ಕೃಷ್ಣಮೃಗವು ತಮ್ಮ ಗುರುವಾದ ಜಂಭೇಶ್ವರರ ಅವತಾರ ಎಂದು ಬಿಷ್ಣೋಯಿ ಸಮುದಾಯ ಬಲವಾಗಿ ನಂಬಿದೆ. ಹೀಗಾಗಿ ಕೃಷ್ಣಮೃಗದ ಬಗ್ಗೆ ಅವರಿಗೆ ದೇವತ್ವದ ಭಾವನೆಯಿದೆ. ಕೃಷ್ಣಮೃಗ ಮಾತ್ರವಲ್ಲ ಎಲ್ಲ ಪ್ರಾಣಿಸಂಕುಲವನ್ನು ಕಾಪಾಡುವುದು ಮತ್ತು ಸಸ್ಯಾಹಾರವನ್ನು ಪಾಲಿಸುವುದು ತಮ್ಮ ಧರ್ಮ ಎಂಬುದಾಗಿ ಈ ಸಮುದಾಯ ಅನೂಚಾನವಾಗಿ ಪಾಲಿಸಿಕೊಂಡು ಬಂದಿದೆ.
ಕೃಷ್ಣಮೃಗವು ವಾಯು ಮತ್ತು ಚಂದ್ರನ ವಾಹನವೆಂದು ನಂಬಲಾಗುತ್ತದೆ. ಅಷ್ಟೇ ಅಲ್ಲ, ಭಗವಾನ್ ಕೃಷ್ಣನ ರಥವನ್ನು ಎಳೆಯುತ್ತದೆಂದು ಪ್ರತೀತಿ ಇದೆ. ಹಾಗೆನೋಡಿದರೆ, ದೇವಾನುದೇವತೆಗಳಿಗೆ ಪ್ರಾಣಿಗಳೇ ವಾಹನಗಳು. ಗರುಡ, ಇಲಿ, ಸಿಂಹ, ಹುಲಿ, ನವಿಲು... ಹೀಗೆ ವಿವಿಧ ಪ್ರಾಣಿಗಳು ದೇವರಿಗೆ ವಾಹನವಾಗಿರುವುದನ್ನು ಕಾಣುತ್ತೇವೆ. ಈ ಮೂಲಕ ಪ್ರಾಣಿಗಳಿಗೂ ದೇವತ್ವದ ಅಂಶಗಳನ್ನು ಸೇರಿಸುವ ಜೊತೆಗೆ, ನಿಸರ್ಗದಲ್ಲಿ ಅವಕ್ಕೂ ಮಹತ್ವದ ಸ್ಥಾನವಿದೆ, ಅವುಗಳ ಜೊತೆ ಸಹಬಾಳ್ವೆಯಿಂದ ಒಳಿತಾಗುತ್ತದೆ ಎಂಬ ಸಂದೇಶವನ್ನು ಇಲ್ಲಿ ಕಾಣಬಹುದು. ನಿಸರ್ಗದಲ್ಲಿ ಮಾನವನೇ ಬಾಸ್ ಅಲ್ಲ, ಸಕಲ ಪ್ರಾಣಿವರ್ಗಕ್ಕೂ ಇದರಲ್ಲಿ ಪಾಲಿದೆ.
‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ, 1998ರ ಸೆಪ್ಟೆಂಬರ್ನಲ್ಲಿ ಜೋಧಪುರದ ಮಥಾನಿಯಾದ ಬವಾಡ್ ಮತ್ತು ಗೋಢಾ ಹೊಲದಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪದ ಪ್ರಕರಣ ಎರಡು ದಶಕಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ನಿದ್ದೆಗೆಡಿಸಿದೆ. ಆ ಸಂದರ್ಭದಲ್ಲಿ ಸಲ್ಮಾನ್ ಹಾಗೂ ಇತರ ನಟರ ಮೇಲೆ ಕೃಷ್ಣಮೃಗ ಕೊಂದ ಆರೋಪದ ಮೇಲೆ ಬಿಷ್ಣೋಯಿ ಸಮುದಾಯದ ಸದಸ್ಯರು ದೂರು ನೀಡಿದರು. ಅವರು ದೂರು ನೀಡಲೂ ಬಲವಾದ ಕಾರಣವಿತ್ತು. ಇಲ್ಲವಾದಲ್ಲಿ ಆ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲವೇನೋ? ಹೀಗಾಗಿ ಈ ನಟರಿಗೆ ಫಜೀತಿ ಎದುರಾಯಿತು. ತರುವಾಯ ಸಲ್ಮಾನ್ ಹೊರತುಪಡಿಸಿ ಇತರ ನಟನಟಿಯರಿಗೆ ನ್ಯಾಯಾಲಯದಿಂದ ರಿಲೀಫ್ ಸಿಕ್ಕಿತು. ಆದರೆ ಸಲ್ಮಾನ್ ಸಂಕಷ್ಟ ಮಾತ್ರ ಇನ್ನೂ ಮುಗಿದಿಲ್ಲ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡವು ಸಲ್ಮಾನ್ಗೆ ಜೀವಬೆದರಿಕೆ ಹಾಕುವ ಮೂಲಕ ಇನ್ನಷ್ಟು ಸಮಸ್ಯೆ ತಂದಿಟ್ಟಿದೆ. ಈ ಲಾರೆನ್ಸ್ ಜನಿಸಿದ್ದು ಪಂಜಾಬಿನಲ್ಲಿ. ಈತ ಎಲ್ಎಲ್ಬಿ ಪದವೀಧರ. ಕಾಲೇಜು ಓದುತ್ತಿದ್ದಾಗಲೇ ಭೂಗತ ಜಗತ್ತಿನತ್ತ ಆಕರ್ಷಿತನಾಗಿ ಕ್ರಮೇಣ ಇತರ ಹಲವರ ಜೊತೆ ಸೇರಿ ಒಂದು ಬೃಹತ್ ತಂಡವನ್ನೇ ಕಟ್ಟಿಕೊಂಡ. ಈತನ ವಿರುದ್ಧ ಕೊಲೆ, ಬೆದರಿಕೆ, ಮಾದಕವಸ್ತು ಸಾಗಣೆ, ಸುಲಿಗೆ ಇತ್ಯಾದಿ ಸೇರಿ 70ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 2015ರಿಂದ ಗುಜರಾತಿನ ಅಹಮದಾಬಾದಿನಲ್ಲಿನ ಸಬರಮತಿ ಕಾರಾಗೃಹದಲ್ಲಿದ್ದಾನೆ. ಮುಂಬಯಿಯ ಬಾಂದ್ರಾ ಪ್ರದೇಶದಲ್ಲಿರುವ ಸಲ್ಮಾನ್ ಮನೆ ಹತ್ತಿರ ಬಿಷ್ಣೋಯಿ ತಂಡದ ಸದಸ್ಯರು ಗುಂಡುಹಾರಿಸಿದ ಘಟನೆ ಕೂಡ ನಡೆದಿತ್ತು. ಕೃಷ್ಣಮೃಗವನ್ನು ಕೊಂದ ತಪ್ಪಿಗಾಗಿ ಲಾರೆನ್ಸ್ ಬಿಷ್ಣೋಯಿಯು ಸಲ್ಮಾನ್ ಮೇಲೆ ಕೋಪಗೊಂಡು ಸಾಯಿಸುವ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಕೆಲವು ವರದಿಗಳು ಹೇಳುತ್ತವೆ. ಆದರೆ ಪ್ರಾಣಿಯನ್ನು ಕೊಂದಮಾತ್ರಕ್ಕೆ ಸಲ್ಮಾನ್ ಖಾನ್ರನ್ನು ಹತ್ಯೆಮಾಡುವ ಸ್ಕೆಚ್ ಹಾಕಿರಲು ಸಾಧ್ಯವಿಲ್ಲ. ಆ ಕೃತ್ಯ ನಡೆದಾಗ ಲಾರೆನ್ಸ್ಗೆ
ಕೇವಲ ಐದು ವರ್ಷ ವಯಸ್ಸಾಗಿತ್ತು. ಭೂಗತ ಡಾನ್ ದಾವೂದ್ ಇಬ್ರಾಹಿಂ ರೀತಿಯಲ್ಲಿ ಹಿಂದಿ ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಲಾರೆನ್ಸ್ ಬಿಷ್ಣೋಯಿ ಬೆದರಿಸುವ ಕೃತ್ಯಕ್ಕೆ ಮುಂದಾಗಿ ಈ ರೀತಿ ಮಾಡುತ್ತಿದ್ದಾನೆ ಎಂದು ಕೆಲವರು ವಾದ ಮುಂದಿಡುತ್ತಾರೆ. ಈ ನಡುವೆ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಬಿಷ್ಣೋಯಿ ಗ್ಯಾಂಗ್ ಕೈವಾಡವಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಇಲ್ಲೊಂದು ಕುತೂಹಲಕರ ಸಂಗತಿಯಿದೆ. ಕೆನಡಾದಲ್ಲಿ ಇರುವ ಖಲಿಸ್ತಾನಿ ನಾಯಕರನ್ನು ಬಿಷ್ಣೋಯಿ ಗ್ಯಾಂಗ್ ಮೂಲಕ ಹತ್ಯೆ ಮಾಡಿಸಲು ಭಾರತ ಸರ್ಕಾರವೇ ಸಂಚು ರೂಪಿಸಿದೆ ಎಂದು ಕೆನಡಾ ಸರ್ಕಾರ ಆರೋಪಿಸುತ್ತಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ಭಾರತ ಈ ಆರೋಪವನ್ನು ಅಲ್ಲಗಳೆಯುತ್ತಿದೆ. ಹೀಗಾಗಿ ಎರಡೂ ದೇಶಗಳ ನಡುವೆ ತೀವ್ರ ಸ್ವರೂಪದ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ಇದು ಬೇರೆ ವಿಚಾರ.
ಕೃಷ್ಣಮೃಗವನ್ನು ಕೊಂದ ಕಾರಣಕ್ಕಾಗಿ ಲಾರೆನ್ಸ್ ಬಿಷ್ಣೋಯಿಯು ಸಲ್ಮಾನ್ ಖಾನ್ ಮೇಲೆ ಕಿಡಿಕಾರುತ್ತಿದ್ದಾನೆ ಎಂಬ ಸುದ್ದಿಯಲ್ಲಿ ಮಿಥ್ಯವೆಷ್ಟು, ತಥ್ಯವೆಷ್ಟು ಎಂಬುದು ಗೊತ್ತಿಲ್ಲ. ಆದರೆ, ಇಡೀ ಬಿಷ್ಣೋಯಿ ಸಮುದಾಯ ಕೃಷ್ಣಮೃಗವನ್ನು ದೇವತಾಸ್ವರೂಪದಲ್ಲಿ ಕಾಣುತ್ತದೆ ಎಂಬುದು ಮಾತ್ರ ಖರೆ. ಗುರು ಜಂಭೇಶ್ವರ ಅವರು (1451-1536) ಬಿಷ್ಣೋಯಿ ಪಂಥದ ಸ್ಥಾಪಕರು. ಸಮುದಾಯದ ಜನರು ಬಾಳಿಬದುಕುವ ರೀತಿಯ ಬಗ್ಗೆ ಜಂಭೇಶ್ವರರು ನೀತಿಸೂತ್ರವನ್ನು ರಚಿಸಿಕೊಟ್ಟಿದ್ದಾರೆ. ಇವು 29 ಅಂಶಗಳ ನಿಯಮಗಳು. ಇವನ್ನು ‘ಶಬ್ದವಾಣಿ’ಯಲ್ಲಿ ಸಂಕಲಿಸಲಾಗಿದೆ. ಇದು ನಾಗ್ರಿ ಲಿಪಿಯಲ್ಲಿದೆ. ದೇವರು, ಜೀವವೈವಿಧ್ಯ, ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ನೀತಿನಡವಳಿಕೆ, ಪಶು ಸಂಗೋಪನೆ ಮುಂತಾದ ಅಂಶಗಳನ್ನು ಈ ‘ಶಬ್ದವಾಣಿ’ಯು ಒಳಗೊಂಡಿದೆ. ಈ ಗ್ರಂಥವು ಬಿಷ್ಣೋಯಿಗಳ ಜೀವನಕ್ಕೆ ದಾರಿದೀಪವಾಗಿದೆ. ಕ್ಷಮೆ, ಸಂತೋಷ, ಶೌಚ (ಸ್ವಚ್ಛತೆ); ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ದೇವರಪೂಜೆ; ಸತ್ಯ ನುಡಿಯುವುದು ಮತ್ತು ವಿನಮ್ರತೆ, ಅಚೌರ್ಯ (ಕದಿಯದಿರುವುದು); ಸುಳ್ಳು ಹೇಳದಿರುವುದು; ಘರ್ಷಣೆ ಅಥವಾ ವಿವಾದದಲ್ಲಿ ತೊಡಗದಿರುವುದು; ಹಸಿರು ಮರಗಳನ್ನು ಕಡಿಯದಿರುವುದು. ಪರಿಸರ ಸಂರಕ್ಷಣೆ ಮಾಡುವುದು- ಈ ಮುಂತಾದವು ಗುರು ಜಂಭೇಶ್ವರರ ನಿಯಮಗಳಲ್ಲಿ ಸೇರಿವೆ.
ಕೃಷ್ಣಮೃಗವು ತಮ್ಮ ಗುರುವಾದ ಜಂಭೇಶ್ವರರ ಅವತಾರ ಎಂದು ಬಿಷ್ಣೋಯಿ ಸಮುದಾಯ ಬಲವಾಗಿ ನಂಬಿದೆ. ಹೀಗಾಗಿ ಕೃಷ್ಣಮೃಗದ ಬಗ್ಗೆ ಅವರಿಗೆ ದೇವತ್ವದ ಭಾವನೆಯಿದೆ. ಕೃಷ್ಣಮೃಗ ಮಾತ್ರವಲ್ಲ ಎಲ್ಲ ಪ್ರಾಣಿಸಂಕುಲವನ್ನು ಕಾಪಾಡುವುದು ಮತ್ತು ಸಸ್ಯಾಹಾರವನ್ನು ಪಾಲಿಸುವುದು ತಮ್ಮ ಧರ್ಮ ಎಂಬುದಾಗಿ ಈ ಸಮುದಾಯ ಅನೂಚಾನವಾಗಿ ಪಾಲಿಸಿಕೊಂಡು ಬಂದಿದೆ. ಎಷ್ಟರಮಟ್ಟಿಗೆ ಎಂದರೆ, ಎಲ್ಲಿಯಾದರೂ ಗುಂಪಿನಿಂದ ಬೇರ್ಪಟ್ಟ ಪುಟ್ಟ ಕೃಷ್ಣಮೃಗ ಕಂಡುಬಂದಲ್ಲಿ ಮಹಿಳೆಯರು ಅವಕ್ಕೆ ಮೊಲೆಯೂಡಿಸುವುದೂ ಸೇರಿದಂತೆ ತಮ್ಮ ಸ್ವಂತ ಮಕ್ಕಳಂತೆ ಸಾಕುತ್ತಾರೆ. ಹೀಗಿರುವಾಗ, ಆ ಸಮುದಾಯದ ತತ್ವಕ್ಕೆ ವಿರುದ್ಧವಾದ ಕೃತ್ಯಗಳು ಕಂಡುಬಂದಲ್ಲಿ ಅವರು ಸಿಡಿದೇಳುವುದು ಸಹಜ.
ಬಿಷ್ಣೋಯಿ ಬುಡಕಟ್ಟು ಸಮುದಾಯವಾಗಿದ್ದು, ಮುಖ್ಯವಾಗಿ ರಾಜಸ್ಥಾನದ ಥಾರ್ ಮರುಭೂಮಿಯ ಸುತ್ತಮುತ್ತ ವಾಸಿಸುತ್ತಾರೆ. ಉಳಿದಂತೆ ಉತ್ತರದ ಅಲ್ಲಲ್ಲಿ ವಿರಳವಾಗಿ ಈ ಸಮುದಾಯ ಕಂಡುಬರುತ್ತದೆ. ಒಟ್ಟಾರೆ ಸುಮಾರು 15 ಲಕ್ಷ ಮಂದಿ ಇರಬಹುದು. ಇವರು ಭಗವಾನ್ ವಿಷ್ಣುವಿನ ಆರಾಧಕರು. ಪರಿಸರ ಹಾಗೂ ಪ್ರಾಣಿಸಂಕುಲದ ಜೊತೆ ಇವರದು ಅವಿನಾಭಾವ ಸಂಬಂಧವಾಗಿದ್ದು, ಅವನ್ನು ದೇವರಸಮಾನವಾಗಿ ಕಾಣುತ್ತಾರೆ. ನಿಸರ್ಗ ಮತ್ತು ಪ್ರಾಣಿಗಳ ಜೊತೆ ಇವರದು ಸಹಬಾಳ್ವೆ. ಹೀಗಾಗಿ ಸಾಮಾನ್ಯವಾಗಿ ಮಾನವರನ್ನು ಕಂಡರೆ ದೂರ ಓಡುವ ಕೃಷ್ಣಮೃಗ ಮತ್ತಿತರ ಪ್ರಾಣಿಗಳು ಬಿಷ್ಣೋಯಿಗಳು ಇರುವಲ್ಲಿ ಆರಾಮಾಗಿ ಓಡಾಡಿಕೊಂಡಿರುತ್ತವೆ. ಇಲ್ಲಿ ಅವಕ್ಕೆ ಭಯ ಎಂಬುದಿಲ್ಲ. ‘ಬಿಷ್ಣೋಯಿ ಹಳ್ಳಿಗಳು ಮರುಭೂಮಿಯಲ್ಲಿನ ಓಯಸಿಸ್ಗಳು’ ಎಂದು ಇತಿಹಾಸಕಾರ ವಿನಯ ಲಾಲ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸಂಶೋಧನಾ ವರದಿಯಲ್ಲಿ ಬಣ್ಣಿಸಿರುವುದು ಸರಿಯಾಗಿಯೇ ಇದೆ.
ನಾವೇನು ಈಚಿನ ಕೆಲ ದಶಕಗಳಿಂದ ಪರಿಸರ ಸಂರಕ್ಷಣೆಯ ಮಾತುಗಳನ್ನು ಕೇಳುತ್ತಿದ್ದೇವೆ, ಬಿಷ್ಣೋಯಿಗಳು ಶತಮಾನಗಳಿಂದ ಈ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಹೀಗಾಗಿ ಅವರನ್ನು ‘ಮೊದಲ ಪರಿಸರ ಹೋರಾಟಗಾರರು’ ಎಂದು ಕೆಲ ಇತಿಹಾಸಕಾರರು ಗುರುತಿಸುತ್ತಾರೆ. ಈ ನಿಸರ್ಗರಕ್ಷಣೆಯ ಕಾರ್ಯದಲ್ಲಿ ಹಲವರ ಬಲಿದಾನವೂ ಆಗಿದೆ. 1730ರಲ್ಲಿ ಮಹಾರಾಜ ಅಭಯ ಸಿಂಗ್ ಆದೇಶದ ಮೇರೆಗೆ, ಖೇಜ್ರಿ ಮರಗಳನ್ನು ಕಡಿಯುವ ಉದ್ದೇಶದಿಂದ ರಾಜಸ್ಥಾನದ ಖೇಜ್ರಾಲಿ ಎಂಬ ಗ್ರಾಮಕ್ಕೆ ಮರಕಡಿಯುವವರು ಬರುತ್ತಾರೆ. ಆಗ ಹಳ್ಳಿಗರು ಮರಕಡಿತವನ್ನು ಬಲವಾಗಿ ವಿರೋಧಿಸುತ್ತಾರೆ. ಅಮೃತಾ ದೇವಿ ಎಂಬ ಮಹಿಳೆಯ ನೇತೃತ್ವದಲ್ಲಿ ಹೋರಾಟ ನಡೆಸುತ್ತಾರೆ. ಮರಹನನ ಪ್ರತಿಭಟಿಸಿ ಅಮೃತಾ ದೇವಿ ಮರವನ್ನು ಅಪ್ಪಿಕೊಂಡು ನಿಲ್ಲುತ್ತಾಳೆ. ಆಗ ಅವಳ ಶಿರಚ್ಛೇದ ಮಾಡಲಾಗುತ್ತದೆ. ಆಕೆಯ ಮೂವರು ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತದೆ. ಆಗ ನರಮೇಧವೇ ನಡೆದು, 362 ಮಂದಿ ಬಿಷ್ಣೋಯಿಗಳ ಹತ್ಯೆಯಾಗುತ್ತದೆ. ಆ ಹೋರಾಟ ಮುಂದೆ ಚಿಪ್ಕೋ ಚಳವಳಿಗೆ ಪ್ರೇರಣೆಯಾಗಿದ್ದು ಇತಿಹಾಸ. ಮರಬಲಿ ಮತ್ತು ಪ್ರಾಣಿಬೇಟೆಯನ್ನು ವಿರೋಧಿಸುವ ಪರಿಪಾಠವನ್ನು ಈ ಸಮುದಾಯ ಈಗಲೂ ಮುಂದುವರಿಸಿಕೊಂಡು ಬಂದಿದೆ.
ಮತ್ತೆ, ಲಾರೆನ್ಸ್ ಬಿಷ್ಣೋಯಿ ವಿಚಾರಕ್ಕೆ ಬರುವುದಾದರೆ, ಮುಕ್ತಿಧಾಮ ದೇಗುಲಕ್ಕೆ ಹೋಗಿ ಕೃಷ್ಣಮೃಗ ಹತ್ಯೆಯ ವಿಚಾರದಲ್ಲಿ ಕ್ಷಮೆ ಕೇಳಿದಲ್ಲಿ ಸಲ್ಮಾನ್ ಖಾನ್ರನ್ನು ಕ್ಷಮಿಸಲು ಸಿದ್ಧ ಎಂದು ಲಾರೆನ್ಸ್ ಬಿಷ್ಣೋಯಿ ಹೇಳಿದ್ದಾನೆ ಎಂಬ ಸುದ್ದಿ ಹರಡಿದೆ. ಇದಕ್ಕೆ ಪೂರಕವಾಗಿ ಈಚೆಗೆ ಇನ್ನೊಂದು ಬೆಳವಣಿಗೆ ನಡೆದಿದೆ. ಬಿಷ್ಣೋಯಿ ಸಂಘಟನೆ ಸಹ ಸಲ್ಮಾನ್ರನ್ನು ಕ್ಷಮಿಸಲು ಸಿದ್ಧ ಎಂದು ಹೇಳಿದೆ. ಅದು ಒಂದು ಷರತ್ತು ಮುಂದಿಟ್ಟಿದೆ. ಸಲ್ಮಾನ್ ಅವರು ನ್ಯಾಯಾಲಯದ ಎದುರು ಹಾಜರಾಗಿ ತನ್ನ ಕೃತ್ಯದ ಬಗ್ಗೆ ವಿಷಾದ, ಪಶ್ಚಾತ್ತಾಪ ವ್ಯಕ್ತಪಡಿಸಿದರೆ ಅವರನ್ನು ಕ್ಷಮಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಖಿಲ ಭಾರತ ಬಿಷ್ಣೋಯಿ ಮಹಾಸಭಾದ ಅಧ್ಯಕ್ಷ ದೇವೇಂದ್ರ ಬೂರಿಯಾ ಹೇಳಿದ್ದಾರೆ. ಯಾರಾದರೂ ತಪು್ಪ ಮಾಡಿದಲ್ಲಿ ಅವರು ವಿಷಾದ ವ್ಯಕ್ತಪಡಿಸಿದರೆ ಅಂಥವರನ್ನು ಕ್ಷಮಿಸಲು ಬಿಷ್ಣೋಯಿ ಸಮುದಾಯದ ನಿಯಮಗಳಲ್ಲಿ ಅವಕಾಶ ಇದೆ ಎಂದು ಅವರು ಹೇಳಿದ್ದಾರೆ. ‘ಮಾಡಿರುವ ಪ್ರಮಾದವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಲ್ಲಿ ಅಂಥವರ ಬಗ್ಗೆ ಸಹಾನುಭೂತಿ ತೋರಿಸಲು ಅವಕಾಶ ಇದೆ. ನಮ್ಮ ಗುರುಗಳಾದ ಭಗವಾನ್ ಜಂಭೇಶ್ವರ ಅವರು ಕ್ಷಮೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. ಕ್ಷಮೆ, ಸಹಾನುಭೂತಿ ಮತ್ತು ಅಹಿಂಸೆ ನಮ್ಮ ಸಮುದಾಯದ ಪ್ರಮುಖ ಮೌಲ್ಯಗಳಲ್ಲಿ ಸೇರಿವೆ’ ಎಂದು ದೇವೇಂದ್ರ ಬೂರಿಯಾ ತಿಳಿಸಿದ್ದಾರೆ. ಈ ಕ್ಷಮೆಯ ವಿಚಾರದಲ್ಲಿ ಮುಂದೆ ಏನಾಗುತ್ತದೆಂದು ಕಾದುನೋಡಬೇಕು.
ಕೊನೇ ಮಾತು: ನಿಸರ್ಗಕ್ಕೆ ವಿರುದ್ಧವಾದ, ಪ್ರಕೃತಿಗೆ ಹಾನಿಕಾರಕವಾದ ಜೀವನಶೈಲಿಯನ್ನು ಆಧುನಿಕ ಮಾನವ ಅಳವಡಿಸಿಕೊಂಡಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ಎಲ್ಲರ ಅರಿವಿಗೂ ಬಂದಿರುವ ಸಂಗತಿ. ಇಂಥ ಸನ್ನಿವೇಶದಲ್ಲಿ, ನಿಸರ್ಗ ಮತ್ತು ಪ್ರ್ರಾಣಿಪಕ್ಷಿಗಳ ಜೊತೆ ಸಹಬಾಳ್ವೆ ನಡೆಸುವ ಮತ್ತು ಅವುಗಳ ಬಗ್ಗೆ ದೇವತ್ವಭಾವನೆ ಹೊಂದಿರುವ ಬಿಷ್ಣೋಯಿಯಂಥ ಬುಡಕಟ್ಟು ಜನಾಂಗಗಳು ನಮಗೆ ದಾರಿದೀಪವಾಗಬಲ್ಲವು. ಆದರೆ ಅಂಥ ಸಮುದಾಯದ ಭಾವನೆಗಳ ಜೊತೆ ನಮ್ಮ ಭಾವನೆಗಳು ಮಿಳಿತಗೊಂಡಲ್ಲಿ ಮಾತ್ರ ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸಬಹುದು. ಅಂದರೆ, ಮಾನವ ಮತ್ತೆ ಕಾಡಿನತ್ತ ನಡೆಯಬೇಕು, ಬೆಳಕನ್ನು ಹುಡುಕಬೇಕು!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)