗಿರುತ್ತದೆ. ಯಾವುದನ್ನೂ ನೆನಪಿಸಿಕೊಳ್ಳಲು ಪ್ರಯತ್ನಪಡಬೇಕಿಲ್ಲ. ಅವೆಲ್ಲವೂ ಅಲ್ಲಿರುತ್ತವೆ. ಸುಲಭವಾಗಿ ಹೊರತೆಗೆಯಬಹುದು. ನೆನಪು ಎಂಬುದು ಜ್ಞಾಪಕವಿಟ್ಟುಕೊಳ್ಳುವುದು ಎಂದಲ್ಲ, ಅದು ಬೇಕಾದಾಗ ಮಾಹಿತಿಯನ್ನು ಹೊರತೆಗೆಯುವ ಸಾಮರ್ಥ್ಯ.

    ಸ್ವಲ್ಪ ಮಟ್ಟಿಗೆ ನಮ್ಮೆಲ್ಲರಲ್ಲೂ ಈ ಇನ್​ಟ್ಯೂಷನ್ ಇದೆಯೆ- ಒಂದು ರೀತಿಯ ಗಟ್ ಫೀಲಿಂಗ್.

    ಉದಾಹರಣೆಗೆ ಹೇಳಬೇಕೆಂದರೆ, ಪ್ರಸ್ತುತ ಇದೆಲ್ಲ ಮರೆಯಾಗುತ್ತಿದೆ, ಹಿಂದಿನ ತಲೆಮಾರಿನಲ್ಲಿ ನೀವು ಡಾಕ್ಟರ ಬಳಿ ಹೋದರೆ ಅವರು ಸುಮ್ಮನೆ ಕುಳಿತು ನಿಮ್ಮೊಡನೆ ಸಂಭಾಷಣೆಯಲ್ಲಿ ತೊಡಗಿ, ಅಷ್ಟರಿಂದಲೇ ಆರೋಗ್ಯದಲ್ಲಿ ಏನು ಏರುಪೇರು ಆಗಿದೆ ಎಂದು ತಿಳಿದುಕೊಳ್ಳುತ್ತಿದ್ದರು. ಯಾರೂ ಈ ವಿಧವಿಧವಾದ ಸ್ಕಾ್ಯನಿಂಗ್ ಮಾಡುತ್ತಿರಲಿಲ್ಲ. ಈಗಲೂ ಆ ತರಹದ ಕೆಲವು ಡಾಕ್ಟರುಗಳಿದ್ದಾರೆ. ಈ ಎಲ್ಲ ವಿಷಯಗಳು(ಆರೋಗ್ಯದಲ್ಲಾದ ಏರುಪೇರು) ಹಲವು ರೀತಿಯಲ್ಲಿ ನಿಮ್ಮಲ್ಲಿ ದಾಖಲಾಗಿರುತ್ತವೆ.

    ದಕ್ಷಿಣ ಭಾರತದ ಕೆಲ ಪ್ರದೇಶಗಳಲ್ಲಿ ಕೆಲವು ಜನಾಂಗ ಪಾರಂಪರಿಕವಾಗಿ ಇಂತಹ ವಿಷಯಗಳಲ್ಲಿ ತರಬೇತಿ ಹೊಂದಿರುತ್ತಾರೆ. ಅವರು ನಿಮ್ಮ ಮುಖ ನೋಡಿಯೇ ನಿಮ್ಮ ತಂದೆಯ ಹೆಸರು, ತಾಯಿಯ ಹೆಸರು, ಮಗುವಿನ ಹೆಸರು ಎಲ್ಲ ಹೇಳುತ್ತಾರೆ. ನಿಮ್ಮ ಜೀವನದಲ್ಲಿ ನಡೆದ ಹೆಚ್ಚು ಕಡಿಮೆ ಎಲ್ಲ ವಿಷಯಗಳು ಹಾಗೂ ಭವಿಷ್ಯದಲ್ಲಿ ನಡೆಯಬಹುದಾದ ಎಲ್ಲ ಘಟನೆಗಳನ್ನು ಹೇಳುತ್ತಾರೆ. ನಂತರ ಹತ್ತು ರೂಪಾಯಿ ಕೇಳುತ್ತಾರೆ. ಕೇವಲ ಹತ್ತು ರೂಪಾಯಿಗಾಗಿ ಅವರು ನಿಮಗೆ ಎಲ್ಲವನ್ನೂ ಹೇಳುತ್ತಾರೆ.

