| ಲೋಲ ಕುಮಾರ್ ಎಸ್.
ಅಂತೂ ಇಂತೂ ಕೋವಿಡ್ ಸಾಂಕ್ರಾಮಿಕ ರೋಗದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದಿದ್ದು, ಪಿಯು ವಿದ್ಯಾಥಿಗಳು ಪರೀಕ್ಷೆಯಿಲ್ಲದೆ ತೇರ್ಗಡೆಯೂ ಆಗಿದ್ದಾರೆ. ಈಗ ಗೊಂದಲವಿರುವುದು ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರದ ಕೋರ್ಸ್ಗಳ ಆಯ್ಕೆ ವಿಚಾರದಲ್ಲಿ.
ಎಸ್ಎಸ್ಎಲ್ಸಿ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಕೋರ್ಸ್ಗಳನ್ನು ಈ ಮೂರು ಪ್ರಮುಖ ಭಾಗಗಳನ್ನಾಗಿ ವಿಂಗಡಿಸಬಹುದು. ಅವುಗಳೆಂದರೆ ಕಲೆ, ವಾಣಿಜ್ಯ ಮತ್ತು ವಿಜ್ಞಾನ. ಈ ಮೂರು ಕೋರ್ಸ್ ಗಳಲ್ಲಿ ಯಾವುದಾದರೂ ನಾಲ್ಕು ವಿಷಯಗಳನ್ನು ಎರಡು ಭಾಷಾ ವಿಷಯಗಳ ಜತೆಗೆ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಹಲವಾರು ಗೊಂದಲಗಳಿರುತ್ತವೆ. ಕೆಲವರು ಪಾಲಕರ ಒತ್ತಾಯದ ಮೇರೆಗೆ ತಮಗಿಷ್ಟವಿಲ್ಲದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಸಹಪಾಠಿಗಳು ಆಯ್ಕೆ ಮಾಡಿಕೊಂಡಿರುವ ಕೋರ್ಸ್ಗಳನ್ನು, ಇನ್ನು ಕೆಲವರು ತಮ್ಮ ವೃತ್ತಿ ಬದುಕಿಗೆ ಅನುಕೂಲವಾಗುವಂತಹ ಓದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಬುದ್ಧಿಶಕ್ತಿ ಭವಿಷ್ಯದ ವಿಚಾರವಾಗಿ ಅಷ್ಟೊಂದು ಪರಿಪಕ್ವತೆ ಹೊಂದಿಲ್ಲದೆ ಇರುವುದರಿಂದ ಇತರರನ್ನು ಅವಲಂಬಿಸಿರುವುದು ಅನಿವಾರ್ಯವಾಗಿರುತ್ತದೆ. ಭವಿಷ್ಯದ ದೃಷ್ಟಿಯಿಂದ ಕೋರ್ಸ್ಗಳ ಆಯ್ಕೆಗೆ ಮಾನದಂಡಗಳನ್ನು ಅವಲೋಕಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತಾವು ಆಯ್ಕೆ ಮಾಡಿಕೊಳ್ಳುವ ಕೋರ್ಸ್ಗಳ ಬಗ್ಗೆ ಇಚ್ಛಾಶಕ್ತಿ ಇರಬೇಕು. ಪಾಲಕರದೋ ಅಥವಾ ಇನ್ನಾರದೋ ಒತ್ತಾಯಕ್ಕೆ ಮಣಿದು ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಪಾಲಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಕೋರ್ಸ್ ಗಳ ಆಯ್ಕೆಯ ವಿಚಾರದಲ್ಲಿ ಗೊಂದಲಗಳಿದ್ದರೆ ಸಂಬಂಧಪಟ್ಟ ವಿಷಯ ಬೋಧಕರ, ವಿಷಯ ತಜ್ಞರ, ಹಿರಿಯ ವಿದ್ಯಾರ್ಥಿಗಳ ಸಲಹೆ, ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಇದು ಉತ್ತಮ ಆಯ್ಕೆಗೆ ನೆರವಾಗಬಲ್ಲುದು.
ಈ ಬಾರಿ ಎಸ್ಎಸ್ಎಲ್ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ. ಹೀಗಾಗಿ 8.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಿಯು ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕಾಗುತ್ತದೆ. ರಾಜ್ಯದಲ್ಲಿ 5,500ಕ್ಕೂ ಅಧಿಕ ಪಿಯು ಕಾಲೇಜುಗಳಿವೆ. ಇದರಲ್ಲಿ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿ 859 ಕಾಲೇಜುಗಳಿವೆ. ರಾಜ್ಯಾದ್ಯಂತ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ ಎಂದು ಪಿಯು ಶಿಕ್ಷಣ ಇಲಾಖೆ ಅಂದಾಜಿಸಿದೆ. ಇದಲ್ಲದೆ, ಐಟಿಐ,ಡಿಪ್ಲೊಮಾ ಸೇರಿ ಇತರ ವೃತ್ತಿಪರ ಕಾಲೇಜುಗಳಲ್ಲಿ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಹೀಗಾಗಿ ಸೀಟುಗಳ ಕೊರತೆ ಉಂಟಾಗದು ಎಂಬ ವಿಶ್ವಾಸ ಇಲಾಖೆಯದ್ದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ಚಿಂತೆಗೊಳಗಾಗುವ ಅವಶ್ಯಕತೆಯಿಲ್ಲ.
ವಿದ್ಯಾರ್ಥಿಗಳೇ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಲಹೆ ನೀಡುತ್ತಾರೆ. ಇದರಿಂದ ನಿಮ್ಮ ಸ್ವಂತ ಅಭಿಪ್ರಾಯಕ್ಕೆ ಹಾಗೂ ಆಯ್ಕೆಗೆ ಗೊಂದಲ ಉಂಟಾಗುತ್ತದೆ. ಈ ವಿಚಾರವಾಗಿ ಹೇಳುವುದಾದರೆ ಅರೇಬಿಯನ್ ಕವಿ ಮತ್ತು ಲೇಖಕರಾದ ಖಲೀಲ್ ಗಿಬ್ರಾನ್ ಮಾತುಗಳು ನೆನಪಾಗುತ್ತವೆ. ಒಮ್ಮೆ ಅವರೊಂದು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರಂತೆ. ಅಲ್ಲಿ ಒಬ್ಬ ಮಾನಸಿಕ ಅಸ್ವಸ್ಥನನ್ನು ನೋಡಿ, ನೀನು ಏಕೆ ಇಲ್ಲಿದ್ದೀಯಾ ಎಂದು ಪ್ರಶ್ನಿಸಿದಾಗ, ಆತ ‘ನಮ್ಮ ತಂದೆ, ನನ್ನನ್ನು ಅವರ ಸ್ನೇಹಿತರ ಮಗನಂತಾಗು ಎಂದರು, ನನ್ನ ತಾಯಿ, ನಿನ್ನ ತಂದೆ ದೊಡ್ಡ ವಿದ್ಯಾವಂತರು, ಅವರಂತಾಗು ಎಂದರು, ನನ್ನ ಅಕ್ಕ, ನಿಮ್ಮ ಬಾವ ಒಳ್ಳೆಯ ಅಧಿಕಾರಿಯಾಗಿದ್ದಾರೆ ಅವರಂತಾಗು ಎಂದರು. ಹೀಗೆ ಹಲವಾರು ಜನ ಅವರಂತಾಗು ಇವರಂತಾಗು ಎಂದು ಹೇಳಿ ನನ್ನಂತಾಗಲು ಬಿಡಲೇ ಇಲ್ಲ...! ಹೀಗಾಗಿ ನಾನು ಇಲ್ಲಿದ್ದೇನೆ’ ಎಂದನಂತೆ. ಆದ್ದರಿಂದ ನೀವು ಎಲ್ಲರ ಮಾತನ್ನೂ ಕೇಳಿ. ಆದರೆ ನಿಮ್ಮ ಇಚ್ಛೆಗೆ ಅನುಗುಣವಾಗಿ ಓದಿ. ಆಗ ಮಾತ್ರ ಮುಂದೆ ಒಳ್ಳೆಯ ಮನುಷ್ಯರಾಗುತ್ತೀರಿ.
ಪದವಿ ಪೂರ್ವ ಶಿಕ್ಷಣದ ಹಂತದಲ್ಲಿಯೇ ಹಲವು ವೃತ್ತಿ ಜೀವನದ ಅವ ಕಾಶಗಳು ಕೈಬೀಸಿ ಕರೆಯುತ್ತವೆ. ಈ ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ಸ್ಥಿತ್ಯಂತರದ ಅವಧಿಯಾಗಿರುವುದರಿಂದ ತಮ್ಮ ಅಭಿರುಚಿಗೆ ತಕ್ಕಂತೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಹೀಗಾಗಿ ಪಾಲಕರು ಮಕ್ಕಳ ಅಭಿಪ್ರಾಯಕ್ಕೆ ಗೌರವ ನೀಡಬೇಕೆ ಹೊರತು ಅವರಿಗೆ ತಿಳಿವಳಿಕೆ ಇಲ್ಲವೆಂದು ಸರ್ವಾಧಿಕಾರಿಗಳಾಗಬಾರದು. ಪಿಯುಸಿ ನಂತರ ತಾಂತ್ರಿಕ, ವೈದ್ಯಕೀಯ, ಬೋಧನಾ, ಆಡಳಿತಾತ್ಮಕ, ಚಾರ್ಟರ್ಡ್ ಅಕೌಂಟೆಂಟ್ಸ್, ಪತ್ರಿಕೋದ್ಯಮ ಇನ್ನೂ ಮುಂತಾದ ವೃತ್ತಿಪರ ಕೋರ್ಸ್ ಗಳು ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ ಬೇರೆ ಕ್ಷೇತ್ರಗಳಲ್ಲಿ ಅವಕಾಶ ವಂಚಿತರಾದವರು ಬೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಪಾಠ ಹೋಗಿ ಪ್ರತಿಭಾವಂತರು ಬೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತಾಗಬೇಕು.
ಕೆಲವು ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಾಮರ್ಥ್ಯವಿಲ್ಲದ ಮತ್ತು ಬದುಕಿಗೆ ಸಮರ್ಥನೀಯವಲ್ಲದ ಕೋರ್ಸ್ಗಳ ಆಯ್ಕೆಗೆ ಪುಸಲಾಯಿಸುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೊಸದೇನನ್ನೋ ಕಲಿಯುವ ಉತ್ಸಾಹ ಒಳ್ಳೆಯದಾದರೂ ಅದರ ಎಲ್ಲ ಮಗ್ಗಲುಗಳನ್ನು ತಿಳಿದು ಕೊಳ್ಳಬೇಕಾಗುತ್ತದೆ.