| ಗುರುನಾಥ ಶಿ. ಸುತಾರ. ಹುಲ್ಯಾಳ
ಗ್ರಾಮೀಣ ಭಾಗದಲ್ಲಿ ಒಂದು ನಾಣ್ಣುಡಿ ಇದೆ ಎಲ್ಲರೂ ರಾಜರಾದರೆ ಅಥವಾ ಗುರುಗಳಾದರೆ ಪಲ್ಲಕ್ಕಿ ಹೊರುವವರು ಯಾರು? ಎಂದು. ಎಲ್ಲರೂ ಮೈಗಳ್ಳ ರಾಗದೆ ನಿರಂತರ ಶ್ರಮ ಜೀವಿಗಳಾಗಿರಲಿ ಎಂಬುದು ಇದರ ಮರ್ಮ. ಈ ಭೂಮಿಯಲ್ಲಿ ದೇವರು, ಧರ್ಮ, ಸತ್ಯ ಎಂಬುದು ಇದ್ದರೆ, ಕೆಲವರು ದುಃಖಿಗಳು, ಇನ್ನು ಕೆಲವರು ಸದಾ ಸುಖಿಗಳಾಗಿದ್ದಾರಲ್ಲಾ, ಈ ರೀತಿಯ ತಾರತಮ್ಯ ಏಕೆಂದು ಶಿಷ್ಯನೊಬ್ಬ ಶಾರದಾ ಮಾತೆಯನ್ನು ಕೇಳಿದಾಗ, ಅವರು ರಾಮಾಯಣ ಮಹಾಕಾವ್ಯದಲ್ಲಿಯ ಒಂದು ಸಂದರ್ಭವನ್ನು ವಿವರಿಸುತ್ತಾರೆ. ಸೀತಾಮಾತೆ ಒಮ್ಮೆ ಶ್ರೀರಾಮಚಂದ್ರನನ್ನು ಕೇಳಿದಳಂತೆ.
‘ಪ್ರಭುಗಳೆ, ನಮ್ಮ ರಾಜ್ಯದಲ್ಲಿ ಬಡವ, ಬಲ್ಲಿದರೆಂಬ ಭೇದಭಾವ ಏಕಿದೆ? ಕೆಲವರು ತುತ್ತು ಅನ್ನಕ್ಕಾಗಿ ದಿನಂಪ್ರತಿ ಚಡಪಡಿಸುತ್ತಿರುತ್ತಾರೆ. ಕೆಲವರು ಮುಂದಿನ ತಲೆಮಾರುಗಳಿಗೂ ಕೊರತೆಯಾಗದಂತೆ ಧನ ಧಾನ್ಯ ಸಂಗ್ರಹಿಸಿದ್ದಾರೆ. ತಾವು ಎಲ್ಲರನ್ನೂ ಒಂದೇ ರೀತಿಯಲ್ಲಿಟ್ಟು, ಹೆಚ್ಚಿನ ಗೌರವಾದರ ಪಡೆಯಬಹುದಲ್ಲಾ’ ಎನ್ನುತ್ತಾಳೆ. ರಾಜ್ಯದ ಬೊಕ್ಕಸದಿಂದ ಎಲ್ಲರ ಅಗತ್ಯಗಳನ್ನು ಪೂರೈಸಿ ಎಂಬ ಸೀತಾಮಾತೆಯ ಮನದಾಳ ಅರಿತ ಶ್ರೀರಾಮಚಂದ್ರನು ‘ನಿನ್ನಿಷ್ಟದಂತೆ ಆಗಲಿ’ ಎನ್ನುತ್ತಾನೆ. ಸಹೋದರ ಲಕ್ಷ್ಮಣನನ್ನು ಕರೆದು ಡಂಗುರ ಸಾರಿಸುತ್ತಾನೆ. ರಾಜ್ಯದ ಎಲ್ಲ ಜನರು, ತಮ್ಮ ಅಗತ್ಯಗಳನ್ನು ಪಡೆದುಕೊಂಡು ಹೋಗಲು ಸಾಲುಗಟ್ಟಿ ನಿಲ್ಲುತ್ತಾರೆ. ಅರಮನೆಯ ಭಂಡಾರದಿಂದ ಎಲ್ಲರೂ ತಮಗೆ ಬೇಕಾದುದನ್ನು ಪಡೆದುಕೊಂಡು ಅನಾಯಾಸವಾಗಿ ಸಿರಿವಂತರಾದರು. ಎಲ್ಲವೂ ಪುಕ್ಕಟೆಯಾಗಿ ಸಿಗಲು ಆರಂಭಿಸಿದಾಗ ದುಡಿದು ಉಣ್ಣಬೇಕು ಎಂಬ ಭಾವ ದೂರಾಯಿತು.
ಹೀಗೆ ಕೆಲ ಕಾಲ ಸಾಗಿದಾಗ ಅರಮನೆಯ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಬಿಟ್ಟು ನೀರಿಳಿಯ ಹತ್ತಿತು. ಅರಮನೆಗೆ ಬಿಟ್ಟಿರುವ ಬಿರುಕುಗಳನ್ನು ಸರಿಪಡಿಸಲು ಗಾರೆ ಕೆಲಸದವರು ಬರಬೇಕೆಂದು ಸ್ವತಃ ಶ್ರೀರಾಮಚಂದ್ರನೇ ಆದೇಶಿಸಿದರೂ ಯಾರೂ ಬರಲಿಲ್ಲ. ಆಗ ತನ್ನ ಲೀಲೆಯಿಂದ ರಾಜ್ಯದ ಎಲ್ಲ ಮನೆಗಳೂ ಬಿರುಕು ಉಂಟಾಗುವಂತೆ ಮಾಡಿದನಂತೆ, ಗಾರೆ ಮಾಡುವ ಜನ ತಾವೇ ಇದ್ದರೂ ಬೇರೆ ಗಾರೆ ಕೆಲಸಗಾರರನ್ನು ಅವರೇ ಹುಡುಕಲು ಆರಂಭಿಸಿದರಂತೆ. ಎಲ್ಲರೂ ಅಲ್ಲಿಯ ಉಚಿತ ಭಾಗ್ಯಗಳಿಂದ ನಿಜಕ್ಕೂ ದುಡಿಯುವುದೆಂದರೆ ಮೈಮುಳ್ಳಾಗಿ ಬಿಟ್ಟಿತ್ತು.
ಸಂದರ್ಭದ ಗಂಭೀರತೆಯನ್ನು ಅರಿತ ಸೀತಾಮಾತೆಯು, ಎಲ್ಲರೂ ಅನುಕೂಲಸ್ಥರಾದರೆ ದುಡಿಯುವ ಕೈಗಳು ಇರುವುದಿಲ್ಲ ಎನ್ನುತ್ತಾ , ‘ಮೊದಲಿನಂತಾದರೆ ಒಳಿತು, ಕೆಲಸದವರು ಸಿಗುತ್ತಾರೆ’ ಎಂದು ಶ್ರೀರಾಮನಲ್ಲಿ ನಿವೇದಿಸುತ್ತಾಳೆ. ಈ ಕತೆಯನ್ನು ತನ್ನ ಶಿಷ್ಯರಿಗೆ ಹೇಳಿದ ಶಾರದಾ ಮಾತೆಯು, ಜಗತ್ತಿನಲ್ಲಿ ಎಲ್ಲರೂ ಅನುಕೂಲಸ್ಥರಾದರೆ ಲೋಕದ ವ್ಯವಹಾರ ಸುಗಮವಾಗಿ ನಡೆಯದು. ಅದಕ್ಕಾಗಿ ಈ ಭೂಮಿಯಲ್ಲಿ ಭಗವಂತ ಏರುಪೇರು ಸೃಷ್ಟಿಸಿದ್ದಾನೆ ಎನ್ನುತ್ತಾರೆ. ಎಲ್ಲರೂ ತಮ್ಮ ನಿತ್ಯ ನೈಮಿತ್ತಿಕ ಕಾರ್ಯ ಚಟುವಟಿಕೆಗಳಲ್ಲಿ ನಿರತರಾದರೆ ಮಾತ್ರ ತಮ್ಮ ಸ್ವಾಸ್ಥ್ಯೊಂದಿಗೆ ಇತರರ ಆರೋಗ್ಯ ಕೂಡ ಕಾಪಾಡಲು ಸಾಧ್ಯ. ಎಲ್ಲರೂ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವವರಾಗದೆ ಹೊರುವವರು ಆಗಬೇಕೆಂಬುದು ಅಷ್ಟೇ ಮಹತ್ವದ್ದು.
(ಲೇಖಕರು ಹವ್ಯಾಸಿ ಬರಹಗಾರರು)