    ಇದೇ ಅಂತರ್ದೃಷ್ಟಿ. ಜಾಗ್ರತೆಯಿಂದ ನೋಡಿದರೆ ಅದನ್ನು ಉಪಯೋಗಿಸೋದು ತಿಳಿಯುತ್ತದೆ. ಕೆಲವೊಮ್ಮೆ ನಿಮಗೆ ಅರಿವಿಲ್ಲದೆಯೇ ಬೇರೊಬ್ಬರ ಕೆಲವೊಂದು ಮಾಹಿತಿಯನ್ನು ಗ್ರಹಿಸಬಲ್ಲಿರಿ. ಇನ್​ಟ್ಯೂಷನ್ ಕೇವಲ ಮಾಹಿತಿಯನ್ನು ಸುಂದರವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸುವುದು. ಆದರೆ ಅದು ಗ್ರಹಿಕೆಯ ಇನ್ನೊಂದು ಆಯಾಮವಲ್ಲ.

    ಇದನ್ನೂ ಓದಿ: ಟಿಕ್​ಟಾಕ್ ಜಾಗಕ್ಕೆ ಟಿಕ್​ಟಾಕ್​ ಪ್ರೋ ಬಂದಿದೆ- ಆದರೆ ಅದು ಆ್ಯಪ್​ ಅಲ್ಲ ಹುಷಾರ್​!

    ಆದರೆ ನಾನು ಪುನಃ ಪುನಃ ಹೇಳುವ ಹಾಗೆ, ಮನುಷ್ಯರಲ್ಲಿ ಗ್ರಹಿಕೆಯ ವಿವಿಧ ಹಂತಗಳನ್ನು ಸಕ್ರಿಯಗೊಳಿಸಬಹುದು. ‘ವಿವಿಧ ಹಂತದ ಗ್ರಹಿಕೆ’ ಎಂದು ಹೇಳುವಾಗ ಅದರರ್ಥ, ಈಗ ಇಲ್ಲಿ ನಾನು ಕಣ್ಣುಮುಚ್ಚಿ ಕುಳಿತಿರುವಾಗ ಯಾರಾದರೂ ಹಾಲ್​ಗೆ ಹಿಂಭಾಗದಿಂದ ಪ್ರವೇಶ ಮಾಡಿದರೆ, ಆತ ಯಾವ ರೀತಿಯ ವ್ಯಕ್ತಿ ಎಂಬುದನ್ನು ಹೇಳಬಲ್ಲೆ. ಇದೇನು ದೊಡ್ಡ ಯೋಗವಲ್ಲ. ನಿಮ್ಮ ನಾಯಿ ಕೂಡ ಇದನ್ನು ಮಾಡಬಲ್ಲದು. ನಿಮಗೆ ಗೊತ್ತೆ? ನಾಯಿ ಸೋಫಾದ ಕೆಳಗೆ ಮಲಗಿರುತ್ತದೆ; ಯಾರಾದರೂ ಒಳ ಬಂದಲ್ಲಿ ಅದಕ್ಕೆ ಗೊತ್ತಾಗುತ್ತದೆ ಯಾರು ಬಂದರು ಎಂದು. ನಿಮ್ಮಲ್ಲೂ ಆ ಶಕ್ತಿ ಇದೆ. ಆದರೆ ಏಕೆ ಆ ಶಕ್ತಿಯನ್ನು ಕಳೆದುಕೊಂಡಿರಿ? ಕಾರಣ ಅತಿಯಾಗಿ ಮಾನಸಿಕರಾಗಿದ್ದೀರಿ; ನೀವು ಲೋಕದೊಂದಿಗೆ ಇಲ್ಲ. ಸದಾ ಕಾಲ ಮರ್ಕಟ ಬುದ್ಧಿ ನಿಮ್ಮದೆ ಆದ ಮಂಗಾಟದಲ್ಲಿ ತೊಡಗಿರುವುದರಿಂದ ಸಾಧ್ಯವಾಗಬಹುದಾದ ಎಲ್ಲ ಸುಂದರ ವಿಷಯಗಳು ನಶಿಸಿ ಹೋಗಿವೆ ಅಷ್ಟೆ.

    ಅಂತರ್ದೃಷ್ಟಿ ಎಷ್ಟು ಅವಶ್ಯಕ?: ಕೆಲವು ಬಾರಿ ಈ ಅಂತರ್ದೃಷ್ಟಿ ತುಂಬ ಗೊಂದಲದ ವಿಷಯ. ಬಹಳ ಜನರು ‘ಓ, ಬಹುಶಃ ನನಗೆ ಆತ್ಮಸ್ಥೈರ್ಯ ಇದೆ’ ಎಂದು ಹೇಳುತ್ತಾರೆ-ವಿಶೇಷವಾಗಿ ಕುದುರೆ ರೇಸ್​ಗೆ ಹೋಗುವ ವ್ಯಕ್ತಿಗಳು! ನೂರಕ್ಕೆ ತೊಂಬತ್ತು ಬಾರಿ ಅವರು ಸೋಲುತ್ತಾರೆ, ಹಾಗಿದ್ದೂ ಅವರಿಗೆ ಗಟ್ ಫೀಲಿಂಗ್ ಇರುತ್ತದೆ. ಏಕೆಂದರೆ ಅದು ಒಮ್ಮೆ ಸರಿಯಾಗಿತ್ತು. ಆದರೆ ಹತ್ತು ಬಾರಿ ಫೇಲಾಯಿತು, ಆದರೂ ಅವರು ಒಮ್ಮೆ ಕೆಲಸ ಮಾಡಿದ ಆ ಗಟ್ ಫೀಲಿಂಗ್​ಗೆ ಜೋತುಕೊಂಡಿರುತ್ತಾರೆ. ಅದು ಎಲ್ಲೋ ಆಕಸ್ಮಿಕವಾಗಿ ನಡೆಯುವುದಷ್ಟೆ.

    ಯಾವಾಗಲೋ ಒಮ್ಮೆ ಆಗುವ ಅಂತರ್ದೃಷ್ಟಿ ತುಂಬ ಅಪಾಯಕಾರಿ. ಏಕೆಂದರೆ ನಿಮಗದು ನೂರಕ್ಕೆ ನೂರು ಹೌದೋ ಅಲ್ಲವೊ ಅಂತ ಹೇಗೆ ತೀರ್ಮಾನ ಮಾಡುವುದು ಎಂಬುದು ಗೊತ್ತಾಗುವುದಿಲ್ಲ. ಆದ್ದರಿಂದ ನಿಮ್ಮೊಳಗೆ ಭಾರಿ ತುಮುಲ ಏರ್ಪಡುತ್ತದೆ. ರ್ತಾಕ ಮನಸ್ಸು ಒಂದು ಹೇಳುತ್ತದೆ, ಇನ್​ಟ್ಯೂಷನ್ ಬೇರೆ ಏನೋ ಹೇಳುತ್ತಿದೆ ಎಂದು ಯೋಚಿಸುತ್ತೀರಿ. ಅದು ನೂರಕ್ಕೆ ನೂರು ಸ್ಪಷ್ಟವಾಗಿ ಇರಬೇಕು; ಇಲ್ಲವಾದಲ್ಲಿ ಅದು ಕಿರಿಕಿರಿ. ಆಗ ಅದನ್ನು ಬಿಟ್ಟು ತರ್ಕವನ್ನು ಅವಲಂಬಿಸುವುದೇ ಉತ್ತಮ. ತರ್ಕ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಂಡರೂ ಕೊನೇಪಕ್ಷ ಒಂದು ಪ್ರಗತಿ ಅಥವಾ ಫಲಿತಾಂಶ ಕಾಣುತ್ತೀರಿ. ಈ ಇನ್​ಟ್ಯೂಷನ್ ಎಲ್ಲ ರೀತಿಯ ಪರಿಸ್ಥಿತಿಗೆ ತಳ್ಳಬಹುದು. ಏಕೆಂದರೆ ಏನೇನೋ ನಂಬಿಕೆ ಇಟ್ಟುಕೊಳ್ಳುತ್ತೀರಿ. ಆ ರೀತಿಯ ಎಷ್ಟೋ ಜನರಿದ್ದಾರೆ, ತಮಗೆ ಅಂತರ್ದೃಷ್ಟಿ ಇದೆ ಎಂದು ಸದಾ ತಮ್ಮ ಜೀವನದಲ್ಲಿ ತಪ್ಪು ನಿರ್ಣಯಗಳನ್ನು ಮಾಡುತ್ತಿರುತ್ತಾರೆ.

    ಕೇವಲ ಒಂದು ಪ್ರತಿಶತ ಅನುಮಾನ ಇದ್ದರೂ, ತರ್ಕವನ್ನು- ಅದು ಎಷ್ಟೇ ಸೀಮಿತವಾಗಿಯೆ ಇರಲಿ- ಉಪಯೋಗಿಸುವುದೇ ಒಳ್ಳೆಯದು, ಏಕೆಂದರೆ ಅದು ಹೆಚ್ಚು ವಿಶ್ವಾಸಾರ್ಹ. ಅದನ್ನು ನಾವು ಪುನರ್ ಪರಿಶೀಲಿಸಬಹುದು. ಅಂತರ್ದೃಷ್ಟಿಯನ್ನು ಪುನರ್ ಪರಿಶೀಲಿಸಲಾಗುವುದಿಲ್ಲ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ) 

    ನೇಮಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯಿಂದ ಅನ್ಯಾಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts